ಪುಟ್ಟ ಮಕ್ಕಳು ಸೋಫದ ಮೇಲೆ ಅಥವಾ ಹಾಸಿಗೆಯಲ್ಲಿ ಮಲಗಿರುವಾಗ ನಿದ್ರೆಯಲ್ಲಿ ಅಥವಾ ಗೊತ್ತಿಲ್ಲದೆ ಬೀಳುವುದು ಸಾಮಾನ್ಯ. ಆಗ ಪೋಷಕರು ಮಾತ್ರವಲ್ಲದೆ ಅಕ್ಕಪಕ್ಕದ ಮನೆಯವರು ಕೂಡ ಆತಂಕಕ್ಕೆ ಒಳಗಾಗುತ್ತಾರೆ.
ಕಂದಮ್ಮ ಬಿದ್ದಾಗ ಮೊದಲು ಅಳುವನ್ನು ನಿಲ್ಲಿಸಿ ಎಲ್ಲಿ ಗಾಯ ಆಗಿದೆ ಎಂದು ನೋಡುತ್ತೀವಿ. ಮಗು ಅಳು ನಿಲ್ಲಿಸಿದ ತಕ್ಷಣ ಎಲ್ಲವೂ ಸರಿ ಹೋಗಿದೆ ಎಂದುಕೊಂಡು ವೈದ್ಯರಿಗೆ ತೋರಿಸದೆ ಸುಮ್ಮನಾಗುತ್ತೀವಿ. ಆದರೆ ಒಳಗಿನಿಂದ ಏನಾದರೂ ಆಗಿದ್ಯಾ ಎಂದು ಯೋಚನೆ ಮಾಡಬೇಕಿದೆ.
ಮಗು ಹಾಸಿಗೆಯಿಂದ ಬಿದ್ದಾಗ ಮೊದಲು ಗಾಯ ಎಲ್ಲಿ ಆಗಿದೆ? ಗಾಯ ಯಾವ ಪ್ರಮಾಣದಲ್ಲಿ ಆಗಿದೆ ಎಂದು ಚೆಕ್ ಮಾಡಬೇಕು. ರಕ್ತಸ್ರಾವ ಅಥವಾ ಮೂಗೇಟು ಯಾವುದು ಎಂದು ತಿಳಿದುಕೊಳ್ಳಬೇಕಿದೆ.
ಅಳು ನಿಲ್ಲಿಸಿದ ಮೇಲೆ ಮಗು ನಡೆಯುವ ಶೈಲಿ, ಕುಳಿತುಕೊಳ್ಳವ ರೀತಿ ಅಥವಾ ತೀರ ಕಿರಿಕಿರಿ ಮಾಡಿಕೊಳ್ಳುತ್ತಿದ್ದರೆ ಗಾಯದ ಬಗ್ಗೆ ಗಮನ ಕೊಡಬೇಕು. ತಕ್ಷಣವೇ ಕೋಲ್ಡ್ ಪ್ರೆಸ್ ಅಥವಾ ಐ ಪ್ಯಾಕ್ ಇಡಬೇಕಾಗುತ್ತದೆ.
ಅಪ್ಪಿತಪ್ಪಿ ಮಗು ಬಿದ್ದ ಕೆಲವೇ ನಿಮಿಷಗಳಲ್ಲಿ ವಾಂತಿ ಮಾಡಿದರೆ ಅಥವಾ ತುಂಬಾ ನಿದ್ರೆ ಮಾಡಿದರೆ ತಪ್ಪದೆ ವೈದ್ಯರನ್ನು ಸಂಪರ್ಕ ಮಾಡಬೇಕು. ಇದು ಪೋಷಕರಿಗೆ ಸಿಗುವ ಮೊದಲ ಸೂಚನೆ.
ಅದರಲ್ಲೂ ಹಾಸಿಗೆ ಅಥವಾ ಸೋಫಾದಿಂದ ಬೀಳುವ ಮಕ್ಕಳಿಗೆ ಮೆದುಳು ಪೆಟ್ಟು ಬೀಳುವ ಸಾಧ್ಯತೆ ಹೆಚ್ಚಿರುತ್ತದೆ. ತೀರ ಎತ್ತರದ ಹಾಸಿಗೆ ಮೇಲೆ ಮಲಗಿಸಿದರೆ ಅಕ್ಕಪಕ್ಕ ಗಟ್ಟಿ ತಲೆದಿಂಬು ಅಥವಾ ಗೊಂಬೆಗಳನ್ನು ಇಡಬೇಕು.
ಮಗು ಬಿದ್ದಾಗ ಪೋಷಕರು ಗಾಬರಿ ಆಗಿ ಸ್ಕ್ಯಾನ್ ಮಾಡಿಸಲು ಮುಂದಾಗುತ್ತಾರೆ. ಆದರೆ ಪುಟ್ಟ ಮಕ್ಕಳು ಸಣ್ಣ ಪುಟ್ಟ ಗಾಯಗಳನ್ನು ತಾವೇ ಸರಿ ಮಾಡಿಕೊಳ್ಳುತ್ತಾರೆ. ಗಮನ ಮತ್ತೊಂದು ಕಡೆ ಹೋದಾಗ ನೋವು ಮರೆಯುತ್ತಾರೆ.
ತೀರ ಸೂಕ್ಷ್ಮವಾದ ವಿಚಾರ ಏನೆಂದರೆ ಮಕ್ಕಳ ಮೂಳೆಗಳಿಗೆ ಪೆಟ್ಟು ಬಿದ್ದರೆ ಮುಂದೆ ಕಷ್ಟವಾಗುತ್ತದೆ. ಹೀಗಾಗಿ ಮಂಡಿ, ಹಿಮ್ಮಡಿ, ಕೈ ಬೆರಳುಗಳಲ್ಲಿ ಏನಾದರೂ ವ್ಯತ್ಯಾಸ ಕಂಡರೆ ತಕ್ಷಣವೇ ವೈದ್ಯರಿಗೆ ತೋರಿಸಬೇಕು.