Cardiologist Death:ಆ್ಯಸಿಡಿಟಿ ಎಂದು ನಿರ್ಲಕ್ಷಿಸಿದ ಡಾಕ್ಟರ್ಸ್! ಸಾವಿಗೆಲ್ಲಿ ಲಾಜಿಕ್?

By Shobha MC  |  First Published Jun 12, 2023, 4:49 PM IST

ಸುಮಾರು 16 ಸಾವಿರ ಹಾರ್ಟ್ ಆಪರೇಷನ್ ಮಾಡಿದ್ದ ಗುಜರಾತ್‌ನ ಹೃದಯ ರೋಗ ತಜ್ಞ ಡಾ. ಗೌರವ್ ಗಾಂಧಿ ಎದೆ ನೋವೆಂದು ಆಸ್ಪತ್ರೆಗೆ ತೆರಳಿದಾಗ ಆ್ಯಸಿಡಿಟಿ ಎಂದು ಮನೆಗೆ ಕಳುಹಿಸಿದ್ದರು ವೈದ್ಯರು. ಈ ಸಾವಿಗೆ ಏನು ಹೇಳುವುದು?


‌41 ನಿಜಕ್ಕೂ ಸಾಯುವ‌ ವಯಸ್ಸಲ್ಲ. ಆದರೆ, ಸಾವಿಗೆ ಲಾಜಿಕ್ ಇಲ್ಲ..
ಮನುಷ್ಯನ ಜೀವನ ಅನಿಶ್ಚಿತ. ಸಾವು ಯಾವಾಗ ಬೇಕಾದರೂ ಬಂದು ಕದ ತಟ್ಟಬಹುದು.  ಅದಕ್ಕೆ ಸಾಕ್ಷಿ ಡಾ. ಗೌರವ್ ಗಾಂಧಿ ಸಾವು.  ಮೊನ್ನೆ ಹೃದಯಘಾತದಿಂದ ಮೃತಪಟ್ಟ ಗುಜರಾತ್‌ ಜಾಮ್‌ನಗರದ ಡಾ. ಗೌರವ್ ಹೆಸರಾಂತ‌ ಹೃದ್ರೋಗ ತಜ್ಞ. ವಯಸ್ಸು ಕೇವಲ 41. ಈವರೆಗೂ 16,000ಕ್ಕೂ ಹೆಚ್ಚು ಹೃದ್ರೋಗಿಗಳಿಗೆ ಆಪರೇಷನ್ ಮಾಡಿ ಜೀವ‌ ಉಳಿಸಿದ್ದ ಡಾ. ಗೌರವ್‌ಗಾಂಧಿ ಅವರನ್ನೇ ವೈದ್ಯರು ಉಳಿಸಲಾಗಲಿಲ್ಲ. 

ಸಾವಿರಾರು ಹೃದಯಗಳಿಗೆ ಚಿಕಿತ್ಸೆ ನೀಡಿದ್ದ ಡಾ. ಗೌರವ್​ರ ಹೃದಯ ಮುನ್ಸೂಚನೆ ನೀಡಿದ್ದರೂ, ‘ಅಸಿಡಿಟಿ’ ಎಂಬ ಸಾಮಾನ್ಯ ಕಾರಣವೊಂದು ಡಾ. ಗೌರವ್​ರನ್ನು ಮಸಣಕ್ಕೆ ಕರೆದೊಯ್ಯಿತು. ಮೇ 31ರ ರಾತ್ರಿ ಆಸ್ಪತ್ರೆಯಿಂದ ಮನೆಗೆ ಹಿಂದುರಿಗಿದ್ದ ಡಾ.ಗೌರವ್ ಗಾಂಧಿ, ಊಟ ಮುಗಿಸಿ ನಿದ್ದೆಗೆ ಶರಣಾಗಿದ್ರು. ಮಧ್ಯರಾತ್ರಿ 2 ಗಂಟೆಗೆ ಎದೆನೋವಿನಿಂದ ಎಚ್ಚರಗೊಂಡ ಡಾ. ಗೌರವ್, ತಕ್ಷಣವೇ ತಾವು ಕಾರ್ಯ ನಿರ್ವಹಿಸುತ್ತಿದ್ದ ಜಿಜಿ ಆಸ್ಪತ್ರೆಗೆ  (GG Hospital)  ತೆರಳಿ ಪರೀಕ್ಷಿಸಿಕೊಂಡರು. ಡಾ.ಗೌರವ್​ ಅವರ ಇಸಿಜಿ (ECG) ನಾರ್ಮಲ್​ ಎಂದೇ ತೋರಿಸಿತ್ತು. ಎದೆಯಲ್ಲಿ ಸಣ್ಣ ನೋವು, ಎದೆ ಬಿಗಿದಂತಾಗುತ್ತಿದೆ ಎಂದು ರಾತ್ರಿ ಪಾಳಿಯಲ್ಲಿದ್ದ ವೈದ್ಯರಲ್ಲಿ ವಿವರಿಸಿದ್ರು. ಇಸಿಜಿ ನಾರ್ಮಲ್ ಇದ್ದ ಕಾರಣಕ್ಕೆ ಬಹುಶಃ ಇದು ಆ್ಯಸಿಡಿಟಿ ಇರಬಹುದೆಂದು ಬಿಟ್ರು. ಆದರೂ ಒಂದು ತಾಸು ಆಸ್ಪತ್ರೆಯಲ್ಲೇ ಉಳಿಸಿಕೊಂಡು ಡಾ.ಗೌರವ್​ ಅವರ ಹೃದಯದ ಆರೋಗ್ಯದ ಮೇಲೆ ನಿಗಾ ಇಡಲಾಗಿತ್ತು. ಆತಂಕಪಡುವ ಯಾವ ಅಂಶವೂ ಇಲ್ಲ ಎಂದ ಹೃದ್ರೋಗ ತಜ್ಞರು, ಒಂದು ತಾಸು ಕಳೆದ ಬಳಿಕ ಡಾ. ಗೌರವ್​ ಅವರನ್ನು ಮನೆಗೆ ಕಳುಹಿಸಿದರು.

16 ಸಾವಿರ ಹೃದಯದ ಆಪರೇಷನ್ ಮಾಡಿದ ವೈದ್ಯ ಹಾರ್ಟ್ ಅಟ್ಯಾಕ್‌ಗೆ ಬಲಿ
 
ಮನೆ ತಲುಪಿದ ಒಂದೇ ಗಂಟೆಯಲ್ಲಿ ಡಾ. ಗೌರವ್, ಬಾತ್​ರೂಮ್​ನಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದರು. ಕುಟುಂಬಸ್ಥರು ತಕ್ಷಣವೇ ಅವ​ರನ್ನು ಆಸ್ಪತ್ರೆಗೆ ಕರೆದೊಯ್ದರು. ಇಡೀ ಹೃದ್ರೋಗ ತಜ್ಞರ ಟೀಂ ಏಷ್ಟೇ ಪ್ರಯತ್ನಿಸಿದರೂ ಡಾ. ಗೌರವ್ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. ತೀವ್ರ ಹೃದಯಘಾತದಿಂದ ಡಾ.ಗೌರವ್​ ಗಾಂಧಿ ಉಸಿರು ಚೆಲ್ಲಿದ್ದರು. 

Tap to resize

Latest Videos

undefined

ವೈದ್ಯರೇ ದಾರಿ ತಪ್ಪಿದ್ದು ಸರಿಯೇ ?
ಹೃದ್ರೋಗ ತಜ್ಞರು ಮತ್ತು ಇಡೀ ಆಸ್ಪತ್ರೆಯ ವೈದ್ಯರ ಟೀಂ, ಡಾ. ಗೌರವ್ ಗಾಂಧಿಯನ್ನು ಪರೀಕ್ಷಿಸಿ, ಅಸಿಡಿಟಿ ಕಾರಣಕ್ಕೆ ಎದೆನೋವು ಎಂದು ಬಿಟ್ಟು, ಮನೆಗೆ ಕಳಿಸಿದ್ದೇ ದೊಡ್ಡ ತಪ್ಪು ಎನ್ನುತ್ತಿದ್ದೆ ವೈದ್ಯ ಸಮೂಹ. ಇಸಿಜಿಯಲ್ಲಿ ಹೃದಯಘಾತದ ಲಕ್ಷಣಗಳು ಕಂಡು ಬಾರದಿದ್ದರೂ, 24 ಗಂಟೆಯಾದರೂ ಡಾ.ಗೌರವ್​ಅವರ ಮೇಲೆ ನಿಗಾ ವಹಿಸಬೇಕಿತ್ತು. ಆದ್ರೆ, ಜಿಜಿ ಆಸ್ಪತ್ರೆ ವೈದ್ಯರು, ಒಂದೇ ತಾಸಿನಲ್ಲಿ ಗೌರವ್ ಅವ​ರನ್ನು ಮನೆಗೆ ಕಳುಹಿಸಿ ತಪ್ಪು ಮಾಡಿದೆ ಎಂದು ಆರೋಪಿಸುತ್ತಿದ್ದಾರೆ ವೈದ್ಯ ವೃಂದ. 

ಕೇವಲ ಇಸಿಜಿಯೊಂದೇ ಹೃದಯಘಾತ ಪತ್ತೆಗೆ ಸಾಕೇ ಎಂಬ ಮಾತೂ ಕೇಳಿ ಬರುತ್ತಿದೆ. ಇಸಿಜಿ ಬಳಿಕ ಎಕೋ, ರಕ್ತದಲ್ಲಿರುವ ಕೊಬ್ಬಿನಂಶದ ಪ್ರಮಾಣ, ಬ್ಲಡ್ ಪ್ರೆಶರ್, ಇಡೀ ದೇಹದ ಪರೀಕ್ಷೆ ನಡೆಸಬೇಕಿತ್ತು. ಡಾ. ಗೌರವ್ ಅವ​ರನ್ನು ಇನ್ನಷ್ಟು ಹೊತ್ತು ಆಸ್ಪತ್ರೆಯಲ್ಲೇ ಇರಿಸಿಕೊಂಡು ಅವರ ಮೇಲೆ ನಿಗಾವಹಿಸಿದ್ದರೆ ಹೃದಯಾಘಾತ ತಪ್ಪಿಸಬಹುದಿತ್ತು ಎನ್ನುತ್ತಿದ್ದಾರಾದರೂ ಸಾವಿಗೆ ಲಾಜಿಕ್ ಇಲ್ಲ ಎಂಬೋದು ಮಾತ್ರ ಸತ್ಯ.

ಹಾರ್ಟ್‌ಅಟ್ಯಾಕ್ ಆದ್ರೆ ಭಯ ಬೇಡ, ಈ ಬಯೋ ಜೆಲ್ ಹೃದಯ ಸರಿಪಡಿಸುತ್ತೆ

ಆ್ಯಸಿಡಿಟಿ ಹೃದಯಘಾತಕ್ಕೆ ಸುಳಿವು ನೀಡುತ್ತಾ?
ಸಾಮಾನ್ಯವಾಗಿ ಸಣ್ಣ ಎದೆನೋವು ಎಲ್ಲರನ್ನೂ ಕಾಡಿರುತ್ತದೆ. ಎದೆ ಭಾಗದಲ್ಲಿ ಈ ರೀತಿ ನೋವು ಕಾಣಿಸಿಕೊಳ್ಳುತ್ತದೆ. ಇತ್ತೀಚಿಗಂತೂ, ಹೊಟ್ಟೆ ಮೇಲಿನಿಂದ ಎದೆ ಭಾಗದಲ್ಲಿ ನೋವು ಕಾಣಿಸಿಕೊಂಡರೆ ಅದು ಆ್ಯಸಿಡಿಟಿ ಎಂಬ ನಿರ್ಧಾರಕ್ಕೆ ಬಂದು ಬಿಡ್ತಾರೆ. ಆ್ಯಸಿಡಿಟಿ, ಹೊಟ್ಟೆಯುಬ್ಬರ ಮುಂತಾದ ಸಮಸ್ಯೆಗಳಿಗೂ ಇಂಥದ್ದೇ ಎದೆ ನೋವು ಬರುತ್ತದೆ. ಹೃದಯ ಅಥವಾ ಎದೆ ಭಾಗದಲ್ಲಿ ತೀವ್ರವಾದ ನೋವು, ಬಿಗಿ, ಉಸಿರುಕಟ್ಟಿದಂತಾಗುವುದು, ನೋವು ಹೆಚ್ಚಾದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ಅಸಿಡಿಟಿ ಮತ್ತು ಹೃದಯಾಘಾತ, ಇವೆರಡರ ನಡುವೆ ಸಂಶಯವಿದ್ದರೆ ವೈದ್ಯರಿಂದ ಪರೀಕ್ಷಿಸಿಕೊಳ್ಳದೇ, ಅಸಿಡಿಟಿ ಮಾತ್ರೆ ನುಂಗಿ ಸುಮ್ಮನಿರಬಾರದು ಅಂತಾರೆ ವೈದ್ಯರು.

click me!