ನಟಿ ರುಕ್ಮಿಣಿ ವಸಂತ ಡೀಪ್‌ಫೇಕ್ : ಹೈಟೆಕ್ ಪದವೀಧರರ ಬಂಧನ, 20 ಲಕ್ಷ ಸಂಬಳದ ಟೆಕ್ಕಿ, ಸಿಎ ಉದ್ಯೋಗಿ, ಯೂಟ್ಯೂಬರ್!

Published : Jun 20, 2026, 01:14 PM IST

ನಟಿ ರುಕ್ಮಿಣಿ ವಸಂತ ಅವರ ಡೀಪ್‌ಫೇಕ್ ಅಶ್ಲೀಲ ವಿಡಿಯೋ ಸೃಷ್ಟಿಸಿ ಹರಿಬಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವಿದ್ಯಾವಂತರನ್ನು ಬಂಧಿಸಿದ್ದಾರೆ. ವಿಕೃತ ಮಜಾ ಹಾಗೂ ಹಣದಾಸೆಗಾಗಿ ಈ ಕೃತ್ಯ ಎಸಗಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಸೇರಿದಂತೆ ಮೂವರನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

PREV
16
ಮೂವರು ಹೈಟೆಕ್ ಕಿಡಿಗೇಡಿ

ಬೆಂಗಳೂರು: ಖ್ಯಾತ ಸ್ಯಾಂಡಲ್‌ವುಡ್ ನಟಿ ರುಕ್ಮಿಣಿ ವಸಂತ ಅವರ ಮುಖವನ್ನು ಕೃತಕ ಬುದ್ಧಿಮತ್ತೆ (AI) ಹಾಗೂ ಡೀಪ್‌ಫೇಕ್ ತಂತ್ರಜ್ಞಾನ ಬಳಸಿ ಅಶ್ಲೀಲವಾಗಿ ಬಿಂಬಿಸಿದ್ದ ಜಾಲವನ್ನು ಭೇದಿಸುವಲ್ಲಿ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಯಶಸ್ವಿಯಾಗಿದ್ದಾರೆ. ನಟಿಯ ನಕಲಿ ಬಿಕಿನಿ ಫೋಟೋ ಮತ್ತು ವಿಡಿಯೋಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದ ಮೂವರು ಹೈಟೆಕ್ ಕಿಡಿಗೇಡಿಗಳನ್ನು ಸೈಬರ್ ಕಮಾಂಡ್ ಸೆಂಟರ್ ಪೊಲೀಸರು ಬಂಧಿಸಿದ್ದಾರೆ.

26
ಆರೋಪಿಗಳೆಲ್ಲರೂ ಉತ್ತಮ ಪದವೀದರರು!

ಬಂಧಿತ ಆರೋಪಿಗಳನ್ನು ಬಾಗಲಕೋಟೆ ಜಿಲ್ಲೆಯ ಚಿಲಕಮುಖಿ ಗ್ರಾಮದ ರವಿಕುಮಾರ್ (24), ಶಿವಮೊಗ್ಗ ಮೂಲದ ಹಾಗೂ ಸದ್ಯ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ವಾಸವಿರುವ ಚಂದ್ರಕಾಂತ್ (33) ಮತ್ತು ಬೆಂಗಳೂರಿನ ನಾಗಸಂದ್ರ ಮಂಜುನಾಥನಗರ ನಿವಾಸಿ ರಂಜಿತ್ (25) ಎಂದು ಗುರುತಿಸಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಮೂರು ಅತ್ಯಾಧುನಿಕ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದ್ದು, ನ್ಯಾಯಾಲಯದ ಅನುಮತಿಯೊಂದಿಗೆ ಪೊಲೀಸರು ಆರೋಪಿಗಳನ್ನು ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

36
ಉನ್ನತ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಯಶಸ್ವಿ ಕಾರ್ಯಾಚರಣೆ

ಕಳೆದ ತಿಂಗಳು ನಟಿ ರುಕ್ಮಿಣಿ ವಸಂತ ಅವರದ್ದು ಎನ್ನಲಾದ ಆಕ್ಷೇಪಾರ್ಹ ಬಿಕಿನಿ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದವು. ಇದು ಎಐ ತಂತ್ರಜ್ಞಾನದ ಮೂಲಕ ಸೃಷ್ಟಿಸಲಾದ ನಕಲಿ ದೃಶ್ಯಗಳು ಎಂದು ಸ್ಪಷ್ಟಪಡಿಸಿದ್ದ ನಟಿ, ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಗಾಂಭೀರ್ಯತೆಯನ್ನು ಅರಿತು ಸಿಐಡಿ ಹಾಗೂ ಸೈಬರ್ ಕಮಾಂಡ್ ಸೆಂಟರ್‌ನ ಪೊಲೀಸ್ ಮಹಾನಿರ್ದೇಶಕ (DGP) ಡಾ. ಪ್ರಣಬ್ ಮೊಹಂತಿ ಅವರ ಮಾರ್ಗದರ್ಶನದಲ್ಲಿ, ಡಿಐಜಿಪಿ ಆನಂದ್ ಕುಮಾರ್ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದೆ.

46
₹20 ಲಕ್ಷ ಪ್ಯಾಕೇಜ್ ಹೊಂದಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಕೈಚಳಕ!

ಬಂಧಿತ ಆರೋಪಿಗಳ ಹಿನ್ನೆಲೆಯನ್ನು ಜಾಲಾಡಿದ ಪೊಲೀಸರಿಗೆ ಶಾಕಿಂಗ್ ಸತ್ಯಗಳು ಸಿಕ್ಕಿವೆ. ಬಂಧಿತ ಆರೋಪಿಗಳು ಯಾವುದೇ ಹಳೇ ಅಪರಾಧಿಗಳಲ್ಲ, ಬದಲಿಗೆ ಸಮಾಜದಲ್ಲಿ ಗೌರವಾನ್ವಿತ ಹುದ್ದೆ ಹಾಗೂ ಉತ್ತಮ ಶಿಕ್ಷಣ ಪಡೆದ ಯುವಕರಾಗಿದ್ದಾರೆ. ಕೇವಲ ಕ್ಷಣಿಕ ಸುಖ, ವಿಕೃತ ಮಜಾ ಹಾಗೂ ಹಣದ ಆಸೆಗೆ ಬಿದ್ದು ಈ ಕೃತ್ಯ ಎಸಗಿರುವುದಾಗಿ ಆರೋಪಿಗಳು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.

ರಂಜಿತ್ ಸಾಫ್ಟ್‌ವೇರ್ ಇಂಜಿನಿಯರ್: ಈತ ಬಿ.ಇ ಪದವೀಧರನಾಗಿದ್ದು, ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಐಟಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ವಾರ್ಷಿಕ ₹20 ಲಕ್ಷದ ಭಾರಿ ಸಂಬಳದ ಪ್ಯಾಕೇಜ್ ಹೊಂದಿದ್ದ ಈತ, ಕೇವಲ ವಿಕೃತ 'ಫನ್' ಹಾಗೂ ಮಜಾ ತೆಗೆದುಕೊಳ್ಳುವ ಉದ್ದೇಶದಿಂದ ಇಂಟರ್ನೆಟ್‌ನಿಂದ ಎಐ ಪರಿಕರಗಳನ್ನು ಬಳಸಿ ನಟಿಯರ ಮುಖವನ್ನು ಅಶ್ಲೀಲ ವಿಡಿಯೋಗಳಿಗೆ ಜೋಡಿಸುವ ತಾಂತ್ರಿಕ ಕೈಚಳಕ ತೋರಿದ್ದ.

ಚಂದ್ರಕಾಂತ್ ಸಿಎ ಸಂಸ್ಥೆಯ ಉದ್ಯೋಗಿ: ತೀರ್ಥಹಳ್ಳಿ ಮೂಲದ ಈತ ಬೆಂಗಳೂರಿನ ಪ್ರಸಿದ್ಧ ಚಾರ್ಟೆಡ್ ಅಕೌಂಟೆಂಟ್ (CA) ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈತನಿಗೂ ಸಹ ಕೈತುಂಬಾ ಸಂಬಳ ಬರುತ್ತಿತ್ತು. ಆದರೆ ಇಂಟರ್ನೆಟ್‌ನಲ್ಲಿ ವಿಕೃತ 'ಮಜಾ' ತೆಗೆದುಕೊಳ್ಳುವ ಉದ್ದೇಶದಿಂದ ಈ ತಂತ್ರಜ್ಞಾನ ದುರ್ಬಳಕೆ ಮಾಡಿಕೊಂಡಿದ್ದಾಗಿ ಒಪ್ಪಿಕೊಂಡಿದ್ದಾನೆ.

56
ಯೂಟ್ಯೂಬ್ ಹಣದ ಆಸೆಗೆ ಬಿದ್ದ ರವಿಕುಮಾರ್ BSc ನರ್ಸಿಂಗ್ ಪದವೀಧರ

ಮೂರನೇ ಆರೋಪಿ ರವಿಕುಮಾರ್ ಬಿಎಸ್‌ಸಿ ನರ್ಸಿಂಗ್ ಪದವೀಧರನಾಗಿದ್ದು, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ಜೊತೆಗೆ ತನ್ನದೇ ಆದ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ. ಇತ್ತೀಚೆಗಷ್ಟೇ ಈತನಿಗೆ ಯೂಟ್ಯೂಬ್‌ನಿಂದ ಹಣ ಕೈಸೇರಿತ್ತು. ಇದರಿಂದ ಪ್ರೇರಿತನಾದ ಈತ ತನ್ನ ಚಾನೆಲ್‌ಗೆ ಹೆಚ್ಚಿನ ವೀಕ್ಷಣೆ (Views) ಹಾಗೂ ಸಬ್‌ಸ್ಕ್ರೈಬರ್‌ಗಳನ್ನು ಪಡೆದು ಶೀಘ್ರವಾಗಿ ಭಾರಿ ಹಣ ಗಳಿಸುವ ದುರಾಸೆಗೆ ಬಿದ್ದ, ರಂಜಿತ್ ಸೃಷ್ಟಿಸಿದ್ದ ನಟಿ ರುಕ್ಮಿಣಿ ವಸಂತ ಅವರ ಡೀಪ್‌ಫೇಕ್ ವಿಡಿಯೋ ಮತ್ತು ಫೋಟೋಗಳನ್ನು ತನ್ನ ಸಾಮಾಜಿಕ ಜಾಲತಾಣದ ಖಾತೆಗಳ ಮೂಲಕ ಸಾರ್ವಜನಿಕವಾಗಿ ಹರಿಬಿಟ್ಟು ವೈರಲ್ ಮಾಡಿದ್ದ. ಹಣ ಗಳಿಸುವ ಶಾರ್ಟ್‌ಕಟ್ ಮಾರ್ಗವಾಗಿ ನಟಿಯರ ಡೀಪ್‌ಫೇಕ್ ವೀಡಿಯೊಗಳನ್ನು ಮಾಡಿ ಅಪ್‌ಲೋಡ್ ಮಾಡಲು ಶುರು ಮಾಡಿದ್ದ.

66
ಸೈಬರ್ ಕಮಾಂಡ್ ಪೊಲೀಸರಿಂದ ಫುಲ್ ಡ್ರಿಲ್

ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ಮೂವರನ್ನೂ ಸೈಬರ್ ತಜ್ಞರ ತಂಡ ತೀವ್ರ ವಿಚಾರಣೆಗೆ ಒಳಪಡಿಸಿದೆ. ಜಪ್ತಿ ಮಾಡಲಾದ ಮೊಬೈಲ್ ಫೋನ್‌ಗಳಿಂದ ಡಿಲೀಟ್ ಮಾಡಲಾಗಿರುವ ಡೇಟಾವನ್ನು ಮರುಪಡೆಯುವ (Data Retrieval) ಪ್ರಕ್ರಿಯೆ ನಡೆಯುತ್ತಿದೆ. ಇವರು ಕೇವಲ ರುಕ್ಮಿಣಿ ವಸಂತ ಮಾತ್ರವಲ್ಲದೆ, ದೇಶದ ಇನ್ನುಳಿದ ಯಾವೆಲ್ಲಾ ಪ್ರಮುಖ ನಟಿಯರ ಡೀಪ್‌ಫೇಕ್ ವಿಡಿಯೋಗಳನ್ನು ತಯಾರಿಸಿದ್ದಾರೆ? ಮತ್ತು ಇವುಗಳನ್ನು ಹಣಕ್ಕಾಗಿ ಬೇರೆ ಪ್ರಮುಖ ಅಶ್ಲೀಲ ಜಾಲತಾಣಗಳಿಗೆ ಮಾರಾಟ ಮಾಡಿದ್ದಾರೆಯೇ? ಎಂಬ ನಿಟ್ಟಿನಲ್ಲಿ ಸೈಬರ್ ಪೊಲೀಸರು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories