ಜೋಳವನ್ನು ಯಾವುದೇ ರೂಪದಲ್ಲಿ ಸೇವನೆ ಮಾಡುವುದು ಆರೋಗ್ಯಕ್ಕೆ ಉತ್ತಮ. ದೇಶೀಯ ಮೆಕ್ಕೆ ಜೋಳವನ್ನು ಮಳೆಗಾಲದಲ್ಲಿ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಜೀರ್ಣ ಕ್ರಿಯೆಗೆ ಅನುಕೂಲ ಮಾಡುವ ಜೋಳ ಮಧುಮೇಹಿಗಳಿಗೂ ಉತ್ತಮ ಪರಿಣಾಮ ಬೀರುತ್ತದೆ.
ಮಳೆಗಾಲದ ಸಂಜೆಯಲ್ಲಿ ಬೆಚ್ಚಗೆ ಕುಳಿತು ಕಾಫಿಯನ್ನೋ ಟೀಯನ್ನೋ ಸವಿಯುವ ಆಸೆಯಾಗುವುದು ಸಹಜ. ಜತೆಗೆ ಪಕೋಡವೂ ಇರಲಿ ಎನ್ನುತ್ತಾರೆ ಕರಿದ ತಿಂಡಿಗಳ ಪ್ರಿಯರು. ಆದರೆ, ಕೆಲವರು ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಕರಿದ ತಿಂಡಿಗಳನ್ನು ಬಿಟ್ಟು ಬೇರೆ ಏನಾದರೂ ತಿಂಡಿ ಈ ಕಾಲದಲ್ಲಿ ಲಭ್ಯವಿದೆಯೇ ಎಂದು ಹುಡುಕಾಡುತ್ತಾರೆ. ಮಳೆಗಾಲವೆಂದರೆ, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದ ಕಾಲವೂ ಹೌದು. ಏಕೆಂದರೆ, ಇಲ್ಲಸಲ್ಲದ ವೈರಸ್ ಗಳು ಲಗ್ಗೆ ಇಡುವ, ಕಾಟ ಕೊಡುವ ಕಾಲ ಇದು. ಈಗಂತೂ ಎಲ್ಲೆಡೆ ಜ್ವರದ ಹಾವಳಿ ಬೇರೆ ಕಂಡುಬರುತ್ತಿದೆ. ಇಂತಹ ಸಮಯದಲ್ಲಿ ನಮ್ಮ ನೆಲದಲ್ಲೇ ಬೆಳೆಯುವ ಜೋಳ ಅಥವಾ ಕಾರ್ನ್ ಸೇವಿಸುವುದರಿಂದ ಆರೋಗ್ಯಕ್ಕೆ ಭಾರೀ ಲಾಭವಿದೆ.
ಸೆಲೆಬ್ರಿಟಿ ನ್ಯೂಟ್ರಿಷನಿಸ್ಟ್ ಆಗಿರುವ ರುಜಾತಾ ದಿವೇಕರ್ ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಜೋಳದಿಂದ ಏನೆಲ್ಲ ಲಾಭವಿದೆ ಎನ್ನುವುದನ್ನು ಹಂಚಿಕೊಂಡಿದ್ದಾರೆ. ಇವುಗಳಲ್ಲಿ ಕೆಲವು ಅಂಶಗಳು ಹೆಚ್ಚು ಗಮನ ಸೆಳೆಯುವಂಥದ್ದು. ಜೋಳಕ್ಕೆ ಉತ್ತರ ಭಾರತದಲ್ಲಿ ಮಕ್ಕಾ, ಮಕಾಯಿ ಎಂದೂ ಕರೆಯುತ್ತಾರೆ. ಮಳೆಗಾಲದಲ್ಲಿ ಇದರ ಸೇವನೆ ಮಾಡುವುದರಿಂದ ಹಲವಾರು ಸಮಸ್ಯೆಗಳಿಂದ ದೂರವಿರಬಹುದು.
ಮಳೆಗಾಲದಲ್ಲಿ ಅಕ್ಕಿ ಗಂಜಿ ಕುಡಿದ್ರೆ ಕಾಯಿಲೆ ಬೀಳೋ ಭಯವಿಲ್ಲ
ಮಳೆಗಾಲವೆಂದರೆ (Monsoon), ನಮ್ಮ ರೋಗ ನಿರೋಧಕ ಶಕ್ತಿಯನ್ನು (Immunity) ಪರೀಕ್ಷಿಸುವ ಸಮಯ ಎಂದರೆ ತಪ್ಪಾಗಲಿಕ್ಕಿಲ್ಲ. ಅಲರ್ಜಿ, ಸಾಮಾನ್ಯ ಶೀತ, ನೆಗಡಿ (Cold), ಕಫ, ಜ್ವರದ (Fever) ಸಮಸ್ಯೆಗಳು ಬಿಟ್ಟೂಬಿಡದೆ ಸತಾಯಿಸುತ್ತವೆ. ಹೀಗಾಗಿ, ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಸಮಯದ ಆಹಾರದಲ್ಲಿ ಜೋಳವನ್ನು (Corn) ಸೇರಿಸಿಕೊಳ್ಳುವುದು ಉತ್ತಮ. ಜೋಳದಲ್ಲಿ ವಿಟಮಿನ್ ಬಿ (Vitamin B) ಮತ್ತು ಫಾಲಿಕ್ ಆಸಿಡ್ (Folic Acid) ಉತ್ತಮ ಪ್ರಮಾಣದಲ್ಲಿ ಇರುತ್ತವೆ. ಇವು ಕೂದಲಿನ (Hair) ಆರೋಗ್ಯಕ್ಕೆ ಅತ್ಯುತ್ತಮ ಕೊಡುಗೆ ನೀಡುತ್ತವೆ. ಕೂದಲು ಬಿಳಿಯಾಗುವುದನ್ನು ತಡೆಯುತ್ತವೆ.
ಜತೆಗೆ, ಜೋಳದಲ್ಲಿ ಗರಿಷ್ಠ ಪ್ರಮಾಣದ ನಾರಿನ ಅಂಶ (Fibre) ಇರುತ್ತದೆ. ನಾರಿನಂಶ ಉತ್ತಮ ಮಟ್ಟದಲ್ಲಿರುವ ಆಹಾರದಲ್ಲಿ ಜೋಳಕ್ಕೆ ಅಗ್ರಸ್ಥಾನ ಇದೆ. ಈ ಅಂಶದಿಂದಾಗಿ ಜೀರ್ಣ ವ್ಯವಸ್ಥೆ ಸುಗಮವಾಗುತ್ತದೆ. ಜೀರ್ಣಾಂಗ ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಮಳೆಗಾಲದಲ್ಲಿ ಜೀರ್ಣಕ್ರಿಯೆ (Digestion) ಮಂದವಾಗಿರುವುದರಿಂದ ಈ ಸಮಯದಲ್ಲಿ ಜೋಳ ಅನುಕೂಲವಾಗುತ್ತದೆ. ಜೋಳ ಸೇವಿಸಿದಾಗ ಮಲಬದ್ಧತೆ (Constipation) ಉಂಟಾಗುವುದಿಲ್ಲ.
ಮಧುಮೇಹಿಗಳಿಗೆ ಜೋಳ
ನಾರಿನಂಶ ಉತ್ತಮ ಪ್ರಮಾಣದಲ್ಲಿರುವುದರಿಂದ ಜೋಳ ಸೇವನೆ ಮಾಡಿದಾಗ ರಕ್ತದಲ್ಲಿ ಸಕ್ಕರೆ ಮಟ್ಟ (Blood Sugar Level) ನಿಯಂತ್ರಣಕ್ಕೆ ಬರುತ್ತದೆ. ಆಹಾರವನ್ನು ನಿಧಾನವಾಗಿ ಜೀರ್ಣಗೊಳಿಸಿ, ಶಕ್ತಿಯನ್ನು ನಿಧಾನವಾಗಿ ಬಿಡುಗಡೆಗೊಳಿಸುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಏಕಾಏಕಿ ಜಾಸ್ತಿ ಆಗುವುದಿಲ್ಲ. ನಿಮಗೆ ಗೊತ್ತೇ ಇದೆ, ಮಧುಮೇಹಿಗಳಿಗೆ ನಾರಿನ ಅಂಶವಿರುವ ಆಹಾರ ಹೆಚ್ಚು ಸೂಕ್ತ. ನಿಯಮಿತವಾಗಿ ಜೋಳ ಸೇವನೆ ಮಾಡುವುದರಿಂದ ಮಧುಮೇಹ (Diabetes)ವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ.
ಜಿಟಿ ಜಿಟಿ ಮಳೆಗೆ ಬಿಸಿ ಬಿಸಿ ಏಡಿ ಸಾರು ತಿನ್ನೋಕೆ ಸೂಪರ್ ಆಗಿರುತ್ತೆ
ದೇಶೀಯ ಜೋಳ ಗ್ರೇಟ್
ಜೋಳವನ್ನು ಯಾವ ರೀತಿ ಬೇಕಿದ್ದರೂ ಬಳಕೆ ಮಾಡಬಹುದು. ಬೇಯಿಸಿ, ಉಪ್ಪು, ಚಾಟ್ ಮಸಾಲೆ ಸೇರಿಸಿ ತಿನ್ನಬಹುದು. ಹುರಿದು ಸೇವನೆ ಮಾಡಬಹುದು. ಅಥವಾ ವಿವಿಧ ಬಾತ್, ಮಸಾಲೆಗಳಿಗೆ ಸೇರಿಸಿ, ಕೋಸಂಬರಿ ಮಾಡಿಕೊಂಡೂ ಸೇವಿಸಬಹುದು. ಅಸಲಿಗೆ ರುಜಾತಾ (Rujata) ಅವರು ದೇಶೀಯ ಬಿಳಿ ಜೋಳವನ್ನು (White Corn) ತಿನ್ನುವ ಬಗ್ಗೆ ಸಲಹೆ ನೀಡಿದ್ದಾರೆ. ಸ್ವೀಟ್ ಕಾರ್ನ್ ನಂತೆಯೇ ಆಕಾರ ಹೊಂದಿದ್ದು, ಬಿಳಿ ಬಣ್ಣದ ಮೆಕ್ಕೆಜೋಳ ಆರೋಗ್ಯಕ್ಕೆ ಅತ್ಯುತ್ತಮ ಎಂದು ಹೇಳಿದ್ದಾರೆ.
ಆದರೆ, ಕೆಲವು ಅಧ್ಯಯನಗಳ ಪ್ರಕಾರ, ಸ್ವೀಟ್ ಕಾರ್ನ್ (Sweet Corn) ಕೂಡ ಆರೋಗ್ಯಕ್ಕೆ ಒಳ್ಳೆಯದೇ ಆಗಿದೆ. ಮಧುಮೇಹಿಗಳೂ ಕೂಡ ಇದನ್ನು ಮಧ್ಯಮ ಪ್ರಮಾಣದಲ್ಲಿ ಸೇವನೆ ಮಾಡಬಹುದು. ಆಂಟಿಆಕ್ಸಿಡಂಟ್ (Antioxidants) ಹಾಗೂ ಪಾಲಿಫೆನಾಲ್ ಅಂಶ ಹೊಂದಿರುವ ಸ್ವೀಟ್ ಕಾರ್ನ್, ಟೈಪ್ 2 ಮಧುಮೇಹವನ್ನು ನಿಯಂತ್ರಿಸುವ ಗುಣ ಹೊಂದಿದೆ.