ಭೋರ್ಗರೆದು ಧುಮ್ಮಿಕ್ಕುತ್ತಿರುವ ಭರಚುಕ್ಕಿ ಫಾಲ್ಸ್‌: ರುದ್ರ ರಮಣೀಯ ದೃಶ್ಯ ಕಂಡು ಪುಳಕಿತರಾದ ಪ್ರವಾಸಿಗರು..!

First Published | Jul 21, 2024, 8:30 PM IST

ವರದಿ- ಪುಟ್ಟರಾಜು. ಆರ್. ಸಿ. ಏಷಿಯಾನೆಟ್ ಸುವರ್ಣ ನ್ಯೂಸ್,  ಚಾಮರಾಜನಗರ

ಚಾಮರಾಜನಗರ(ಜು.21): ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯಗಳಿಂದ 70000 ಕ್ಯೂಸೆಕ್‌ಗೂ ಹೆಚ್ಚು ಪ್ರಮಾಣದ ನೀರು ಬಿಡುಗಡೆ ಮಾಡಿರುವುದರಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಚಾಮರಾಜನಗರ ಜಿಲ್ಲೆಯ ಭರಚುಕ್ಕಿ ಭೋರ್ಗೆರೆದು ಧುಮ್ಮಿಕ್ಕುತ್ತಿದ್ದು ಕಾವೇರಿಯ ರುದ್ರ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಆಗಮಿಸುತ್ತಿದೆ. 

ಕೇರಳದ ವೈನಾಡು ಹಾಗೂ ಕಬಿನಿ ಜಲಾನಯನ ಪ್ರದೇಶದಲ್ಲಿ ಹಲವು ದಿನಗಳಿಂದ ವ್ಯಾಪಕ ಮಳೆಯಾಗಿದ್ದು ಮೈಸೂರು ಜಿಲ್ಲೆಯಲ್ಲಿರುವ ಹೆಚ್.ಡಿ. ಕೋಟೆ ತಾಲೋಕಿನಲ್ಲಿರುವ ಕಬಿನಿ ಜಲಾಶಯ ಬಹುತೇಕ ಭರ್ತಿಯಾಗಿದ್ದು ನದಿಗೆ 70 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರ ಜೊತೆಗೆ ಕೆಆರ್‌ಎಸ್ ಜಲಾಶಯದಿಂದಲೂ 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಮೈಸೂರು ಜಿಲ್ಲೆಯ ಮೂಲಕ ಹರಿದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿಗೆ ಪ್ರವೇಶಿಸುವ ಕಾವೇರಿ ಶಿವನಸಮುದ್ರದ ಬಳಿ ಎರಡು ಕವಲಾಗಿ ಹರಿದು ಒಂದೆಡೆ ಗಗನಚುಕ್ಕಿಯಾಗಿ, ಇನ್ನೊಂದೆಡೆ ಭರಚುಕ್ಕಿಯಾಗಿ ಭೋರ್ಗೆರೆದು ಧುಮ್ಮಿಕುತ್ತಿದೆ.

ಕರ್ನಾಟಕದ ನಯಾಗಾರ ಎಂದೇ ಹೆಸರಾದ ಭರಚುಕ್ಕಿಯಲ್ಲಿ ಬೆಟ್ಟಗುಡ್ಡಗಳ ನಡುವೆ ಕವಲು ಕವಲಾಗಿ ಹಾಲ್ನೊರೆಯಂತೆ ಧುಮ್ಮಿಕ್ಕುವ ಕಾವೇರಿಯ ರುದ್ರ ರಮಣೀಯ ದೃಶ್ಯಗಳನ್ನು ನೋಡಲು ಕಣ್ಣೆಗಳೆರಡು ಸಾಲದಂತೆ ಭಾಸವಾಗುತ್ತಿದೆ. ಕಳೆದ ಕೆಲವು ತಿಂಗಳಿಂದ ನೀರಿಲ್ಲದೆ ಬಣಗುಡುತ್ತಿದ್ದ ಭರಚುಕ್ಕಿಗೆ ಮತ್ತೆ ಜೀವ ಕಳೆ ಬಂದಿದೆ.

Latest Videos


ಕಾವೇರಿಯ ಜಲವೈಭವ ಅನಾವರಣಗೊಂಡಿದೆ. ಸುತ್ತಲೂ ಹಸಿರಿನಿಂದ ಕಂಗೊಳಿಸುತ್ತಿರುವ ಬೆಟ್ಟಗುಡ್ಡಗಳು. ಬೆಟ್ಟಗುಡ್ಡಗಳ ನಡುವೆ ಧುಮ್ಮಿಕ್ಕಿ ಹರಿಯುತ್ತಿರುವ ಕಾವೇರಿ ಭರಚುಕ್ಕಿಯಲ್ಲಿ  ಅತ್ಯಂತ ವಿಶಾಲವಾಗಿ ಕವಲು ಕವಲಾಗಿ ರಭಸದಿಂದ ಧುಮ್ಮಿಕ್ಕುವ ದೃಶ್ಯಕಾವ್ಯ ವರ್ಣನಾತೀತವಾಗಿದೆ.

ಕಳೆದ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನಲೆಯಲ್ಲಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. ಹಾಗೆ ಕಳೆದ ಬಾರಿ ಮಳೆ ಬಾರದ ಕಾರಣ  ಭರಚುಕ್ಕಿ ಜಲಪಾತ ನೀರಿಲ್ಲದೆ ಬರುವಂತ ಪ್ರವಾಸಿಗರಿಗೆ ನಿರಾಸೆ ಮೂಡಿಸಿತ್ತು.  ಆದರೆ ಇದೀಗ  ಪ್ರವಾಸಿಗರಿಗೆ ಮುಕ್ತ ಅವಕಾಶವಿದ್ದು ಜಲಪಾತದ ಸೊಬಗು ಸವಿಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದ್ದು ರಾಜ್ಯದ ವಿವಿದೆಡೆಯಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದೆ.ಅಲ್ಲದೇ ಒನ್ ಡೇ ಟ್ರಿಪ್ ಹೋಗಲೂ ಹೇಳಿ ಮಾಡಿದ ಸ್ಥಳವಾಗಿದೆ.

ನದಿಯಲ್ಲಿ ಕಂಗೊಳಿಸುತ್ತಾ ನೀರಿನ ಹೆಚ್ಚಳದಿಂದ ಭರಚುಕ್ಕಿಯಲ್ಲಿ ಕಾವೇರಿಯ  ಒಂದೆಡೆ ರುದ್ರನರ್ತನ ಕಂಡು ಬಂದರೆ ಮತ್ತೆ ಕೆಲವೆಡೆ ಝುಳು ಝುಳು ನಿನಾದ ಕೇಳಿಬರುತ್ತಿದೆ. ಹಾಲ್ನೊರೆಯಂತಹ ಜಲಧಾರೆಗಳು ಧುಮ್ಮಿಕುತ್ತಿವೆ. ಮರಗಿಡಗಳು ಹಸಿರಿನಿಂದ ಕಂಗೊಳಿಸುತ್ತಾ ಕಾವೇರಿಯ ಸೊಬಗನ್ನು ಇಮ್ಮಡಿಗೊಳಿಸಿವೆ.

click me!