ಭಾರತೀಯ ರೈಲ್ವೆಯು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಎಕ್ಸಿಕ್ಯುಟಿವ್ ಕ್ಲಾಸ್‌ನಲ್ಲಿರುವ ಸೌಲಭ್ಯವನ್ನು ತೆಗೆದುಹಾಕಲು ಚಿಂತಿಸುತ್ತಿದೆ. ಹೆಚ್ಚಿನ ಆದಾಯ ಗಳಿಸಲು ಈ ಸೌಲಭ್ಯವೊಂದನ್ನು ಕಡಿತಗೊಳಿಸಲು ಮುಂದಾಗಿದೆ. ಆದರೆ, ಈ ಬದಲಾವಣೆಯು ಪ್ರಯಾಣಿಕರ ಪ್ರೀಮಿಯಂ ಅನುಭವದ ಮೇಲೆ ಪರಿಣಾಮ ಬೀರಬಹುದು.
ಭಾರತೀಯ ರೈಲ್ವೆಯ ಇತಿಹಾಸದಲ್ಲೇ 'ಗೇಮ್ ಚೇಂಜರ್' ಎನಿಸಿಕೊಂಡಿರುವ ರೈಲು ಎಂದರೆ ಅದು ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express). ಅತ್ಯಾಧುನಿಕ ಸೌಲಭ್ಯಗಳು ಮತ್ತು ವೇಗದ ಪ್ರಯಾಣದಿಂದಾಗಿ ಈ ರೈಲು ದೇಶಾದ್ಯಂತ ಅಪಾರ ಜನಪ್ರಿಯತೆ ಗಳಿಸಿದೆ. ಆಟೋಮ್ಯಾಟಿಕ್ ಸ್ಲೈಡಿಂಗ್ ಡೋರ್‌ಗಳು, ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಬಯೋ-ವ್ಯಾಕ್ಯೂಮ್ ಶೌಚಾಲಯ ಸೇರಿದಂತೆ ವಿಮಾನ ಮಾದರಿಯ ಹಲವು ಸೌಲಭ್ಯಗಳು ಈ ರೈಲಿನಲ್ಲಿವೆ.
ಆದರೆ, ಇವೆಲ್ಲಕ್ಕಿಂತ ಹೆಚ್ಚಾಗಿ ಪ್ರಯಾಣಿಕರನ್ನು ಸೆಳೆದಿದ್ದ ಪ್ರಮುಖ ಆಕರ್ಷಣೆಯೆಂದರೆ ಅದು ಎಕ್ಸಿಕ್ಯುಟಿವ್ ಕ್ಲಾಸ್‌ನಲ್ಲಿರುವ '360 ಡಿಗ್ರಿ ತಿರುಗುವ ಸೀಟುಗಳು' (Rotating Seats). ಇದೀಗ ಈ ನೆಚ್ಚಿನ ಸೌಲಭ್ಯಕ್ಕೆ ಕತ್ತರಿ ಹಾಕಲು ರೈಲ್ವೆ ಇಲಾಖೆ ಚಿಂತನೆ ನಡೆಸುತ್ತಿದ್ದು, ಇದು ಪ್ರಯಾಣಿಕರಿಗೆ ತೀವ್ರ ನಿರಾಶೆ ತಂದೊಡ್ಡಬಹುದು.
25
ಏನಿದು ಹೊಸ ಪ್ರಸ್ತಾಪ? ಸೀಟುಗಳನ್ನು ತೆಗೆಯಲು ಕಾರಣವೇನು?
ಇತ್ತೀಚೆಗೆ ನಡೆದ ರೈಲ್ವೆ ಪ್ರಿನ್ಸಿಪಲ್ ಚೀಫ್ ಮೆಕ್ಯಾನಿಕಲ್ ಇಂಜಿನಿಯರ್‌ಗಳು (PCME) ಮತ್ತು ಕೋಚ್ ನಿರ್ಮಾಣ ಘಟಕಗಳ ಉನ್ನತ ಮಟ್ಟದ ಸಭೆಯಲ್ಲಿ ಈ ಕುರಿತು ಗಂಭೀರ ಚರ್ಚೆ ನಡೆದಿದೆ. ಎಕ್ಸಿಕ್ಯುಟಿವ್ ಚೇರ್ ಕಾರ್ ಬೋಗಿಗಳಿಂದ ಈ ತಿರುಗುವ ಸೀಟುಗಳನ್ನು ಕೈಬಿಡಬೇಕು ಎಂದು ರೈಲ್ವೆ ಇಂಜಿನಿಯರ್‌ಗಳು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಅವರು ನೀಡಿರುವ ಪ್ರಮುಖ ಕಾರಣಗಳು ಇಲ್ಲಿವೆ.
ಬೇಗನೆ ಹಾಳಾಗುವ ಅಪಾಯ: ಪ್ರಯಾಣಿಕರು ಪದೇ ಪದೇ ಸೀಟುಗಳನ್ನು ತಿರುಗಿಸುವುದರಿಂದ ಅವುಗಳ ಮೆಕ್ಯಾನಿಕಲ್ ಜಾಯಿಂಟ್‌ಗಳು ಸಡಿಲಗೊಂಡು, ಬಿಡಿಭಾಗಗಳು ಬೇಗನೆ ಸವೆದು ಹಾಳಾಗುವ ಸಾಧ್ಯತೆ ಹೆಚ್ಚು.
ನಿರ್ವಹಣಾ ಸಮಸ್ಯೆ: ಸಾಮಾನ್ಯ ಸೀಟುಗಳಿಗೆ ಹೋಲಿಸಿದರೆ ತಿರುಗುವ ಸೀಟುಗಳ ನಿರ್ವಹಣೆ ಕಷ್ಟ ಹಾಗೂ ವೆಚ್ಚದಾಯಕ.
ಹೆಚ್ಚು ಸ್ಥಳಾವಕಾಶದ ಬಳಕೆ: ಸೀಟುಗಳು 360 ಡಿಗ್ರಿ ಸರಾಗವಾಗಿ ಸುತ್ತಲು ಬೋಗಿಯಲ್ಲಿ ಹೆಚ್ಚಿನ ಸ್ಥಳಾವಕಾಶ (Legroom space) ಬೇಕಾಗುತ್ತದೆ.
35
ಸಾಮಾನ್ಯ ಸೀಟುಗಳಿಂದ ರೈಲ್ವೆಗೆ ಏನು ಲಾಭ?
ತಿರುಗುವ ಸೀಟುಗಳ ಬದಲಾಗಿ ಗಟ್ಟಿಯಾದ, ಒಂದೇ ಕಡೆ ಸ್ಥಿರವಾಗಿರುವ (Fixed) ಸೀಟುಗಳನ್ನು ಅಳವಡಿಸುವುದರಿಂದ ಅವು ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಜೊತೆಗೆ, ಸೀಟುಗಳ ನಡುವಿನ ಅನಗತ್ಯ ಅಂತರವನ್ನು ಕಡಿಮೆ ಮಾಡಿ, ಎಕ್ಸಿಕ್ಯುಟಿವ್ ಬೋಗಿಯಲ್ಲಿ ಮತ್ತೊಂದು ಹೆಚ್ಚುವರಿ ಸಾಲಿನ ಸೀಟುಗಳನ್ನು (Extra row) ಸೇರಿಸಬಹುದು. ಇದರಿಂದ ಪ್ರತಿ ಟ್ರಿಪ್‌ನಲ್ಲಿ ಹೆಚ್ಚಿನ ಪ್ರಯಾಣಿಕರಿಗೆ ಅವಕಾಶ ಸಿಗುವುದರ ಜೊತೆಗೆ ರೈಲ್ವೆ ಇಲಾಖೆಯ ಆದಾಯವೂ ಹೆಚ್ಚಲಿದೆ ಎಂಬುದು ಅಧಿಕಾರಿಗಳ ವಾದ.
ಈ ಪ್ರಸ್ತಾಪವನ್ನು ವಿವರವಾಗಿ ಪರಿಶೀಲಿಸಿ ವರದಿ ನೀಡುವಂತೆ ರೈಲ್ವೆ ಮಂಡಳಿಯು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಗೆ (ICF) ಸೂಚಿಸಿದೆ. ಆದಾಗ್ಯೂ, ಈ ಪ್ರಸ್ತಾಪಕ್ಕೆ ಇನ್ನೂ ಅಂತಿಮ ಮುದ್ರೆ ಬಿದ್ದಿಲ್ಲ. ಒಂದು ವೇಳೆ ಈ ನಿರ್ಧಾರ ಜಾರಿಗೆ ಬಂದರೆ, ಈಗ ಓಡುತ್ತಿರುವ ರೈಲುಗಳಲ್ಲೂ ಸೀಟು ಬದಲಾವಣೆ ಮಾಡಲಾಗುತ್ತದೆಯೇ ಅಥವಾ ಇನ್ನು ಮುಂದೆ ತಯಾರಾಗುವ ಹೊಸ ವಂದೇ ಭಾರತ್ ರೈಲುಗಳಿಗೆ ಮಾತ್ರ ಇದು ಅನ್ವಯವಾಗಲಿದೆಯೇ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
55
ಪ್ರಯಾಣಿಕರಿಗೆ ಏಕೆ ಬೇಸರ?
ವಂದೇ ಭಾರತ್ ರೈಲಿನ ಬೃಹತ್ ಗಾಜಿನ ಕಿಟಕಿಗಳ ಮೂಲಕ ಹೊರಗಿನ ನಿಸರ್ಗ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಈ ತಿರುಗುವ ಸೀಟುಗಳು ಹೇಳಿಮಾಡಿಸಿದಂತಿದ್ದವು. ಅಲ್ಲದೆ, ಕುಟುಂಬ ಅಥವಾ ಸ್ನೇಹಿತರೊಂದಿಗೆ ಒಟ್ಟಿಗೆ ಪ್ರಯಾಣಿಸುವಾಗ ಸೀಟುಗಳನ್ನು ಮುಖಾಮುಖಿ ತಿರುಗಿಸಿಕೊಂಡು ಹರಟೆ ಹೊಡೆಯುತ್ತಾ ಹೋಗುವ ಮಜವೇ ಬೇರೆಯಾಗಿತ್ತು. ಒಂದು ವೇಳೆ ಈ ಸೌಲಭ್ಯ ರದ್ದಾದರೆ ಪ್ರೀಮಿಯಂ ಪ್ರಯಾಣದ ಅನುಭವಕ್ಕೆ ಖಂಡಿತಾ ಧಕ್ಕೆಯಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.