Sleep Better: ಹೊಸ ತಾಯಂದಿರೇ, ನಿದ್ರಾಹೀನತೆಯ ಸಮಸ್ಯೆಯೇ ? ಹೀಗೆ ಮಾಡಿ

By Suvarna News  |  First Published Feb 15, 2022, 8:42 PM IST

ನೀವು ಹೊಸ ತಾಯಂದಿರೇ ? ಮಗುವಿನ ಆರೈಕೆಯಲ್ಲಿ ನಿದ್ದೆ(Sleep) ಮಾಡೋಕೆ ಸಮಯಾನೇ ಸಿಗ್ತಿಲ್ಲ ಅನ್ನೋ ಚಿಂತೆನಾ ? ನಿದ್ರಾಹೀನತೆಯಿಂದಲೇ ಆರೋಗ್ಯ (Health) ಸಮಸ್ಯೆ ಕಾಣಿಸಿಕೊಳ್ತಿದ್ಯಾ ? ಹಾಗಿದ್ರೆ ಹೀಗೆ ಮಾಡಿ. ಹಾಯಾಗಿ ನಿದ್ದೆ ಬರುತ್ತೆ.


ಹೊಸದಾಗಿ ತಾಯಂದಿರಾದವರಿಗೆ ಮುಖ್ಯವಾಗಿ ಕಾಡುವ ಸಮಸ್ಯೆಯೆಂದರೆ ನಿದ್ರಾಹೀನತೆ. ಹಗಲು, ರಾತ್ರಿ ಮಗುವಿನ ಆರೈಕೆ ಮಾಡುವುದರಿಂದ ಸರಿಯಾಗಿ ನಿದ್ದೆ (Sleep) ಮಾಡಲು ಸಮಯ ಸಿಗುವುದಿಲ್ಲ.ಇದರಿಂದ ಹಲವು ಆರೋಗ್ಯ (Health) ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.  ಶಾಂತಿಯುತವಾಗಿ ಮತ್ತು ಅಡೆತಡೆಯಿಲ್ಲದೆ ನಿದ್ರಿಸುವುದು ಪ್ರತಿಯೊಬ್ಬ ಹೊಸ ತಾಯಿಯು ಎದುರಿಸುತ್ತಿರುವ ಸವಾಲಾಗಿದೆ, ಕನಿಷ್ಠ ಮೊದಲ ಕೆಲವು ವಾರಗಳ ವರೆಗೆ ತಾಯಂದಿರ ನಿದ್ರೆಯ ವೇಳಾಪಟ್ಟಿ ತೊಂದರೆಗೊಳಗಾಗುತ್ತದೆ. ಯಾಕೆಂದರೆ ಈ ಸಂದರ್ಭದಲ್ಲಿ ತಾಯಂದಿರು ಮಗುವಿಗೆ ಆಹಾರವನ್ನು ನೀಡಲು, ಯೋಗ ಕ್ಷೇಮ ನೋಡಿಕೊಳ್ಳಲು ಪ್ರತಿ ಕೆಲವು ಗಂಟೆಗಳಿಗೊಮ್ಮೆ ಎಚ್ಚರಗೊಳ್ಳಬೇಕಾಗುತ್ತದೆ. 

ಹೊಸ ತಾಯಂದಿರಿಗೆ ರಾತ್ರಿಯ ನಿದ್ರೆಯನ್ನು ಸರಿಯಾಗಿ ಮಾಡದ ಕಾರಣ ಇದು ಅವರ ಒಟ್ಟಾರೆ ಆರೋಗ್ಯದ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರುತ್ತದೆ. ಹೀಗಾಗಿ ತಜ್ಞರು ನಿದ್ರೆಯನ್ನು ಸುಧಾರಿಸಲು ಪರಿಣಾಮಕಾರಿ ಸಲಹೆಗಳನ್ನು ಸೂಚಿಸುತ್ತಾರೆ.

Tap to resize

Latest Videos

undefined

Parenting Tips: ತಪ್ಪು ಮಾಡಿದ ಮಕ್ಕಳನ್ನು ಶಿಕ್ಷಿಸುವ ಅಮ್ಮನಿಗ್ಯಾಕೆ ದೂಷಣೆಯ ಉಡುಗೊರೆ?

ಹೊಸ ತಾಯಂದಿರಲ್ಲಿ ನಿದ್ರಾಹೀನತೆಯ ಸಮಸ್ಯೆಯನ್ನು ಎದುರಿಸಲು ಸಲಹೆಗಳು

ನಿದ್ದೆಯ ಕುರಿತಾಗಿ ತಿಳಿದುಕೊಳ್ಳಿ
ದಿನವೊಂದಕ್ಕೆ ಎಷ್ಟು ಗಂಟೆ ನಿದ್ದೆ ಬೇಕಾಗುತ್ತದೆ, ಕಡಿಮೆ ನಿದ್ದೆಯಾದರೆ ಏನೆಲ್ಲಾ ಸಮಸ್ಯೆಯಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಿ. ಪ್ರತಿ ರಾತ್ರಿ ಹೆಚ್ಚು ವಿಶ್ರಾಂತಿ ಪಡೆಯಲು ನೀವೇನು ಮಾಡಬಹುದು ಎಂದು ಪಟ್ಟಿ ಮಾಡಿ. ಮಗು ಮಲಗುವ ಸಮಯ, ಆಟವಾಡುವ ಸಮಯವನ್ನು ಗಮನಿಸಿಕೊಳ್ಳಿ. ಉಳಿದ ಸಮಯದಲ್ಲಿ ನೀವು ನಿದ್ದೆ ಮಾಡಲು ಸಮಯವನ್ನು ನಿಗದಿಪಡಿಸಿ.

ದಿನಚರಿ ಸಿದ್ಧಪಡಿಸಿ
ನಿದ್ರಾಹೀನತೆಯ ಸಮಸ್ಯೆ ಎದುರಾಗದಿರಲು ಪ್ರತಿ ದಿನಕ್ಕೆ ಆಯಾ ದಿನಚರಿಯನ್ನು ಸಿದ್ಧಪಡಿಸಿ. ನಿರ್ಧಿಷ್ಟ ಸಮಯಕ್ಕೆ ಮಲಗುವುದು ಶಿಶುಗಳಿಗೆ ಉತ್ತಮ ನಿದ್ರೆಯ ಅಭ್ಯಾಸವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಈ ರೀತಿಯ ದಿನಚರಿಯು ಪೋಷಕರಿಗೆ ಸರಿಯಾಗಿ ನಿದ್ದೆಯಾಗಲು ಸಹ ಪ್ರಯೋಜನಕಾರಿಯಾಗಿದೆ. 

ಯೋಗಾಭ್ಯಾಸ ಮಾಡಿ
ಯೋಗ (Yoga) ಮಾಡುವುದರಿಂದಲೂ ಉತ್ತಮ ನಿದ್ದೆಯನ್ನು ಪಡೆಯಬಹುದು. ಯೋಗ ಮಾಡುವುದು ಒತ್ತಡವನ್ನು ನಿವಾರಿಸಲು, ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ ಯೋಗ ಮಾಡುವುದರಿಂದ ಕುತ್ತಿಗೆ ಮತ್ತು ಕೆಳ ಬೆನ್ನಿನ ನೋವು ಕಡಿಮೆಯಾಗುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಇದರಿಂದ ಆರಾಮವಾಗಿ ನಿದ್ದೆ ಬರುತ್ತದೆ. ಯೋಗಾಭ್ಯಾಸವು ನಿದ್ರೆಯ ಗುಣಮಟ್ಟವನ್ನು ಸುಧಾರಿಸಬಹುದು. 

Mother Health: ಬಾಣಂತಿಗಿರಲಿ ಸೂಕ್ತ ಮಾನಸಿಕ ಆರೋಗ್ಯ ಆರೈಕೆ

ಮಲಗುವ ಮೊದಲು ಲಘು ವ್ಯಾಯಾಮ ಮಾಡಿ 
ವ್ಯಾಯಾಮ (Exercise)ವು ನಿದ್ರಾಹೀನತೆಗೆ ಉತ್ತಮ ಚಿಕಿತ್ಸೆಯಾಗಿದೆ. ಮಲಗುವ ಮೊದಲು ಲಘುವಾಗಿ ವ್ಯಾಯಾಮ ಮಾಡಿ, ಇದರಿಂದ ಚೆನ್ನಾಗಿ ನಿದ್ದೆ ಬರುತ್ತದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ, ವ್ಯಾಯಾಮವು ನಿದ್ರೆಯ ಗುಣಮಟ್ಟ, ನಿದ್ರೆಯ ಪ್ರಾರಂಭದ ಸುಪ್ತತೆ, ಒಟ್ಟು ನಿದ್ರೆಯ ಸಮಯ, ನಿದ್ರೆಯ ದಕ್ಷತೆ ಮತ್ತು ನಿದ್ರಾಹೀನತೆಯ ತೀವ್ರತೆಯ ಮೇಲೆ ಧನಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಒತ್ತಡವನ್ನು ನಿವಾರಿಸಲು ಮತ್ತು ಪ್ರಸವಾನಂತರದ ಖಿನ್ನತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಆಹಾರ ಪದ್ಧತಿ ಉತ್ತಮವಾಗಿರಲಿ
ಹೊಸ ತಾಯಂದಿರು  ನಿದ್ರಾಹೀನತೆಯಿಂದ ಬಳಲುವುದನ್ನು ತಪ್ಪಿಸಲು ಕೆಫೀನ್ ಯುಕ್ತ ಕಾಫಿ, ಟೀ ಸೇವನೆ, ಹೆಚ್ಚಿನ ಪ್ರಮಾಣದಲ್ಲಿ ಚಾಕೋಲೇಟ್ ಸೇವಿಸುವುದನ್ನು ತಪ್ಪಿಸಿ. ಇವೆರಡರ ಸೇವನೆಯು ನಿಮಗೆ ನಿದ್ರೆ ಬರದಂತೆ ಮಾಡುತ್ತದೆ. ಅದರಲ್ಲೂ ಮಧ್ಯಾಹ್ನ, ಸಂಜೆಯ ಹೊತ್ತು ಅಥವಾ ಮಲಗುವ ಮುನ್ನ ಇಂಥಹಾ ಆಹಾರ, ಪಾನೀಯವನ್ನು ಸೇವಿಸಲೇಬೇಡಿ.

ಮಗು ಎಚ್ಚರಗೊಂಡ ತಕ್ಷಣ ಆರೈಕೆ ಮಾಡಿ
ಮಗು (Baby) ರಾತ್ರಿಯಲ್ಲಿ ಎಚ್ಚರಗೊಂಡಾಗ ತಕ್ಷಣ ಆರೈಕೆ ಮಾಡಿ ಮಲಗುವಂತೆ ಮಾಡಿ. ಆಹಾರಕ್ಕಾಗಿ, ಡೈಪರ್ ಬದಲಾವಣೆಗಾಗಿ ಮಗು ಎಚ್ಚರವಾದಾಗ ತಕ್ಷಣ ಮಗುವಿಗೆ ಹಾಲು ನೀಡಿ, ಡೈಪರ್ ಬದಲಾಯಿಸಿ. ನಂತರ ತಕ್ಷಣವೇ ಮಗುವನ್ನು ಮತ್ತೆ ಮಲಗಿಸಿ. ಮಕ್ಕಳು ಸಂಪೂರ್ಣವಾಗಿ ಎಚ್ಚರಗೊಳ್ಳುವುದನ್ನು ತಡೆಯಲು ಕೋಣೆಯನ್ನು ಶಾಂತವಾಗಿರಿಸಿ.

ಮಲಗುವ ಕೋಣೆ ಶಾಂತವಾಗಿಡಿ 
ಮಲಗುವ ಮೊದಲು ಸಂಗೀತವನ್ನು ಆಲಿಸಿ. ಧ್ಯಾನ ಮಾಡಿ.  ಪುಸ್ತಕಗಳನ್ನು ಓದಿ. ಮೊಬೈಲ್, ಲ್ಯಾಪ್‌ಟಾಪ್‌ನ್ನು ಹಾಸಿಗೆಯಿಂದ ದೂರವಿಡಿ. ಇದರಿಂದ ಮೊಬೈಲ್ ರಿಂಗಾಗಿ ನಿದ್ರೆಗೆ ಭಂಗವಾಗುವುದು ತಪ್ಪುತ್ತದೆ. ಮಲಗಲು ಹೊರಟಾಗ ಗಾಢ ಬಣ್ಣದ ದೀಪಗಳನ್ನು ಮಂದಗೊಳಿಸಿ. ಆರಾಮದಾಯಕ ಪೈಜಾಮಗಳನ್ನು ಹಾಕಿ. ಮಲಗುವ ಕೋಣೆಯ ತಾಪಮಾನ ಮತ್ತು ಬೆಳಕಿನ ಮಟ್ಟ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಿ. ಇದರಿಂದ, ಆರೋಗ್ಯಕರ ನಿದ್ರೆಯನ್ನು ಪಡೆಯಬಹುದು.

click me!