ಜೇನುತುಪ್ಪ ನಾಲಿಗೆಗಷ್ಟೇ ಅಲ್ಲ, ತ್ವಚೆಗೂ ಸಿಹಿ!

By Web Desk  |  First Published Oct 10, 2019, 2:10 PM IST

ನಿಮ್ಮ ವಾರ್ಡ್ರೋಬ್ ತೆಗೆದರೆ ಅಲ್ಲಿ ಫೇಶಿಯಲ್, ಸ್ಕ್ರಬ್, ಟೋನರ್ ಅದೂ ಇದು ಎಂದು ಹತ್ತು ಹಲವು ಕ್ರೀಂಗಳು ಸಿಗಬಹುದು. ನೀವದಕ್ಕಾಗಿ ಸಾವಿರಾರು ರುಪಾಯಿ ಸುರಿದಿರಬಹುದು. ಆದರೆ, ಅವುಗಳಲ್ಲಿ ಬಹುತೇಕ ಖರ್ಚನ್ನು ನೀಗಿಸಿ ಬೆಸ್ಟ್ ರಿಸಲ್ಟ್ ಕೂಡಾ ನೀಡುತ್ತದೆ ಜೇನುತುಪ್ಪ. 


ಫೇಶಿಯಲ್ ಕೊಳ್ಳುವಾಗ ಏನು ನೋಡುತ್ತೀರಿ? ಯಾವುದರಿಂದ ಮಾಡಲಾಗಿದೆ ಎಂದಲ್ಲವೇ?  ಕೆಲವನ್ನು ಕೇಸರಿ, ಮತ್ತೆ ಕೆಲವು ರೋಸ್ ವಾಟರ್, ಅಲೋ ವೆರಾ, ನೀಮ್ ಇತ್ಯಾದಿ ಇರುತ್ತದೆ. ಆದರೆ, ಈ ಆರ್ಟಿಫಿಶಿಯಲ್ ಫೇಶಿಯಲ್ ಉತ್ಪನ್ನಗಳಿಗಿಂತ ಜೇನುತುಪ್ಪ ಒಳ್ಳೆಯದು. ಏಕೆ ಗೊತ್ತಾ?

ಮನೆ ಜೇನುಗೂಡಾಗಲಿ, ಮನೆಯಲ್ಲೇ ಜೇನುಗೂಡು ಬೇಡ!

Tap to resize

Latest Videos

ಇದನ್ನು ಜೇನುಹುಳುಗಳು ಬಹಳಷ್ಟು ವಿಧದ ಹೂವಿನ ಮಕರಂದದಿಂದ ತಯಾರಿಸಿರುತ್ತವೆ. ಈ ಅಂಟಂಟಾದ ಸಿಹಿಯಾದ ದ್ರವ ಪದಾರ್ಥದಲ್ಲಿ ಬರೋಬ್ಬರಿ ಸುಮಾರು 300 ರೀತಿಯ ಇನ್ಗ್ರೀಡಿಯಂಟ್ಸ್ ಇರುತ್ತವೆ! ಇದನ್ನು ಕಾಪಿ ಮಾಡಲು ಬುದ್ಧಿವಂತನೆಂದು ಬೀಗುವ ಮನುಷ್ಯನಿಗೆ ಇದುವರೆಗೂ ಸಾಧ್ಯವಾಗಿಲ್ಲ. ಈ ಜೇನುತುಪ್ಪದಲ್ಲಿ ಎಣ್ಣೆ ಹಾಗೂ ಒಣ ಚರ್ಮಗಳೆರಡಕ್ಕೂ ಆಗುವ ವಿಟಮಿನ್ ಬಿ, ಕ್ಯಾಲ್ಶಿಯಂ, ಝಿಂಕ್, ಪೊಟ್ಯಾಶಿಯಂ ಹಾಗೂ ಐರನ್ ಹೇರಳವಾಗಿರುತ್ತದೆ. ಜೊತೆಗೆ ಇದು ಆ್ಯಂಟಿಆಕ್ಸಿಡೆಂಟ್, ಆ್ಯಂಟಿ ಬ್ಯಾಕ್ಟೀರಿಯಲ್ ಆಗಿದ್ದು, ಚರ್ಮವನ್ನು ಹೊಳೆಸುವಂಥ ಎಂಜೈಮ್ ಚಟುವಟಿಕೆ ಇದರಲ್ಲಿದೆ. ಹಾಗಾಗಿ, ಜೇನುತುಪ್ಪದಿಂದ ತ್ವಚೆಗೆ ಸಾಕಷ್ಟು ಲಾಭಗಳಿವೆ. ಜೇನುತುಪ್ಪ ಹೆಚ್ಚು ಗಾಢವಾಗಿದ್ದಷ್ಟೂ ಅದರಲ್ಲಿ ಆ್ಯಂಟಿಆಕ್ಸಿಡೆಂಟ್ಸ್ ಹೆಚ್ಚಾಗಿರುತ್ತದೆ. ಅದನ್ನು ಹಸಿಯಾಗಿಯೇ ಬಳಸುವುದು ಉತ್ತಮ. 

ಆದರೆ, ಸೂಪರ್ ಮಾರ್ಕೆಟ್‌ಗಳಲ್ಲಿ ಮಾರುವ ಪ್ರೊಸೆಸ್ಡ್ ಹನಿಗಿಂತ, ಸ್ಥಳೀಯವಾಗಿ ದೊರಕುವ ದಪ್ಪನೆಯ ಕ್ರೀಮಿ ಹಾಗೂ ಕ್ರಂಚಿ ಜೇನುತುಪ್ಪ ಬಳಕೆ ಬೆಸ್ಟ್. ಹಾಗಾದರೆ ಜೇನುತುಪ್ಪವನ್ನು ತ್ವಚೆಯ ಮೇಲೆ ಹೇಗೆಲ್ಲ ಬಳಸಬಹುದು ನೋಡೋಣ. 

1. ಉತ್ತಮ ಕ್ಲೆನ್ಸರ್

ಇದರ ಲಾಭ ಅನುಭವಕ್ಕೆ ಬಂದರೆ ನಿಮ್ಮ ದಿನಬಳಕೆಯ ಫೇಸ್‌ವಾಶ್‍ಗೆ ಗುಡ್ ಬೈ ಹೇಳುತ್ತೀರಿ. ಜೇನಿನ ಆ್ಯಂಟಿಆಕ್ಸಿಡೆಂಟ್, ಆ್ಯಂಟಿಸೆಪ್ಟಿಕ್ ಹಾಗೂ ಆ್ಯಂಟಿಬ್ಯಾಕ್ಟೀರಿಯಲ್ ಗುಣಗಳಿಂದಾಗಿ ಇದು ಮೊಡವೆ ಹಾಗೂ ಕಲೆಗಳ ವಿರುದ್ಧ ಸಮರ್ಥವಾಗಿ ಹೋರಾಡುತ್ತದೆ. ಇದು ಮುಖದ ರಂಧ್ರಗಳನ್ನು ತೆರೆದು ಅಲ್ಲಿ ಕುಳಿತ ಬ್ಲ್ಯಾಕ್‌ಹೆಡ್ಸ್ ತೆಗೆದು, ಇಡೀ ದಿನ ತ್ವಚೆಯನ್ನು ಹೈಡ್ರೇಟ್ ಮಾಡಿಡುತ್ತದೆ. ಬೆಚ್ಚಗಿನ ನೀರನ್ನು ಮುಖಕ್ಕೆ ಹಾಕಿಕೊಂಡು ಒಂದು ಚಮಚ ಜೇನುತುಪ್ಪದಿಂದ ಮಸಾಜ್ ಮಾಡಿ. ನಂತರ ತೊಳೆಯಿರಿ.

2. ನೈಸರ್ಗಿಕ ಎಕ್ಸ್‌ಫೋಲಿಯೇಟರ್

ಜೇನುತುಪ್ಪದ ಫೇಸ್ ಮಾಸ್ಕ್ ಚರ್ಮದ ತುರಿಕೆ ಹಾಗೂ ಇತರೆ ಕಿರಿಕಿರಿಗಳಿಗೆ ರಾಮಬಾಣ. ಇದನ್ನು ನಿಂಬೆರಸ, ವಿನೆಗರ್, ಬಟರ್ ಫ್ರೂಟ್ ಮುಂತಾದವುಗಳೊಂದಿಗೆ ಬೇರೆಸಿ ಕೂಡಾ ಬಳಸಬಹುದು. ಹೀಗೆ ಕಲಸಿದ ಮಿಶ್ರಣ ಅಥವಾ ಕೇವಲ ಜೇನನ್ನು ಮುಖಕ್ಕೆ ಹಚ್ಚಿ ಅದು ಒಣಗಲು ಬಿಡಿ. 15 ನಿಮಿಷದ ಬಳಿಕೆ ಮುಖ ತೊಳೆಯಿರಿ. ವಾರಕ್ಕೆರಡು ಬಾರಿ ಮಾಡಿ ಫಲಿತಾಂಶ ಕಂಡುಕೊಳ್ಳಿ. 

ವದನದ ಕಲೆಗೆ ಆಲೂ ರಸವೆಂಬ ಸೌಂದರ್ಯ ವರ್ಧಕ!

3. ಮೊಡವೆ ಕಲೆ ಚಿಕಿತ್ಸೆ

ಜೇನುತುಪ್ಪ ಪ್ರತಿದಿನ ಬಳಸುವುದರಿಂದ ಮುಖದಲ್ಲಿ ಉತ್ಪತ್ತಿಯಾಗುವ ಅತಿಯಾದ ಎಣ್ಣೆ ಹೋಗುತ್ತದೆ. ಜೊತೆಗೆ, ಇದು ಚರ್ಮದ ಮೇಲಿನ ಬೇಡದ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಹೋಗಲಾಡಿಸುತ್ತದೆ. ಎಕ್ಸಿಮಾ ಅಥವಾ ಸೋರಿಯಾಸಿಸ್‌ ಆಗಿದ್ದಲ್ಲಿ ಕೂಡಾ ಜೇನುತುಪ್ಪ ಹಚ್ಚಿ ಉತ್ತಮ ಫಲಿತಾಂಶ ಕಂಡುಕೊಳ್ಳಬಹುದು. ಮೊಡವೆ ಕಲೆಗಳಾಗಿದ್ದಲ್ಲಿ ಅದರ ಮೇಲೆ ಜೇನುತುಪ್ಪ ಹಚ್ಚಿ ಅರ್ಧ ಗಂಟೆ ಬಳಿಕ ತೊಳೆಯಿರಿ. 

4. ಮಾಯಿಶ್ಚರೈಸರ್

ನಿಮ್ಮದು ಒಣಚರ್ಮವಾಗಿದ್ದಲ್ಲಿ, ಇದರಿಂದ ಮುಖ ತುರಿಸುತ್ತಿದ್ದಲ್ಲಿ, ಜೇನುತುಪ್ಪ ಬಳಕೆ ನಿಮಗೆ ವರದಾನ. ಇದು ಮಾಲಿನ್ಯ ಹಾಗೂ ಫ್ರೀ ರ್ಯಾಡಿಕಲ್ ಹಾನಿಯ ವಿರುದ್ಧ ಹೋರಾಡಿ ಚರ್ಮಕ್ಕೆ ಹೈಡ್ರೇಶನ್ ಒದಗಿಸುತ್ತದೆ. ಇದರಿಂದ ತ್ವಚೆ ಸಾಫ್ಟ್ ಆಗುತ್ತದೆ. 

5. ಆ್ಯಂಟಿ ಏಜಿಂಗ್

ಜೇನುತುಪ್ಪದಲ್ಲಿರುವ ಪ್ರೊಬಯೋಟಿಕ್ಸ್, ಆ್ಯಂಟಿ ಆಕ್ಸಿಡೆಂಟ್ಸ್, ನ್ಯೂಟ್ರಿಯೆಂಟ್ಸ್ ಹಾಗೂ ಎಂಜೈಮ್ಸ್ ಸೇರಿ ತ್ವಚೆಯ ಆರೋಗ್ಯ ಕಾಪಾಡುತ್ತವೆ. ಅಷ್ಟೇ ಅಲ್ಲ, ಇದು ಮುಖದಲ್ಲಿ ಮಾಯಿಶ್ಚರೈಸರ್ ಉಳಿವಂತೆ ಮಾಡಿ ಸುಕ್ಕಾಗುವುದನ್ನು ಕಡಿಮೆ ಮಾಡುತ್ತದ. ನಿರಂತರ ಬಳಕೆಯಿಂದಾಗಿ ವಯಸ್ಸಾಗುವುದರ ಕುರುಹನ್ನು ಸಾಧ್ಯವಾದಷ್ಟು ಮುಂದೂಡಬಹುದು. 
ಆದರೆ, ನೀವು ಜೇನಿನ ವಿಷ, ಪೋಲೆನ್ ಅಥವಾ ಸೆಲೆರಿಗೆ ಅಲರ್ಜಿಕ್ ಆಗಿದ್ದಲ್ಲಿ ಮಾತ್ರ ಜೇನುತುಪ್ಪ ಬಳಕೆ ಮಾಡಬೇಡಿ. ಜೊತೆಗೆ, ಮುಖಕ್ಕೆ ಹಚ್ಚಿದ ಜೇನುತುಪ್ಪವನ್ನು ಸಂಪೂರ್ಣವಾಗಿ ತೊಳೆದು ತೆಗೆಯಬೇಕು. ಇಲ್ಲದಿದ್ದಲ್ಲಿ ಅದೇ ಕೊಳೆಯನ್ನು ಸೆಳೆಯುತ್ತದೆ. ಇದರಿಂದ ಮೊಡವೆ ಹಾಗೂ ಕಟ್ಟಿಕೊಂಡ ರಂಧ್ರಗಳಾಗುತ್ತವೆ. ಇನ್ನೇಕೆ ತಡ, ಜೇನುತುಪ್ಪ ಬಳಸಿ, ಫಲಿತಾಂಶ ಕಂಡುಕೊಳ್ಳಿ. 
 

click me!