snake behavior : ಪ್ರಪಂಚದಲ್ಲಿ 3,000ಕ್ಕೂ ಹೆಚ್ಚು ಜಾತಿಯ ಹಾವುಗಳಿವೆ. ಅವುಗಳಲ್ಲಿ ಕೆಲವು ಅತ್ಯಂತ ವಿಷಕಾರಿ. ಆದರೆ ಹೆಚ್ಚಿನ ಹಾವುಗಳು ಯಾವುದೇ ಕಾರಣವಿಲ್ಲದೆ ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ. ಅವುಗಳು ತಮ್ಮ ಜೀವಕ್ಕೆ ಅಪಾಯವಿದೆ ಎಂದು ಭಾವಿಸಿದಾಗ ಮಾತ್ರ ಪ್ರತಿಕ್ರಿಯಿಸುತ್ತವೆ.
ಹಾವು ದ್ವೇಷ ಇಟ್ಟುಕೊಂಡು ಮನುಷ್ಯನ ಮೇಲೆ ದಾಳಿ ನಡೆಸುತ್ತೆ ಎನ್ನುವ ನಂಬಿಕೆ ನಮ್ಮಲ್ಲಿದೆ. ಹಾವು ಮನುಷ್ಯರನ್ನು ಪತ್ತೆ ಮಾಡುತ್ತಾ ಎನ್ನುವ ಪ್ರಶ್ನೆ ಅನೇಕಾನೇಕ ವರ್ಷಗಳಿಂದ ನಮ್ಮನ್ನು ಕಾಡುತ್ತಿದೆ. ಈ ಪ್ರಶ್ನೆಗೆ ಉತ್ತರ ಹುಡುಕಲು ವಿಜ್ಞಾನಿಗಳು ಹಲವು ವರ್ಷಗಳಿಂದ ಸಂಶೋಧನೆ ನಡೆಸುತ್ತಿದ್ದಾರೆ. ಈಗ ಬಂದಿರುವ ಕೆಲವು ಅಧ್ಯಯನಗಳು ಕುತೂಹಲಕಾರಿ ಮಾಹಿತಿಯನ್ನು ಬಹಿರಂಗಪಡಿಸಿವೆ.
26
ಹಾವುಗಳಿಗೆ ನೆನಪಿನ ಶಕ್ತಿ ಇದೆಯೇ?
ವಿಜ್ಞಾನಿಗಳ ಪ್ರಕಾರ ಹಾವುಗಳಿಗೆ ನೆನಪಿನ ಶಕ್ತಿ ಇದೆ. ಹಿಂದೆ ಹಾವುಗಳಿಗೆ ಸ್ಮರಣಶಕ್ತಿ ತುಂಬಾ ಕಡಿಮೆ ಎಂದು ಭಾವಿಸಲಾಗುತ್ತಿತ್ತು. ಆದರೆ PubMedನಲ್ಲಿ ಪ್ರಕಟವಾದ ಸಂಶೋಧನೆ ಈ ಕಲ್ಪನೆಯನ್ನು ಬದಲಿಸಿದೆ. ವಿಜ್ಞಾನಿಗಳ ಪ್ರಕಾರ, ಹಾವುಗಳು ತಮ್ಮ ಆಹಾರ ಸಿಗುವ ಸ್ಥಳಗಳು, ಸುರಕ್ಷಿತ ಅಡಗುತಾಣಗಳು ಮತ್ತು ಅಪಾಯ ಎದುರಿಸಿದ ಪ್ರದೇಶಗಳನ್ನು ನೆನಪಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿವೆ. ಒಮ್ಮೆ ಅಪಾಯ ಅನುಭವಿಸಿದ ಜಾಗವನ್ನು ಮತ್ತೆ ತಪ್ಪಿಸಲು ಅವು ಪ್ರಯತ್ನಿಸುತ್ತವೆ.
36
ಮನುಷ್ಯರನ್ನು ಗುರುತಿಸಬಲ್ಲದೇ?
ಈ ವಿಷ್ಯ ಮತ್ತಷ್ಟು ಇಂಟರೆಸ್ಟಿಂಗ್ ಆಗಿದೆ. ಹಾವುಗಳು ಮಾನವನ ಮುಖವನ್ನು ಗುರುತಿಸುವುದಿಲ್ಲ. ಏಕೆಂದರೆ ಸಸ್ತನಿಗಳಂತೆ ಮುಖ ಗುರುತಿಸಲು ಅಗತ್ಯವಾದ ಮೆದುಳಿನ ಭಾಗ (Neocortex) ಅವುಗಳಲ್ಲಿ ಇಲ್ಲ. ಆದ್ರೆ ಅವುಗಳು ವಾಸನೆ, ರಾಸಾಯನಿಕ ಸಂಕೇತಗಳು ಮತ್ತು ನೆಲದ ಕಂಪನಗಳ ಮೂಲಕ ತಮ್ಮ ಸುತ್ತಲಿನ ಪರಿಸರವನ್ನು ಅರ್ಥಮಾಡಿಕೊಳ್ಳುತ್ತವೆ. ಹಾವು ತನ್ನ ನಾಲಿಗೆಯನ್ನು ಹೊರಗೆ ಚಾಚಿ ಗಾಳಿಯಲ್ಲಿರುವ ಸೂಕ್ಷ್ಮ ರಾಸಾಯನಿಕ ಕಣಗಳನ್ನು ಸಂಗ್ರಹಿಸುತ್ತದೆ. ಈ ಮಾಹಿತಿಯನ್ನು ತಲೆಯಲ್ಲಿರುವ ಜಾಕೋಬ್ಸನ್ ಅಂಗ (Jacobson's Organ) ವಿಶ್ಲೇಷಿಸುತ್ತದೆ. ಇದರಿಂದ ಪರಿಚಿತ ವಾಸನೆ ಮತ್ತು ಹೊಸ ವಾಸನೆಗಳ ನಡುವಿನ ವ್ಯತ್ಯಾಸವನ್ನು ಅದು ತಿಳಿದುಕೊಳ್ಳುತ್ತದೆ.
ಹಾವುಗಳನ್ನು ಪ್ರತಿದಿನ ನೋಡಿಕೊಳ್ಳುವ ಆರೈಕೆದಾರರು ಬಂದಾಗ ಕೆಲವು ಹಾವುಗಳು ಶಾಂತವಾಗಿರುವುದನ್ನು ಗಮನಿಸಲಾಗಿದೆ. ಆದರೆ ಹೊಸ ವ್ಯಕ್ತಿ ಹತ್ತಿರ ಬಂದರೆ ಹೆಚ್ಚು ಎಚ್ಚರಿಕೆಯಿಂದ ವರ್ತಿಸುತ್ತವೆ. ಇದರಿಂದ ಕೆಲವು ವಿಜ್ಞಾನಿಗಳು, ಹಾವುಗಳು ಮುಖವನ್ನು ಅಲ್ಲ, ವಾಸನೆಯನ್ನು ನೆನಪಿಟ್ಟುಕೊಳ್ಳುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
56
ವಿಜ್ಞಾನಿಗಳ ಅಭಿಪ್ರಾಯದಲ್ಲಿ ಭಿನ್ನತೆ
ಈ ವಿಷ್ಯದಲ್ಲಿ ವಿಜ್ಞಾನಿಗಳ ಅಭಿಪ್ರಾಯದಲ್ಲಿ ಭಿನ್ನತೆ ಇದೆ. 2025ರಲ್ಲಿ Frontiers in Ethology ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಹಾವುಗಳು ಪರಿಚಿತ ಮನುಷ್ಯರನ್ನು ವಾಸನೆಯ ಮೂಲಕ ಖಚಿತವಾಗಿ ಗುರುತಿಸುತ್ತವೆ ಎಂಬುದಕ್ಕೆ ಇನ್ನೂ ಸಾಕಷ್ಟು ವೈಜ್ಞಾನಿಕ ಪುರಾವೆಗಳು ಲಭ್ಯವಿಲ್ಲ. ಅಂದರೆ, ಹಾವುಗಳಿಗೆ ಕೆಲವು ವಾಸನೆಗಳು ಪರಿಚಿತವಾಗಬಹುದು. ಆದರೆ ಅದರಿಂದ ಅವು ಮನುಷ್ಯರೊಂದಿಗೆ ಭಾವನಾತ್ಮಕ ಬಾಂಧವ್ಯ ಬೆಳೆಸುತ್ತವೆ ಅಥವಾ ಎಂದಿಗೂ ದಾಳಿ ಮಾಡುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ.
66
ಇದು ತಿಳಿದಿರಲಿ
ತಜ್ಞರ ಪ್ರಕಾರ, ನಾಗರಹಾವು (King Cobra) ಅತ್ಯಂತ ಬುದ್ಧಿವಂತ ಹಾವುಗಳಲ್ಲಿ ಒಂದಾಗಿದೆ. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಪ್ರತಿಕ್ರಿಯಿಸುವ ಸಾಮರ್ಥ್ಯ ಇದಕ್ಕಿದೆ. ಹಾವುಗಳು ಮಾನವನ ಮುಖವನ್ನು ಗುರುತಿಸುವುದಿಲ್ಲ. ಆದರೆ ವಾಸನೆ, ರಾಸಾಯನಿಕ ಸಂಕೇತಗಳು ಮತ್ತು ಪರಿಸರದ ನೆನಪಿನ ಆಧಾರದ ಮೇಲೆ ಪ್ರತಿಕ್ರಿಯಿಸಬಹುದು. ಆದರೂ ಹಾವು ಯಾವಾಗ ಹೇಗೆ ವರ್ತಿಸುತ್ತದೆ ಎಂಬುದನ್ನು ಖಚಿತವಾಗಿ ಊಹಿಸಲು ಸಾಧ್ಯವಿಲ್ಲ. ಯಾವುದೇ ಹಾವನ್ನು ಕಂಡರೂ ಅದನ್ನು ಮುಟ್ಟಲು ಅಥವಾ ಪರೀಕ್ಷಿಸಲು ಹೋಗಬೇಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.