‘ನಮ್ಮ ಸಿನಿಮಾ ಶೂಟಿಂಗ್ ಟೈಮಲ್ಲೇ ಅಪ್ಪು ಮಾಮನ ‘ಜೇಮ್ಸ್’ ಶೂಟಿಂಗ್ ನಡೆಯುತ್ತಿತ್ತು. ನಮ್ಮ ಸಿನಿಮಾಕ್ಕೆ ಸ್ಟಂಟ್ ಡೈರೆಕ್ಟರ್ ಆಗಿದ್ದ ರವಿವರ್ಮ ಆ ಸಿನಿಮಾಕ್ಕೂ ಸಾಹಸ ನಿರ್ದೇಶನ ಮಾಡುತ್ತಿದ್ದರು.
'ಆಗೊಮ್ಮೆ ರವಿವರ್ಮ ಫೋನಲ್ಲಿ ರೆಕಾರ್ಡ್ ಆಗಿದ್ದ ನನ್ನ ಸಾಹಸ ದೃಶ್ಯವೊಂದನ್ನು ಮಾಮಂಗೆ ತೋರಿಸಿದ್ದಾರೆ. ಮಾಮ ಆ ಸೀನ್ ನೋಡ್ತಾ, ‘ಕಣ್ ನೋಡೋ ಅವಂದು, ನಮ್ ಫ್ಯಾಮಿಲಿಲಿ ಮತ್ತೊಬ್ಬ ಹೀರೋ ಬರೋ ಸೂಚನೆ ಕಾಣ್ತಿದೆ’ ಅಂತ ಸಹಾಯಕರಿಗೆ ಹೇಳಿದ್ರಂತೆ.
'ಆ ಸಹಾಯಕರು ಇದನ್ನು ನನಗೆ ಹೇಳಿದ್ರು. ಅದು ಅಪ್ಪು ಮಾಮನ ಕೊನೆಯ ಆಶೀರ್ವಾದ ಆಗಿತ್ತು.’ ಎಂದು ಧೀರೇನ್ ಹೇಳುತ್ತಾ ಭಾವುಕರಾಗಿದ್ದಾರೆ.
ಹೀಗಂದಿದ್ದು ‘ಶಿವ 143’ ಸಿನಿಮಾದ ನಾಯಕ ಧೀರೇನ್ ರಾಮ್‌ಕುಮಾರ್. ‘ಶಿವ 143’ ಸಿನಿಮಾ ಆ.26ಕ್ಕೆ ಬಿಡುಗಡೆಯಾಗಲಿದೆ. ಮಾನ್ವಿತಾ ಕಾಮತ್ ನಾಯಕಿ.
ಇದು ‘ಆರ್‌ಎಕ್ಸ್ 100’ ಚಿತ್ರದ ರೀಮೇಕ್. ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಕರೆಯಲಾಗಿತ್ತು. ಈ ವೇಳೆ ಮಾತನಾಡಿದ ಧೀರೇನ್, ‘ಮೊದಲನೇ ಸಿನಿಮಾ ಬಿಡುಗಡೆ ಆಗುತ್ತಿರುವ ಖುಷಿ, ನರ್ವಸ್ ಎರಡೂ ಇದೆ’ ಎಂದರು.
ಸಿನಿಮಾ ಬಗ್ಗೆ ವಿವರಿಸಿದ ನಿರ್ದೇಶಕ ಅನಿಲ್ ಕುಮಾರ್, ‘ಧೀರೇನ್‌ಗೋಸ್ಕರ ಈ ಸಿನಿಮಾ ಆಗಿರೋದು. ಅಣ್ಣಾವ್ರ ಫ್ಯಾಮಿಲಿಯಲ್ಲಿ ಹುಟ್ಟಿರೋದು ವರ ಅಲ್ಲವೇ ಅಲ್ಲ.
'ಇದರಿಂದ ಅನಾನುಕೂಲತೆಯೇ ಜಾಸ್ತಿ ಅಂತ ಬಹಳ ಸಲ ಧೀರೇನ್‌ಗೆ ಹೇಳಿದ್ದೀನಿ. ಇವರನ್ನು ಮೊದಲ ಸಲ ನೋಡಿದಾಗ ಇವರು ಚಾಕೊಲೇಟ್ ಹೀರೋ ಆಗಬಹುದು ಅನಿಸಿತು.'
'ಆದರೆ ವೀರೇನ್ ಯಾವ ಮಟ್ಟಿಗೆ ಎಫರ್ಚ್ ಹಾಕಿದ್ದಾರೆ ಅಂತ ಸಿನಿಮಾ ನೋಡಿದರೆ ನಿಮಗೇ ಗೊತ್ತಾಗುತ್ತದೆ. ಇದು ರೌಡಿಸಂ ಸಿನಿಮಾ ಅಲ್ಲ. ಹಾಗಂತ ಮಾಸ್ ಎಲಿಮೆಂಟ್ ಸಾಕಷ್ಟಿವೆ.'
ಒಂಥರಾ ಡಿಸ್ಟರ್ಬ್ಡ್ ಲವ್ ಸ್ಟೋರಿ. ಇದಕ್ಕೋಸ್ಕರ ಧೀರೇನ್ ಕೆಸರಲ್ಲಿ ಮಲಗಿದ್ದಾರೆ. ಮೋರಿಗೆ ಬಿದ್ದಿದ್ದಾರೆ. ನಡುಗುವ ಚಳಿಗೆ ಮಳೆಯಲ್ಲಿ ನೆನೆದಿದ್ದಾರೆ’ ಎಂದರು. ಛಾಯಾಗ್ರಾಹಕ ಶಿವ ಉಪಸ್ಥಿತರಿದ್ದರು.