ಆಟಿಸಂಗೆ ತುತ್ತಾಗಿರುವ ಮಕ್ಕಳ ಕತೆಯನ್ನು ‘ವರ್ಣಪಟಲ’ ಚಿತ್ರದ ಮೂಲಕ ಹೇಳುತ್ತಿದ್ದಾರೆ ನಿರ್ದೇಶಕ ಚೇತನ್ ಮುಂಡಾಡಿ. ಚಿತ್ರದ ಶೂಟಿಂಗ್ ಮುಗಿದಿದೆ. ಟ್ರೇಲರ್ ಬಿಡುಗಡೆ ಆಗಿದೆ.
ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಜ್ಯೋತಿ ರೈ ಅವರ ಮಗುವಿಗೆ ಕೂಡ ಆಟಿಸಂ ಇದೆ. ಅವರು ತೆರೆ ಮೇಲೂ ಆಟಿಸಂ ಇರುವ ಮಗುವಿನ ತಾಯಿಯಾಗಿ ನಟಿಸಿದ್ದಾರೆ.
ಈಗಾಗಲೇ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆಗೆ ಪಾತ್ರವಾಗಿರುವ ಹಾಗೂ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಈ ಚಿತ್ರವನ್ನು ಸದ್ಯದಲ್ಲೇ ಬಿಡುಗಡೆ ಮಾಡುವ ಪ್ಲಾನ್ ನಿರ್ಮಾಪಕರದ್ದು.
ನೈಜಘಟನೆ ಆಧರಿತ ವರ್ಣಪಟಲ ಸಿನಿಮಾದ ಟ್ರೇಲರ್ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ‘ಎಲ್ಲರ ಅಮ್ಮಂದಿರ ತರ ನಾನು ಅಮ್ಮ ಅಲ್ಲ.. ಎಲ್ಲರ ಮಕ್ಕಳಂತೆ ನನ್ನ ಮಗಳಲ್ಲ ...’ ಎಂಬ ಡೈಲಾಗ್‌ನಿಂದ ಶುರುವಾಗುವ ಟ್ರೇಲರ್‌ನಲ್ಲಿ ಪ್ರೀತಿ, ಮಮತೆ, ನೋವು ಎಲ್ಲವನ್ನು ಒಳಗೊಂಡಿದೆ. ಆಟಿಸಂ ಸಮಸ್ಯೆ ಕುರಿತು ನಿರ್ದೇಶಕರು ಬೆಳಕು ಚೆಲ್ಲಿದ್ದಾರೆ ಎಂಬುದು ಈ ಚಿತ್ರದ ಹೈಲೈಟ್.
ಬಹುಭಾಷಾ ನಟಿ ಸುಹಾಸಿನಿ, ಅನೂಪ್ ಸಾಗರ್, ಚೇತನ್ ರೈ ಮಾಣಿ, ಇಳಾ ವಿಟ್ಲಾ, ಅರವಿಂದ್ ರಾವ್ ಹಾಗೂ ಶ್ರೀಕಾಂತ್ ಹೆಬ್ಳಿಕರ್ ಚಿತ್ರದಲ್ಲಿ ನಟಿಸಿದ್ದಾರೆ.
ಡಾ ಸರಸ್ವತಿ ಹೊಸದುರ್ಗ, ಕವಿತಾ ಸಂತೋಷ್ ಚಿತ್ರದ ನಿರ್ಮಾಪಕರು. ಕಾರ್ತಿಕ್ ಸರಗೂರು, ನಿರ್ದೇಶಕ ವಿನು ಬಳಂಜ ಸಂಭಾಷಣೆ, ಗಣೇಶ್ ಹೆಗ್ಡೆ ಛಾಯಾಗ್ರಾಹಣ, ಹರ್ಷವರ್ಧನ್ ರಾಜ್ ಸಂಗೀತ ಚಿತ್ರಕ್ಕಿದೆ.