
ಕೆಲವೊಂದು ಖಾಯಿಲೆ (Disease) ಬಗ್ಗೆ ನಮಗೆ ತಿಳಿದಿರುವುದಿಲ್ಲ. ನಮ್ಮನ್ನು ಪ್ರತಿ ದಿನ ಕಾಡ್ತಿದ್ದರೂ ಅದೊಂದು ಗಂಭೀರ ಸಮಸ್ಯೆ (Problem) ಎಂಬುದೇ ನಮಗೆ ಗೊತ್ತಿರುವುದಿಲ್ಲ. ಅನೇಕರು ಅದನ್ನು ನಿರ್ಲಕ್ಷ್ಯ ಮಾಡ್ತಾರೆ. ಸಮಸ್ಯೆ ಹೆಚ್ಚಾಗಾದ ಆಸ್ಪತ್ರೆ (Hospital)ಗೆ ಓಡ್ತಾರೆ. ಆದ್ರೆ ಸಮಯ ಮೀರಿರುವ ಕಾರಣ ಚಿಕಿತ್ಸೆ (Treatment)ಫಲಿಸುವುದಿಲ್ಲ. ಸಾಮಾನ್ಯವಾಗಿ ನಿದ್ರೆಯಲ್ಲಿ ಅನೇಕರಿಗೆ ಎಚ್ಚರವಾಗುತ್ತದೆ. ಉಸಿರುಗಟ್ಟಿದಂತ ಅನುಭವವಾಗುತ್ತದೆ. ಎದ್ದು,ಸುಧಾರಿಸಿಕೊಂಡು ಮಲಗ್ತೇವೆ. ಆದ್ರೆ ಪದೇ ಪದೇ ಹೀಗಾಗ್ತಿದ್ದರೆ ಅದನ್ನು ನಿರ್ಲಕ್ಷ್ಯಿಸುವುದು ಒಳ್ಳೆಯದಲ್ಲ. ಶೀಘ್ರ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಸೂಕ್ತ. ಯಾಕೆಂದ್ರೆ ಇದು ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ (OSA)ಆಗಿರಬಹುದು. ಗಾಯಕ ಬಪ್ಪಿ ನಿಧನಕ್ಕೆ ಕಾರಣವಾದ ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಬಗ್ಗೆ ಇಂದು ಮಾಹಿತಿ ನೀಡ್ತೇವೆ.
ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಎಂದರೇನು? : ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ (OSA) ನಿದ್ರೆಗೆ ಸಂಬಂಧಿಸಿದ ಕಾಯಿಲೆಯಾಗಿದೆ. ಇದರಿಂದ ರಾತ್ರಿ ಮಲಗುವಾಗ ಉಸಿರಾಟದ ತೊಂದರೆ ಎದುರಿಸಬೇಕಾಗುತ್ತದೆ. ಈ ಕಾರಣದಿಂದಾಗಿ, ರಾತ್ರಿಯಲ್ಲಿ ಅನೇಕ ಬಾರಿ ನಿದ್ರೆ ಭಂಗವಾಗುತ್ತದೆ. ಇದರಿಂದ ಬಳಲುವ ವ್ಯಕ್ತಿಯ ಉಸಿರಾಟವು ಕೆಲವು ಸೆಕೆಂಡುಗಳ ಕಾಲ ಇದ್ದಕ್ಕಿದ್ದಂತೆ ನಿಲ್ಲುತ್ತದೆ ಮತ್ತು ನಂತರ ತಾನಾಗಿಯೇ ಶುರುವಾಗುತ್ತದೆ. ಇದು ರಾತ್ರಿಯಲ್ಲಿ ಒಂದು ಅಥವಾ ಎರಡು ಬಾರಿ ಸಂಭವಿಸುತ್ತದೆ. ಅನೇಕ ಜನರಿಗೆ ಇದು 10 ರಿಂದ 12 ಬಾರಿ ಸಂಭವಿಸಬಹುದು.
ನಿದ್ರೆಯಲ್ಲಿ ಉಸಿರುಕಟ್ಟುವಿಕೆಯಲ್ಲಿ ಮೂರು ವಿಧಗಳಿವೆ. ಮೊದಲನೆಯದು ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ. ಎರಡನೆಯದು ಸೆಂಟ್ರಲ್ ಸ್ಲೀಪ್ ಅಪ್ನಿಯಾ. ಮೂರನೆಯದು ಕಾಂಪ್ಲೆಕ್ಸ್ ಸ್ಲೀಪ್ ಅಪ್ನಯಾ. ಇವುಗಳಲ್ಲಿ ಅತ್ಯಂತ ಸಾಮಾನ್ಯವಾದದ್ದು ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ. ವ್ಯಕ್ತಿಯ ನಾಲಿಗೆ ಮತ್ತು ಮೃದುವಾದ ಪ್ಯಾಲೆಟ್ ಕೆಲಸ ಮಾಡದಿದ್ದಾಗ ಈ ರೋಗವು ಸಂಭವಿಸುತ್ತದೆ. ನಂತರ ಉಸಿರಾಟದ ಟ್ಯೂಬ್ ಚಿಕ್ಕದಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಇದು ಕೆಲವು ಸೆಕೆಂಡುಗಳ ಕಾಲ ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ. ಇದರಿಂದ ಉಸಿರಾಟದ ತೊಂದರೆ ಉಂಟಾಗುತ್ತದೆ. ಆರಂಭಿಕ ಹಂತದಲ್ಲಿ, ಈ ರೋಗವು ಮಾರಕವಲ್ಲ. ಆದರೆ ಈ ರೋಗದ ಬಗ್ಗೆ ಕಾಳಜಿ ವಹಿಸದಿದ್ದರೆ ಕ್ರಮೇಣ ಸಮಸ್ಯೆ ಉಲ್ಬಣಿಸುತ್ತದೆ. ರಕ್ತದಲ್ಲಿ ಆಮ್ಲಜನಕದ ಕೊರತೆಯಾಗಿ ಇಂಗಾಲದ ಡೈಆಕ್ಸೈಡ್ ರಕ್ತದಲ್ಲಿ ಸಂಗ್ರಹವಾಗುತ್ತದೆ. ಇದ್ರಿಂದ ಸಾವು ಸಂಭವಿಸುವ ಅಪಾಯವಿರುತ್ತದೆ. ಅನೇಕ ಬಾರಿ ನಿದ್ರೆ ಸಮಸ್ಯೆಯಾದ್ರೂ ಬೆಳಿಗ್ಗೆ ಇದ್ರ ಬಗ್ಗೆ ಅವರಿಗೆ ತಿಳಿಯುವುದಿಲ್ಲ. ಬೆಳಿಗ್ಗೆ ಪೂರ್ತಿ ಇವರು ಆಕಳಿಸುತ್ತಿರುತ್ತಾರೆ.
LOVE AND HEART: ಪ್ರೀತಿ ಮಾಡೋದು ಹೃದಯದ ಆರೋಗ್ಯಕ್ಕೆ ಡೇಂಜರ್ ಅಂತೆ..!
ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಲಕ್ಷಣ : ಹಗಲಿನಲ್ಲಿ ಸಾಕಷ್ಟು ನಿದ್ರೆ ಬರುವುದು, ಜೋರಾಗಿ ಬರುವ ಗೊರಕೆ ಹೊಡೆಯುವುದು, ನಿದ್ದೆ ಮಾಡುವಾಗ ಉಸಿರಾಟದ ತೊಂದರೆ, ಉಸಿರುಗಟ್ಟಿದಂತಾಗಿ ನಿದ್ರೆ ಭಂಗ, ಬಾಯಿ ಒಣಗುವುದು ಮತ್ತು ಗಂಟಲು ನೋವು, ಬೆಳಿಗ್ಗೆ ತಲೆನೋವು, ಏಕಾಗ್ರತೆ ನಷ್ಟ, ಮನಸ್ಥಿತಿಯಲ್ಲಿ ಬದಲಾವಣೆ ಮತ್ತು ಖಿನ್ನತೆ, ತೀವ್ರ ರಕ್ತದೊತ್ತಡ, ಲೈಂಗಿಕ ಬಯಕೆ ಕಡಿಮೆಯಾಗುವುದು ಇದ್ರ ಲಕ್ಷಣವಾಗಿದೆ.
ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾಕ್ಕೆ ಕಾರಣ : ಇದು ಯಾರಿಗೆ ಬೇಕಾದ್ರೂ ಕಾಡಬಹುದು. ಆದ್ರೆ ಕೆಲ ಕಾರಣದಿಂದ ಇದು ಹೆಚ್ಚಾಗುವ ಸಾಧ್ಯತೆಯಿದೆ.
ಬೊಜ್ಜು : ಬೊಜ್ಜು ಹೆಚ್ಚಾದವರಿಗೆ ಈ ಸಮಸ್ಯೆ ಕಾಡುವುದು ಹೆಚ್ಚು. ಶ್ವಾಸನಾಳದ ಮೇಲ್ಭಾಗದಲ್ಲಿ ಕೊಬ್ಬಿನ ಶೇಖರಣೆಯು ಉಸಿರಾಟಕ್ಕೆ ತೊಂದರೆಯನ್ನುಂಟು ಮಾಡುತ್ತದೆ.
ವಯಸ್ಸು: 60 ವರ್ಷ ಮೇಲ್ಪಟ್ಟವರಿಗೆ ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಕಾಡುವ ಅಪಾಯ ಹೆಚ್ಚಿರುತ್ತದೆ.
ಶ್ವಾಸನಾಳದ ಆಕಾರ : ಬಾಲ್ಯದಲ್ಲಿಯೇ ಶ್ವಾಸನಾಳದ ಆಕಾರ ಕಿರಿದಾಗಿರುವವರಿಗೆ ಈ ಸಮಸ್ಯೆ ಕಾಡುವುದು ಹೆಚ್ಚು.
ಮಧುಮೇಹ : ಮಧುಮೇಹ ಹಾಗೂ ರಕ್ತದೊತ್ತಡದಿಂದ ಬಳಲುವ ಜನರಿಗೂ ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಕಾಡುವ ಅಪಾಯವಿರುತ್ತದೆ.
Easy Exercise: ಬಾತ್ ಟವೆಲ್ ಬಳಸಿಯೂ ವ್ಯಾಯಾಮ ಮಾಡ್ಬೋದು
ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಚಿಕಿತ್ಸೆ : ಇದು ಒಂದು ಅಪಾಯಕಾರಿ ರೋಗ ಎನ್ನಬಹುದು. ಟಿವಿ ನೋಡುವಾಗ,ಕೆಲಸ ಮಾಡುವಾಗ ಇಲ್ಲವೆ ವಾಹನ ಚಲಾಯಿಸುವಾಗ ನಿದ್ರೆ ಬರುವ ಅಪಾಯವಿದೆ. ಇದ್ರಿಂದ ಅಪಘಾತವಾಗುವ ಭಯವಿರುತ್ತದೆ. ಚಿಕ್ಕ ವಯಸ್ಸಿನಲ್ಲಿ ಇದು ಶುರುವಾದ್ರೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಇದಕ್ಕೆ ಚಿಕಿತ್ಸೆ ನೀಡಬಹುದಾಗಿದೆ. ರಾತ್ರಿ ಸರಿಯಾಗಿ ಉಸಿರಾಡಲು ಸಾಧ್ಯವಾಗುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಕೆಲವೊಮ್ಮೆ ಶಸ್ತ್ರಚಿಕಿತ್ಸೆ ಅಗತ್ಯವಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.