ಗೊರಗುಂಟೆ ಪಾಳ್ಯದಿಂದ ಮೈಸೂರು ರಸ್ತೆಯ ನಾಯಂಡಹಳ್ಳಿ (Nayandahalli) ಜಂಕ್ಷನ್‌ವರೆಗಿನ ವರ್ತುಲ ರಸ್ತೆಗೆ 2015ರ ಏಪ್ರಿಲ್ 08ರಂದು 'ಡಾll ರಾಜ್ ಕುಮಾರ್ ಪುಣ್ಯಭೂಮಿ ರಸ್ತೆ' ಎಂದು ಬಿಬಿಎಂಪಿ (BBMP) ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಂಡು, ಅಧಿಕೃತವಾಗಿ ರಸ್ತೆಯ ನಾಮಕರಣ ಸಮಾರಂಭವನ್ನು ಮಾಡಲಾಗಿತ್ತು.
ಇದರ ಮುಂದುವರೆದ ಭಾಗವಾಗಿ ನಾಯಂಡಹಳ್ಳಿ ಜಂಕ್ಷನ್‌ನಿಂದ ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್‌ವರೆಗಿನ ವರ್ತುಲ ರಸ್ತೆಗೆ 'ಪುನೀತ್ ರಾಜ್‍ಕುಮಾರ್ ರಸ್ತೆಟ ಎಂದು ನಾಮಕರಣ ಮಾಡಲಾಗುತ್ತಿದೆ.
ಆದಷ್ಟು ಶೀಘ್ರವಾಗಿ ಮಾನ್ಯ ಮುಖ್ಯಮಂತ್ರಿಗಳಿಂದ 'ಪುನೀತ್ ರಾಜ್‍ಕುಮಾರ್ ರಸ್ತೆ'ಯ ನಾಮಕರಣ ಸಮಾರಂಭವನ್ನು ಅಣ್ಣಾವ್ರ ಕುಟುಂಬದ ಎಲ್ಲಾ ಸದಸ್ಯರ ಉಪಸ್ಥಿತಿಯಲ್ಲಿ ನೆರವೇರಿಸಲಾಗುವುದು, ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ರಮೇಶ್ ಎನ್.ಆರ್ ಹೇಳಿದ್ದಾರೆ.
ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್‌ನಿಂದ - (ಹೊಸಕೆರೆ ಹಳ್ಳಿ, ದೇವೇಗೌಡ ಪೆಟ್ರೋಲ್ ಬಂಕ್ - ಕದಿರೇನಹಳ್ಳಿ ಪಾರ್ಕ್ - ಸಾರಕ್ಕಿ ಸಿಗ್ನಲ್ - ಜೆ.ಪಿ.ನಗರ) - ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್ ಜಂಕ್ಷನ್‌ವರೆಗಿನ 12 ಕಿ.ಮೀ. ಉದ್ದದ ರಸ್ತೆ ಇದು.
ಸುಮಾರು 700 ಕ್ಕೂ ಹೆಚ್ಚು ಮಂದಿ ಹಾಗೂ ಸದರಿ ರಸ್ತೆಗೆ ಹೊಂದಿಕೊಂಡಂತಿರುವ 09 ಬಡಾವಣೆಗಳ ಕ್ಷೇಮಾಭಿವೃದ್ಧಿ ಸಂಘಗಳ ಪದಾಧಿಕಾರಿಗಳು ಈ ರಸ್ತೆಗೆ ಅಪ್ಪು ಅವರ ಹೆಸರಿಡುವಂತೆ ಬಿಬಿಎಂಪಿಗೆ ಆಗ್ರಹಿಸಲು ಸಹಿ ಸಂಗ್ರಹಿಸಿದ್ದರು. ಯಾರೊಬ್ಬರ ವಿರೋಧವೂ ವ್ಯಕ್ತವಾಗದ ಕಾರಣ - ಮುಖ್ಯ ಆಯುಕ್ತರ ಟಿಪ್ಪಣಿಯಂತೆ ಮಾನ್ಯ ಆಡಳಿತಾಧಿಕಾರಿಗಳಾದ ಶ್ರೀ. ರಾಕೇಶ್ ಸಿಂಗ್ ಈ ಅನುಮೋದನೆಗೆ ಒಪ್ಪಿಗೆ ಸೂಚಿಸಿದ್ದಾರೆ.
ಈಗಾಗಲೇ ಅನೇಕ ಗ್ರಾಮ ಮತ್ತು ನಗರಗಳಲ್ಲಿ ಪುನೀತ್ ರಾಜ್‌ಕುಮಾರ್ ಪುತ್ಥಳಿ ಇಟ್ಟು ಅಲ್ಲಿನ ವೃತ್ತಗಳಿಗೆ ಪವರ್ ಸ್ಟಾರ್ ಹೆಸರಿಡಲಾಗಿದೆ. ರಸ್ತೆಗೆ ನಾಮಕರಣ ಮಾಡುವ ಮೂಲಕ ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ.