ಕಿರುತೆರೆ ನಟಿ ವೈಷ್ಣವಿ ಕೌಂಡಿನ್ಯ ಇದೀಗ ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ‘ಮಿಥುನ ರಾಶಿ’, ‘ಪ್ರೇಮಕಾವ್ಯ’ ಧಾರಾವಾಹಿಗಳ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿರುವ ವೈಷ್ಣವಿ, ಇದೀಗ ತಮ್ಮ ರಿಯಲ್ ಲೈಫ್ ಕಥೆಯನ್ನು ಬಿಗ್‌ಬಾಸ್ ವೇದಿಕೆಯಲ್ಲಿ ತೆರೆದಿಟ್ಟಿದ್ದಾರೆ. ಅದರಲ್ಲೂ ತಮ್ಮ ಬಾಲ್ಯದ ಕಹಿ ಅನುಭವಗಳು, ಹೆತ್ತವರ ವಿಚ್ಛೇದನ ಹಾಗೂ ತಂದೆಯ ಮುಖವನ್ನೇ ನೋಡದ ನೋವಿನ ಬಗ್ಗೆ ಮಾತನಾಡಿದ್ದಾರೆ.
ಅಪ್ಪ-ಅಮ್ಮನ ಡಿವೋರ್ಸ್... ಅಪ್ಪನ ಮುಖವನ್ನೇ ನೋಡಿಲ್ಲ
ಬಿಗ್‌ಬಾಸ್ ವೇದಿಕೆಯಲ್ಲಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ವೈಷ್ಣವಿ, ತಾವು ತಂದೆ-ತಾಯಿಯ ಏಕೈಕ ಮಗಳು ಎಂದು ಹೇಳಿದ್ದಾರೆ. ತಮ್ಮ ಮನೆಯಲ್ಲಿ ತಾಯಿ, ಅಜ್ಜಿ ಮತ್ತು ತಾವು ಮಾತ್ರ ಇದ್ದಿದ್ದು, ತಂದೆ-ತಾಯಿ ವಿಚ್ಛೇದನ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ನಾನು ಇದುವರೆಗೆ ನನ್ನ ತಂದೆಯ ಮುಖವನ್ನೂ ನೋಡಿಲ್ಲ ಎಂದು ವೈಷ್ಣವಿ ಹೇಳಿಕೊಂಡಿದ್ದು, ಅವರ ಮಾತುಗಳು ಬಿಗ್‌ಬಾಸ್ ವೇದಿಕೆಯಲ್ಲಿ ಭಾವುಕ ಕ್ಷಣಕ್ಕೆ ಕಾರಣವಾಗಿವೆ. ಚಿಕ್ಕ ವಯಸ್ಸಿನಿಂದಲೇ ಸ್ವಂತ ಕಾಲಿನ ಮೇಲೆ ನಿಲ್ಲಬೇಕು, ಯಾರ ಮುಂದೆಯೂ ಕೈಚಾಚಬಾರದು ಎಂಬ ದೃಢ ನಿರ್ಧಾರ ಮಾಡಿಕೊಂಡು ಬೆಳೆದಿದ್ದಾಗಿ ಅವರು ಹೇಳಿದ್ದಾರೆ.
16ನೇ ವಯಸ್ಸಿಗೇ ನಾಯಕಿಯಾದ ವೈಷ್ಣವಿ
ವೈಷ್ಣವಿ ಕೌಂಡಿನ್ಯ ಅವರ ನಟನಾ ಪಯಣವೇ ವಿಶೇಷ. ಕೇವಲ 16ನೇ ವಯಸ್ಸಿನಲ್ಲೇ ಕಿರುತೆರೆಗೆ ಕಾಲಿಟ್ಟ ಅವರು, ‘ಮಿಥುನ ರಾಶಿ’ ಧಾರಾವಾಹಿಯಲ್ಲಿ ‘ರಾಶಿ’ ಪಾತ್ರದ ಮೂಲಕ ಮನೆಮಾತಾದರು. ಆಟೋ ಓಡಿಸುವ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಾಶಿ, ಅಕ್ಕನಿಗಾಗಿ ಎಲ್ಲ ತ್ಯಾಗಕ್ಕೂ ಸಿದ್ಧವಾಗುವ ಪಾತ್ರವಾಗಿತ್ತು. ಈ ಪಾತ್ರವನ್ನು ವೈಷ್ಣವಿ ಅತ್ಯಂತ ಸಹಜವಾಗಿ ನಿರ್ವಹಿಸಿ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿದ್ದರು.