ಹಾನಗಲ್ಲ ಕುಮಾರ ಶಿವಯೋಗಿ ಜೀವನ ಚರಿತ್ರೆ ಆಧರಿತ ‘ವಿರಾಟಪುರ ವಿರಾಗಿ’; ಬಿ.ಎಸ್‌. ಲಿಂಗದೇವರು ನಿರ್ದೇಶನ

Published : Dec 05, 2022, 03:19 PM IST

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಸ್‌. ಲಿಂಗದೇವರು ನಿರ್ದೇಶನದ ಈ ವಿರಾಟಪುರ ವಿರಾಗಿ ಚಿತ್ರದ ಮೊದಲ ನೋಟವನ್ನು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಬಿಡುಗಡೆಗೊಳಿಸಿದ್ದಾರೆ.  

PREV
17
ಹಾನಗಲ್ಲ ಕುಮಾರ ಶಿವಯೋಗಿ ಜೀವನ ಚರಿತ್ರೆ ಆಧರಿತ ‘ವಿರಾಟಪುರ ವಿರಾಗಿ’; ಬಿ.ಎಸ್‌. ಲಿಂಗದೇವರು ನಿರ್ದೇಶನ

ಸಮಾಧಾನ ಸಂಸ್ಥೆ ನಿರ್ಮಿಸಿರುವ ಹಾನಗಲ್ಲ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧರಿತ ‘ವಿರಾಟಪುರ ವಿರಾಗಿ’ ಚಿತ್ರದ ಮೊದಲ ನೋಟ ಅನಾವರಣಗೊಂಡಿದೆ. ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳ ಕೃಪಾಶೀರ್ವಾದದಲ್ಲಿ ಮೂಡಿಬಂದ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಸ್‌. ಲಿಂಗದೇವರು ನಿರ್ದೇಶನದ ಈ ಚಿತ್ರದ ಮೊದಲ ನೋಟವನ್ನು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಬಿಡುಗಡೆಗೊಳಿಸಿದ್ದಾರೆ.

27

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಬಿ ಎಸ್‌ ಲಿಂಗದೇವರು, ‘ಕುಮಾರ ಶಿವಯೋಗಿಗಳು ಯಾವತ್ತೂ ತಮ್ಮ ಬಗ್ಗೆ ಬರೆಯಲು ಬಿಟ್ಟವರಲ್ಲ. ಅಧ್ಯಾತ್ಮದಲ್ಲಿ ಉನ್ನತ ಸಾಧನೆ ಮಾಡಿದ, ಸಾಮಾಜಿಕ ಉನ್ನತಿಗೆ ಶ್ರಮಿಸಿದ ಕುಮಾರ ಶಿವಯೋಗಿಗಳ ಕುರಿತು ಸಿನಿಮಾ ಮಾಡುವ ವಿಚಾರ ಬಂದಾಗ ಆರಂಭದಲ್ಲಿ ಧೈರ್ಯ ಬಂದಿರಲಿಲ್ಲ.

37

ನಾವೆಲ್ಲಾ ಅಜ್ಜಾರು ಎಂದೇ ಸಂಬೋಧಿಸುವ ಜಡೆಯ ಶಾಂತಲಿಂಗ ಮಹಾಸ್ವಾಮಿಗಳು ಖುದ್ದು ಜೊತೆಗೆ ನಿಂತರು. ಸಿನಿಮಾ ಮಾಡಲೇಬೇಕು ಎಂದರು. ನಾನೇ ಭಿಕ್ಷೆ ಎತ್ತಿ ದುಡ್ಡು ತರುತ್ತೇನೆ ಎಂದರು. ಅವರಿಗೆ ಮಾನ್ವಿ ಮತ್ತು ದಾಮಾ ಪರಿವಾರ ಜೊತೆಯಾಯಿತು. ಅಜ್ಜಾರ ಆಶೀರ್ವಾದ. 

47

ನಾನು ಸಿನಿಮಾ ಮಾಡಲು ಮುಂದಾದೆ. ನನ್ನ ಮುಂದೆ 2000 ಪುಟಗಳ ಸಾಹಿತ್ಯ ಇತ್ತು. ಅದನ್ನು ಒಂದೂವರೆ ವರ್ಷಗಳ ಕಾಲ ಕುಳಿತು ಚಿತ್ರಕತೆ ಮಾಡಿದೆ. ಗದಗಕ್ಕೆ ಹೋದೆ, ಕಾಸರವಳ್ಳಿ, ಹಲವು ಸ್ವಾಮಿಗಳು, ವಿದ್ವಾಂಸರ ಜೊತೆ ಮಾತನಾಡಿದೆ. ತಿದ್ದಿ ತಿದ್ದಿ ಚಿತ್ರಕತೆಗೆ ಸ್ಪಷ್ಟರೂಪ ಕೊಟ್ಟೆ. ಅವರಿದ್ದಿದ್ದು 150 ವರ್ಷಗಳ ಹಿಂದೆ.ಅಂದಿನ ಪರಿಸರವನ್ನು ಚಿತ್ರೀಕರಿಸುವುದೇ ಸವಾಲಾಗಿತ್ತು. ಒಳ್ಳೆಯ ತಂಡದಿಂದಾಗಿ ಈಗ ಸಿನಿಮಾ ರೂಪುಗೊಂಡಿದೆ. ಸಿನಿಮಾ ಸಿದ್ಧವಾದ ಮೇಲೆ ನಿಮ್ಮ ಮುಂದೆ ಬಂದಿದ್ದೇನೆ’ ಎಂದರು.

57

ಹಿರಿಯ ನಿರ್ದೇಶಕ ಗಿರೀಶ್‌ ಕಾಸರವಳ್ಳಿ, ‘ಕುಮಾರ ಶಿವಯೋಗಿಗಳು ಒಂದು ದಂತಕಥೆ. ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಏನೇನು ಮಾಡಲು ಸಾಧ್ಯ ಇಲ್ಲವೋ ಅದೆಲ್ಲವನ್ನೂ ಸಾಧ್ಯ ಮಾಡಿದ್ದಾರೆ. ಗಾಂಧೀಜಿ ಭಾರತಕ್ಕೆ ಬರುವ ಕೆಲವು ವರ್ಷಗಳ ಮೊದಲೇ ಗಾಂಧೀಜಿಯವರು ಆದರ್ಶ ಅಂದುಕೊಂಡಿದ್ದ ಬಹುತೇಕ ಕೆಲಸಗಳನ್ನು ಮಾಡಿ ತೋರಿಸಿದವು ಕುಮಾರ ಶಿವಯೋಗಿಗಳು.

67

ಅವರ ಕತೆಯುಳ್ಳ ಸಿನಿಮಾ ನೋಡಿ ಅವರ ಮಾತು ರೂಢಿಸಿಕೊಳ್ಳುವ ಪ್ರಯತ್ನ ನಾವು ಮಾಡಬೇಕಿದೆ. ಅಲ್ಲದೇ ಇದರಲ್ಲಿ ಸ್ವಾಮೀಜಿಗಳು ಕಾಣಿಸಿಕೊಂಡಿದ್ದಾರೆ. ಅಮೋಘವಾಗಿ ನಟಿಸಿದ್ದಾರೆ. ಅವರ ನಟನಾ ಚಾತುರ್ಯಕ್ಕೆ ಅಚ್ಚರಿಗೊಂಡಿದ್ದೇನೆ’ ಎಂದರು.

77

ವೇದಿಕೆಯಲ್ಲಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು, ಹುಕ್ಕೇರಿ ಮಠದ ಪೀಠಾಧಿಪತಿ ಸದಾಶಿವ ಮಹಾಸ್ವಾಮಿ, ಗೊಗ್ಗೀಹಳ್ಳಿ ಪಂಚಮಠದ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿ, ತುರುಬಿಗುಡ್ಡ ವಿರಕ್ತಮಠದ ಸದಾಶಿವ ಮಹಾಸ್ವಾಮಿ, ಶಿವಮೊಗ್ಗ ಹಿರೇಮಠ ಜಡೆಯ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಉಪಸ್ಥಿತಿ ಇತ್ತು. ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಭಾಗವಹಿಸಿದ್ದರು.

Read more Photos on
click me!

Recommended Stories