
ಅಬ್ಬಾಬ್ಬ..ಒಮ್ಮೆ ಸೋಶಿಯಲ್ ಮೀಡಿಯಾ ತಡಕಾಡಿದರೆ ಕರ್ಣ-ನಿಧಿ ಮದ್ವೆ ಆಗ್ಲೇಬೇಕು ಅನ್ನೋ ಕಾಮೆಂಟ್ಸ್‌ಗಳ ಸುರಿಮಳೆಯನ್ನೇ ಕಾಣಬಹುದು. ಅದೆಷ್ಟೋ ಧಾರಾವಾಹಿಗಳಲ್ಲಿ, ಸಿನಿಮಾಗಳಲ್ಲಿ ತಾನು ಪ್ರೀತಿಸುತ್ತಿರುವ ಹುಡುಗಿಯನ್ನು ಬಿಟ್ಟು, ನಾಯಕ ಇನ್ಯಾರನ್ನೋ ಮದ್ವೆಯಾದ್ರೂ ಸ್ವಲ್ಪ ದಿನಗಳ ನಂತ್ರ ಆ ಜೋಡಿಗೆ ಹೊಂದಿಕೊಂಡು ಸುಮ್ಮನಾಗುವ ಜನರು ಅದ್ಯಾಕೋ ಕರ್ಣ ಧಾರಾವಾಹಿಯಲ್ಲಿ ಮಾತ್ರ ನಿತ್ಯಾಳನ್ನ ಮದುವೆಯಾಗದೆ, ಕರ್ಣನನ್ನೇ ಮದ್ವೆಯಾಗಬೇಕು ಅಂತ ರಚ್ಚೆ ಹಿಡಿದು ಕುಳಿತಿರುವುದೇಕೆ?.
ಇದು ರಿಯಲ್ ಅಲ್ಲ, ರೀಲ್ ಅಂತ ಗೊತ್ತಿದ್ರೂ, ಆ ಧಾರಾವಾಹಿಯಲ್ಲಿ ಬರುವ ಪಾತ್ರಗಳನ್ನ ತಮ್ಮ ಆಪ್ತರಂತೆ, ಮನೆ ಮಕ್ಕಳಂತೆ ಭಾವಿಸುವ ಜನರಿಗೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ತೆರೆಯ ಮೇಲೆ ನಡೆಯುತ್ತಿರುವುದು ನಮ್ಮ ಮನೆಯಲ್ಲೇ ನಡೆಯುತ್ತಿದೆಯೇನೋ ಅನ್ನುವಷ್ಟರ ಮಟ್ಟಿಗೆ ಸಿಂಕ್ ಆಗಿರುತ್ತಾರೆ. ವಿಶೇಷವಾಗಿ ಕರ್ಣ ಧಾರಾವಾಹಿ ನೋಡುಗರು ಆರಂಭದಲ್ಲಿ ನಿಧಿ-ಕರ್ಣ ಪ್ರೀತಿಯನ್ನ ನೋಡುತ್ತಾ ಎಂಜಾಯ್ ಮಾಡುತ್ತಿದ್ದರು. ಆದರೆ ಯಾವಾಗ ಕರ್ಣನ ಮದುವೆ ನಿತ್ಯಾ ಜೊತೆ ಅನ್ನೊ ಪ್ರೊಮೊ ಬಂತು ನೋಡಿ ಅಲ್ಲಿಂದ ಹಬ್ಬಿತು ಕಿಚ್ಚು.
ಬಹುಶಃ ಧಾರಾವಾಹಿ ನಿರ್ದೇಶಕರೇ ಕರ್ಣನ ಮ್ಯಾರೇಜ್ ಸ್ಟೋರಿ ಈ ಲೆವೆಲ್‌ಗೆ ಹೈಪ್ ಕ್ರಿಯೇಟ್ ಮಾಡುತ್ತದೆ ಎಂದು ಊಹಿಸಿರಲಿಲ್ಲವೇನೋ. ಸದ್ಯಕ್ಕೆ ಡೆರೆಕ್ಟರ್ ವಿರುದ್ಧವೇ ತಿರುಗಿಬಿದ್ದಿರುವ ವೀಕ್ಷಕರು, ಹೊಸ ಹೊಸ ಪ್ರೊಮೊ, ವಿಡಿಯೋ ಬಿಟ್ಟಾಗಲೆಲ್ಲಾ, "ನಾವು ಇನ್ಮೇಲೆ ಈ ಧಾರಾವಾಹಿ ನೋಡುವುದಿಲ್ಲ ಬಿಡಿ", "ಹಳ್ಳ ಹತ್ತಿ ಹೋಯಿತು ಧಾರಾವಾಹಿ" ಹೀಗೆ ವಿಧವಿಧವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಕೊನೆಗೆ ನೇರವಾಗಿ ನಿತ್ಯಾ ಪಾತ್ರಧಾರಿ ನಮ್ರತಾ ಗೌಡ ಅವರಿಗೇ ಕೆಟ್ಟ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ಕೊನೆಗೇ ನಮ್ರತಾ ಗೌಡ ಅವರೇ ಪೋಸ್ಟ್ ಹಾಕಿ ಈ ಬಗ್ಗೆ ನೇರವಾಗಿ ಹೇಳಿಕೊಂಡರೂ ಇದುವರೆಗೂ ಸುಮ್ಮನಾಗಿಲ್ಲ 'ಕರ್ಣ' ಫ್ಯಾನ್ಸ್. ಅದ್ಯಾಕೆ?, ಇಷ್ಟರ ಮಟ್ಟಿಗೆ ಪಾತ್ರಗಳನ್ನ ಹಚ್ಚಿಕೊಳ್ಳಲು ಕಾರಣವೇನು? ಎಂಬುದಕ್ಕೆ ಉತ್ತರ ವೀಕ್ಷಕರ ಕಾಮೆಂಟ್ಸ್‌ನಲ್ಲಿಯೇ ಇದೆ.
ಮೊದಮೊದಲಿಗೆ ನಿತ್ಯಾ-ಕರ್ಣನನ್ನು ಮದುವೆಯಾದರೆ ಚೆನ್ನ ಎನ್ನುವ ಒಂದು ವರ್ಗವಿತ್ತು. ಕರ್ಣ-ನಿತ್ಯಾ ಮದುವೆ ಪ್ರೊಮೊ ಬಿಟ್ಟ ಮೇಲೆ ಲೆಕ್ಕಚಾರವೆಲ್ಲಾ ತಲೆಕೆಳಗಾಯ್ತು. ನಿಧಿನೇ ಮದುವೆಯಾಗಬೇಕು ಎಂಬ ಅಭಿಯಾನವೇ ಸ್ಟಾರ್ಟ್ ಆಯ್ತು. ಅದಕ್ಕೆ ಬಲವಾದ ಕಾರಣವೇ ಇದೆ. ಈ ಪ್ರೊಮೊ ಬರುವ ವೇಳೆಗೆ ಧಾರಾವಾಹಿಯಲ್ಲಿ ಕರ್ಣ-ನಿಧಿ ಇಬ್ಬರೂ ಪ್ರೀತಿಸುತ್ತಿದ್ದರು. ಆದರೆ ಪ್ರೊಮೊ ಬರುವ ಮುನ್ನ ಹಾಗೂ ಆರಂಭದಲ್ಲಿ ಕರ್ಣ ಯಾರನ್ನ ಮದ್ವೆಯಾಗ್ತಾನೆ ಎಂಬ ಕುತೂಹಲವಿತ್ತು. ಹಾಗಾಗಿ ಆಗ ವೀಕ್ಷಕರ ಗಮನ ಈ ಧಾರಾವಾಹಿ ಮೇಲೆ ಅಷ್ಟಿರಲಿಲ್ಲ.
ಕರ್ಣ-ನಿತ್ಯಾ ಮದುವೆ ಪ್ರೊಮೊ ಬರುವ ಹೊತ್ತಿಗೆ ನಿಧಿ ತುಂಟಾಟ, ಕರ್ಣನಿಗೆ ಆಟವಾಡಿಸುವುದು, ಕರ್ಣನಿಗೆ ಯಾರಾದರೂ ತೊಂದರೆ ಕೊಟ್ಟರೆ ತಾನೇ ಮುಂದೆ ನಿಂತು ಮಾತನಾಡುವುದು...ಇವೆಲ್ಲಾ ನೋಡಿದ ನಮ್ಮ ವೀಕ್ಷಕರಿಗೆ ಒಂಟಿಯಾದ ನಮ್ಮ ಕರ್ಣನಿಗೆ ನಿಧಿಯೇ ಸರಿಯಾದ ಜೋಡಿ ಅನಿಸಿತು. ತನಗೇ ಗೊತ್ತಿಲ್ಲದಂತೆ ನಿಧಿಯ ಪ್ರೀತಿಯಲ್ಲಿ ಬಿದ್ದ ಕರ್ಣ, ನಿಧಿಗೆ ಏನಾದರೂ ತಾನಿದ್ದೇನೆ ಎಂಬ ಭರವಸೆ ಅಗಲೇ ಮೂಡಿಸಿದ್ದ. ಇವರಿಬ್ಬರ ಜೋಡಿ ನೋಡಿದಾಗ ಎಂಥವರಿಗೂ.."ಇದ್ರೆ ಜೋಡಿ ಹೀಗಿರಬೇಕು", "ಕರ್ಣನ ತರಹ ಬಾಯ್ ಫ್ರೆಂಡ್, ನಿಧಿಯ ತರಹ ಗರ್ಲ್ ಫ್ರೆಂಡ್" ನಮಗಿಲ್ಲವಲ್ಲ ಎಂದು ಹಲುಬಿದ್ದು ಉಂಟೂ. ಇಲ್ಲಿಯೇ ನೋಡಿ ನಮ್ಮ ಜನ್ರು ಕನೆಕ್ಟ್ ಆಗಿದ್ದು.
ಇಷ್ಟು ದಿನ ಜನರು ಕಾತುರದಿಂದ ಕಾಯುತ್ತಿದ್ದ ಗಳಿಗೆ ಬಂದಾಯ್ತು. ಈ ಸಮಯಕ್ಕೂ ವೀಕ್ಷಕರು ಕರ್ಣ ನಿಧಿನೇ ಮದ್ವೆ ಆಗಬೇಕು ಅಂತಿದ್ದಾರೆ. raadhya_777 ಎಂಬ ಇನ್‌ಸ್ಟಾ ಪೇಜ್‌ನಿಂದ ಬಂದಿರುವ ಕಾಮೆಂಟ್ಸ್ ಇದಕ್ಕೆಲ್ಲಾ ಉತ್ತರದಂತಿದೆ.
"ಕರ್ಣ ಯಾಕೆ ಎಲ್ಲರ ಮನೆ -ಮನಗಳನ್ನು ಗೆದ್ದಿದ್ದಾನೆ, ಕರ್ಣ ಹೇಗೆ ವಿಶಿಷ್ಟ ಅನ್ನುವುದು ಮತ್ತೆ ಮತ್ತೆ ರುಜುವಾತಾಗುತ್ತಲೇ ಇದೆ. ಇದಕ್ಕೆ ಸಾಕ್ಷಿ ಎಂದರೆ ಇಂದಿನ ಭಾವನಾತ್ಮಕವಾದ ಸಂಚಿಕೆ ಹಾಗೂ ತುಮುಲಗಳ ಅಭಿವ್ಯಕ್ತಿ. ಒಂದು ಕ್ಷಣಕ್ಕೆ ನಾವೇ ಅಲ್ಲಿ ಪಕ್ಕದಲ್ಲಿ ಕುಳಿತು ಆತನನ್ನು ಸಂತೈಸಬೇಕು ಅನ್ನಿಸಿತು; “ಯಾಕೆ ಮನ"ಕಣ್ಣೀರು ಹಾಕದಿರು - ಎಲ್ಲವೂ ಸರಿ ಹೋಗುತ್ತೆ; ನಮ್ಮ ಪ್ರೀತಿ - ಅಭಿಮಾನ ಎಂದಿಗೂ ನಿನ್ನ ಜೊತೆಗಿದೆ" ಎಂದು ಸಮಾಧಾನ ಮಾಡಿ ಮನಃಪೂರ್ವಕವಾಗಿ ಹಾರೈಸಬೇಕು ಎಂದು ಅನ್ನಿಸಿತು. ಒಂದು ಪಾತ್ರವನ್ನು ಎಷ್ಟರಮಟ್ಟಿಗೆ ನಾವು ಹಚ್ಚಿಕೊಂಡಿದ್ದೇವೆ ಎಂಬುದಕ್ಕೆ ಇದಕ್ಕಿಂತ ಇನ್ನೊಂದು ಉದಾಹರಣೆ ಬೇಕಿಲ್ಲ. ಆದರೆ ಈ ಎಲ್ಲ ಭಾವನೆಗಳ ಹೊಯ್ದಾಟಗಳನ್ನು ಮಾತುಗಳಿಲ್ಲದೇ ಕೇವಲ ಕಣ್ಣೀರಿನ ಮೂಲಕ ವ್ಯಕ್ತಪಡಿಸಿದರೂ, ಹೃದಯಕ್ಕೆ ತಟ್ಟುವಂತೆ, ಆ ಕಣ್ಣಂಚಿನ ಹನಿಗಳೇ ಸಾವಿರ ಮಾತನಾಡುವಂತೆ ಅಭಿನಯಿಸುವುದಿದೆಯಲ್ಲ, ಅದು ಕೇವಲ ಕಿರಣ್ ರವರಿಗೆ ಮಾತ್ರ ಸಾಧ್ಯ. ಕಿರಣ್ ಈ ಪಾತ್ರವನ್ನು ಒಪ್ಪಿಕೊಂಡಿಲ್ಲ, ಬದಲಾಗಿ ಆ ಪಾತ್ರವೇ ಕಿರಣ್ ರವರನ್ನು ಒಪ್ಪಿ- ಅಪ್ಪಿಕೊಂಡಿದೆ ಅಂತ ಅನಿಸಿದ್ದು ಸುಳ್ಳಲ್ಲ! ಅಷ್ಟು ಮನಃಪೂರ್ವಕವಾಗಿ ಶ್ರದ್ದೆ - ವಿಶ್ವಾಸವಿಟ್ಟರೆ ಮಾತ್ರ ಅಂತಹ ಅಭಿನಯವೆನ್ನಿಸದ ಅಭಿನಯ ಸಾಧ್ಯವಾದೀತು. ನಮ್ಮೆಲ್ಲರ ಪ್ರೀತಿಪೂರ್ವಕ ಚಪ್ಪಾಳೆ ಸಲ್ಲಲೇಬೇಕು".