
ಕ್ಯಾನ್ಸರ್ (Cancer) ಬಂದಿದೆ ಎಂಬ ಸತ್ಯವನ್ನು ಅರಗಿಸಿಕೊಳ್ಳೋದು ಸುಲಭವಲ್ಲ. ಅದಕ್ಕೆ ಕಾರಣ ಕ್ಯಾನ್ಸರ್ ಗೆ ಸರಿಯಾದ ಔಷಧಿ (Medicine) ಇಲ್ಲದೆ ಇರೋದು. ಕ್ಯಾನ್ಸರ್ ಮೂರ್ನಾಲ್ಕನೇ ಹಂತದಲ್ಲಿದ್ದರೆ ಅದನ್ನು ಗುಣಪಡಿಸೋದು ಬಹಳ ಕಷ್ಟ. ಹಾಗಾಗಿಯೇ ಕ್ಯಾನ್ಸರ್ ಅಂದ್ರೆ ಜನ ಹೆದರೋದು. ಆದ್ರೆ ಕ್ಯಾನ್ಸರ್ ಗೆ ಖಚಿತವಾದ ಚಿಕಿತ್ಸೆ ಅಥವಾ ಔಷಧಿ ಇಲ್ಲ ಅನ್ನೋದು ಇನ್ಮುಂದೆ ತಪ್ಪಾಗಬಹುದು. ಯಾಕೆಂದ್ರೆ ಅಮೆರಿಕದ ವಿಜ್ಞಾನಿಗಳು ಖುಷಿ ಸುದ್ದಿ ನೀಡಿದ್ದಾರೆ. ಗುದನಾಳದ ಕ್ಯಾನ್ಸರ್ (Rectal cancer) ಗೆ ಖಚಿತವಾದ ಔಷಧಿ ಕಂಡುಕೊಂಡಿದ್ದಾರೆ. ವಿವಿಧ ರೀತಿಯ ಕ್ಯಾನ್ಸರ್‌ಗಳಿಗೆ ಹಲವಾರು ವಿಭಿನ್ನ ಚಿಕಿತ್ಸೆಗಳು ಮತ್ತು ಔಷಧಿಗಳು ಲಭ್ಯವಿವೆ. ಆದರೆ ಯಾವುದೇ ರೀತಿಯ ಕ್ಯಾನ್ಸರ್ ಅನ್ನು ವಿಕಿರಣ, ಕೀಮೋಥೆರಪಿ ಅಥವಾ ಶಸ್ತ್ರ ಚಿಕಿತ್ಸೆ ಇಲ್ಲದೆ ಶೇಕಡಾ 100ಕ್ಕೆ ನೂರರಷ್ಟು ಗುಣಪಡಿಸಿದ ಇತಿಹಾಸವಿರಲಿಲ್ಲ. ಆದ್ರೀಗ ಅದನ್ನು ಸಾಧಿಸಿ ತೋರಿಸಲಾಗಿದೆ.
ಒಂದು ಸಣ್ಣ ಅಧ್ಯಯನದಲ್ಲಿ, ಯುಎಸ್‌ನ ಮ್ಯಾನ್‌ಹ್ಯಾಟನ್‌ನಲ್ಲಿರುವ ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್‌ನ ಸಂಶೋಧಕರು, ನಿರ್ದಿಷ್ಟ ಔಷಧವಾದ ದೋಸ್ಟಾರ್ಲಿಮಾಬ್ (Dostarlimab) ಬಳಕೆಯು ಗುದನಾಳದ ಕ್ಯಾನ್ಸರ್ ಹೊಂದಿರುವ ರೋಗಿಗಳಲ್ಲಿ ಶೇಕಡಾ 100ರಷ್ಟು ಪರಿಣಾಮಕಾರಿ ಎಂದು ಕಂಡುಹಿಡಿದಿದ್ದಾರೆ. ಈ ಅಧ್ಯಯನದ ವರದಿಯನ್ನು ದಿ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟಿಸಲಾಗಿದೆ.ಈ ಪ್ರಯೋಗಕ್ಕೆ 18 ರೋಗಿಗಳನ್ನು ಬಳಸಿಕೊಳ್ಳಲಾಗಿತ್ತು. ಔಷಧಿ ಸೇವನೆ ನಂತ್ರ ಎಲ್ಲರೂ ಗುಣಮುಖರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ಗುಣಪಡಿಸುವ ಈ ಔಷಧಿ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯುತ್ತಿದೆ.
ಕ್ಯಾನ್ಸರ್ ಔಷಧಿ ದೋಸ್ಟಾರ್ಲಿಮಾಬ್ ಎಂದರೇನು?
ಈ ಔಷಧಿಯನ್ನು ಮ್ಯಾಸಚೂಸೆಟ್ಸ್ ಮೂಲದ ಕಂಪನಿ ಟೆಸಾರೊ ತಯಾರಿಸಿದೆ. ಅದರ ಬ್ರಾಂಡ್ ಹೆಸರು ಗೆಂಪರ್ಲಿ. ರೋಗಿಗಳಿಗೆ ಆರು ತಿಂಗಳ ಕಾಲ ಈ ಔಷಧಿಯನ್ನು ನೀಡಲಾಯಿತು ಮತ್ತು ಪ್ರತಿಯೊಬ್ಬ ರೋಗಿಯು ಇದರ ಪ್ರಯೋಜನವನ್ನು ಪಡೆದುಕೊಂಡರು ಮತ್ತು ಅವರು ಕ್ಯಾನ್ಸರ್ನಿಂದ ಸಂಪೂರ್ಣವಾಗಿ ಮುಕ್ತರಾದರು ಎಂದು ಹೇಳಲಾಗುತ್ತಿದೆ. ಈ ಔಷಧಿಗೆ ಮೊದಲು, ರೋಗಿಗಳಿಗೆ ಕೀಮೋಥೆರಪಿ, ವಿಕಿರಣ ಮತ್ತು ಶಸ್ತ್ರಚಿಕಿತ್ಸೆ ಇತ್ಯಾದಿಗಳ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು. ಕುತೂಹಲಕಾರಿ ಸಂಗತಿಯೆಂದರೆ, ಈ ಔಷಧಿಯನ್ನು ಬಳಸಿದ ನಂತರ ರೋಗಿಗೆ ಮತ್ತ್ಯಾವ ಚಿಕಿತ್ಸೆ ಅಗತ್ಯವೂ ಬೀಳಲಿಲ್ಲ.
Health Tips : ಗರ್ಭಾವಸ್ಥೆಯಲ್ಲಿ ಬೇಕಾಬಿಟ್ಟಿ ಮಾತ್ರೆ ಸೇವನೆ ತಪ್ಪು
ದೋಸ್ಟಾರ್ಲಿಮಾಬ್ ಹೇಗೆ ಕೆಲಸ ಮಾಡುತ್ತದೆ?
ಈ ಔಷಧ ಮಾನವನ ದೇಹದಲ್ಲಿ ಪ್ರತಿಕಾಯವಾಗಿ ಕಾರ್ಯನಿರ್ವಹಿಸುತ್ತದೆ. ಇದರರ್ಥ ಈ ಔಷಧವು ರೋಗದ ವಿರುದ್ಧ ಹೋರಾಡಲು ಪ್ರತಿಕಾಯಗಳ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಯೋಗಲ್ಲಿ ಪಾಲ್ಗೊಂಡು ಈ ಔಷಧಿ ಸೇವನೆ ಮಾಡಿದ್ದ ರೋಗಿಗಳ ಇತರ ಭಾಗಗಳಿಗೆ ಕ್ಯಾನ್ಸರ್ ಹರಡಿಲ್ಲ ಎಂದು ಹೇಳಲಾಗುತ್ತಿದೆ. PD-1 ಎಂಬ ಕ್ಯಾನ್ಸರ್ ಕೋಶಗಳಲ್ಲಿ ನಿರ್ದಿಷ್ಟ ಪ್ರೋಟೀನ್ ಅನ್ನು ನಿರ್ಬಂಧಿಸಲು ಈ ಔಷಧವನ್ನು ವಿನ್ಯಾಸಗೊಳಿಸಲಾಗಿದೆ.
ದೋಸ್ಟಾರ್ಲಿಮಾಬ್ ಅನ್ನು ಯಾವುದಕ್ಕಾಗಿ ಬಳಸಲಾಗುತ್ತದೆ?
ಗರ್ಭಾಶಯದ ಒಳಪದರದ ಕ್ಯಾನ್ಸರ್ ಚಿಕಿತ್ಸೆಗಾಗಿ ದೋಸ್ಟಾರ್ಲಿಮಾಬ್ ಅನ್ನು ಬಳಸಲಾಗುತ್ತದೆ. ಕೆಲವು ರೀತಿಯ ಗೆಡ್ಡೆಗಳಿಗೆ ಚಿಕಿತ್ಸೆ ನೀಡಲು ಸಹ ಇದನ್ನು ಬಳಸಲಾಗುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯ ಕ್ರಿಯೆಯನ್ನು ಬದಲಾಯಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ, ಕ್ಯಾನ್ಸರ್/ಟ್ಯೂಮರ್ ಕೋಶಗಳ ಮೇಲೆ ದಾಳಿ ಮಾಡಲು ನಿರ್ದೇಶಿಸುತ್ತದೆ.
Health Tips: ಮಕ್ಕಳಲ್ಲಿ ಕಾಡುವ ಮಲಬದ್ಧತೆಗೆ ಇಲ್ಲಿದೆ ಪರಿಹಾರ
ದೋಸ್ಟಾರ್ಲಿಮಾಬ್ ಔಷಧವನ್ನು ಎಫ್ಡಿಎ ಅನುಮೋದಿಸಿದೆಯೇ?
ಔಷಧವನ್ನು FDA ಯಿಂದ ಆಗಸ್ಟ್ 17, 2021 ರಂದು ಅನುಮೋದಿಸಲಾಗಿದೆ. ಘನ ಗೆಡ್ಡೆಗಳಿಂದ ಬಳಲುತ್ತಿರುವ ವಯಸ್ಕ ರೋಗಿಗಳಿಗೆ ಈ ಔಷಧಿಯನ್ನು ನೀಡಬಹುದು.
ದೋಸ್ಟಾರ್ಲಿಮಾಬ್ ಕ್ಯಾನ್ಸರ್ ಔಷಧಿಯ ಬೆಲೆ ಎಷ್ಟು?
ಈ ಔಷಧಿಯ ಬೆಲೆಯ ಬಗ್ಗೆ ನಿಖರವಾದ ಮಾಹಿತಿ ಇನ್ನೂ ಲಭ್ಯವಿಲ್ಲ. ಆದರೆ ಪ್ರತಿ ಡೋಸ್ ಗೆ 11,000 ಡಾಲರ್ ಅಂದ್ರೆ ಸುಮಾರು 8.5 ಲಕ್ಷ ರೂಪಾಯಿ ಎನ್ನಲಾಗ್ತಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.