ನಾನು ನನ್ನ ಕನಸುಗಳ ಗುಲಾಮ... ಭಗವದ್ಗೀತೆ ಸೇರಿದಂತೆ ಯಶ್ ಹೇಳಿದ 10 ಸಿನಿಮಾ ಲಾಜಿಕ್ಸ್ ಇಲ್ಲಿವೆ!

First Published | Oct 25, 2024, 5:03 PM IST

ನನ್ನ ಮಾತನ್ನು ನಾನಷ್ಟೇ ನಂಬಿದ್ದೆ. ನನ್ನನ್ನು ಬಿಟ್ಟು ಮತ್ಯಾರೂ ನಂಬಿರಲಿಲ್ಲ. ನನ್ನ ಚಿಂತನೆಗಳನ್ನು ತೆರೆದಿಟ್ಟರೆ ಜನ ಒಂದೋ ಈತನಿಗೆ ದುರಹಂಕಾರ ಅನ್ನುತ್ತಿದ್ದರು, ಇಲ್ಲವೇ ಈತನದು ಎಲ್ಲ ಅತಿ ಅಂತ ದೂರ ಸರಿಯುತ್ತಿದ್ದರು ಎಂದು ಯಶ್ ಸಂದರ್ಶನವೊಂದರಲ್ಲಿ ತಮ್ಮ ಅಂತರಂಗದ ಮಾತುಗಳನ್ನಾಡಿದ್ದಾರೆ.

1.‘ಕೌನ್ ಬನೇಗ ಕರೋಡ್‌ ಪತಿ’ ಗೇಮ್‌ನಲ್ಲಿ ಅಮಿತಾಬ್‌ ಬಚ್ಚನ್‌ ಪ್ರಶ್ನೆ ಕೇಳ್ತಾರೆ. ಒಂದು ಹಂತ ತಲುಪಿದ ಬಳಿಕ ನಿಮ್ಮ ಮುಂದೆ ಎರಡು ಆಯ್ಕೆ ಬರುತ್ತೆ. ಒಂದೋ ಈ ದೊಡ್ಡ ಮೊತ್ತದ ಹಣ ತಗೊಂಡು ನೀವು ವಾಪಾಸ್ ಹೋಗಬಹುದು, ಇಲ್ಲವೇ ಆಟ ಮುಂದುವರಿಸಬಹುದು, ಆದರೆ ಹಣ ಉಳಿಯುವ ಭರವಸೆ ಇಲ್ಲ. ಬದುಕು ಕೆಲವೊಮ್ಮೆ ಇಂಥಾ ಆಯ್ಕೆಗಳನ್ನು ನಮ್ಮ ಮುಂದಿಡುತ್ತದೆ. ನಾನು ಇದರಲ್ಲಿ ಎರಡನೇ ಚಾಲೆಂಜ್‌ ಅನ್ನು ಯಾವಾಗಲೂ ಆಯ್ಕೆ ಮಾಡಿಕೊಳ್ಳುತ್ತೇನೆ.
 

2.ನನ್ನ ಮಾತನ್ನು ನಾನಷ್ಟೇ ನಂಬಿದ್ದೆ. ನನ್ನನ್ನು ಬಿಟ್ಟು ಮತ್ಯಾರೂ ನಂಬಿರಲಿಲ್ಲ. ನನ್ನ ಚಿಂತನೆಗಳನ್ನು ತೆರೆದಿಟ್ಟರೆ ಜನ ಒಂದೋ ಈತನಿಗೆ ದುರಹಂಕಾರ ಅನ್ನುತ್ತಿದ್ದರು, ಇಲ್ಲವೇ ಈತನದು ಎಲ್ಲ ಅತಿ ಅಂತ ದೂರ ಸರಿಯುತ್ತಿದ್ದರು. ಆದರೆ ನಾವ್ಯಾಕೆ ನಮಗೇ ಮಿತಿ ಹಾಕ್ಕೊಳ್ಳಬೇಕು, ಈ ಹಿಂದೆ ಇದನ್ನು ಯಾರೂ ಮಾಡಿಲ್ಲ ಅಂದ ಮಾತ್ರಕ್ಕೆ ಅದು ಎಂದೂ ಸಾಧ್ಯವಾಗದ ಕೆಲಸ ಎಂದು ಯಾಕೆ ಭಾವಿಸಬೇಕು. ಇಲ್ಲಿ ನಮ್ಮ ಮೇಲೆ ನಾವೇ ನಂಬಿಕೆಯಿಟ್ಟು ಎಷ್ಟು ಪರಿಶ್ರಮ ಹಾಕುತ್ತೇವೆ ಅನ್ನುವುದು ಮುಖ್ಯ. ನಾವೆಲ್ಲ ಭ್ರಮೆಯಲ್ಲಿದ್ದೇವೆ. ಈ ಬದುಕೇ ಒಂದು ಭ್ರಮೆ. ಹಾಗಿರುವಾಗ ದೊಡ್ಡ ಭ್ರಮೆ ಇಟ್ಟುಕೊಳ್ಳೋಣ. ದೊಡ್ಡ ಬದುಕು ಬದುಕೋಣ.

Tap to resize

3.ಈ ಬದುಕು ಅನ್ನೋದು ಏನು? ನಾವ್ಯಾಕೆ ಇಲ್ಲಿದ್ದೀವಿ? ನಮ್ಮ ಸೃಷ್ಟಿ ಯಾಕಾಯಿತು ಅನ್ನೋದೆಲ್ಲ ನಮಗೆ ಗೊತ್ತಿಲ್ಲ. ಹೀಗಿರುವಾಗ ಎಲ್ಲವನ್ನೂ ಯಾಕೆ ಲಾಜಿಕ್ ದೃಷ್ಟಿಯಿಂದಲೇ ನೋಡಬೇಕು, ಈ ಬದುಕು ಅಂದರೆ ಮಿತಿಯಿಲ್ಲದ ಅವಕಾಶಗಳು ಕೂಡ. ಅದನ್ನು ಹಿಂಬಾಲಿಸೋಣ. ಅದು ಯಶಸ್ವಿ ಆಗುತ್ತೋ ಇಲ್ವೋ, ಅದೆಲ್ಲ ಆಮೇಲಿನ ಮಾತು.

4.ನಾನು ಕನಸುಗಳ ಗುಲಾಮ. ಗುರಿ ಇಟ್ಟು ಮುಂದೆ ಹೋಗಲೇಬೇಕು. ಬೇರೆ ದಾರಿ ಇಲ್ಲ. ಹೀಗಿರುವಾಗ ಮನಸ್ಸು ಬೇರೆಲ್ಲೂ ಸರಿದಾಡಲ್ಲ. ಬೇರೆ ವಿಚಾರಗಳು ಬಾಧಿಸೋದಿಲ್ಲ. ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಭಗವದ್ಗೀತೆಯಲ್ಲಿ ಹೇಳಿರುವಂತೆ ಕೆಲಸವನ್ನಷ್ಟೇ ಪ್ರಾಮಾಣಿಕವಾಗಿ ಮಾಡುತ್ತೇನೆ. ಫಲ ಸಿಗುವುದು ನನ್ನ ಕೈಯಲ್ಲಿಲ್ಲ ಎಂದು ಭಾವಿಸುತ್ತೇನೆ. ಈ ಕಾರಣಕ್ಕೇ ನಾನು ವರ್ಕೋಹಾಲಿಕ್‌. ಮನೆಯಲ್ಲಿ ಸುಮ್ಮನೆ ಕೂರಲ್ಲ. ಒಂದು ವೇಳೆ ಕೂತರೆ ದೊಡ್ಡದೇನೋ ಸಂಭವಿಸುತ್ತದೆ ಎಂದೇ ಅರ್ಥ. ಹೊರಗೆ ಚಿಲ್ ಮಾಡೋದು, ಸ್ನೇಹಿತರೊಂದಿಗೆ ಪಾರ್ಟಿ ಇದೆಲ್ಲ ನನಗಾಗಲ್ಲ. ಶೂಟಿಂಗೇ ನನಗೆ ಚಿಲ್ಲಿಂಗ್‌.

5.ಹಾಗಂತ ನಾನು ಪರ್ಫೆಕ್ಟ್‌ ಅಲ್ಲ. ನನಗೂ ಗೊಂದಲ, ಅನುಮಾನ, ಭಯ ಇದೆ. ಭಯ ಅಂದರೆ ಹೆದರಿಕೆ ಅಲ್ಲ. ಅವಕಾಶ, ಸಮಯ ಕಳೆದುಕೊಳ್ಳುವ ಭಯ. ನಾನು ಸರಿಯಾಗಿ ಹೆಜ್ಜೆ ಇಡ್ತಿದ್ದೀನೆ ಅಗತ್ಯಕ್ಕಿಂತ ಹೆಚ್ಚು ಸಮಯ ತಗೊಳ್ತಿದ್ದೀನಾ? ಇಂಥಾ ಭಯ. ಒಮ್ಮೊಮ್ಮೆ ನಾನ್ಯಾಕೆ ಹೀಗಿದ್ದೀನಿ, ಮುಂದೆ ಏನು ಮಾಡಬೇಕು ಅಂತ ತೋಚದೆ ಖಿನ್ನನಾಗಿ ಕುಳಿತುಬಿಡುತ್ತೇನೆ. ಕೆಲವು ಗಂಟೆಗಳ ಬಳಿಕ ಇವೆಲ್ಲವನ್ನೂ ಕೊಡವಿಕೊಂಡು ಮೇಲೇಳುತ್ತೇನೆ.

6.ನನಗೆ ದೊಡ್ಡ ಸಿನಿಮಾ ಮಾಡುವ ಕಾನ್ಸೆಪ್ಟ್‌ ಬರಲು ಕಾರಣ ನಮ್ಮ ಕನ್ನಡ ಪ್ರೇಕ್ಷಕರು. ನಾನು ಇಂಡಸ್ಟ್ರಿಗೆ ಬಂದ ಕೆಲ ಸಮಯದ ನಂತರ ಜನ, ಅದ್ದೂರಿಯಾಗಿ ತಯಾರಾದ ಬೇರೆ ಭಾಷೆ ಸಿನಿಮಾಗಳ ಜೊತೆಗೆ ನಮ್ಮ ಕನ್ನಡ ಸಿನಿಮಾಗಳನ್ನುಹೋಲಿಸಿ ನೋಡುತ್ತಿದ್ದರು. ನಮ್ಮಲ್ಲಿ ಆ ರೇಂಜ್‌ನ ಸಿನಿಮಾ ತೆಗೆಯುವುದು ಸಾಧ್ಯವಿಲ್ಲ ಎಂದೇ ಮಾತನಾಡುತ್ತಿದ್ದರು. ನನ್ನ ಜನರ ಬೇಡಿಕೆ ಈಡೇರಿಸಬೇಕು ಅನಿಸಿತು. ಹಾಗೆ ತಯಾರಾದದ್ದೇ ಕೆಜಿಎಫ್‌ ಜಗತ್ತು.

7.ಈಗ ಎಲ್ಲೆಲ್ಲೂ ಇಂಟರ್‌ನೆಟ್‌ ಕನೆಕ್ಟಿವಿಟಿ ಇದೆ. ಜಗತ್ತು ಈಗ ಹೊಸ ಕಾನ್ಸೆಪ್ಟ್‌ಗೆ, ವಿಶ್ವದ ಬೇರೆ ಬೇರೆ ಪ್ರಾಂತ್ಯದ ಮಂದಿಯ ಕಥೆ ಕೇಳಲು ತಯಾರಾಗಿ ಕುಳಿತಿದೆ. ಇದು ನಮ್ಮ ಭಾರತೀಯತೆಯನ್ನು ಜಗತ್ತಿನ ಮುಂದಿಡಲು ಸರಿಯಾದ ಸಮಯ. ನಮ್ಮಲ್ಲಿ ಜನ ಹೆಚ್ಚು, ಹೀಗಾಗಿ ಪ್ರೇಕ್ಷಕರ ಕೊರತೆ ಆಗಲ್ಲ. ಮಾರ್ಕೆಟ್‌ ಬಲವಾಗಿ ಬೆಳೆದಿದೆ. ಕನೆಕ್ಟಿವಿಟಿ ಚೆನ್ನಾಗಿದೆ. ಹೀಗಾಗಿ ನಮ್ಮ ಕಥೆಯನ್ನು ಬಹಳ ಸುಲಭವಾಗಿ ಜಗತ್ತಿಗೆ ತಲುಪಿಸಬಹುದು.

8.ಸಿನಿಮಾ ಅಂತ ಬಂದಾಗ ನಾನು ನಿರ್ದೇಶಕರೊಂದಿಗೆ ಹೆಚ್ಚು ಸಮಯ ಕಳೆಯುತ್ತೇನೆ. ಹೀಗಾಗಿ ಕ್ಯಾಮರಾ ಮುಂದೆ ನಿಂತಾಗ ಒಂದು ಸಾಲನ್ನು ಹೇಗೆ ಹೇಳಬೇಕು ಅನ್ನೋದಕ್ಕಿಂತಲೂ ಆ ಸಾಲನ್ನು ಯಾಕೆ ಹೇಳಬೇಕು ಅನ್ನೋದು ಮುಖ್ಯವಾಗುತ್ತದೆ. ಕ್ಯಾಮರಾ ಮುಂದೆ ನಿಂತಾಗ ಕಥೆಯ ಪಾತ್ರವನ್ನೇ ಆವಾಹಿಸಿಕೊಂಡು ನಿಂತಿರುತ್ತೇನೆ. ಆ ಪಾತ್ರವಾಗಿ ವರ್ತಿಸುವುದಷ್ಟೇ ಅಲ್ಲಿ ಮುಖ್ಯ. ಅದು ಬಿಟ್ಟರೆ ಬೇರೆ ನಟನೆಯ ಅಗತ್ಯವಿಲ್ಲ. ರಂಗಭೂಮಿಯಿಂದ ಬಂದ ನನಗೆ ರಿಹರ್ಸಲ್‌ನಲ್ಲಿ ನಂಬಿಕೆ ಇಲ್ಲ. ಆದರೆ ಸಿನಿಮಾ ಟೀಮ್‌ನ ಯಾರಾದರೊಬ್ಬರು ಬದಲಾವಣೆ ಹೇಳಿದರೆ ಅದು ಸರಿ ಅನಿಸಿದರೆ ಖಂಡಿತಾ ಸ್ವೀಕರಿಸುತ್ತೇನೆ.

9.ನಾನು ಸೂಪರ್‌ಸ್ಟಾರ್ ಆಗಿರಬಹುದು. ಆದರೆ ಕ್ಯಾಮರಾ ಮುಂದೆ ನಿಂತಾಗ ನಾನೊಬ್ಬ ಆ್ಯಕ್ಟರ್ ಅಷ್ಟೇ. ನನ್ನ ಕೆಲಸ ನಾನು ಮಾಡಲೇ ಬೇಕು. ನಾನೊಬ್ಬ ಸ್ಟಾರ್ ಅಂತ ನಾನು ಡೈಲಾಗ್ ಸರಿಯಾಗಿ ಹೇಳದಿದ್ದರೆ ಏನೂ ಗಿಟ್ಟಲ್ಲ. ನಿರ್ದೇಶಕ ಮತ್ತು ಛಾಯಾಗ್ರಾಹಕ ನನ್ನ ಮೊದಲ ಪ್ರೇಕ್ಷಕರು. ಅವರ ಮುಖದಲ್ಲಿ ತೃಪ್ತಿ ಕಾಣದಿದ್ದರೆ ನನ್ನ ಸ್ಟಾರ್‌ಗಿರಿ ಇದ್ದೂ ಪ್ರಯೋಜನವಿಲ್ಲ.
 

10.ಸಿನಿಮಾದಲ್ಲಿ ಎಲ್ಲರೂ ಒಟ್ಟಾಗಿ ನಿಂತರೆ ಮಾತ್ರ ಮ್ಯಾಜಿಕ್ ನಡೆಯುತ್ತದೆ. ಇದು ವ್ಯಕ್ತಿಯ ಕನಸಲ್ಲ, ಸಮೂಹದ ಕಾರ್ಯತತ್ಪರತೆ. ಗೀತು ಮೋಹನ್‌ದಾಸ್ ಅವರ ಸಿನಿಮಾ ಜಗತ್ತು ಬೇರೆ, ನನ್ನ ಸಿನಿಮಾ ವಿಶ್ವ ಬೇರೆ. ಆದರೆ ಎರಡು ಜಗತ್ತುಗಳು ‘ಟಾಕ್ಸಿಕ್‌’ ಎಂಬ ಗ್ರೇಟ್‌ ಕಥೆಗಾಗಿ ಜೊತೆಯಾಗಿವೆ. ಇದು ಹೈ ಟೈಮ್‌. ಗೀತು ಅವರು ಮಾಸ್‌ ಎಂಟರ್‌ಟೇನರ್‌ ಆಗಿ ‘ಟಾಕ್ಸಿಕ್‌’ ಕಟ್ಟಿಕೊಡುವ ಭರವಸೆ ಇದೆ. ನಾವು ದೊಡ್ಡವರಿಗಾಗಿ ಫೇರಿ ಟೇಲ್ ಹೇಳ್ತೀವಿ.

Latest Videos

click me!