ಬಾನು ಮುಷ್ತಾಕ್ ದಸರಾ ಉದ್ಘಾಟನೆ ವಿವಾದ, ಪ್ರತಾಪ್ ಸಿಂಹ ಸೇರಿ ಹಲವರು ಸಲ್ಲಿಸಿದ್ದ ಪಿಐಎಲ್‌ ಹೈಕೋರ್ಟ್‌ ವಜಾ

Published : Sep 15, 2025, 12:46 PM IST

ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಹ್ವಾನ ವಿರೋಧಿಸಿ ಸಲ್ಲಿಸಿದ್ದ ಪಿಐಎಲ್‌ಗಳನ್ನು ಹೈಕೋರ್ಟ್ ವಜಾ ಮಾಡಿದೆ. ಅರ್ಜಿದಾರರ ಯಾವುದೇ ಕಾನೂನಾತ್ಮಕ ಹಕ್ಕು ಉಲ್ಲಂಘನೆಯಾಗಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

PREV
15

ಬೆಂಗಳೂರು: ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಸಾಹಿತಿ ಮತ್ತು ಬೂಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಎಲ್ಲಾ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (PIL) ಕರ್ನಾಟಕ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರನ್ನೊಳಗೊಂಡ ವಿಭಾಗೀಯ ಪೀಠದಲ್ಲಿ ಈ ಅರ್ಜಿಗಳ ವಿಚಾರಣೆ ನಡೆಯಿತು. ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಒಟ್ಟು ಮೂರು ಪಿಐಎಲ್ ಅರ್ಜಿ ಸಲ್ಲಿಸಲಾಗಿತ್ತು. ತಾಯಿ ಭುವನೇಶ್ವರಿ, ಕೆಂಪು-ಹಳದಿ ಭಾವುಟದ ಬಗ್ಗೆ ಮತ್ತು ಬೇರೆ ಧರ್ಮವನ್ನು ಪಾಲಿಸುವ ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ಸೂಕ್ತ ವ್ಯಕ್ತಿ ಅಲ್ಲ ಎಂಬ ಆರೋಪ ಕೇಳಿಬಂದಿತ್ತು.

25

ಅರ್ಜಿದಾರರ ವಾದ

ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿ ಮೂವರು ಅರ್ಜಿದಾರರು ಭಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡಿರುವುದು ಸೂಕ್ತವಲ್ಲವೆಂದು ವಾದಿಸಿದ್ದರು. ಬಾನು ಅವರು ಈ ಹಿಂದೆ ಹಲವು ಸಂದರ್ಭಗಳಲ್ಲಿ ಹಿಂದೂ ವಿರೋಧಿ ಹಾಗೂ ಕನ್ನಡ ವಿರೋಧಿ ಹೇಳಿಕೆಗಳನ್ನು ನೀಡಿದ್ದಾರೆ. ತಾಯಿ ಭುವನೇಶ್ವರಿ, ಕನ್ನಡ ಬಾವುಟ ಹಾಗೂ ಕೆಂಪು-ಹಳದಿ ಬಣ್ಣಗಳ ಕುರಿತು ನೀಡಿದ ಹೇಳಿಕೆಗಳು ಆಕ್ಷೇಪಾರ್ಹವೆಂದು ಕೋರ್ಟ್‌ಗೆ ಸಲ್ಲಿಸಲಾಯಿತು. ಭಾನು ಮುಷ್ತಾಕ್ ಅವರಿಗೆ ಮೂರ್ತಿಪೂಜೆ ಅಥವಾ ಅರಿಶಿನ-ಕುಂಕುಮದ ಮೇಲೆ ನಂಬಿಕೆ ಇಲ್ಲ. ಇಂತಹವರಿಂದ ದಸರಾ ಉದ್ಘಾಟನೆ ನಡೆಯುವುದು ಸಂಪ್ರದಾಯಕ್ಕೆ ವಿರೋಧ ಎಂದು ಪ್ರತಾಪ್ ಸಿಂಹ ಪರ ವಕೀಲ ಸುದರ್ಶನ್ ವಾದ ಮಂಡಿಸಿದರು.

35

ಹೈಕೋರ್ಟ್  ಅಭಿಪ್ರಾಯ

ಅರ್ಜಿದಾರರ ವಾದ ಆಲಿಸಿದ ಬಳಿಕ ಸಿಜೆ ವಿಭು ಬಖ್ರು ಪ್ರಮುಖ ಪ್ರಶ್ನೆಗಳನ್ನು ಎತ್ತಿದರು:

  • “ಈ ಪ್ರಕರಣದಲ್ಲಿ ನಿಮ್ಮ ಯಾವ ಕಾನೂನಾತ್ಮಕ ಹಕ್ಕು ಉಲ್ಲಂಘನೆಯಾಗಿದೆ?”
  • “ಪೂಜಾರಿಯ ಹಕ್ಕು ಕಿತ್ತುಕೊಂಡಿದ್ದರೆ ಅಥವಾ ಆಸ್ತಿ ಕಳೆದುಕೊಂಡಿದ್ದರೆ ಕಾನೂನಾತ್ಮಕವಾಗಿ ಪ್ರಶ್ನಿಸಬಹುದಿತ್ತು. ಆದರೆ ಇಲ್ಲಿ ಅಂತಹುದೇನೂ ಇಲ್ಲ.”
  • “ಸಂವಿಧಾನ ಎಲ್ಲರಿಗೂ ತಮ್ಮ ಅಭಿಪ್ರಾಯವನ್ನು ಹೇಳುವ ಹಕ್ಕು ನೀಡಿದೆ. ಅದನ್ನು ಸೂಕ್ತ ವೇದಿಕೆಯಲ್ಲಿ ಮಂಡಿಸಬಹುದು. ಆದರೆ ಕಾನೂನು ಉಲ್ಲಂಘನೆಯ ವಿಚಾರ ಇಲ್ಲ.”
45

ಸರ್ಕಾರದ ವಾದ

ಸರ್ಕಾರದ ಪರವಾಗಿ ಮಹಾಧಿವಕ್ತಾ (ಎಜಿ) ಶಶಿಕಿರಣ್ ಶೆಟ್ಟಿ  ವಾದಿಸಿದರು:

  • ಮುಸ್ಲಿಂ ವ್ಯಕ್ತಿಯನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದು ಇದೇ ಮೊದಲಲ್ಲ. ಸಾಹಿತಿ ನಿಸಾರ್ ಅಹಮದ್ ಅವರನ್ನೂ ಹಿಂದಿನ ದಶಕದಲ್ಲಿ ಆಹ್ವಾನಿಸಲಾಗಿತ್ತು.
  • ಆಗ ಪ್ರತಾಪ್ ಸಿಂಹ ಸಹ ದಸರಾ ಸಮಾರಂಭದಲ್ಲಿ ಉಪಸ್ಥಿತರಿದ್ದರು, ಆದರೆ ಯಾವುದೇ ವಿರೋಧ ವ್ಯಕ್ತಪಡಿಸಿರಲಿಲ್ಲ.
  • “ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ. ಸರ್ಕಾರ ಜಾತ್ಯಾತೀತ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ದೇವಾಲಯಗಳಿಗೆ ಯಾರು ಬೇಕಾದರೂ ಬರಬಹುದು” ಎಂದು ಎಜಿ ತಿಳಿಸಿದರು.
  • ಲೇಖಕಿ ಭಾನು ಮುಷ್ತಾಕ್ ಅವರನ್ನು ಹಿಂದೂ ವಿರೋಧಿ ಎಂದು ಕರೆಯುವುದು ಸೂಕ್ತವಲ್ಲ. ಅವರು ಬೂಕರ್ ಪ್ರಶಸ್ತಿ ವಿಜೇತರು, ಸಾಹಿತ್ಯದಲ್ಲಿ ದೇಶದ ಹೆಸರನ್ನು ಎತ್ತಿದ್ದಾರೆ.
55

ಕೋರ್ಟ್ ತೀರ್ಪು

ಎರಡೂ ಪಕ್ಷಗಳ ವಾದ ಆಲಿಸಿದ ಬಳಿಕ ಹೈಕೋರ್ಟ್ ಸ್ಪಷ್ಟವಾಗಿ ಹೇಳಿತು:

  • ಅರ್ಜಿದಾರರ ಯಾವುದೇ ಕಾನೂನಾತ್ಮಕ ಹಕ್ಕು ಉಲ್ಲಂಘನೆಯಾಗಿಲ್ಲ, ಆದ್ದರಿಂದ ಪಿಐಎಲ್‌ಗಳನ್ನು ಸ್ವೀಕರಿಸಲು ಅವಕಾಶವಿಲ್ಲ.
  • “ವಿಜಯದಶಮಿ ಎಂದರೇನು? ಅದು ಕೆಟ್ಟದ ಮೇಲೆ ಒಳ್ಳೆಯದ ವಿಜಯ. ದೇಶಾದ್ಯಂತ ಈ ಹಬ್ಬವನ್ನು ಅದೇ ಉದ್ದೇಶದಿಂದ ಆಚರಿಸಲಾಗುತ್ತಿದೆ. ಈ ಪ್ರಕರಣದಲ್ಲಿ ಹಕ್ಕು ಉಲ್ಲಂಘನೆ ಎಂಬ ಪ್ರಶ್ನೆಯೇ ಇಲ್ಲ” ಎಂದು ಸಿಜೆ ಅಭಿಪ್ರಾಯಪಟ್ಟರು.
  • ಫಲವಾಗಿ, ಹೈಕೋರ್ಟ್ ವಿಭಾಗೀಯ ಪೀಠವು ಎಲ್ಲಾ ಪಿಐಎಲ್‌ಗಳನ್ನು ವಜಾಗೊಳಿಸಿ ಆದೇಶ ನೀಡಿತು.
Read more Photos on
click me!

Recommended Stories