ಕೆಲವೊಮ್ಮೆ ಆತುರಕ್ಕೆ, ಮತ್ತೆ ಕೆಲವೊಮ್ಮೆ ಅರಿವಿಲ್ಲದೆ ಬಿಸಿ ಆಹಾರವನ್ನು ನಾವು ಸೇವನೆ ಮಾಡಿರ್ತೇವೆ. ನಾಲಿಗೆಗೆ ಬಿಸಿ ತಾಗ್ತಿದ್ದಂತೆ ತಪ್ಪು ಗೊತ್ತಾಗುತ್ತೆ. ಆದ್ರೆ ಉಗುಳಲಾಗ್ದೆ, ನುಂಗಲಾಗ್ದೆ ಒದ್ದಾಡ್ತೇವೆ. ಕೊನೆಯಲ್ಲಿ ನಾಲಿಗೆಯಂತೂ ಸುಟ್ಟಿರುತ್ತದೆ. ಕೆಂಡವಾಗಿರುವ ನಾಲಿಗೆ ಕೂಲ್ ಮಾಡೋದು ಹೇಗೆ ಗೊತ್ತಾ?
ಇಷ್ಟವಾಗುವ ಆಹಾರ (Food)ದ ಹೆಸರು ಕೇಳಿದ್ರೆ ಬಾಯಲ್ಲಿ ನೀರು ಬಂದಿರುತ್ತೆ. ಅದು ಕಣ್ಣ ಮುಂದೆ ಬರ್ತಿದ್ದಂತೆ ಟಕ್ ಅಂತಾ ಬಾಯಿ (Mouth)ಗೆ ಹಾಕಿರ್ತೇವೆ. ಅದು ಬಿಸಿ (Hot)ಯಿದೆಯಾ ಎಂದು ನೋಡುವ ತಾಳ್ಮೆಯೂ ನಮಗಿರುವುದಿಲ್ಲ. ಗೋಬಿ ಮಂಚೂರಿ(Gobi Manchuri), ಬಿಸಿ ನೂಡಲ್ಸ್ ಹೀಗೆ ಗರಮಾ ಗರಂ ಆಹಾರ ತಿನ್ನುವಾಗ ಬಾಯಿ ಸುಟ್ಟುಕೊಳ್ಳುವುದು ಹೆಚ್ಚು. ಕೆಲವರು ಟೀ, ಕಾಫಿ ಕುಡಿಯುವಾಗ್ಲೂ ಬಾಯಿ ಸುಟ್ಟುಕೊಳ್ತಾರೆ. ಬಿಸಿ ಆಹಾರವನ್ನು ಬಾಯಿಗೆ ಹಾಕಿದಾಗ ನಾಲಿಗೆ ಚುರ್ ಎನ್ನುತ್ತೆ. ಉರಿ ತಡೆಯೋದು ಕಷ್ಟ. ಕೆಲವೊಮ್ಮೆ ಇದು ಸ್ವಲ್ಪ ಸಮಯದಲ್ಲಿ ಹೋಗುತ್ತದೆ. ಮತ್ತೆ ಕೆಲವೊಮ್ಮೆ ಮೂರ್ನಾಲ್ಕು ದಿನ ಕಾಡುತ್ತದೆ. ಸುಟ್ಟ ನಾಲಿಗೆಯಲ್ಲಿ ಆಹಾರ ಸೇವನೆ ಕಷ್ಟ. ಅದ್ರಲ್ಲೂ ಮಸಾಲೆ ಪದಾರ್ಥ ತಿನ್ನೋದು ದೊಡ್ಡ ಸವಾಲು. ನೀವೂ ಅನೇಕ ಬಾರಿ ನಾಲಿಗೆ ಸುಟ್ಟುಕೊಂಡಿರಬಹುದು. ಇನ್ಮುಂದೆ ನಾಲಿಗೆ ಸುಟ್ಟರೆ ಟೆನ್ಷನ್ ಮಾಡ್ಕೋಬೇಡಿ. ಮನೆ ಮದ್ದಿನ ಮೂಲಕ ಬೇಗ ಉರಿಯನ್ನು ಕಡಿಮೆ ಮಾಡಿಕೊಳ್ಳಿ.
ಬಿಸಿಗೆ ನಾಲಿಗೆ ಸುಟ್ಟಾಗ ಏನ್ಮಾಡ್ಬೇಕು?
ತಣ್ಣೀರು ಸೇವನೆ : ಬಿಸಿ ಆಹಾರ ಸೇವನೆ ಮಾಡಿ ನಾಲಿಗೆಯಲ್ಲಿ ಸಣ್ಣ ಗಾಯಗಳಾಗಿದ್ದರೆ ತಣ್ಣನೆಯ ನೀರನ್ನು ಕುಡಿಯಿರಿ. ಇದು ಕಿರಿಕಿರಿ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ಸುಟ್ಟ ನಾಲಿಗೆಯ ಉಷ್ಣತೆಯನ್ನು ಕಡಿಮೆ ಮಾಡಲು ಒಂದು ಲೋಟ ತಣ್ಣೀರನ್ನು ನಿಧಾನವಾಗಿ ಸಿಪ್ ಮಾಡಿ. ಆದ್ರೆ ಕೆಲವೊಮ್ಮೆ ತಣ್ಣನೆಯ ನೀರು ಸುಟ್ಟ ಗಾಯವನ್ನು ಜಾಸ್ತಿ ಮಾಡಬಹುದು. ಹಾಗಾಗಿ ಅದ್ರ ಬಗ್ಗೆ ಗಮನವಿರಲಿ. ಐಸ್ ಕೂಡ ನೀವು ಬಳಸಬಹುದು. ಐಸ್ ಬಳಸುವ ಮೊದಲು ಅದನ್ನು ತೊಳೆದುಕೊಳ್ಳಿ. ಯಾಕೆಂದ್ರೆ ಅದು ನಾಲಿಗೆಗೆ ಅಂಟಿಕೊಳ್ಳುವ ಸಾಧ್ಯತೆಯಿರುತ್ತದೆ.
Summer Health : ಸೌತೆಕಾಯಿ ತಿಂದಾಕ್ಷಣ ನೀರು ಕುಡಿಯೋದು ಅಪಾಯ!
ಅಡಿಗೆ ಸೋಡಾ : ಬಿಸಿ ಆಹಾರ ಸೇವನೆ ಮಾಡಿದ ನಂತ್ರ ಬಾಯಿ ಸುಟ್ಟರೆ ತಕ್ಷಣ ಅಡುಗೆ ಸೋಡಾ ಬಳಸಿ. ಅಡುಗೆ ಸೋಡಾದಿಂದ ಬಾಯಿ ಮುಕ್ಕಳಿಸಿ. ಇದ್ರಿಂದ ನಾಲಿಗೆ ಉರಿ, ಕಿರಿಕಿರಿ ಕಡಿಮೆಯಾಗುತ್ತದೆ.
ಮೃದುವಾದ, ತಣ್ಣನೆಯ ಆಹಾರ ಸೇವಿಸಿ : ನಾಲಿಗೆ ಸುಟ್ಟಿದ್ದರೆ, ಉರಿ ಹೋಗಿಲ್ಲವೆಂದಾದ್ರೆ ಉರಿ ಹೋಗುವವರೆಗೂ ಮೃದುವಾದ ಆಹಾರ ಸೇವನೆ ಮಾಡಿ. ಹಾಗೆಯೇ ತಣ್ಣನೆ ಆಹಾರವನ್ನು ತೆಗೆದುಕೊಳ್ಳಿ. ಮೊಸರು, ಫ್ರಿಜ್ ನಲ್ಲಿ ಇಟ್ಟ ಆಹಾರ, ಸೇಬು ಹಣ್ಣಿನ ಸೇವನೆ ಮಾಡಿ. ನಾಲಿಗೆಗೆ ಅಂಟಿಕೊಳ್ಳುವ ಆಹಾರ ಸೇವನೆ ಮಾಡ್ಬೇಡಿ. ಒಂದು ವೇಳೆ ಅಂಟಿಕೊಳ್ಳುತ್ತಿದ್ದರೆ ತಕ್ಷಣ ನೀರು ಸೇವನೆ ಮಾಡಿ. ಮಸಾಲೆ ಆಹಾರಗಳಿಂದ ದೂರವಿರುವುದು ಒಳ್ಳೆಯದು. ಇದ್ರ ಜೊತೆಗೆ ನಾಲಿಗೆ ಸುಟ್ಟ ಕೆಲ ಗಂಟೆಗಳ ಕಾಲ ಟೀ, ಕಾಫಿಯಂತಹ ಬಿಸಿ ಪದಾರ್ಥ ಸೇವನೆ ಮಾಡ್ಬೇಡಿ.
ಉಪ್ಪು ನೀರಿನಿಂದ ಬಾಯಿ ತೊಳೆಯಿರಿ : ನಾಲಿಗೆ ಸುಟ್ಟ ಅನುಭವವಾದ್ರೆ ಉಪ್ಪು ನೀರಿನಿಂದ ಬಾಯಿಯನ್ನು ತೊಳೆಯಬಹುದು. ಒಂದು ಲೋಟ ನೀರಿಗೆ ⅛ ಟೀ ಚಮಚ ಉಪ್ಪನ್ನು ಸೇರಿಸಿ. ಈ ಮಿಶ್ರಣವನ್ನು ಬಾಯಿಗೆ ಹಾಕಿ ಮುಕ್ಕಳಿಸಿ. ಸ್ವಲ್ಪ ಬೆಚ್ಚಗಿನ ನೀರನ್ನು ಇದಕ್ಕೆ ಬಳಸಬೇಕು. ಇದು ನಂಜುನಿರೋಧಕ ಗುಣಗಳನ್ನು ಹೊಂದಿದ್ದು ಅದು ಉರಿಯೂತ ಮತ್ತು ನೋವನ್ನು ಕಡಿಮೆ ಮಾಡುತ್ತದೆ.
ಹಳೆ ಕೀಲು ನೋವು ಕಾಡುತಿದ್ದರೆ, ತಕ್ಷಣವೇ ಈ ಪರಿಣಾಮಕಾರಿ ಮನೆಮದ್ದು ಟ್ರೈ ಮಾಡಿ!
ಜೇನುತುಪ್ಪ ಬಳಕೆ : ಸುಟ್ಟ ನಾಲಿಗೆ ನೋವು ಕಡಿಮೆಯಾಗ್ಬೇಕೆಂದ್ರೆ ಜೇನುತುಪ್ಪವನ್ನು ನೀವು ಬಳಸಬಹುದು. ಜೇನುತುಪ್ಪವು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಸುಟ್ಟಗಾಯಗಳಿಂದ ಬೇಗ ಚೇತರಿಸಿಕೊಳ್ಳಲು ಇದು ನೆರವಾಗುತ್ತದೆ. ಹಲವಾರು ದಶಕಗಳಿಂದ ಸುಟ್ಟ ಗಾಯಗಳನ್ನು ಗುಣಪಡಿಸಲು ಜೇನುತುಪ್ಪವನ್ನು ಬಳಸಲಾಗುತ್ತಿದೆ. ನಾಲಿಗೆಗೆ ಜೇನುತುಪ್ಪವನ್ನು ಹಚ್ಚಿ. ಆದ್ರೆ ರಾತ್ರಿ ಹಾಗೆ ಬಿಡಬೇಡಿ. ಹಲ್ಲುಜ್ಜಿಯೇ ಮಲಗಿ. ಇಲ್ಲವೆಂದ್ರೆ ಹಲ್ಲು ಹಾಳಾಗುವ ಸಾಧ್ಯತೆಯಿರುತ್ತದೆ.
ಮನೆ ಮದ್ದಿನ ಬಳಕೆ ನಂತ್ರವೂ ನೋವು, ಕಿರಿಕಿರಿ ಕಡಿಮೆಯಾಗಿಲ್ಲವೆಂದ್ರೆ ನೀವು ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು.