ಎಂಜಿನ್ ಇಲ್ಲದೆ 6 ಕಿ.ಮೀ ಚಲಿಸಿದ ರೈಲು ಬೋಗಿಗಳು, ಹಳಿ ತಪ್ಪಿದ ಅವಘಡ: ಬೆಂಗಳೂರು-ಚೆನ್ನೈ ರೈಲು ಸಂಚಾರ ಅಸ್ತವ್ಯಸ್ತ!

Published : Nov 02, 2026, 09:40 AM IST

ಎಂಜಿನ್ ಇಲ್ಲ, ಚಾಲಕನಿಲ್ಲ... ಆದರೂ ಬರೋಬ್ಬರಿ 7 ಖಾಲಿ ರೈಲು ಬೋಗಿಗಳು ಹಳಿಯ ಮೇಲೆ 6 ಕಿಲೋಮೀಟರ್ ವೇಗವಾಗಿ ಓಡಿ ಕೊನೆಗೆ ಹಳಿತಪ್ಪಿ ಬಿದ್ದಿರುವ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇದರಿಂದಾಗಿ ಬೆಂಗಳೂರು-ಚೆನ್ನೈ ನಡುವಿನ ಪ್ರಮುಖ ರೈಲುಗಳ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ.

PREV
15
ಎಂಜಿನ್ ಇಲ್ಲದೆಯೇ ಚಲಿಸಿದ ಬೋಗಿಗಳು

ತಮಿಳುನಾಡಿನ ತಿರುಪತ್ತೂರು ಜಿಲ್ಲೆಯ ಜೋಲಾರ್‌ಪೇಟ್ಟೈ ಜಂಕ್ಷನ್ ರೈಲ್ವೆ ಯಾರ್ಡ್‌ನಲ್ಲಿ ಭಾನುವಾರ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಯಾರೊಬ್ಬರ ಗಮನಕ್ಕೂ ಬಾರದೆ ರೈಲ್ವೆ ಯಾರ್ಡ್‌ನಲ್ಲಿ ನಿಲ್ಲಿಸಲಾಗಿದ್ದ ಬರೋಬ್ಬರಿ ಏಳು ಖಾಲಿ ರೈಲ್ವೆ ಬೋಗಿಗಳು, ಎಂಜಿನ್ ಇಲ್ಲದೆಯೇ ಹಳಿಯ ಇಳಿಜಾರಿನಲ್ಲಿ ತಾವಾಗಿಯೇ ಚಲಿಸಲು ಆರಂಭಿಸಿವೆ. ಹೀಗೆ ಸುಮಾರು 6 ಕಿಲೋಮೀಟರ್ ದೂರದವರೆಗೆ ಮುಖ್ಯ ಹಳಿಯಲ್ಲೇ ಅತಿವೇಗವಾಗಿ ಓಡಿದ ಬೋಗಿಗಳು, ತಮಲೇರಿ ಮುತ್ತೂರು ಬಳಿ ದಿಢೀರನೆ ಹಳಿ ತಪ್ಪಿ ಬಿದ್ದಿವೆ.

25
ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ

ಈ ಘಟನೆಯಿಂದಾಗಿ ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ದಕ್ಷಿಣ ಭಾರತದ ಅತ್ಯಂತ ಜನನಿಬಿಡ ರೈಲು ಮಾರ್ಗವಾದ ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ರೈಲು ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

35
ಗ್ಯಾಸ್ ಕಟ್ಟರ್, ಜೆಸಿಬಿ ಬಳಸಿ ತೆರವು ಕಾರ್ಯಾಚರಣೆ:

ಬೋಗಿಗಳು ಹಳಿ ತಪ್ಪಿದ ವಿಷಯ ತಿಳಿಯುತ್ತಿದ್ದಂತೆಯೇ ರೈಲ್ವೆ ಉನ್ನತಾಧಿಕಾರಿಗಳು ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಹಳಿಯ ಮೇಲೆ ಬಿದ್ದಿದ್ದ ಭಾರೀ ಬೋಗಿಗಳನ್ನು ತೆರವುಗೊಳಿಸಲು ಹರಸಾಹಸ ಪಡಬೇಕಾಯಿತು. ತಕ್ಷಣವೇ ಗ್ಯಾಸ್ ಕಟಿಂಗ್ ಉಪಕರಣಗಳನ್ನು (Gas Cutters) ಬಳಸಿ ಬೋಗಿಗಳ ಸಂಪರ್ಕ ಭಾಗಗಳನ್ನು ಬೇರ್ಪಡಿಸಲಾಯಿತು. ಬಳಿಕ ಜೆಸಿಬಿ ಯಂತ್ರಗಳ ಮೂಲಕ ಬೋಗಿಗಳನ್ನು ಹಳಿಯಿಂದ ಪಕ್ಕಕ್ಕೆ ತಳ್ಳಿ ಟ್ರ್ಯಾಕ್ ಸುಸ್ಥಿತಿಗೆ ತರುವ ಕಾರ್ಯ ಸಮರೋಪಾದಿಯಲ್ಲಿ ನಡೆಯಿತು.

45
ಬೆಂಗಳೂರು-ಚೆನ್ನೈ ಹಲವು ರೈಲುಗಳು ಗಂಟೆಗಟ್ಟಲೆ ವಿಳಂಬ!

ಈ ಅನಿರೀಕ್ಷಿತ ಅವಘಡದಿಂದಾಗಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಮೆಜೆಸ್ಟಿಕ್), ಯಶವಂತಪುರ ಹಾಗೂ ಚೆನ್ನೈ ಸೆಂಟ್ರಲ್ ನಡುವೆ ಸಂಚರಿಸುವ ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳು ಮಾರ್ಗಮಧ್ಯದಲ್ಲೇ ಗಂಟೆಗಟ್ಟಲೆ ನಿಲ್ಲುವಂತಾಯಿತು. ಸಾವಿರಾರು ಪ್ರಯಾಣಿಕರು ನಿಲ್ದಾಣಗಳಲ್ಲಿ ಮತ್ತು ರೈಲಿನೊಳಗೆ ಕಾದು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಸಂಚಾರ ಸಹಜ ಸ್ಥಿತಿಗೆ ತರಲು ರೈಲ್ವೆ ಇಂಜಿನಿಯರಿಂಗ್ ತಂಡ ಸತತ ಶ್ರಮ ವಹಿಸಿದೆ.

55
ರೈಲ್ವೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ?

ಯಾರ್ಡ್‌ನಲ್ಲಿ ನಿಲ್ಲಿಸಲಾಗುವ ರೈಲು ಬೋಗಿಗಳು ಉರುಳದಂತೆ ಹ್ಯಾಂಡ್‌ಬ್ರೇಕ್ (Handbrake) ಹಾಕುವುದು ಅಥವಾ ಚಕ್ರಗಳಿಗೆ ಸ್ಕಿಡ್ ಬ್ಲಾಕ್ ಇಡುವುದು ನಿಯಮ. ಆದರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಇದು ಜಾರಿಯಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಘಟನೆ ಕುರಿತು ದಕ್ಷಿಣ ರೈಲ್ವೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories