ಇಬ್ಬರು ವೈದ್ಯರ ವಿಡಿಯೋಗಳು ವೈರಲ್ ಆಗಿ ನೆಟ್ಟಿಗರ ಮನ ಗೆದ್ದಿವೆ. ಒಬ್ಬರು ಮಕ್ಕಳನ್ನು ಸೂಪರ್ ಹೀರೋ ರೀತಿ ರೆಡಿ ಮಾಡಿ ಸರ್ಜರಿಗೆ ಕರೆದೊಯ್ದರೆ, ಮತ್ತೊಬ್ಬರು ಸ್ವತಃ ತಾವೇ ಸೂಪರ್ ಹೀರೋ ರೀತಿ ಸಜ್ಜಾಗಿ ಮಕ್ಕಳ ಸರ್ಜರಿ ಮಾಡುತ್ತಾರೆ. ಇವರ ಈ ಪ್ರಯತ್ನಕ್ಕೆ ಇಂಟರ್ನೆಟ್ ಶಹಬ್ಬಾಸ್ ಹೇಳುತ್ತಿದೆ.
ವೈದ್ಯೋ ನಾರಾಯಣೋ ಹರಿಃ ಎನ್ನುತ್ತೇವೆ ನಾವು. ಪಾಶ್ಚಾತ್ಯರು ವೈದ್ಯರನ್ನು ಸೂಪರ್ ಹೀರೋ ಎನ್ನುತ್ತಾರೆ. ಎಲ್ಲ ಒಳ್ಳೆಯ ವೈದ್ಯರೂ ಸೂಪರ್ ಹೀರೋಗಳೇ ಆದರೂ, ಈ ಇಬ್ಬರು ವೈದ್ಯರು ಆ ಸೂಪರ್ ಹೀರೋಗಳನ್ನು ಬೇರೆ ರೀತಿಯಲ್ಲೇ ಬಳಸಿಕೊಂಡು ಎಲ್ಲರ ಮನಸ್ಸನ್ನು ಗೆಲ್ಲುತ್ತಿದ್ದಾರೆ.
ಒಬ್ಬ ವೈದ್ಯರು ಮಕ್ಕಳನ್ನು ಆಪರೇಶನ್ ಥಿಯೇಟರ್‌ಗೆ ಕೊಂಡೊಯ್ಯುವ ಮುನ್ನ ಅವರನ್ನು ಸೂಪರ್ ಹೀರೋಗಳಂತೆ ಸಿದ್ಧಗೊಳಿಸಿ ಓಡಿಸಿಕೊಂಡು ಹೋದರೆ, ಮತ್ತೊಬ್ಬರು ತಾವೇ ಸೂಪರ್ ಹೀರೋ ರೀತಿ ಸಜ್ಜಾಗಿ ಮಕ್ಕಳನ್ನು ನಗಿಸುತ್ತಾ, ಅವರ ಕಣ್ಣಲ್ಲಿ ಅಚ್ಚರಿ ತುಂಬುತ್ತಾ ಸರ್ಜರಿಗೆ ಕರೆದೊಯ್ಯುತ್ತಾರೆ. ಈ ಮೂಲಕ ಇಬ್ಬರೂ ಎಲ್ಲರ ಕಣ್ಣಲ್ಲಿ ಸೂಪರ್ ಹೀರೋ ಎನಿಸಿಕೊಂಡಿದ್ದಾರೆ.
ಹೌದು, ಬ್ರೆಜಿಲ್‌ನ ಪೀಡಿಯಾಟ್ರಿಕ್ ಸರ್ಜನ್ ಒಬ್ಬರು , ತಾವು ಸರ್ಜರಿ ಮಾಡಬೇಕಾದ ಮಕ್ಕಳಿಗೆ ಅವರಿಷ್ಟದ ಸೂಪರ್ ಹೀರೋ ರೀತಿ ಉಡುಗೆ ಹಾಕಿ ರೆಡಿ ಮಾಡಿ, ಖುಷಿಖುಷಿಯಾಗಿ ಅವರನ್ನು ಆಪರೇಶನ್ ಥಿಯೇಟರ್‌ಗೆ ಕರೆದೊಯ್ಯುವ ವಿಡಿಯೋ ವೈರಲ್ ಆಗಿದೆ. ಡಾ. ಲಿಯಾಂಡ್ರೋ ಬ್ರಾಂಡಾವ್ ಎಂಬವರೇ ಮಕ್ಕಳನ್ನು ಸೂಪರ್ ಹೀರೋ ರೀತಿ ರೆಡಿ ಮಾಡಿ ತಾವು ಸೂಪರ್ ಹೀರೋ ಪಟ್ಟಕ್ಕೆ ಪಾತ್ರರಾಗುತ್ತಿರುವವರು.
'ನಾವೀಗ ಸೂಪರ್ ಹೀರೋ ರೀತಿ ಸಜ್ಜಾಗಿ ಆಟವಾಡಲು, ಬಲೂನ್ ಊದಲು ಹೋಗೋಣ. ಓಡುತ್ತಾ, ಹಾರುತ್ತಾ ನಿಮಗಿಷ್ಟ ಬಂದಂತೆ ಹೋಗೋಣ ಎಂದು ನಾನು ಮಕ್ಕಳಿಗೆ ಹೇಳುತ್ತೇನೆ. ಹೀಗೆ ಅವರು ನಗುತ್ತಾ ಆಪರೇಶನ್ ಥಿಯೇಟರ್‌ಗೆ ಎಂಟ್ರಿ ನೀಡುತ್ತಾರೆ' ಎನ್ನುತ್ತಾರೆ ಡಾ. ಲಿಯಾಂಡ್ರೋ.
ಹೊಟ್ಟೆ ಕೆಟ್ಟಿದ್ಯಾ? ಮೊಳಕೆಕಾಳಿನ ಕಿಚಡಿ ತಿನ್ನಿ; ಇಲ್ಲಿದೆ ನಟಿ ಭಾಗ್ಯಶ್ರೀಯ ಸಿಂಪಲ್ ರೆಸಿಪಿ
ಸಾಮಾನ್ಯವಾಗಿ ಮಕ್ಕಳಿಗೆ ಸರ್ಜರಿ ಮಾಡುವ ಮುನ್ನ ಅನಸ್ತೇಶಿಯಾವನ್ನು ಚುಚ್ಚುವುದಿಲ್ಲ. ಬದಲಿಗೆ ಬಲೂನ್ ರೀತಿಯ ವಸ್ತು ಊದಲು ಕೊಡುತ್ತಾರೆ. ಊದುತ್ತಲೇ ಮಕ್ಕಳು ಪ್ರಜ್ಞೆ ಕಳೆದುಕೊಳ್ಳುತ್ತಾರೆ. ಹೀಗಾಗಿ, ಬಲೂನ್ ಊದಿದ ನಂತರ ಆಗುವ ಸರ್ಜರಿ ಅವರ ಗಮನಕ್ಕೆ ಬರುವುದಿಲ್ಲ. ಸರ್ಜರಿಗೆ ಹೋಗುವ ಮುನ್ನವೂ ಈ ರೀತಿ ಆಡಿಕೊಂಡೇ ಹೋದರೆ, ಮಕ್ಕಳಿಗೆ ಆಪರೇಶನ್ ಭಯ ಆಗುವ ಮುನ್ನವೂ ಇರುವುದಿಲ್ಲ. ಈ ಕಾರಣಕ್ಕಾಗಿ ಈ ವಿಡಿಯೋ ಬಹಳಷ್ಟು ನೆಟ್ಟಿಗರ ಮನ ಗೆದ್ದಿದೆ.
ಒಬ್ಬರು ನೆಟ್ಟಿಗರು ಇದನ್ನು ನೋಡಿ ತಮ್ಮ ಅನುಭವ ಬರೆದುಕೊಂಡಿದ್ದಾರೆ. 'ನಾನು ಸಣ್ಣವನಿರುವಾಗ 9 ಬಾರಿ ಸರ್ಜರಿ ಮಾಡಿಸಿಕೊಂಡಿದ್ದೇನೆ. ಪ್ರತಿ ಬಾರಿಯೂ ವಾರಗಳ ಕಾಲ ನಾನು ಈ ಸರ್ಜರಿ ಸಮಯದಲ್ಲಿ ಸಾಯುತ್ತೇನೆ ಎಂಬ ಭಯದಲ್ಲೇ ಕಳೆದು ಅಳುತ್ತಲೇ ಆಪರೇಶನ್ ಥಿಯೇಟರ್‌ಗೆ ಹೋಗುತ್ತಿದ್ದೆ. ಬಹುಷಃ ನನ್ನ ಡಾಕ್ಟರ್ ಕೂಡಾ ಹೀಗೇ ಮಾಡಿದ್ದರೆ, ನಾನು ಆ ದಿನಗಳನ್ನು ಆತಂಕದಲ್ಲೇ ಕಳೆಯಬೇಕಾಗಿರಲಿಲ್ಲ' ಎಂದಿದ್ದಾರೆ.
ಮತ್ತೊಬ್ಬರು, 'ಯಾವುದೋ ಸೂಪರ್ ಹೀರೋನೇ ಸರ್ಜನ್ ಆಗಿ ಬಂದಿರಬೇಕು' ಎಂದಿದ್ದಾರೆ.
ಇಲ್ಲಿದೆ ವಿಡಿಯೋ
ಸೂಪರ್ ಹೀರೋ ರೀತಿ ಸಜ್ಜಾಗುವ ಡಾಕ್ಟರ್
ಇನ್ನೊಂದು ವಿಡಿಯೋದಲ್ಲಿ ಈಜಿಪ್ಟ್‌ನ ಮಕ್ಕಳ ತಜ್ಞರೊಬ್ಬರು ಸ್ವತಃ ತಾವೇ ಸೂಪರ್ ಹೀರೋ ರೀತಿ ರೆಡಿಯಾಗಿ ಸರ್ಜರಿಗೆ ಹೋಗುತ್ತಾರೆ. ಈ ರೀತಿಯಲ್ಲಿ ಮಕ್ಕಳು ತಮ್ಮನ್ನು ಆಪರೇಶನ್ ಥಿಯೇಟರ್‌ನಲ್ಲಿ ಭಯದಿಂದ ಕಾಣದೆ, ಖುಷಿಯಿಂದ ನೋಡಲಿ, ಅವರ ಮೂಡ್ ತಿಳಿಯಾಗಿರಲಿ ಎಂಬ ಪ್ರಯತ್ನ ತಮ್ಮದು ಎನ್ನುತ್ತಾರೆ.
ಭಾರತ ಕಂಡ ಸಾರ್ವಕಾಲಿಕ ಶ್ರೀಮಂತ; 100 ವರ್ಷ ಹಿಂದೆಯೇ 50 ರೋಲ್ಸ್ ರಾಯ್ಸ್ ಕಾರ್ ಹೊಂದಿದ್ದ ಇವರ ಆಸ್ತಿ ಮೌಲ್ಯ ಎಷ್ಟು?
ಈ ಸರ್ಜನ್ ಹೆಸರು ಡಾ. ಹೇಶಮ್ ಅಬ್ದೇಲ್ಕಡೇರ್. ಇವರು ಬಿಳಿಯ ಕೋಟ್ ಅಥವಾ ಹಸಿರು ಕೋಟ್ ಧರಿಸುವ ಬದಲಿಗೆ ನೀಲಿ ಮತ್ತು ಕೆಂಪು ಬಣ್ಣದ ಸೂಪರ್ ಹೀರೋ ಕೋಟ್ ಧರಿಸಿ ಮಕ್ಕಳಿಗೆ ಎದುರಾಗುತ್ತಾರೆ.
'ಸಾಮಾನ್ಯವಾಗಿ ನಮ್ಮ ಸಮಾಜಗಳಲ್ಲಿ, ಮಕ್ಕಳಲ್ಲಿ ವೈದ್ಯರ ಬಗ್ಗೆ ಭಯಭೀತಗೊಳಿಸುವ ಕಲ್ಪನೆಯನ್ನು ಹುಟ್ಟುಹಾಕಿದ್ದೇವೆ. ಶಸ್ತ್ರಚಿಕಿತ್ಸೆಯಾಗಬೇಕಾದಾಗ ಮಗುವಿನ ತಂದೆ ಮತ್ತು ತಾಯಿಯೇ ಹೆಚ್ಚು ಹೆದರಿರುತ್ತಾರೆ. ಹೀಗಾಗಿ ಹೆತ್ತವರಿಗೂ ಧೈರ್ಯ ತುಂಬುವ, ಮಕ್ಕಳಿಗೆ ತಮಾಷೆ ಎನಿಸುವಂತೆ ಇರಲು ನಾನು ಯೋಚಿಸಿದೆ' ಎನ್ನುತ್ತಾರೆ ಡಾ. ಹೇಶಮ್.
ಇವರ ಫೋಟೋ ಕೂಡಾ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು ಇಂಥವರ ಸಂಖ್ಯೆ ಸಾವಿರವಾಗಲಿ ಎನ್ನುತ್ತಿದ್ದಾರೆ ಆನ್ಲೈನ್ ಯೂಸರ್ಸ್. ಇವರಿಬ್ಬರ ಈ ಪ್ರಯತ್ನಕ್ಕೆ ನೀವೇನಂತೀರಿ?