ನೀರು ನಮ್ಮ ಆರೋಗ್ಯದ ಗುಟ್ಟು. ದಿನಕ್ಕೆ ಮೂರು ಲೀಟರ್ ನೀರು ಸೇವನೆ ಮಾಡ್ಲೇಬೇಕು ಎನ್ನುತ್ತಾರೆ ವೈದ್ಯರು. ಹಾಗಂತ ನವಜಾತ ಶಿಶುಗಳಿಗೆ ನೀರು ಕುಡಿಸೋದು ಎಷ್ಟು ಸರಿ? ಇದಕ್ಕೆ ಉತ್ತರ ಇಲ್ಲಿದೆ.
ನೀರಿಲ್ಲದ ನಮ್ಮ ಜೀವನವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ನೀರಿಲ್ಲದೆ ಒಂದು ದಿನ ಇರೋದು ಕೂಡ ಕಷ್ಟ. ನಮ್ಮ ದೇಹಕ್ಕೆ ನೀರಿನ ಅವಶ್ಯಕತೆ ಹೆಚ್ಚಿದೆ. ಆಹಾರವಿಲ್ಲದೆ ಒಂದು ವಾರ ಇರಬಹುದು. ಆದ್ರೆ ನೀರಿಲ್ಲದೆ ಎರಡು ದಿನ ಇದ್ದರೆ ಸಮಸ್ಯೆ ಶುರುವಾಗುತ್ತದೆ. ನಮ್ಮ ದೇಹ ಸದಾ ಹೈಡ್ರೀಕರಣಗೊಂಡಿರಬೇಕು. ದೇಹದಲ್ಲಿ ನೀರಿನ ಅಂಶ ಕಡಿಮೆಯಾದ್ರೆ ದೇಹ ಡಿಹೈಡ್ರೇಟ್ ಆಗುವ ಜೊತೆಗೆ ನಾನಾ ಸಮಸ್ಯೆ ಕಾಡಲು ಶುರುವಾಗುತ್ತದೆ. ನೀರು ನಿಮ್ಮನ್ನು ಹೈಡ್ರೀಕರಿಸುತ್ತದೆ ಇದರಿಂದ ನಾವು ಆರೋಗ್ಯವಾಗಿರಬಹುದು.
ನಮ್ಮ ದೇಹ (Body) ದಲ್ಲಿರುವ ವಿಷ (Poison) ವನ್ನು ಹೊರಗೆ ಹಾಕುವ ಕೆಲಸವನ್ನು ನೀರು (Water) ಮಾಡುತ್ತದೆ. ಬರಿ ಬಾಯಾರಿಕೆ ನೀಗಿಸುವ ಕೆಲಸ ಮಾತ್ರ ನೀರಿನದ್ದಲ್ಲ. ನಮ್ಮ ದೇಹದ ಸಮತೋಲನವನ್ನು ಕಾಪಾಡುತ್ತದೆ. ನೀರು ಪ್ರತಿಯೊಬ್ಬನಿಗೂ ಬೇಕು. ಮಕ್ಕಳು ಕೂಡ ಅವರ ವಯಸ್ಸಿಗೆ ತಕ್ಕಂತೆ ನೀರಿನ ಸೇವನೆ ಮಾಡಬೇಕು. ಆದ್ರೆ ಈಗಷ್ಟೆ ಹುಟ್ಟಿದ ಮಗುವಿಗೆ ನೀರು ಕುಡಿಸುವುದು ಸರಿಯೇ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಹುಟ್ಟಿದ ಮಗುವಿಗೆ ನೀರು ಕುಡಿಸಬೇಕೆ, ಬೇಡ್ವೆ ಎನ್ನುವ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡ್ತೇವೆ.
MAKAR SANKRANTI: ಸುಗ್ಗಿ ಕಾಲ ಹಿಗ್ಗಿ ಬರುತಿದೆ, ಎಳ್ಳು ಬೆಲ್ಲ ಆರೋಗ್ಯಕ್ಕೆ ನೀಡುತ್ತೆ ಲಾಭ
ಹುಟ್ಟಿದ ಮಗುವಿಗೆ ನೀರು : ಹುಟ್ಟಿದ ಮಗುವಿಗೆ ನೀರು ಕುಡಿಸುವ ಯಾವುದೇ ಪ್ರಯತ್ನವನ್ನು ನೀವು ಮಾಡಬೇಡಿ. ನೀರು ಎಷ್ಟೇ ಆರೋಗ್ಯಕರವಾಗಿದ್ದರೂ ನವಜಾತ ಶಿಶುಗಳಿಗೆ ನೀರು ಅಪಾಯ. ಮಗುವಿಗೆ ನೀರಿನ ಬದಲು ತಾಯಿ ಎದೆಹಾಲನ್ನು ನೀಡಬೇಕು. ಹಾಲು ಕೂಡ ಮಗುವನ್ನು ಹೈಡ್ರೀಕರಿಸಲು ಸಹಾಯ ಮಾಡುತ್ತದೆ ಎಂಬುದು ನೆನಪಿರಲಿ.
ನವಜಾತ ಶಿಶುವಿಗೆ ನೀರನ್ನು ಏಕೆ ನೀಡಬಾರದು? : ನವಜಾತ ಶಿಶುವಿನ ದೇಹ ನೀರು ಸೇವನೆ ಮಾಡಲು ಯೋಗ್ಯವಾಗಿರುವುದಿಲ್ಲ. ಅವರ ಸಣ್ಣ ಹೊಟ್ಟೆ ಮತ್ತು ಮೂತ್ರಪಿಂಡ ಬಹಳ ಸೂಕ್ಷ್ಮವಾಗಿರುತ್ತವೆ. ಮಗುವಿನ ಹೊಟ್ಟೆ 1 ರಿಂದ 2 ಚಮಚ ಅಥವಾ 5 ರಿಂದ 10 ಮಿಲಿಗಳಷ್ಟು ಮಾತ್ರ ಸ್ಥಳಾವಕಾಶವನ್ನು ಹೊಂದಿರುತ್ತದೆ. ಮಗುವಿನ ಹೊಟ್ಟೆಗೆ ಅನಗತ್ಯ ವಸ್ತುಗಳನ್ನು ಹಾಕಿದಾಗ ಮಗುವಿನ ಹೊಟ್ಟೆಯಲ್ಲಿ ಜಾಗವಿರುವುದಿಲ್ಲ. ಮಗುವಿಗೆ ಬೇಕಾದ ಪೋಷಕಾಂಶವನ್ನು ನೀಡಲು ಸಾಧ್ಯವಾಗುವುದಿಲ್ಲ. ಇದ್ರಿಂದ ಮಗುವಿನ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮವುಂಟಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ನವಜಾತ ಶಿಶುವಿಗೆ ನೀರು ಕುಡಿಸುವ ಪ್ರಯತ್ನ ಮಾಡ್ಬೇಡಿ.
Thyroid Awareness Month: ಮಹಿಳೆಯರಲ್ಲೇಕೆ ಥೈರಾಯ್ಡ್ ಸಮಸ್ಯೆ ಹೆಚ್ಚು?
ಮಗುವಿಗೆ ಯಾವಾಗ ನೀರು ನೀಡುವುದು ಸೂಕ್ತ : ಆರಂಭದ ಕೆಲ ತಿಂಗಳು ಮಗುವಿಗೆ ನೀರಿನ ಅಗತ್ಯತೆ ಇರೋದಿಲ್ಲ. ಅಗತ್ಯವಿಲ್ಲದ ಸಂದರ್ಭದಲ್ಲಿ ನೀವು ಮಗುವಿಗೆ ನೀರು ನೀಡಿದ್ರೆ ಅದ್ರಿಂದ ಆರೋಗ್ಯ ಕೆಡುತ್ತದೆ. ಮೊದಲೇ ಹೇಳಿದಂತೆ ತಾಯಿ ಹಾಲು ಮಾತ್ರ ಮಗುವಿಗೆ ಸಾಕಾಗುತ್ತದೆ. ತಾಯಿ ಹಾಲಿನಲ್ಲಿಯೇ ದ್ರವ ಪದಾರ್ಥವಿರುವ ಕಾರಣ ಇದು ಮಗುವಿನ ಆರೋಗ್ಯವನ್ನು ಕಾಪಾಡುತ್ತದೆ.
ನಿಮ್ಮ ಮಗುವಿಗೆ ಆರು ತಿಂಗಳಾಗ್ತಿದ್ದಂತೆ ನೀವು ಮಗುವಿಗೆ ನೀರನ್ನು ನೀಡಲು ಶುರು ಮಾಡಬಹುದು. ಸಾಮಾನ್ಯವಾಗಿ ಆರು ತಿಂಗಳ ನಂತ್ರ ಬೇರೆ ಆಹಾರವನ್ನು ನೀಡುವಂತೆಯೂ ವೈದ್ಯರು ಸಲಹೆ ನೀಡ್ತಾರೆ. ಅದೇ ರೀತಿ ನೀವು ನೀರನ್ನು ಕೂಡ ನೀಡಬೇಕು. ಆರು ತಿಂಗಳ ಶಿಶುಗಳಿಗೆ ದಿನಕ್ಕೆ ಅರ್ಧ ಕಪ್ ಗಿಂತ ಸ್ವಲ್ಪ ಹೆಚ್ಚು ನೀರನ್ನು ನೀವು ನೀಡಬಹುದು. ಆದ್ರೆ ಅದಕ್ಕಿಂತ ಹೆಚ್ಚಿನ ನೀರನ್ನು ಕುಡಿಸಲು ಹೋಗ್ಬೇಡಿ. ಹಾಗೆಯೇ ಇಷ್ಟೂ ನೀರನ್ನು ಒಂದೇ ಬಾರಿ ಮಗುವಿಗೆ ನೀಡಬೇಡಿ. ಆಗಾಗ ಸ್ವಲ್ಪ ಸ್ವಲ್ಪ ನೀರನ್ನು ನೀವು ನೀಡಬಹುದು. ಕಾಯಿಸಿ, ಆರಿಸಿದ ನೀರನ್ನು ಮಾತ್ರ ಮಗುವಿಗೆ ನೀಡಿ. ಮಗುವಿಗೆ ನೀರು ನೀಡುವ ಮುನ್ನ ನೀವು ವೈದ್ಯರ ಸಲಹೆ ಕೂಡ ಪಡೆಯಬಹುದು.