ಯುನೆಸ್ಕೋ 1992ರಲ್ಲಿ 'ಮೆಮೊರಿ ಆಫ್ ದಿ ವರ್ಲ್ಡ್' ಕಾರ್ಯಕ್ರಮವನ್ನು ಆರಂಭಿಸಿತು. ಇದು ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ ಹೊಂದಿರುವ ದಾಖಲೆಗಳು ನಾಶವಾಗದಂತೆ ಅಥವಾ ಹಾಳಾಗದಂತೆ ಸಂರಕ್ಷಿಸುವುದು ಮತ್ತು ಮುಂದಿನ ಪೀಳಿಗೆಗೆ ಅವುಗಳನ್ನು ತಲುಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಈ ಕಾರ್ಯಕ್ರಮದಡಿ ಅಂತಾರಾಷ್ಟ್ರೀಯ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ದಾಖಲೆಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಜಾಗತಿಕ ಮಹತ್ವ ಹೊಂದಿರುವ ದಾಖಲೆಗಳಿಗೆ ಅಂತಾರಾಷ್ಟ್ರೀಯ ಪಟ್ಟಿಯಲ್ಲಿ ಸ್ಥಾನ ನೀಡಿದರೆ, ನಿರ್ದಿಷ್ಟ ಭೌಗೋಳಿಕ ಮತ್ತು ಸಾಂಸ್ಕೃತಿಕ ಪ್ರದೇಶಗಳಿಗೆ ಮಹತ್ವದ್ದಾಗಿರುವ ದಾಖಲೆಗಳನ್ನು ಪ್ರಾದೇಶಿಕ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶದ ಪಟ್ಟಿಯನ್ನು MOWCAP ನಿರ್ವಹಿಸುತ್ತದೆ.
ಭಾರತದಲ್ಲಿ ಈ ಕಾರ್ಯಕ್ರಮದ ಜವಾಬ್ದಾರಿಯನ್ನು ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್ (IGNCA) ನಿರ್ವಹಿಸುತ್ತಿದೆ. 2014ರಲ್ಲಿ ಇದನ್ನು ಭಾರತದ ನೋಡಲ್ ಸಂಸ್ಥೆಯಾಗಿ ನೇಮಿಸಲಾಯಿತು. ದಾಖಲೆಗಳನ್ನು ನಾಮನಿರ್ದೇಶನ ಮಾಡುವುದು, ಹಳೆಯ ಹಸ್ತಪ್ರತಿಗಳ ಸಂರಕ್ಷಣೆ, ದಾಖಲೆಗಳ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಸೇರಿದಂತೆ ಹಲವು ಕಾರ್ಯಗಳನ್ನು ಈ ಸಂಸ್ಥೆ ಮಾಡುತ್ತಿದೆ. ಈ ಹಿಂದೆಯೂ ಭಾರತ ಹಲವು ಮಹತ್ವದ ಐತಿಹಾಸಿಕ ದಾಖಲೆಗಳಿಗೆ ಅಂತಾರಾಷ್ಟ್ರೀಯ ಮನ್ನಣೆ ಪಡೆದುಕೊಂಡಿದೆ. ಋಗ್ವೇದ, ಶೈವ ಹಸ್ತಪ್ರತಿಗಳು, ತಮಿಳಿನ ವೈದ್ಯಕೀಯ ಗ್ರಂಥಗಳು, ಕಾಲಚಕ್ರ ತಂತ್ರದ ವ್ಯಾಖ್ಯಾನಗಳು ಮತ್ತು ಅಭಿನವಗುಪ್ತನ ಕೃತಿಗಳು ಇವುಗಳಲ್ಲಿ ಸೇರಿವೆ.
ಏಷ್ಯಾ-ಪೆಸಿಫಿಕ್ ಪ್ರಾದೇಶಿಕ ಪಟ್ಟಿಯಲ್ಲಿ 2023ರಲ್ಲಿ ಚಿತ್ರಗಳೊಂದಿಗೆ ರಚಿಸಲಾದ ರಾಮಚರಿತಮಾನಸ, ಸಂಸ್ಕೃತ ಕಾವ್ಯಶಾಸ್ತ್ರದ ಕೃತಿ 'ಸಹೃದಯಾಲೋಕ-ಲೋಚನ' ಮತ್ತು 15ನೇ ಶತಮಾನದ ಅಪರೂಪದ ಪಂಚತಂತ್ರ ಹಸ್ತಪ್ರತಿಗೂ ಸ್ಥಾನ ದೊರೆತಿತ್ತು.
ಇದೀಗ ಮೂರು ಪ್ರಮುಖ ಕೃತಿಗಳಿಗೆ ದೊರೆತಿರುವ ಮಾನ್ಯತೆ ಭಾರತದ ದಾಖಲೆಗಳ ಸಂರಕ್ಷಣೆಯ ಪ್ರಯತ್ನಗಳಿಗೆ ಮತ್ತಷ್ಟು ಬಲ ನೀಡಿದೆ. 2025ರಲ್ಲಿ IGNCA ದಕ್ಷಿಣ ಏಷ್ಯಾದಲ್ಲಿ ಯುನೆಸ್ಕೋದ ಮೆಮೊರಿ ಆಫ್ ದಿ ವರ್ಲ್ಡ್ ಕಾರ್ಯಕ್ರಮದ ಕುರಿತು ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಕಾರ್ಯಾಗಾರವನ್ನು ಆಯೋಜಿಸಿತ್ತು. ಪ್ರಾದೇಶಿಕ ಸಹಕಾರ, ಐತಿಹಾಸಿಕ ದಾಖಲೆಗಳ ಸಂರಕ್ಷಣೆ ಮತ್ತು ಜಾಗತಿಕ ಪಾರಂಪರಿಕ ಪಟ್ಟಿಗಳಲ್ಲಿ ದಕ್ಷಿಣ ಏಷ್ಯಾಕ್ಕೆ ಸೂಕ್ತ ಪ್ರಾತಿನಿಧ್ಯ ದೊರೆಯುವ ಅಗತ್ಯದ ಬಗ್ಗೆ ಈ ಕಾರ್ಯಕ್ರಮದಲ್ಲಿ ಚರ್ಚಿಸಲಾಗಿತ್ತು.
ಮಹಾಭಾರತ, ಅರ್ಥಶಾಸ್ತ್ರ ಮತ್ತು ರಾಜತರಂಗಿಣಿಗೆ ದೊರೆತಿರುವ ಈ ಮಾನ್ಯತೆ ಕೇವಲ ಭಾರತದ ಸಾಂಸ್ಕೃತಿಕ ಸಾಧನೆಯಲ್ಲ. ಇವುಗಳ ಜಾಗತಿಕ ಮಹತ್ವಕ್ಕೂ ದೊರೆತಿರುವ ಮನ್ನಣೆಯಾಗಿದೆ. ಇತಿಹಾಸದ ಬರವಣಿಗೆ, ಮಹಾಕಾವ್ಯ ಸಾಹಿತ್ಯ ಮತ್ತು ರಾಜಕೀಯ ತತ್ವಶಾಸ್ತ್ರಗಳು ನಾಗರಿಕತೆಗಳ ಬೆಳವಣಿಗೆಗೆ ಹೇಗೆ ಕೊಡುಗೆ ನೀಡಿವೆ ಹಾಗೂ ತಲೆಮಾರುಗಳಿಂದ ಜ್ಞಾನವನ್ನು ಹೇಗೆ ಮುಂದಕ್ಕೆ ಕೊಂಡೊಯ್ದಿವೆ ಎಂಬುದನ್ನು ಈ ಮೂರು ಕೃತಿಗಳು ತೋರಿಸಿಕೊಡುತ್ತವೆ.
ಐತಿಹಾಸಿಕ ದಾಖಲೆಗಳನ್ನು ಸಂರಕ್ಷಿಸುವುದು ಮತ್ತು ಸಾಂಸ್ಕೃತಿಕ ಜ್ಞಾನವನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಇಂದಿನ ದಿನಗಳಲ್ಲಿ ಅತ್ಯಂತ ಮಹತ್ವದ್ದಾಗಿದೆ. ಇಂತಹ ಸಂದರ್ಭದಲ್ಲಿ ಯುನೆಸ್ಕೋದ ಈ ಮಾನ್ಯತೆ ಭಾರತದ ಜ್ಞಾನ ಪರಂಪರೆಯ ಮಹತ್ವವನ್ನು ಮತ್ತೊಮ್ಮೆ ಜಗತ್ತಿಗೆ ಪರಿಚಯಿಸಿದೆ. ಜತೆಗೆ ಏಷ್ಯಾ-ಪೆಸಿಫಿಕ್ ಪ್ರದೇಶದ ಸಾಮೂಹಿಕ ಐತಿಹಾಸಿಕ ದಾಖಲೆಗಳ ಪರಂಪರೆಯಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.