ಕಳೆದೊಂದು ವರ್ಷದಲ್ಲಿ ಸುನಕ್ ದಂಪತಿಯ ಆಸ್ತಿಯಲ್ಲಿ ಭಾರೀ ಏರಿಕೆ ಕಂಡುಬಂದ ಕಾರಣ, ಅವರೀಗ ಒಂದು ಕಾಲದಲ್ಲಿ ಜಗತ್ತಿನ ಬಹುಭಾಗ ಆಳಿದ್ದ ಬ್ರಿಟನ್ ರಾಜಮನೆತನದ ಹಾಲಿ ದೊರೆ ಪ್ರಿನ್ಸ್ ಚಾರ್ಲ್ಸ್‌ಗಿಂತಲೂ ಹೆಚ್ಚಿನ ಆಸ್ತಿಯ ಒಡೆಯರಾಗಿದ್ದಾರೆ.
ಅಕ್ಷತಾ ಅವರು ಬೆಂಗಳೂರಿನ ಪ್ರಖ್ಯಾತ ಐಟಿ ಕಂಪನಿ ಇನ್ಫೋಸಿಸ್‌ನ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ- ಸುಧಾಮೂರ್ತಿ ಅವರ ಪುತ್ರಿ. ದಂಪತಿಗಳ ಆಸ್ತಿಯ ಮೌಲ್ಯದಲ್ಲಿ ಅಕ್ಷತಾ ಮೂರ್ತಿ ಷೇರು ಹೊಂದಿರುವ ಇನ್ಫೋಸಿಸ್ ಕಂಪೆನಿಯ ಲಾಭವೇ ಮಹತ್ವದ ಆಸ್ತಿಯೆಂದು ವರದಿ ಹೇಳಿದೆ.
ಬ್ರಿಟನ್‌ನ ‘ದ ಸಂಡೇ ಟೈಮ್ಸ್’ ಇತ್ತೀಚೆಗೆ ಬ್ರಿಟನ್‌ನ 1000 ಶ್ರೀಮಂತರು/ ಶ್ರೀಮಂತ ಕುಟುಂಬಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ರಿಷಿ ಸುನಕ್ ದಂಪತಿ 651 ದಶಲಕ್ಷ ಪೌಂಡ್ (6857 ಕೋಟಿ ರು.) ಆಸ್ತಿಯೊಂದಿಗೆ 245ನೇ ಸ್ಥಾನ ಪಡೆದಿದೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ರಿಷಿ ದಂಪತಿ ಆಸ್ತಿಯಲ್ಲಿ 1372 ಕೋಟಿ ರು.ನಷ್ಟು ಭಾರೀ ಏರಿಕೆಯಾದ ಪರಿಣಾಮ ಕಳೆದ ವರ್ಷದ ಪಟ್ಟಿಯಲ್ಲಿ 275ನೇ ಸ್ಥಾನದಲ್ಲಿದ್ದ ದಂಪತಿ ಈ ವರ್ಷ 245ನೇ ಸ್ಥಾನಕ್ಕೆ ಏರಿದೆ.
ಇನ್ನೊಂದೆಡೆ ಬ್ರಿಟನ್ ದೊರೆ ಕಿಂಗ್ ಚಾರ್ಲ್ಸ್ 6435 ಕೋಟಿ ರು. ಆಸ್ತಿಯೊಂದಿಗೆ 258ನೇ ಸ್ಥಾನ ಪಡೆದಿದ್ದಾರೆ. ಇನ್ನೊಂದು ವಿಶೇಷವೆಂದರೆ ಬ್ರಿಟನ್‌ನ ಹಿಂದಿನ ರಾಣಿ 2022ರಲ್ಲಿ 3903 ಕೋಟಿ ರು. ಆಸ್ತಿ ಹೊಂದಿದ್ದರು. ಅದಕ್ಕೆ ಹೋಲಿಸಿದರೂ ರಿಷಿ ದಂಪತಿ ಆಸ್ತಿ ಭಾರೀ ಹೆಚ್ಚಿದೆ.
ಇನ್ನು ಪಟ್ಟಿಯಲ್ಲಿ ಅನಿವಾಸಿ ಭಾರತೀಯ ಉದ್ಯಮಿಗಳಾದ ಹಿಂದೂಜಾ ಸೋದರರು 3.90 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ಬ್ರಿಟನ್‌ನ ಅತ್ಯಂತ ಸಿರಿವಂತರಾಗಿ ಹೊರಹೊಮ್ಮಿದ್ದಾರೆ.