ರೆಸಿಪಿ ಬದಲಾಗದಿದ್ರೂ ವಿಮಾನದಲ್ಲಿ ತಿನ್ನುವಾಗ ಆಹಾರದ ರುಚಿ ಏಕೆ ಬೇರೆ? ಇಲ್ಲಿದೆ ಇಂಟರೆಸ್ಟಿಂಗ್ ಫ್ಯಾಕ್ಟ್

Published : Sep 27, 2026, 01:07 PM IST

ಮನೆಯಲ್ಲಿ ಮಾಡುವ ಊಟಕ್ಕಿಂತ ವಿಮಾನ ಪ್ರಯಾಣದಲ್ಲಿ ಅಂದರೆ ಆಗಸದಲ್ಲಿ ಪ್ರಯಾಣಿಸುತ್ತಿದ್ದಾಗ ತಿನ್ನುವ ಆಹಾರದ ರುಚಿ ಏಕೆ ಬೇರೆಯಾಗಿರುತ್ತೆ? ರೆಸಿಪಿ ಬದಲಾಗದಿದ್ದರೂ ಊಟದ ರುಚಿ ಬದಲಾವಣೆಗೆ ಕಾರಣವೇನು? ಇಲ್ಲಿದೆ ಇಂಟರೆಸ್ಟಿಂಗ್ ಫ್ಯಾಕ್ಟ್!

PREV
13
ವಿಮಾನದಲ್ಲಿ ಆಹಾರದ ರುಚಿ ಏಕೆ ಬದಲಾಗುತ್ತದೆ?

ಪ್ರತಿಯೊಬ್ಬರಿಗೂ ವಿಮಾನದಲ್ಲಿ ಪ್ರಯಾಣಿಸಬೇಕು ಎಂಬ ಕನಸಿರುತ್ತದೆ. ಕೆಲವರಂತೂ ದಿನನಿತ್ಯ ಪ್ರಯಾಣಿಸುತ್ತಾರೆ. ವಿಮಾನ ಪ್ರಯಾಣ ಸಾಮಾನ್ಯವಾಗಿ ದೀರ್ಘಾವಧಿ ಆಗಿರುವುದರಿಂದ ವಿಮಾನದಲ್ಲೇ ಊಟ ತಿಂಡಿ ವ್ಯವಸ್ಥೆ ಇರುತ್ತದೆ. ನೀವು ವಿಮಾನದಲ್ಲಿ ಪ್ರಯಾಣಿಸಿದವರಾಗಿದ್ದರೆ ನಿಮಗೆ ಈ ವ್ಯತ್ಯಾಸ ಅನುಭವ ಆಗಿಯೇ ಇರುತ್ತದೆ. ವಿಮಾನದಲ್ಲಿ ಪ್ರಯಾಣಿಸುವಾಗ ನಾವು ನೆಲದ ಮೇಲೆ ಇದ್ದಾಗ ತಿನ್ನುವುದಕ್ಕಿಂತ ವಿಮಾನದಲ್ಲಿ ಕುಳಿತು ತಿನ್ನುವಾಗ ರುಚಿ ಏಕೆ ಬೇರೆಯಾಗಿರುತ್ತದೆ? ಈ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ವಿಮಾನದಲ್ಲಿ ಆಹಾರ ಹೇಗೆ ತಯಾರಿಸಲಾಗುತ್ತೆ? ವಿಮಾನದಲ್ಲಿ ತಯಾರಿಸುವ ರೆಸಿಪಿ ಬದಲಾಗದಿದ್ದರೂ ರುಚಿಯಲ್ಲೇಕೆ ಬದಲಾವಣೆ ಆಗುತ್ತದೆ? ಈ ಎಲ್ಲ ಪ್ರಶ್ನೆಗಳಿಗೆ ಕೆಳಗೆ ಉತ್ತರವಿದೆ.

35,000 ಅಡಿ ಎತ್ತರದಲ್ಲಿ ನಮ್ಮ ರುಚಿ ಗ್ರಹಿಕೆಗೆ ಏನಾಗುತ್ತದೆ?

ಹೌದು. ವಿಮಾನ ಸರಿಸುಮಾರು 35,000 ಅಡಿ ಎತ್ತರದಲ್ಲಿ ಹಾರುತ್ತಿರುತ್ತದೆ. ಈ ವೇಳೆ ಮಧ್ಯಾಹ್ನದ ಹಸಿವು ಆಗಿ ಊಟ ಮಾಡುತ್ತಿದ್ದರೆ. ನೀವು ಹೋಟೆಲ್‌ನಲ್ಲಿ, ಮನೆಯಲ್ಲಿ ತಿನ್ನುವಾಗಿನ ರುಚಿಗಿಂತ ಬೇರೆಯೇ ಆಗಿರುತ್ತದೆ. ಹಾಗಾಂತ ಅಲ್ಲಿನ ರೆಸಿಪಿಯಲ್ಲೇನು ಬದಲಾವಣೆ ಇರಲ್ಲ. ಆದರೂ ರುಚಿಯಲ್ಲೇ ಇಷ್ಟೊಂದು ವ್ಯತ್ಯಾಸ? ಏಕೆಂದರೆ ವಿಮಾನ 35,000 ಅಡಿ ಎತ್ತರದಲ್ಲಿ ಹಾರುತ್ತಿರುವಾಗ ನಾಲಗೆ, ಮೂಗು ಆಹಾರದ ರುಚಿ, ವಾಸನೆ ಗ್ರಹಿಸುವ ರೀತಿಯಲ್ಲಿ ಬದಲಾವಣೆ ಆಗಿರುತ್ತದೆ!

23
ವಿಮಾನದಲ್ಲೇಕೆ ಆಹಾರ ರುಚಿ ಬದಲಾಗುತ್ತೆ?

ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ನಿಶಿಕಾ ಹೇಳೋದೇನು?

ವಿಮಾನದ ಎತ್ತರ, ಅಲ್ಲಿನ ಒಣ ಗಾಳಿ ಮತ್ತು ಕ್ಯಾಬಿನ್ ಒತ್ತಡ ಆಹಾರದ ರುಚಿಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ಹಾಗೂ ಯುಕೆ ಸರ್ಟಿಫೈಡ್ ಅಡ್ವಾನ್ಸ್ಡ್ ಫ್ಯಾಟ್ ಲಾಸ್ ಮತ್ತು ಮೆಟಬಾಲಿಕ್ ಹೆಲ್ತ್ ಕೋಚ್ ನಿಶಿಕಾ ಅವರು ಏನು ವಿವರಿಸಿದ್ದಾರೆ ನೋಡೋಣ.

ವಿಮಾನವೊಂದು 35,000 ಅಡಿ ಎತ್ತರದಲ್ಲಿ ಹಾರುವಾಗ ಆಹಾರದ ರೆಸಿಪಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಆದರೆ ಅದನ್ನು ನಾವು ಅನುಭವಿಸುವ ರೀತಿಯಲ್ಲಿ ಬದಲಾವಣೆ ಆಗುತ್ತದೆ ಎಂದು ನಿಶಿಕಾ ಹೇಳಿದ್ದಾರೆ.

33
ಈ ಮೂರು ಕಾರಣಗಳು ವಿಮಾನದಲ್ಲಿ ರುಚಿ ಬದಲಾಯಿತ್ತದೆ

ವಿಮಾನದಲ್ಲಿರುವಾಗ ಕಡಿಮೆ ಆರ್ದ್ರತೆ, ಕ್ಯಾಬಿನ್‌ನ ಒತ್ತಡ ಮತ್ತು ನಿರಂತರವಾಗಿ ಕೇಳಿಸುವ ವಿಮಾನದ ಶಬ್ದ ನಮ್ಮ ರುಚಿ ಹಾಗೂ ವಾಸನೆ ಗ್ರಹಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತವೆ. ನಾವು ‘ಟೇಸ್ಟ್’ ಅಂತಾ ಏನು ಅನುಭವಿಸುತೀವಿ ಅದರಲ್ಲಿ ವಾಸನೆಯ ಪಾತ್ರವೂ ಬಹಳ ಮುಖ್ಯ. ಹೀಗಾಗಿ ವಿಮಾನದಲ್ಲಿ ತಿನ್ನುವ ಆಹಾರ ನೆಲದ ಮೇಲಿರುವಾಗ ತಿನ್ನುವುದಕ್ಕಿಂತ ಕಡಿಮೆ ರುಚಿ, ಕಡಿಮೆ ಪರಿಮಳ ಅಥವಾ ಸ್ವಲ್ಪ ಸಪ್ಪೆಯಾಗಿ ಅನಿಸಬಹುದು.

ವಿಮಾನದ ಒಳಗಿನ ಒಣ ವಾತಾವರಣ ಕಾರಣ

ವಿಮಾನದಲ್ಲಿ ಆಹಾರದ ರುಚಿ ಬದಲಾಗಲು ಪ್ರಮುಖ ಕಾರಣಗಳಲ್ಲಿ ಒಣ ವಾತಾವರಣವೂ ಒಂದು. ವಿಮಾನದ ಕ್ಯಾಬಿನ್‌ನಲ್ಲಿ ಆರ್ದ್ರತೆ ಕಡಿಮೆ ಇರುವುದರಿಂದ ಬಾಯಿ ಮತ್ತು ಮೂಗಿನ ಒಳಭಾಗ ಒಣಗಬಹುದು. ಅಂತಹ ವಾತಾವರಣದಲ್ಲಿ ಮೂಗು ಮತ್ತು ಬಾಯಿ ಸರಿಯಾಗಿ ಕೆಲಸ ಮಾಡದಿದ್ದಾಗ ಆಹಾರದ ವಾಸನೆ ಮತ್ತು ಸೂಕ್ಷ್ಮ ರುಚಿಗಳನ್ನು ಗ್ರಹಿಸುವ ಸಾಮರ್ಥ್ಯವೂ ಕಡಿಮೆಯಾಗಬಹುದು. ಹೀಗಾಗಿ ಮನೆಯಲ್ಲಿ ತಿನ್ನುವಾಗ ರುಚಿಕರ ಅನಿಸಿದ್ದು, ವಿಮಾನದಲ್ಲಿ ತಿನ್ನುವಾಗ ಸಪ್ಪೆ ಅನಿಸಬಹುದು.

ಆಹಾರದ ರುಚಿಗೂ ವಿಮಾನದ ಶಬ್ದಕ್ಕೂ ಏನು ಸಂಬಂಧ?

ಆಹಾರದ ರುಚಿಗೂ ವಿಮಾನದ ಶಬ್ದಕ್ಕೂ ಸಂಬಂಧವಿದೆ ಎಂಬುದನ್ನು ಸಾಮಾನ್ಯವಾಗಿ ನಾವು ಗಮನಿಸುವುದಿಲ್ಲ. ಆದರೆ ವಿಮಾನದ ನಿರಂತರ ಶಬ್ದವೂ ರುಚಿಯ ಅನುಭವದ ಮೇಲೆ ಪರಿಣಾಮ ಬೀರಬಹುದು. ಹೇಗೆ ಎಂಬ ಪ್ರಶ್ನೆ ಮೂಡುತ್ತದಲ್ಲವೇ?

ಹೌದು. ವಿಮಾನದ ಶಬ್ದದ ನಡುವೆ ಸಿಹಿ ರುಚಿ ಸಾಮಾನ್ಯಕ್ಕಿಂತ ಕಡಿಮೆ ಅನಿಸಬಹುದು. ಅದೇ ಸಮಯದಲ್ಲಿ ಟೊಮೆಟೊ, ಅಣಬೆ, ಚೀಸ್ ಮತ್ತು ಕೆಲವು ಸೂಪ್‌ಗಳಲ್ಲಿ ಕಂಡುಬರುವ ಗಾಢವಾದ ಖಾರ-ರುಚಿ ಅಥವಾ ‘ಉಮಾಮಿ’ ರುಚಿ ಹೆಚ್ಚು ಗಮನಕ್ಕೆ ಬರಬಹುದು. ಇದಕ್ಕಾಗಿಯೇ ವಿಮಾನದಲ್ಲಿ ಮಸಾಲೆ, ಸಾಸ್, ಹೆಚ್ಚು ಸೀಸನಿಂಗ್ ಹೆಚ್ಚು ರುಚಿಕರವಾಗಿ ಅನಿಸಬಹುದು. ಒಣ ವಾತಾವರಣ ಮತ್ತು ನಿರಂತರ ಶಬ್ದದ ನಡುವೆ ಮಸಾಲೆಯಿಲ್ಲದ ಆಹಾರದ ರುಚಿಗಳು ಅಷ್ಟಾಗಿ ತಿಳಿಯದೇ ಇರಬಹುದು.

ತಿನ್ನುವ ಸಮಯ ಮತ್ತು ನಮ್ಮ ಮನಸ್ಥಿತಿಯೂ ಕಾರಣ

ವಿಮಾನದಲ್ಲಿ ಆಹಾರದ ರುಚಿ ಬದಲಾಗಲು ನಮ್ಮ ತಿನ್ನುವ ಅಭ್ಯಾಸವೂ ಒಂದು ಕಾರಣವಾಗಿರಬಹುದು. ವಿಮಾನ ಪ್ರಯಾಣದಲ್ಲಿ ನಮ್ಮ ಸಾಮಾನ್ಯ ಊಟದ ಸಮಯ ಬದಲಾಗಬಹುದು. ಹಲವು ಗಂಟೆಗಳ ಕಾಲ ಒಂದೇ ಜಾಗದಲ್ಲಿ ಕುಳಿತುಕೊಳ್ಳುವುದು, ದಣಿವು ಅಥವಾ ಹಸಿವಿಲ್ಲದಿದ್ದರೂ ಊಟ ನೀಡಲಾಗಿದೆ ಎಂಬ ಕಾರಣಕ್ಕೆ ತಿನ್ನುವುದು ಕೂಡ ಆಹಾರ ಎಷ್ಟು ರುಚಿಕರವಾಗಿ ಅನಿಸುತ್ತದೆ ಎಂಬುದರ ಮೇಲೆ ಪರಿಣಾಮ ಬೀರಬಹುದು. ವಿಮಾನದಲ್ಲಿ ಟೊಮೆಟೊ ಜ್ಯೂಸ್ ಹೆಚ್ಚು ಜನಪ್ರಿಯವಾಗಿರುವುದಕ್ಕೂ ಇದು ಒಂದು ಕಾರಣವಾಗಿರಬಹುದು. ಟೊಮೆಟೊ ಜ್ಯೂಸ್‌ನಲ್ಲಿರುವ ನೈಸರ್ಗಿಕ ರುಚಿ, ವಿಮಾನದಲ್ಲಿ ಕೆಲವು ರುಚಿಗಳು ಕಡಿಮೆ ತೀವ್ರವಾಗಿ ಅನಿಸಿದಾಗಲೂ ಚೆನ್ನಾಗಿ ತಿಳಿಯುತ್ತದೆ.

ಓದುಗರ ಗಮನಕ್ಕೆ: ಈ ಲೇಖನವು ಮಾಹಿತಿಗಾಗಿ ಮಾತ್ರ. ಇದು ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಯಾವುದೇ ಆರೋಗ್ಯ ಸಮಸ್ಯೆಯ ಬಗ್ಗೆ ಅನುಮಾನ ಅಥವಾ ಪ್ರಶ್ನೆಗಳಿದ್ದರೆ ವೈದ್ರ ಸಲಹೆ ಪಡೆಯಿರಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories