ಹಿಂದೂಗಳ ಮದುವೆಯಲ್ಲಿ ಮಾಂಗಲ್ಯ ಧಾರಣೆ ಅನ್ನೋದು ತುಂಬಾನೇ ಪ್ರಮುಖವಾದ ಘಟ್ಟ. ಇದು ನಡೆದರೆ ವಧು-ವರರು ಅಧಿಕೃತವಾಗಿ ಗಂಡ-ಹೆಂಡತಿ ಆದಂತೆ. ವರನು ವಧುವಿನ ಕೊರಳಿಗೆ ತಾಳಿ ಕಟ್ಟುವಾಗ ಮೂರು ಗಂಟು ಹಾಕುತ್ತಾನೆ. ಇದರ ಹಿಂದಿನ ಅರ್ಥ ಮತ್ತು ಪರಮಾರ್ಥ ಏನು ಗೊತ್ತಾ?
ಹಿಂದೂ ಸಂಪ್ರದಾಯದಲ್ಲಿ ಮದುವೆ ಅನ್ನೋದು ತುಂಬಾನೇ ಪವಿತ್ರವಾದ ಬಂಧ. ವೇದ ಮಂತ್ರಗಳ, ಶಾಸ್ತ್ರೋಕ್ತ ಆಚರಣೆಗಳ ನಡುವೆ ವಧು-ವರರು ಒಂದಾಗುವ ಈ ಕಾರ್ಯದಲ್ಲಿ 'ಮಾಂಗಲ್ಯ ಧಾರಣೆ' ಅತೀ ಮುಖ್ಯವಾದ ಘಟ್ಟ. ವರನು ವಧುವಿನ ಕೊರಳಿಗೆ ತಾಳಿ ಕಟ್ಟಿ ಮೂರು ಗಂಟು ಹಾಕಿದ ತಕ್ಷಣ ಅವರಿಬ್ಬರೂ ಗಂಡ-ಹೆಂಡತಿಯಾಗುತ್ತಾರೆ. ಆದ್ರೆ, ಈ ಮೂರು ಗಂಟುಗಳ ಹಿಂದೆ ಕೇವಲ ಸಂಪ್ರದಾಯ ಮಾತ್ರವಲ್ಲ, ಆಳವಾದ ಆಧ್ಯಾತ್ಮಿಕ, ಧಾರ್ಮಿಕ ಮತ್ತು ಸಾಮಾಜಿಕ ಅರ್ಥಗಳು ಅಡಗಿವೆ. ಅವುಗಳೇನು ಅಂತ ಇಲ್ಲಿ ನೋಡೋಣ.
26
ಹಿಂದೂ ಧರ್ಮದಲ್ಲಿ ಮೂರರ ಮಹತ್ವ
ಹಿಂದೂ ಧರ್ಮದಲ್ಲಿ 'ಮೂರು' ಸಂಖ್ಯೆಗೆ ಬಹಳ ಪ್ರಾಮುಖ್ಯತೆ ಇದೆ. ತ್ರಿಮೂರ್ತಿಗಳು (ಬ್ರಹ್ಮ, ವಿಷ್ಣು, ಮಹೇಶ್ವರ) ಈ ಲೋಕವನ್ನು ಕಾಯುತ್ತಾರೆ. ತ್ರಿಲೋಕಗಳು (ಭೂಲೋಕ, ಪಾತಾಳಲೋಕ, ದೇವಲೋಕ) ಇವೆ ಎಂದು ನಾವು ನಂಬುತ್ತೇವೆ. ಇದೇ ರೀತಿ, ಮದುವೆಯಲ್ಲಿ ಮೂರು ಗಂಟು ಹಾಕುವ ಮೂಲಕ ವಧು-ವರರು ದೈವಸಾಕ್ಷಿಯಾಗಿ ಒಂದಾಗುತ್ತಾರೆ.
36
ಕುಟುಂಬ ಬಂಧ ಮತ್ತು ದೈವಿಕ ರಕ್ಷಣೆ:
ಕೆಲವು ಸಂಪ್ರದಾಯಗಳ ಪ್ರಕಾರ, ವರನು ಮೊದಲ ಗಂಟನ್ನು ಮಾತ್ರ ಹಾಕುತ್ತಾನೆ. ಉಳಿದ ಎರಡು ಗಂಟುಗಳನ್ನು ವರನ ಸಹೋದರಿ (ಅತ್ತಿಗೆ/ನಾದಿನಿ) ಹಾಕುತ್ತಾರೆ. ಹೊಸದಾಗಿ ಮನೆಗೆ ಕಾಲಿಡುತ್ತಿರುವ ವಧುವನ್ನು ತಮ್ಮ ಕುಟುಂಬಕ್ಕೆ ಸ್ವಾಗತಿಸುತ್ತಾ, ಆಕೆಗೆ ಸದಾ ಬೆಂಬಲವಾಗಿ ಇರುತ್ತೇವೆ ಎಂದು ಕೊಡುವ ಭರವಸೆಯಿದು. ಹೀಗೆ, ಹಿಂದೂ ಸಂಪ್ರದಾಯದಲ್ಲಿ ವಧುವಿನ ಕೊರಳಿಗೆ ಬೀಳುವ ಪ್ರತಿ ಗಂಟಿಗೂ ಒಂದು ವಿಶೇಷವಾದ ಜವಾಬ್ದಾರಿ, ನಂಬಿಕೆ ಮತ್ತು ಸಂಸ್ಕಾರ ಅಡಗಿದೆ.
ಮದುವೆಯಲ್ಲಿ ಹಾಕುವ ಮೂರು ಗಂಟುಗಳ ಹಿಂದಿರುವ ಪ್ರಮುಖ ಆಧ್ಯಾತ್ಮಿಕ ಭಾವನೆ 'ತ್ರಿಕರಣ ಶುದ್ಧಿ'. ಅಂದರೆ ಮನಸ್ಸು, ಮಾತು ಮತ್ತು ಕೃತಿ.
ಮೊದಲ ಗಂಟು (ಮನಸಾ): ವರನು 'ಮನಸಾ' ಧರ್ಮಕ್ಕೆ ಬದ್ಧನಾಗಿ, ವಧುವನ್ನು ಮನಃಪೂರ್ವಕವಾಗಿ ತನ್ನ ಅರ್ಧಾಂಗಿಯಾಗಿ ಸ್ವೀಕರಿಸುತ್ತಿದ್ದೇನೆ ಎಂದು ಮಾತು ಕೊಡುತ್ತಾನೆ.
ಎರಡನೇ ಗಂಟು (ವಾಚಾ): ಇದು 'ವಾಚಾ' ಧರ್ಮದ ಸಂಕೇತ. ಕೊಟ್ಟ ಮಾತಿಗೆ ತಪ್ಪದೆ, ಸತ್ಯದ ದಾರಿಯಲ್ಲಿ ನಡೆಯುತ್ತಾ, ಕಷ್ಟ-ಸುಖಗಳಲ್ಲಿ ಜೊತೆಯಾಗಿರುತ್ತೇವೆ ಎಂದು ವಧು-ವರರು ಒಬ್ಬರಿಗೊಬ್ಬರು ಕೊಡುವ ಭರವಸೆ.
ಮೂರನೇ ಗಂಟು (ಕರ್ಮಣಾ): ಇದು 'ಕರ್ಮಣಾ' ಧರ್ಮದ ಪ್ರತೀಕ. ಧರ್ಮಬದ್ಧವಾದ ಕೆಲಸಗಳಿಂದ ಕುಟುಂಬವನ್ನು ಪೋಷಿಸುತ್ತೇನೆ ಎಂದು ವರನು ಮಾಡುವ ಪ್ರತಿಜ್ಞೆ ಇದು.
56
ಮೂರು ಶರೀರಗಳನ್ನು ಒಂದು ಮಾಡುವ ಮೂರು ಗಂಟು
ಧರ್ಮಗ್ರಂಥಗಳ ಪ್ರಕಾರ, ಮನುಷ್ಯನಿಗೆ ಸ್ಥೂಲ, ಸೂಕ್ಷ್ಮ ಮತ್ತು ಕಾರಣ ಎಂಬ ಮೂರು ಶರೀರಗಳಿವೆ. ಮದುವೆ ಅಂದರೆ ಇಬ್ಬರು ವ್ಯಕ್ತಿಗಳು ಸಂಪೂರ್ಣವಾಗಿ ಒಂದಾಗುವುದು. ಅದಕ್ಕಾಗಿಯೇ, ಪ್ರತಿಯೊಂದು ಗಂಟು ಒಂದೊಂದು ಶರೀರಕ್ಕೆ ಹಾಕಲಾಗುತ್ತದೆ. ಗಂಡ-ಹೆಂಡತಿ ಜೀವನಪೂರ್ತಿ ಈ ಮೂರು ಶರೀರಗಳಿಂದ ಒಂದಾಗಿರಬೇಕು ಎನ್ನುವುದೇ ಇದರ ಹಿಂದಿನ ಅರ್ಥ. ಕೊರಳಲ್ಲಿರುವ ಮಂಗಳಸೂತ್ರ ಕೇವಲ ಆಭರಣವಲ್ಲ, ಅದನ್ನು ಗಂಡನ ಆಯುಸ್ಸು ಎಂದು ಮಹಿಳೆಯರು ಭಾವಿಸುತ್ತಾರೆ. ಅದಕ್ಕಾಗಿಯೇ ಪೂಜೆ, ವ್ರತಗಳ ಸಮಯದಲ್ಲಿ ಮಂಗಳಸೂತ್ರಕ್ಕೂ ಬೊಟ್ಟಿಟ್ಟು ನಮಸ್ಕರಿಸುತ್ತಾರೆ. ಫ್ಯಾಷನ್‌ಗಾಗಿ ಮಂಗಳಸೂತ್ರವನ್ನು ತೆಗೆಯಬಾರದು ಎಂದು ಹಿರಿಯರು ಹೇಳುತ್ತಾರೆ.
66
ಪುರುಷಾರ್ಥಗಳನ್ನು ನೆನಪಿಸುವ ಮೂರು ಗಂಟು
ಮಾನವ ಜೀವನದಲ್ಲಿ ಪಾಲಿಸಬೇಕಾದ ಪ್ರಮುಖ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ. ಈ ಮೂರನ್ನೂ ದಂಪತಿಗಳು ಹಂಚಿಕೊಂಡು ಮೋಕ್ಷದತ್ತ ಸಾಗುವುದೇ ಈ ಮೂರು ಗಂಟುಗಳ ಹಿಂದಿನ ಇನ್ನೊಂದು ಅರ್ಥ. ಮೊದಲ ಗಂಟು 'ಧರ್ಮ'ದ ಸಂಕೇತ. ಇಬ್ಬರೂ ಧರ್ಮದ ಮಾರ್ಗದಲ್ಲಿ ಸಾಗಬೇಕು ಎಂದು ಸೂಚಿಸುತ್ತದೆ. ಎರಡನೇ ಗಂಟು 'ಅರ್ಥ'ದ ಸಂಕೇತ. ಸಂಸಾರವನ್ನು ಚೆನ್ನಾಗಿ ನಡೆಸಲು ಬೇಕಾದ ಸಂಪತ್ತು ಮತ್ತು ಶ್ರಮವನ್ನು ಹಂಚಿಕೊಳ್ಳುವುದನ್ನು ಇದು ತಿಳಿಸುತ್ತದೆ. ಮೂರನೇ ಗಂಟು 'ಕಾಮ'ದ ಸಂಕೇತ. ಸುಖಮಯ ಸಂಸಾರ ನಡೆಸುತ್ತಾ ವಂಶಾಭಿವೃದ್ಧಿಗೆ ಕಾರಣರಾಗಬೇಕು ಎಂಬುದನ್ನು ನೆನಪಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.