ಚಿತ್ರದ ಕತೆ, ಚಿತ್ರಕಥೆಯನ್ನೂ ಇವರೇ ಬರೆದಿದ್ದಾರೆ. ಇದೊಂದು ನೈಜ ಘಟನೆ ಹಾಗೂ ಕಾಲ್ಪನಿಕತೆ ಬೆರೆತ ಕಾಮಿಡಿ ಡ್ರಾಮಾವಾಗಿದ್ದು, ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ.
ಈ ಬಗ್ಗೆ ಮಾಹಿತಿ ನೀಡಿದ ಸುಕೇಶ್ ಶೆಟ್ಟಿ, ‘ಈ ಸಿನಿಮಾದ ಕತೆ 1986 ಸೆಪ್ಟೆಂಬರ್‌ನಿಂದ 1987ರ ಅಕ್ಟೋಬರ್ ಅವಧಿಯಲ್ಲಿ ನಡೆಯುವಂಥದ್ದು. ರೇಡಿಯೋ, ಚಿತ್ರಗೀತೆ, ನಾಟಕ, ಯಕ್ಷಗಾನ ಇತ್ಯಾದಿಗಳಷ್ಟೇ ಇದ್ದ ಕರಾವಳಿ ಮತ್ತು ಪಶ್ಚಿಮ ಘಟ್ಟದ ಮಧ್ಯದಲ್ಲಿರುವ ಸಣ್ಣ ಹಳ್ಳಿಗೆ ಒಂದು ದೂರದರ್ಶನ ಬಂದರೆ ಸ್ಥಿತಿ ಹೇಗಿರಬಹುದು ಅನ್ನುವ ಕತೆ.
ಇದರಲ್ಲಿ ನಾಯಕ ಪೃಥ್ವಿ ಟಿವಿ ಬಂದ ಮನೆಯ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗುಂಪು ಗುಂಪಾಗಿ ಜನ ಟಿವಿ ನೋಡಲು ಬರುವಾಗ ಮನೆಯವರ ಸ್ಥಿತಿ, ಆ ಊರಿನ ಗುಂಪು, ಗಲಾಟೆ, ಕ್ರೇಜ್‌ಗಳು ತಮಾಷೆ ರೀತಿಯಲ್ಲಿ ಹೇಳಲಾಗಿದೆ.
ಆ ಕಾಲದ ಪ್ರೀತಿಯ ಎಳೆಯೂ ಇದೆ. ಪುತ್ತೂರು- ಕಾಸರಗೋಡು ಮಧ್ಯದ ಆರ್ಲಪದವಿನಲ್ಲಿ ಚಿತ್ರೀಕರಣ ನಡೆದಿದೆ. ಬಹಳ ರಿಯಲಿಸ್ಟಿಕ್ ಆಗಿ ಸಿನಿಮಾವಿದೆ.
ಇಡೀ ಚಿತ್ರದಲ್ಲಿ ಟಿವಿಯೇ ಪ್ರಧಾನ. ಥಿಯೇಟರ್, ಡ್ಯಾನ್ಸ್ ಹಿನ್ನೆಲೆ ಇರುವ ಪವಿತ್ರಾ ಈ ಚಿತ್ರದ ನಾಯಕಿ. ಈ ಸಬ್ಜೆಕ್ಟ್ ಯೂನಿವರ್ಸಲ್ ಆಗಿರುವ ಕಾರಣ ಸಿನಿಮಾದಲ್ಲಿ ಮಂಗಳೂರು ಭಾಷೆ ತಂದಿಲ್ಲ.
ಇದೊಂಥರ ನಮ್ಮ ನಾಸ್ಟಾಲ್ಜಿಯಾ ಕೆದಕುವ ಪ್ರಯತ್ನ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಬಗೆಯಲ್ಲಿ ಕನೆಕ್ಟ್ ಆಗುವ ಚಿತ್ರ’ ಎನ್ನುತ್ತಾರೆ. ವಾಸುಕಿ ವೈಭವ್ ಸಂಗೀತ ಚಿತ್ರಕ್ಕಿದೆ.