
ಬೆಂಗಳೂರು: ಭಾರತದ ಸಂಶೋಧನಾ ಮತ್ತು ನಾವೀನ್ಯತಾ ರಂಗದಲ್ಲಿ ಹೊಸ ಸಂಚಲನ ಮೂಡಿಸುವ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ದೇಶದ ಶೈಕ್ಷಣಿಕ ಸಂಶೋಧನೆಗಳನ್ನು ಸಮಾಜಮುಖಿ ಪರಿಹಾರಗಳನ್ನಾಗಿ ಪರಿವರ್ತಿಸುವ ಉದ್ದೇಶದಿಂದ 'ವಾಧ್ವಾನಿ ಫೌಂಡೇಶನ್' ಮತ್ತು 'ಗೇಟ್ಸ್ ಫೌಂಡೇಶನ್' ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿವೆ. ವಾಧ್ವಾನಿ ಇನ್ನೋವೇಶನ್ ನೆಟ್‌ವರ್ಕ್‌ನ (ಡಬ್ಲ್ಯೂಐಎನ್) ರಾಷ್ಟ್ರೀಯ ವಿಸ್ತರಣೆಯಾದ 'ನ್ಯಾಷನಲ್ ಇನ್ನೋವೇಶನ್ ನೆಟ್‌ವರ್ಕ್' (ಎನ್‌ಐಎಣ್) ಮೂಲಕ ಭಾರತದ ನಾವೀನ್ಯತಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು ಈ ಒಪ್ಪಂದದ ಪ್ರಮುಖ ಉದ್ದೇಶವಾಗಿದೆ.
ಮುಖ್ಯವಾಗಿ ಆರೋಗ್ಯ, ಪೌಷ್ಟಿಕಾಂಶ, ಜೈವಿಕ ತಂತ್ರಜ್ಞಾನ, ಜೀನೋಮಿಕ್ಸ್, ಮೆಡ್‌ಟೆಕ್ ಹಾಗೂ ಭಾರತದ ಅಭಿವೃದ್ಧಿಗೆ ಪೂರಕವಾಗಿರುವ ಇತರ ಉದಯೋನ್ಮುಖ ಕ್ಷೇತ್ರಗಳ ಮೇಲೆ ಎರಡೂ ಸಂಸ್ಥೆಗಳು ಗಮನ ಹರಿಸಲಿವೆ.
ಈ ಒಪ್ಪಂದದ ಭಾಗವಾಗಿ, ಗೇಟ್ಸ್ ಫೌಂಡೇಶನ್ ಮುಂದಿನ ಐದು ವರ್ಷಗಳಲ್ಲಿ ಐದು ಎನ್‌ಐಎನ್ 'ಸೆಂಟರ್ಸ್ ಆಫ್ ಎಕ್ಸಲೆನ್ಸ್'ಗಳಿಗೆ ಬೆಂಬಲ ನೀಡಲಿದೆ. ಈ ವರ್ಷವೇ ಎರಡು ಕೇಂದ್ರಗಳು ಕಾರ್ಯಾರಂಭ ಮಾಡಲಿವೆ.
ಈ ಕೇಂದ್ರಗಳು ಸಂಶೋಧಕರಿಗೆ ತಮ್ಮ ಪ್ರಯೋಗಾಲಯದ ಐಡಿಯಾಗಳನ್ನು ವಾಸ್ತವಿಕ ಜಗತ್ತಿಗೆ ತರಲು ಸಹಾಯ ಮಾಡಲಿವೆ. ಮೂಲಮಾದರಿಗಳ ಅಭಿವೃದ್ಧಿ, ಮೌಲ್ಯೀಕರಣ, ಪೇಟೆಂಟ್ ಪಡೆಯುವುದು, ವಾಣಿಜ್ಯೀಕರಣ, ಹೊಸ ಸ್ಟಾರ್ಟ್‌ಅಪ್‌ಗಳ ಸೃಷ್ಟಿ ಹಾಗೂ ಕೈಗಾರಿಕೆಗಳ ಜೊತೆ ಪಾಲುದಾರಿಕೆ ಬೆಳೆಸಲು ಈ ಕೇಂದ್ರಗಳು ನೆರವಾಗಲಿವೆ.
ಕಳೆದ ವರ್ಷ, ಅಂದರೆ ಏಪ್ರಿಲ್ 29, 2025 ರಂದು ಪ್ರಧಾನಿ ನರೇಂದ್ರ ಮೋದಿ ಅವರು 'ವಾಧ್ವಾನಿ ಇನ್ನೋವೇಶನ್ ನೆಟ್‌ವರ್ಕ್' (ಡಬ್ಯೂಐಎನ್) ಗೆ ಚಾಲನೆ ನೀಡಿದ್ದರು. ಶಿಕ್ಷಣ ಸಂಸ್ಥೆಗಳು, ಉದ್ದಿಮೆಗಳು ಮತ್ತು ಹೂಡಿಕೆದಾರರನ್ನು ಒಂದೇ ವೇದಿಕೆಯಡಿ ತಂದು, ಸಂಶೋಧನೆಗಳನ್ನು ಮಾರುಕಟ್ಟೆಗೆ ತರುವ ಮಾರ್ಗವನ್ನು ಸುಗಮಗೊಳಿಸಲು ವಾಧ್ವಾನಿ ಫೌಂಡೇಶನ್ ಇದನ್ನು ಸ್ಥಾಪಿಸಿತ್ತು. ಇದೀಗ 'ಎನ್‌ಐಎನ್' ಮೂಲಕ ಈ ಮಾದರಿಯನ್ನು ಇಡೀ ದೇಶಾದ್ಯಂತ ವಿಸ್ತರಿಸಲಾಗುತ್ತಿದೆ.
ಪ್ರಾರಂಭವಾದಾಗಿನಿಂದ 'ಡಬ್ಲ್ಯೂಐಎನ್' ಈಗಾಗಲೇ ಹೆಲ್ತ್‌ಟೆಕ್, ಮೆಡ್‌ಟೆಕ್, ಬಯೋಟೆಕ್ನಾಲಜಿ ಮತ್ತು ಕ್ವಾಂಟಮ್ ತಂತ್ರಜ್ಞಾನದ 50ಕ್ಕೂ ಹೆಚ್ಚು ಉನ್ನತ ಯೋಜನೆಗಳಿಗೆ ಬೆಂಬಲ ನೀಡಿದೆ.
ಐಐಟಿ ಬಾಂಬೆ, ಐಐಟಿ ಮದ್ರಾಸ್, ಐಐಟಿ ದೆಹಲಿ, ಐಐಟಿ ಕಾನ್ಪುರ, ಐಐಟಿ ಹೈದರಾಬಾದ್, ಐಐಟಿ ಧನ್‌ಬಾದ್, ಬೆಂಗಳೂರಿನ 'ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್' (ಐಐಎಸ್‌ಸಿ) ಹಾಗೂ ಸಿ-ಕ್ಯಾಂಪ್‌ನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಿದೆ. ಮುಂಬರುವ ದಿನಗಳಲ್ಲಿ ಐಐಟಿ ಕಾನ್ಪುರದಲ್ಲಿ 'ವಾಧ್ವಾನಿ ಸ್ಕೂಲ್ ಆಫ್ ಎಐ' ಮತ್ತು ಐಐಟಿ ಬಾಂಬೆಯಲ್ಲಿ 'ವಾಧ್ವಾನಿ ಹೆಲ್ತ್ ಅಂಡ್ ಬಯೋ ಹಬ್' ಎಂಬ ಎರಡು ಬೃಹತ್ ಸೂಪರ್ ಹಬ್‌ಗಳು ತಲೆಎತ್ತಲಿವೆ.
ಎನ್‌ಐಎನ್‌ನ ಪ್ರಮುಖ ಗುರಿಯೆಂದರೆ, ಮುಂದಿನ 3-5 ವರ್ಷಗಳಲ್ಲಿ ಪಾಲುದಾರ ಸಂಸ್ಥೆಗಳ ಮೂಲಕ ದೇಶಾದ್ಯಂತ 250ಕ್ಕೂ ಹೆಚ್ಚು ಉತ್ಕೃಷ್ಟತಾ ಕೇಂದ್ರಗಳನ್ನು (ಸಿಒಇ) ಸ್ಥಾಪಿಸುವುದು. ಈ ಮೂಲಕ ಪ್ರತಿವರ್ಷ ಸಾವಿರಾರು ಸಂಶೋಧನಾ ಐಡಿಯಾಗಳನ್ನು ಲ್ಯಾಬ್‌ನಿಂದ ಮಾರುಕಟ್ಟೆಗೆ ತರುವುದು ಹಾಗೂ ಲಕ್ಷಾಂತರ ಹೊಸ ಉದ್ಯೋಗಗಳನ್ನು ಸೃಷ್ಟಿಸುವುದು ಇದರ ಅಂತಿಮ ಗುರಿಯಾಗಿದೆ.
ಈ ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸಿರುವ ವಾಧ್ವಾನಿ ಫೌಂಡೇಶನ್‌ನ ಸಿಇಒ ಮತ್ತು ಬೋರ್ಡ್ ಮೆಂಬರ್ ಡಾ. ಅಜಯ್ ಕೆಲಾ, "ಸಂಶೋಧಕರು, ಸಂಸ್ಥೆಗಳು, ಉದ್ದಿಮೆಗಳು ಮತ್ತು ಬಂಡವಾಳ ಒಂದೇ ಗುರಿಯೊಂದಿಗೆ ಸೇರಿದಾಗ ಭಾರತದ ನಾವೀನ್ಯತಾ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಬಹುದು ಎಂಬುದನ್ನು ಡಬ್ಯೂಐಎನ್ ಸಾಬೀತುಪಡಿಸಿದೆ. ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಗೇಟ್ಸ್ ಫೌಂಡೇಶನ್ ಜೊತೆ ಕೈಜೋಡಿಸಿರುವುದು ನಮಗೆ ಸಂತಸ ತಂದಿದೆ. ಜಾಗತಿಕ ನಾವೀನ್ಯತಾ ವಲಯದಲ್ಲಿ ಭಾರತವನ್ನು ನಾಯಕನನ್ನಾಗಿ ಮಾಡುವುದೇ ನಮ್ಮ ಗುರಿ," ಎಂದರು.
ಗೇಟ್ಸ್ ಫೌಂಡೇಶನ್‌ನ ಭಾರತೀಯ ನಿರ್ದೇಶಕಿ ಅರ್ಚನಾ ವ್ಯಾಸ್ ಪ್ರತಿಕ್ರಿಯಿಸಿ, "ಮುಂಬರುವ ದಶಕದ ಅತ್ಯಂತ ಪ್ರಮುಖ ಆರೋಗ್ಯ ಮತ್ತು ಪೌಷ್ಟಿಕಾಂಶದ ಆವಿಷ್ಕಾರಗಳು ಭಾರತೀಯ ಸಂಸ್ಥೆಗಳಿಂದಲೇ ಹೊರಹೊಮ್ಮಲಿವೆ. ಭಾರತೀಯ ಸಂಶೋಧಕರ ಐಡಿಯಾಗಳನ್ನು ಅಗ್ಗದ ಹಾಗೂ ಸುಲಭವಾಗಿ ಎಲ್ಲರಿಗೂ ಸಿಗುವಂತಹ ಪರಿಹಾರಗಳನ್ನಾಗಿ ಬದಲಾಯಿಸಲು ನಾವು ವಾಧ್ವಾನಿ ಫೌಂಡೇಶನ್ ಜೊತೆ ಈ ಹೂಡಿಕೆ ಮಾಡುತ್ತಿದ್ದೇವೆ," ಎಂದು ತಿಳಿಸಿದರು.
ಸಿಲಿಕಾನ್ ವ್ಯಾಲಿಯ ಉದ್ಯಮಿ ಡಾ. ರೋಮೇಶ್ ವಾಧ್ವಾನಿ ಅವರು ಸ್ಥಾಪಿಸಿರುವ ವಾಧ್ವಾನಿ ಫೌಂಡೇಶನ್ ತಂತ್ರಜ್ಞಾನವನ್ನು ಬಳಸಿಕೊಂಡು ಉದ್ಯೋಗ ಸೃಷ್ಟಿ, ಕೌಶಲ್ಯಾಭಿವೃದ್ಧಿ ಹಾಗೂ ನಾವೀನ್ಯತೆಯ ಮೂಲಕ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಆರ್ಥಿಕ ಅಭಿವೃದ್ಧಿಗೆ ಶ್ರಮಿಸುತ್ತಿರುವ ಲಾಭರಹಿತ ಸಂಸ್ಥೆಯಾಗಿದೆ.
ಇನ್ನು ಗೇಟ್ಸ್ ಫೌಂಡೇಶನ್ ಬಿಲ್ ಗೇಟ್ಸ್ ಅವರ ಮಾರ್ಗದರ್ಶನದಲ್ಲಿ, ಸಿಇಒ ಮಾರ್ಕ್ ಸುಜ್ಮನ್ ನೇತೃತ್ವದಲ್ಲಿ ಮುನ್ನಡೆಯುತ್ತಿದ್ದು, 'ಪ್ರತಿಯೊಂದು ಜೀವಕ್ಕೂ ಸಮಾನ ಮೌಲ್ಯವಿದೆ' ಎಂಬ ನಂಬಿಕೆಯೊಂದಿಗೆ ಜಗತ್ತಿನಾದ್ಯಂತ ಜನರ ಆರೋಗ್ಯ ಮತ್ತು ಭವಿಷ್ಯವನ್ನು ಉತ್ತಮಗೊಳಿಸಲು ಶ್ರಮಿಸುತ್ತಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.