ಸಾವೇ ಬೇಡ ಎಂದ ರಾಜನಿಗೆ ಮಹರ್ಷಿ ತೋರಿಸಿದ ಭಯಾನಕ ಸತ್ಯ! ಸಾವು ಇಲ್ಲದ ಬದುಕಿನ ಭಯಾನಕ ಕಥೆ

Published : Jan 30, 2026, 03:39 PM IST

Immortality story ಅಮರತ್ವದ ಹಿಂದೆ ಓಡಿದ ರಾಜನು, ಅಂತ್ಯವಿಲ್ಲದ ಜೀವನ ದುಃಖ ಮತ್ತು ಕಲಹಕ್ಕೆ ಕಾರಣವಾಗುತ್ತದೆ ಎಂಬ ಸತ್ಯವನ್ನು ಅರಿತನು. ಮರಣವೇ ಬದುಕಿಗೆ ಮೌಲ್ಯ ನೀಡುತ್ತದೆ. ಪ್ರತಿಕ್ಷಣವನ್ನು ಅರ್ಥಪೂರ್ಣವಾಗಿ ಜೀವಿಸುವುದೇ ನಿಜವಾದ ಜ್ಞಾನ.

PREV
15
ಅಮರತ್ವದ ಆಸೆ ಹೊತ್ತು ಮಹರ್ಷಿಗಳ ಮುಂದೆ ತಲೆಬಾಗಿದ ರಾಜ

ಊರ ಹೊರಗಿರುವ ಒಂದು ಹಳೆಯ ಮರದ ಕೆಳಗೆ ಸದಾ ಧ್ಯಾನಸ್ಥರಾಗಿಯೇ ಕುಳಿತಿದ್ದ ಒಬ್ಬ ಮಹರ್ಷಿಯ ಬಳಿಗೆ ಒಂದು ದಿನ ಒಬ್ಬ ರಾಜ ಬಂದನು. ವಿನಯದಿಂದ ತಲೆ ಬಾಗಿಸಿ, ಗುರುಗಳೇ, ಅಮರತ್ವವನ್ನು ನೀಡುವ ಯಾವುದಾದರೂ ಔಷಧಿ ಅಥವಾ ಗಿಡಮೂಲಿಕೆಗಳಿದ್ದರೆ ದಯವಿಟ್ಟು ನನಗೆ ತಿಳಿಸಿ ಎಂದು ಬೇಡಿಕೊಂಡನು. ಮಹರ್ಷಿಗಳು ಕಣ್ಣು ತೆರೆದು ಶಾಂತವಾಗಿ ಹೇಳಿದರು, ರಾಜಾ, ಇಲ್ಲಿಂದ ಎರಡು ಮಹಾ ಪರ್ವತಗಳನ್ನು ದಾಟಿದರೆ ಒಂದು ಸರೋವರ ಸಿಗುತ್ತದೆ. ಅದರ ನೀರನ್ನು ಕುಡಿದರೆ ನೀನು ಅಮರನಾಗುವೆ.

25
ಅಮರನಾದರೂ ಅಂತ್ಯವಿಲ್ಲದ ನೋವಿನಲ್ಲಿ ನರಳಿದ ವೃದ್ಧನ ಕಥೆ

ಮಹರ್ಷಿಗಳ ಮಾತಿನಂತೆ ರಾಜ ಎರಡು ಪರ್ವತಗಳನ್ನು ದಾಟಿ ಮುಂದೆ ಹೋದ. ಕೊನೆಗೆ ಒಂದು ಸುಂದರ ಸರೋವರ ಕಾಣಿಸಿತು. ನೀರು ಕುಡಿಯಲು ಮುಂದಾದ ಕ್ಷಣದಲ್ಲೇ, ಯಾರೋ ಭಾರೀ ನೋವಿನಿಂದ ನರಳುತ್ತಿರುವ ಶಬ್ದ ಕೇಳಿಸಿತು. ಶಬ್ದ ಬಂದ ದಿಕ್ಕಿಗೆ ಹೋಗಿ ನೋಡಿದಾಗ, ಅಲ್ಲಿ ಅತೀ ದುರ್ಬಲವಾಗಿ ಮಲಗಿದ್ದ ಒಬ್ಬ ವೃದ್ಧನನ್ನು ಕಂಡನು.

ರಾಜನು ಅವನ ಬಳಿ ಹೋಗಿ, ನೀನು ಹೀಗೆ ಯಾಕೆ ನರಳುತ್ತಿದ್ದೀಯ? ಎಂದು ಕೇಳಿದ. ವೃದ್ಧನು ದುಃಖದಿಂದ ಹೇಳಿದ, ನಾನು ಈ ಸರೋವರದ ನೀರನ್ನು ಕುಡಿದು ಅಮರನಾದೆ. ನೂರು ವರ್ಷ ತುಂಬಿದ ಮೇಲೆ ನನ್ನ ಮಗನೇ ನನ್ನನ್ನು ಮನೆಯಿಂದ ಹೊರಹಾಕಿದ. ಕಳೆದ ಐವತ್ತು ವರ್ಷಗಳಿಂದ ಇಲ್ಲಿಯೇ ಒಂಟಿಯಾಗಿ ನರಳುತ್ತಾ ಬದುಕುತ್ತಿದ್ದೇನೆ. ನನ್ನ ಮಗ ಈಗ ಇಲ್ಲ, ಮೊಮ್ಮಕ್ಕಳೂ ವೃದ್ಧರಾಗಿದ್ದಾರೆ. ಸಾಯಬೇಕೆಂದು ಅನ್ನ-ನೀರು ಬಿಟ್ಟಿದ್ದರೂ, ನನಗೆ ಸಾವು ಬರಲೇ ಇಲ್ಲ.

35
ಯೌವ್ವನ ಮತ್ತು ಅಮರತ್ವ ಒಂದೇ ಹಣ್ಣಿನಲ್ಲಿ? ರಾಜನ ಹರ್ಷ

ಈ ಮಾತುಗಳನ್ನು ಕೇಳಿ ರಾಜನಿಗೆ ಕಸಿವಿಸಿಯಾಯಿತು. ಬರೀ ಅಮರತ್ವದಿಂದ ಏನೂ ಪ್ರಯೋಜನವಿಲ್ಲ. ಯೌವ್ವನವೂ ಜೊತೆಯಾದರೆ ಬದುಕು ಸುಂದರವಾಗಬಹುದು,ಎಂದು ಯೋಚಿಸಿದನು. ತಕ್ಷಣವೇ ಮತ್ತೆ ಮಹರ್ಷಿಗಳ ಬಳಿಗೆ ಹೋದನು. ಗುರುಗಳೇ, ಅಮರತ್ವದ ಜೊತೆಗೆ ಯೌವ್ವನವನ್ನು ಪಡೆಯುವ ಮಾರ್ಗವನ್ನೂ ದಯವಿಟ್ಟು ಹೇಳಿ, ಎಂದು ಬೇಡಿಕೊಂಡನು.

ಮಹರ್ಷಿಗಳು ಹೇಳಿದರು, ಈ ಸರೋವರವನ್ನು ದಾಟಿ ಮತ್ತೊಂದು ಮಹಾ ಪರ್ವತವಿದೆ. ಅದನ್ನು ದಾಟಿದರೆ ಹಳದಿ ಹಣ್ಣುಗಳಿಂದ ತುಂಬಿದ ಒಂದು ಮರ ಸಿಗುತ್ತದೆ. ಅದರ ಒಂದು ಹಣ್ಣನ್ನು ತಿಂದರೆ ಅಮರತ್ವವೂ, ಯೌವ್ವನವೂ ದೊರೆಯುತ್ತದೆ. ರಾಜನಿಗೆ ಅಪಾರ ಸಂತೋಷವಾಯಿತು. ಪರ್ವತ ದಾಟಿ ಹಳದಿ ಹಣ್ಣುಗಳ ಮರದ ಬಳಿಗೆ ತಲುಪಿದನು. ಹಣ್ಣು ಕಿತ್ತು ತಿನ್ನಲು ಮುಂದಾದಾಗ, ಯಾರೋ ಜೋರಾಗಿ ಜಗಳವಾಡುತ್ತಿರುವ ಶಬ್ದ ಕೇಳಿಸಿತು. ಕುತೂಹಲದಿಂದ ಶಬ್ದ ಬಂದ ಕಡೆಗೆ ಹೋದನು.

45
ಅಂತ್ಯವಿಲ್ಲದ ಬದುಕು, ಅಂತ್ಯವಿಲ್ಲದ ಆಸ್ತಿ ಜಗಳ

ಅಲ್ಲಿ ನಾಲ್ವರು ಯುವಕರು ಆಸ್ತಿಗಾಗಿ ಕಟುವಾಗಿ ಜಗಳವಾಡುತ್ತಿದ್ದರು. ರಾಜನು ಕಾರಣ ಕೇಳಿದಾಗ ಒಬ್ಬನು ಹೇಳಿದ, ನನಗೆ ಈಗ 250 ವರ್ಷ. ನನ್ನ ಪಕ್ಕದಲ್ಲಿರುವವರು ನನ್ನ ತಂದೆ. ಅವರಿಗೆ ೩೦೦ ವರ್ಷ. ಅವರು ನನ್ನ ಪಾಲಿನ ಆಸ್ತಿಯನ್ನು ಇನ್ನೂ ಕೊಡುತ್ತಿಲ್ಲ. ಇನ್ನೊಬ್ಬನು ಹೇಳಿದ, “ನನ್ನ ತಂದೆ ಇನ್ನೂ ಜೀವಂತ ಇದ್ದಾರೆ. ಅವರು ನನಗೆ ಆಸ್ತಿ ನೀಡಿಲ್ಲ. ಹಾಗಿದ್ದರೆ ನಾನು ನನ್ನ ಮಗನಿಗೆ ಹೇಗೆ ಕೊಡಲಿ? ಮತ್ತೊಬ್ಬನು ತನ್ನ ತಂದೆಯನ್ನು ತೋರಿಸಿ ಅದೇ ನೋವನ್ನು ಹೇಳಿದನು. ಕೊನೆಗೆ ಎಲ್ಲರೂ ಹೇಳಿದರು, “ನಮ್ಮ ಈ ಅಂತ್ಯವಿಲ್ಲದ ಆಸ್ತಿ ಜಗಳದಿಂದ ಬೇಸತ್ತ ಗ್ರಾಮಸ್ಥರು ನಮ್ಮನ್ನು ಹಳ್ಳಿಯಿಂದ ಹೊರಹಾಕಿದ್ದಾರೆ. ಇದು ಕೇಳಿ ರಾಜ ಬೆಚ್ಚಿಬಿದ್ದನು.ಸದ್ಯ ನಾನು ಹಣ್ಣನ್ನು ತಿನ್ನಲಿಲ್ಲವಲ್ಲ! ಎಂದು ಮನಸಿನಲ್ಲಿ ನೆಮ್ಮದಿಪಟ್ಟುಕೊಂಡು, ತಕ್ಷಣವೇ ಮಹರ್ಷಿಗಳ ಬಳಿಗೆ ಹಿಂದಿರುಗಿದನು.

55
ಸಾವಿನ ಮಹತ್ವ ಅರಿತು ಬದುಕಿನ ಮೌಲ್ಯ ಕಂಡ ರಾಜ

ಮಹರ್ಷಿಗಳ ಪಾದಗಳಿಗೆ ಬಿದ್ದು, ಗುರುಗಳೇ, ಸಾವಿನ ಮಹತ್ವವನ್ನು ನನಗೆ ತಿಳಿಸಿದಕ್ಕಾಗಿ ಧನ್ಯವಾದಗಳು, ಎಂದು ಕೃತಜ್ಞತೆ ಸಲ್ಲಿಸಿದನು. ಮಹರ್ಷಿಗಳು ನಗುತ್ತಾ ಹೇಳಿದರು, ಸಾವು ಇರುವುದರಿಂದಲೇ ಜಗತ್ತಿನಲ್ಲಿ ಪ್ರೀತಿ, ಮಮತೆ ಮತ್ತು ವಿಶ್ವಾಸ ಉಳಿದಿವೆ. ಅಮರತ್ವಕ್ಕಾಗಿ ಹಾತೊರೆಯುವ ಬದಲು, ಬದುಕಿರುವ ಪ್ರತಿಕ್ಷಣವನ್ನೂ ಸಂತೋಷದಿಂದ, ಅರ್ಥಪೂರ್ಣವಾಗಿ ಜೀವಿಸುವುದನ್ನು ಕಲಿಯಿರಿ. ಆಗ ಜೀವನವೇ ಬೆಳಕಾಗುತ್ತದೆ. ಹೀಗಾಗಿ, ಜನನ ಮತ್ತು ಮರಣವು ಸೃಷ್ಟಿಯ ಶಾಶ್ವತ ನಿಯಮಗಳು. ಬ್ರಹ್ಮಾಂಡದ ಸಮತೋಲನಕ್ಕೆ ಸಾವು ಅಗತ್ಯ. ಸಾವಿಗೆ ಹೆದರುವ ಬದಲು, ಬದುಕಿನ ಮೌಲ್ಯವನ್ನು ಅರಿಯುವುದೇ ನಿಜವಾದ ಜ್ಞಾನ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories