ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ, ಅವರ ಪುತ್ರಿ ಐಶ್ವರ್ಯಾ ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ತಂದೆಯನ್ನು 'ಬಂಡೆ' ಎಂದು ಕರೆಯುವುದರ ಹಿಂದಿನ ಕಠಿಣ ಶ್ರಮವನ್ನು ನೆನಪಿಸಿಕೊಂಡಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಶುಭ ಸಂದರ್ಭದಲ್ಲಿ, ಅವರ ಪುತ್ರಿ ಐಶ್ವರ್ಯಾ ಡಿಎಸ್‌ಕೆ ಹೆಗ್ಡೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. 'ಅಭಿನಂದನೆಗಳು ಅಪ್ಪ' ಎಂಬ ಸಂದೇಶದೊಂದಿಗೆ ಅವರು ಹಾಕಿರುವ ಈ ಭಾವನಾತ್ಮಕ ಪೋಸ್ಟ್ ಸದ್ಯ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಭಾರಿ ಸಂಖ್ಯೆಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
25
'ಬಂಡೆ' ರೂಪುಗೊಂಡ ಹಾದಿಯ ನೆನಪು
ಅಭಿನಂದನಾ ಸಂದೇಶದ ಬೆನ್ನಲ್ಲೇ ಐಶ್ವರ್ಯಾ ಅವರು ಈ ಹಿಂದೆ ಮಾತನಾಡಿದ್ದ ಹಳೆಯ ವಿಡಿಯೋವೊಂದು ಕೂಡ ಜಾಲತಾಣಗಳಲ್ಲಿ ಮತ್ತೆ ಮುಂಚೂಣಿಗೆ ಬಂದಿದೆ. ಅದರಲ್ಲಿ ಅವರು, "ಇವತ್ತು ಜನ ನಮ್ಮ ಅಪ್ಪನನ್ನು 'ಬಂಡೆ' (ಕನಕಪುರದ ಬಂಡೆ) ಎಂದು ಕರೆಯಬಹುದು. ಆದರೆ, ಆ ಬಂಡೆ ಇವತ್ತು ಈ ಮಟ್ಟಕ್ಕೆ ರೂಪುಗೊಳ್ಳುವುದರ ಹಿಂದೆ ಎಷ್ಟು ವರ್ಷಗಳ ಕಠಿಣ ಶ್ರಮವಿದೆ ಹಾಗೂ ಎಷ್ಟು ಸಮಯ ತೆಗೆದುಕೊಂಡಿದೆ ಎಂಬುದನ್ನು ನಾವು ಚಿಕ್ಕ ವಯಸ್ಸಿನಿಂದ ಹತ್ತಿರದಿಂದ ನೋಡಿದ್ದೇವೆ" ಎಂದು ನೆನಪಿಸಿಕೊಂಡಿದ್ದಾರೆ.
35
ತಂದೆಯ ಆಡಳಿತದ ಬಗ್ಗೆ ಹೆಣ್ಣುಮಗಳ ಕುತೂಹಲ
ತಮ್ಮ ತಂದೆ ರಾಜ್ಯದ ಅತ್ಯುನ್ನತ ಮುಖ್ಯಮಂತ್ರಿ ಗದ್ದುಗೆಯನ್ನು ಏರುತ್ತಿರುವ ಈ ಸಂದರ್ಭದಲ್ಲಿ ಮುಂದಿನ ದಿನಗಳ ಬಗ್ಗೆ ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ. "ಮುಂದಿನ ದಿನಗಳಲ್ಲಿ ನಮ್ಮ ಅಪ್ಪ ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಏನೆಲ್ಲಾ ಬದಲಾವಣೆಗಳನ್ನು ತರುತ್ತಾರೋ ಮತ್ತು ಜನರಿಗಾಗಿ ಏನೆಲ್ಲಾ ಒಳ್ಳೆಯ ಕೆಲಸಗಳನ್ನು ಮಾಡುತ್ತಾರೋ ಎಂದು ನಾವೆಲ್ಲರೂ ಅತೀ ಕುತೂಹಲದಿಂದ ಕಾಯುತ್ತಿದ್ದೇವೆ" ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.
ತಮ್ಮ ತಂದೆ ತಮಗೆ ಸದಾ ಹೇಳುತ್ತಿದ್ದ ಜೀವನದ ಪ್ರಮುಖ ಪಾಠವೊಂದನ್ನು ಐಶ್ವರ್ಯಾ ಈ ಸಂದರ್ಭದಲ್ಲಿ ಬಿಚ್ಚಿಟ್ಟಿದ್ದಾರೆ. "ನಮ್ಮ ಅಪ್ಪ ಯಾವಾಗಲೂ ಒಂದು ಮಾತು ಹೇಳುತ್ತಿರುತ್ತಾರೆ; 'ಮಗಳೇ, ದೇವರು ಯಾರಿಗೂ ನೇರವಾಗಿ ವರನನ್ನೂ ಕೊಡಲ್ಲ, ಶಾಪನೂ ಕೊಡಲ್ಲ. ಅವನು ಕೇವಲ ಅವಕಾಶಗಳನ್ನು ಮಾತ್ರ ಕೊಡುತ್ತಾನೆ' ಎಂದು ಅಪ್ಪ ಹೇಳುತ್ತಿದ್ದರು" ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ.
55
ತಂದೆಯ ಧ್ಯೇಯ ಹಾಗೂ ಮುಂದಿನ ಹಾದಿಗೆ ಶುಭ ಹಾರೈಕೆ
ಕೊನೆಯದಾಗಿ ತಮ್ಮ ತಂದೆಯ ವ್ಯಕ್ತಿತ್ವ ಹಾಗೂ ಅವರ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸಿರುವ ಐಶ್ವರ್ಯಾ, "ನಮ್ಮ ಅಪ್ಪ ದೊಡ್ಡ ಮಹತ್ವಾಕಾಂಕ್ಷೆ ಮತ್ತು ಜನರಿಗಾಗಿ ದುಡಿಯುವ ದೊಡ್ಡ ಧ್ಯೇಯವನ್ನು ಹೊಂದಿರುವ ವ್ಯಕ್ತಿ. ಜನರಿಗಾಗಿ ಏನು ಮಾಡಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತು. ಅವರ ಮುಂದಿನ ಈ ಆಡಳಿತದ ಹಾದಿ ಸುಗಮವಾಗಿರಲಿ. ಲವ್ ಯೂ ಅಪ್ಪ" ಎಂದು ಶುಭ ಹಾರೈಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.