ಆಗಿನ ನಮ್ಮ ಬಾಲ್ಯ ಎಂಬುದು ಅಡ್ವೆಂಚರ್. ಹಳ್ಳಿಯಲ್ಲಿ ನಾವು ಒಂದು ರೀತಿಯಲ್ಲಿ ಅಡ್ವೆಂಚರ್ ಹೀರೋಗಳಂತೆ. ಅರಸೀಕೆರೆಯ ಕಾಳೆನಹಳ್ಳಿಯಲ್ಲಿ ಹುಟ್ಟಿ ಬೆಳೆದ ನನ್ನ ಶಾಲೆ ಅರಸೀಕರೆಯ ಸೇಂಟ್ ಮೇರಿಸ್.
ಈಗ ಮೊಬೈಲ್‌ನಲ್ಲೇ ಕಳೆದು ಹೋಗುತ್ತಿರುವ ಮಕ್ಕಳನ್ನು ನೋಡಿ ನಮ್ಮ ಬಾಲ್ಯವನ್ನು ನೆನಪಿಸಿಕೊಂಡರೆ ಆಗ ಸಿಗುತ್ತಿದ್ದ ಮನರಂಜನೆ ಸಕತ್ ಖುಷಿ ಕೊಡುತ್ತದೆ. ಭಾನುವಾರ ಟೀವಿಯಲ್ಲಿ ಬರೋ ಸಿನಿಮಾ, ಹಾಡುಗಳನ್ನು ತೋರಿಸುವ ಚಿತ್ರಮಂಜರಿ ಕಾರ್ಯಕ್ರಮ.
ಇದರ ಜತೆಗೆ ವರ್ಷಕ್ಕೊಮ್ಮೆ ಊರಿಗೆ ಬರುವ ನಾಟಕ ಸಂಭ್ರಮ. ನಾಟಕಗಳನ್ನು ತಪ್ಪದೆ ನೋಡುತ್ತಿದ್ದೆ ನಾನು. ಆಗಾಗ ಊರಿಗೆ ಬರುವ ಕರಡಿ, ಅದರ ಆಟ ಬಾಲ್ಯದ ಕುತೂಹಲ ಕೇಂದ್ರಬಿಂದು ಆಗಿತ್ತು.
ಇದು ಮನರಂಜನೆಯ ಲೈಫು ಆದರೆ ಗೋಲಿ, ಬುಗರಿ, ಕಲ್ಲು ಕುಟಿಟ್ಟು, ಲಗೋರಿ ಆಗಿನ ನನ್ನ ನೆಚ್ಚಿನ ಆಟಗಳು. ಅದರಲ್ಲೂ ಕೋಲನ್ನು ಮತ್ತೊಂದು ಕೋಲಿನಿಂದ ತಲ್ಲಿಕೊಂಡು ಹೋಗುತ್ತ ಆಟದಲ್ಲಿ ಔಟ್ ಆಗದಂತೆ ಕೋಲನ್ನು ಕಲ್ಲಿನ ಮೇಲಿಡುವುದು.
ಹೀಗೆ ಕೋಲನ್ನು ಎಷ್ಟು ದೂರ ತಳ್ಳಿಕೊಂಡು ಹೋಗಿರುತ್ತೇವೋ ಅಷ್ಟೂ ದೂರದಿಂದ ಕುಂಟುತ್ತಾ ಬರುವ ಕಲ್ಲು ಕುಟ್ಟು ಆಟವನ್ನು ತುಂಬಾ ಎಂಜಾಯ್ ಮಾಡುತ್ತಿದ್ವಿ. ಯಾರ ಸಹಾಯವೂ ಇಲ್ಲದೆ ಈಜು ಕಲಿತಿದ್ದು ಮರೆಯಲಾಗದ ಅನುಭವ. ಹೀಗೆ ಮನರಂಜನೆ, ಆಟ-ಪಾಠಗಳ ನಮ್ಮ ಬಾಲ್ಯವು ಅಡ್ವೆಂಚರ್‌ನಿಂದ ಕೂಡಿತ್ತು.