ನಿಮ್ಮ ವೃತ್ತಿಜೀವನವಿರಲಿ, ದೈಹಿಕ ಸಾಮರ್ಥ್ಯವಿರಲಿ ಅಥವಾ ವೈಯಕ್ತಿಕ ಜೀವನವಿರಲಿ—ನೀವು ಈಗ ಇರುವ ಸ್ಥಳಕ್ಕೂ ಮತ್ತು ನೀವು ತಲುಪಬೇಕಾದ ಗುರಿಗೂ ನಡುವೆ ಇರುವ "ಅಂತರ"ವನ್ನು ಕೇವಲ ಶಿಸ್ತಿನಿಂದ ಮಾತ್ರ ತುಂಬಲು ಸಾಧ್ಯ. ಒಬ್ಬ ಮೋಟಿವೇಶನಲ್ ಸ್ಪೀಕರ್ ಆಗಿ, ಲೈಫ್ ಕೋಚ್ ಆಗಿ ನಾನು ಕಲಿತ ಅತ್ಯಂತ ಶಕ್ತಿಯುತ ಪಾಠವೆಂದರೆ—ನಾನು ಇತರರಿಗೆ ಬೋಧಿಸುವ ವಿಷಯವನ್ನು ನಾನೇ ಮೊದಲು ಬದುಕಿ ತೋರಿಸುವುದು. ಯಾವುದೇ ಇರಲಿ, ಪ್ರಾರಂಭಿಸಲು "ಸರಿಯಾದ ಸಮಯಕ್ಕಾಗಿ" ಕಾಯುವುದನ್ನು ನಿಲ್ಲಿಸಿ. ನೀವು ಯಾವಾಗ ರೆಡಿ ಇರುತ್ತೀರೋ ಆಗಲೇ ಪ್ರಕ್ರಿಯೆಯೂ ಆರಂಭವಾಗುತ್ತದೆ.
ನೀವು ನಿಮ್ಮ “ಆರೋಗ್ಯದ ಬ್ಯಾಂಕ್”ನಲ್ಲಿ ಹೂಡಿಕೆ ಮಾಡುತ್ತಿದ್ದೀರಾ ಅಥವಾ ಕೇವಲ ಅನಾರೋಗ್ಯದ "ಬಡ್ಡಿ" ಕಟ್ಟುತ್ತಿದ್ದೀರಾ? ಎಂದು ಯೋಚಿಸಿ.
ನಾವು ಆರ್ಥಿಕ ಯೋಜನೆಗಳು, ಎಸ್‌ಐಪಿ (SIP), ಆಸ್ತಿ ನಿರ್ವಹಣೆಯ ಬಗ್ಗೆ ಸಾಕಷ್ಟು ಮಾತನಾಡುತ್ತೇವೆ. ಆದರೆ ಒಂದು ಖಾತೆಯು ಸಂಪೂರ್ಣವಾಗಿ ಖಾಲಿಯಾಗುವವರೆಗೂ ನಾವು ಅದರ ಬಗ್ಗೆ ಗಮನವನ್ನೇ ಹರಿಸುವುದಿಲ್ಲ. ಅದೇ ನಮ್ಮ ಆರೋಗ್ಯ. ಆಗ ಕೇವಲ ಗುರಿಯ ಮೇಲೆ ಗಮನವಿತ್ತು, ಆದರೆ ಸ್ವಯಂ-ಆರೈಕೆ (Self-care) ಕೊನೆಯ ಆದ್ಯತೆಯಾಗಿತ್ತು. ಈಗ ಇತರರನ್ನು ಸಬಲಗೊಳಿಸಲು, ಮೊದಲು ನಾನು ಸಬಲನಾಗಬೇಕು ಎಂಬ ಸತ್ಯದ ಅರಿವಾಗಿದೆ.
ಪ್ರತಿದಿನ ಬೆಳಗಿನ ನಡಿಗೆ, ಗುರಿಯಾಗಿಟ್ಟುಕೊಂಡ ಆ 18000 ಹೆಜ್ಜೆಗಳ ಪ್ರತಿ ಹೆಜ್ಜೆ ಮತ್ತು ಶಿಸ್ತುಬದ್ಧವಾದ ಪ್ರತಿಯೊಂದು ಊಟವೂ ನನ್ನ "ಆರೋಗ್ಯದ ಬ್ಯಾಂಕ್"ಗೆ ನಾನು ಮಾಡುತ್ತಿರುವ ಠೇವಣಿಯಾಗಿದೆ.