ಡಿಟಾಕ್ಸ್ ವಾಟರ್ ಸೇವಿಸಿ ದೇಹವನ್ನು ನ್ಯಾಚುರಲಾಗಿ ನಿರ್ವಿಷಗೊಳಿಸಿ

First Published Dec 31, 2022, 6:48 PM IST

ನ್ಯೂಟ್ರಿಷನಿಸ್ಟ್ ಲಾವ್ನೀತ್ ಬಾತ್ರಾ ಅವರು ದೇಹದ ಕೊಳೆಯನ್ನು, ವಿಷವನ್ನು ನೈಸರ್ಗಿಕ ರೀತಿಯಲ್ಲಿ ತೆಗೆದುಹಾಕಲು ಡಿಟಾಕ್ಸ್ ವಾಟರ್ ರೆಸಿಪಿಗಳನ್ನು ಹಂಚಿಕೊಂಡಿದ್ದಾರೆ. ಇಲ್ಲಿ ನೀವು ಅವುಗಳ ಬಳಕೆಯಿಂದ ಏನೆಲ್ಲಾ ಪ್ರಯೋಜನಗಳಿವೆ ಮತ್ತು ಅದನ್ನು ತಯಾರಿಸುವ ವಿಧಾನವನ್ನು ತಿಳಿದುಕೊಳ್ಳಬಹುದು.

ಆರೋಗ್ಯಕರವಾಗಿರಲು, ದೇಹವು ಆಹಾರ ಮತ್ತು ಪಾನೀಯದಿಂದ ಹೀರಿಕೊಳ್ಳುವ ಸರಿಯಾದ ಪ್ರಮಾಣದ ಪೋಷಕಾಂಶಗಳ ಅಗತ್ಯವಿದೆ. ಆದರೆ ಕಳಪೆ ಜೀವನಶೈಲಿ, ರೋಗಗಳಿಂದಾಗಿ, ಈ ಸಾಮರ್ಥ್ಯವನ್ನು ಕಡಿಮೆ ಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಇಡೀ ವ್ಯವಸ್ಥೆಯನ್ನು ಮರುಹೊಂದಿಸಲು ನಿರ್ವಿಷೀಕರಣದ ಅಗತ್ಯವಿದೆ. ಅಂದಹಾಗೆ, ನೀವು ಇದನ್ನು ಔಷಧಿಗಳ ಸಹಾಯದಿಂದ ಸಹ ಮಾಡಬಹುದು. ಆದರೆ ನೈಸರ್ಗಿಕ ಡಿಟಾಕ್ಸ್ (naturally detox) ಮಾಡೋದಾದ್ರೆ ಇಲ್ಲಿದೆ ನಿಮಗಾಗಿ ಬೆಸ್ಟ್ ಸಲಹೆಗಳು. 

ದೇಹವನ್ನು ನಿರ್ವಿಷಗೊಳಿಸಿದಾಗ ಏನಾಗುತ್ತದೆ?: ಇದು ರಕ್ತವನ್ನು ಶುದ್ಧೀಕರಿಸುತ್ತದೆ (blood purifier). ಜೊತೆಗೆ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ, ಹಸಿವು ಮತ್ತು ಬಯಕೆಗಳು, ನೋವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಹಾರ್ಮೋನ್ ಸಮತೋಲನ, ನಿದ್ರೆಯನ್ನು ಸುಧಾರಿಸುವುದು, ಜೀರ್ಣಕ್ರಿಯೆ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ಮುಂತಾದ ಪ್ರಯೋಜನಗಳನ್ನು ಕಾಣಬಹುದು. ಮೂತ್ರಪಿಂಡಗಳು, ಶ್ವಾಸಕೋಶಗಳು, ಪಿತ್ತಜನಕಾಂಗದಂತಹ ಪ್ರಮುಖ ಅಂಗಗಳು ಸಹ ಕೊಳೆಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತವೆ.

ನೈಸರ್ಗಿಕ ಡಿಟಾಕ್ಸ್ ವಾಟರ್ (natural detox water) ಹೆಚ್ಚು ಜನಪ್ರಿಯವಾಗುತ್ತಿದೆ ಎಂದು ಪೌಷ್ಟಿಕತಜ್ಞೆ ಲಾವ್ನೀತ್ ಬಾತ್ರಾ ವಿವರಿಸುತ್ತಾರೆ. ನೀರಿನ ಡಿಟಾಕ್ಸ್ ಪರಿಣಾಮವು ಅದರಲ್ಲಿರುವ ವಸ್ತುವಿನ ಗುಣಲಕ್ಷಣಗಳನ್ನು ಅವಲಂಬಿಸಿರುತ್ತದೆ. ಇಲ್ಲಿ ಉಲ್ಲೇಖಿಸಲಾದ ಡಿಟಾಕ್ಸ್ ನೀರಿನ ಪಾಕವಿಧಾನವು ದೇಹದಿಂದ ಕೊಳೆಯನ್ನು ತೆಗೆದುಹಾಕುವುದರ ಜೊತೆಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

ಮನೆಯಲ್ಲಿ ದೇಹವನ್ನು ಡಿಟಾಕ್ಸ್ ಮಾಡುವುದು ಹೇಗೆ?: 
ಕೊತ್ತಂಬರಿ ನೀರು (coriander water)
ಕೊತ್ತಂಬರಿ ನೀರು ನೈಸರ್ಗಿಕ ಮೂತ್ರವರ್ಧಕವಾಗಿ ಕೆಲಸ ಮಾಡುತ್ತದೆ. ಅದನ್ನು ಸೇವಿಸುವ ಮೂಲಕ ಮೂತ್ರದ ಮೂಲಕ ದೇಹದ ಎಲ್ಲಾ ಕೊಳೆಯನ್ನು ತೆಗೆದುಹಾಕಬಹುದು. ಇದಲ್ಲದೆ, ಇದು ಇನ್ಸುಲಿನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಯಕೃತ್ತನ್ನು ಆರೋಗ್ಯಕರವಾಗಿರಿಸುತ್ತದೆ, ಇದು ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನೀವು ಈಗಾಗಲೇ ಮೂತ್ರವರ್ಧಕ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಅದನ್ನು ಸೇವಿಸುವುದನ್ನು ಅವಾಯ್ಡ್ ಮಾಡಿ.

ಸೇವಿಸುವುದು ಹೇಗೆ?: 1 ಟೀಸ್ಪೂನ್ ಕೊತ್ತಂಬರಿಯನ್ನು 1 ಲೋಟ ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಿ. ಅಥವಾ ಕೊತ್ತಂಬರಿ ಬೀಜಗಳನ್ನು 10 ನಿಮಿಷಗಳ ಕಾಲ ನೀರಿನೊಂದಿಗೆ ಕುದಿಸಿ. ಇದನ್ನು ಫಿಲ್ಟರ್ ಮಾಡಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದರಿಂದ ಹೊಟ್ಟೆ ಕ್ಲೀನ್ ಆಗುತ್ತದೆ. ಮೂತ್ರದ ಮೂಲಕ ದೇಹದ ವಿಷಗಳು ಹೊರ ಹೋಗುತ್ತವೆ.

ಸೌತೆಕಾಯಿ, ಪುದೀನಾ, ಶುಂಠಿ, ನಿಂಬೆ: ಇದು ಶಕ್ತಿಯುತ ಡಿಟಾಕ್ಸ್ ಪಾನೀಯ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಇದರಲ್ಲಿ ನಿಂಬೆ ನೈಸರ್ಗಿಕ ನಿರ್ವಿಷಕವಾಗಿದೆ. ಇದು ವಿಷವನ್ನು ಹೊರಹಾಕುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪುದೀನಾ ಜೀರ್ಣಕ್ರಿಯೆಗೆ ಒಳ್ಳೆಯದು. ಸೌತೆಕಾಯಿಗಳು 96% ನೀರನ್ನು ಹೊಂದಿರುತ್ತವೆ, ಇದು ದೇಹಕ್ಕೆ ಹೆಚ್ಚುವರಿ ಜಲಸಂಚಯನವನ್ನು ನೀಡುತ್ತದೆ. ಅದೇ ಸಮಯದಲ್ಲಿ, ಶುಂಠಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಹೊಟ್ಟೆಯನ್ನು ಸ್ವಚ್ಛವಾಗಿಡುತ್ತದೆ.

ಸೇವಿಸುವುದು ಹೇಗೆ?: ಸೌತೆಕಾಯಿ, ಪುದೀನಾ, ಶುಂಠಿ, ನಿಂಬೆ ತುಂಡುಗಳನ್ನು ನೀರಿನಲ್ಲಿ ಬೆರೆಸಿ ಚೆನ್ನಾಗಿ ಕಲಕಿ. ಈ ಮಿಶ್ರಣವನ್ನು ರಾತ್ರಿಯಿಡೀ ಅಥವಾ ಕನಿಷ್ಠ 4 ಗಂಟೆಗಳ ಕಾಲ ಬಿಡಿ. ಈಗ ಅದನ್ನು ಫಿಲ್ಟರ್ ಮಾಡಿ ಸೇವಿಸಿ. ಇದನ್ನು ಬೇಸಿಗೆಯಲ್ಲಿ ಅಥವಾ ದಣಿದ ಸಮಯದಲ್ಲಿ ಕುಡಿಯೋದು ತುಂಬಾನೆ ಉತ್ತಮವಾಗಿದೆ.

ಸೇಬು-ದಾಲ್ಚಿನ್ನಿ ನೀರು: ಸೇಬು ಮತ್ತು ದಾಲ್ಚಿನ್ನಿ ನೀರು ಚಯಾಪಚಯ ವರ್ಧಕವಾಗಿ ಕೆಲಸ ಮಾಡುತ್ತದೆ. ಸೇಬು- ದಾಲ್ಚಿನ್ನಿ ಉತ್ಕರ್ಷಣ ನಿರೋಧಕಗಳು ಮತ್ತು ಫ್ಲೇವನಾಯ್ಡ್ಗಳ ಅತ್ಯುತ್ತಮ ಮೂಲವಾಗಿದೆ, ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ ಮತ್ತು ಹೃದ್ರೋಗವನ್ನು ತಡೆಯುತ್ತದೆ. ಇದಲ್ಲದೆ, ಇದರಲ್ಲಿರುವ ಪೋಷಕಾಂಶಗಳು ದೇಹವನ್ನು ನಿರ್ವಿಷಗೊಳಿಸಲು ಸಹ ಕೆಲಸ ಮಾಡುತ್ತವೆ.
 

ತಯಾರಿಸುವುದು ಹೇಗೆ?: ಒಂದು ಸೇಬನ್ನು ತೆಗೆದುಕೊಂಡು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ ಮತ್ತು 1 ದಾಲ್ಚಿನ್ನಿಯ ಜೊತೆ ಸೇರಿಸಿ ಒಂದು ಜಗ್ ನಲ್ಲಿ ಹಾಕಿ ಕೆಲವು ಗಂಟೆಗಳ ಕಾಲ ಹಾಗೆ ಬಿಡಿ. ನಂತರ ಅದನ್ನು ಸೇವಿಸಿ. ಇದನ್ನು ನೀವು ದಿನಪೂರ್ತಿ ಬಾಯಾರಿಕೆಯಾದಾಗ ಸೇವಿಸುವುದು ಸಹ ಉತ್ತಮ. ಆದರೆ ಸೇವಿಸೋ ಮುನ್ನ ವೈದ್ಯರ ಸಲಹೆ ಕೇಳೋದು ಉತ್ತಮ. 

ಸ್ಟ್ರಾಬೆರಿ ಮತ್ತು ನಿಂಬೆಹಣ್ಣು: ದೇಹವನ್ನು ನಿರ್ವಿಷಗೊಳಿಸಲು ಸ್ಟ್ರಾಬೆರಿ ಮತ್ತು ನಿಂಬೆಯನ್ನು ನೀರಿನೊಂದಿಗೆ ಬೆರೆಸಿ ಕುಡಿಯುವುದು ತುಂಬಾ ಪ್ರಯೋಜನಕಾರಿ ಎಂದು ತಜ್ಞರು ಹೇಳುತ್ತಾರೆ. ಸ್ಟ್ರಾಬೆರಿಗಳು ಸುವಾಸನೆಯೊಂದಿಗೆ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ. ಇದು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಇನ್ಸುಲಿನ್ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ನಿಂಬೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. 

ಸೇವಿಸುವುದು ಹೇಗೆ?: ಸ್ಟ್ರಾಬೆರಿ ಮತ್ತು ನಿಂಬೆಯ ಕೆಲವು ತುಂಡುಗಳನ್ನು ಒಂದು ಲೋಟ ನೀರಿನಲ್ಲಿ 3-4 ಗಂಟೆಗಳ ಕಾಲ ನೆನೆಸಿಡಿ. ಈಗ ಅದನ್ನು ದಿನವಿಡೀ ಸ್ವಲ್ಪ ಸ್ವಲ್ಪ ಸ್ವಲ್ಪವಾಗಿ ಕುಡಿಯಿರಿ. ಈ ನೀರು ದೇಹದ ಪಿಎಚ್ ಮಟ್ಟವನ್ನು ಸಮತೋಲನದಲ್ಲಿಡುತ್ತದೆ. ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ.
 

ಜೀರಿಗೆ ನೀರು: ಜೀರಿಗೆ ನೀರಿನಲ್ಲಿ ಆಂಟಿ-ಆಕ್ಸಿಡೆಂಟ್, ಆಂಟಿ-ಮೈಕ್ರೋಬಿಯಲ್ ಔಷಧೀಯ ಗುಣಗಳಿವೆ, ಇದು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಇದರ ಸೇವನೆಯು ಚಯಾಪಚಯವನ್ನು ಹೆಚ್ಚಿಸುತ್ತದೆ, ಮತ್ತು ನಿಮಗೆ ಹಸಿವಾಗುವಂತೆ ಮಾಡುವ ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ. 

ಸೇವಿಸುವುದು ಹೇಗೆ?: ರಾತ್ರಿ ಮಲಗುವಾಗ 1 ಟೀಸ್ಪೂನ್ ಜೀರಿಗೆಯನ್ನು 1 ಲೋಟ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಈ ನೀರನ್ನು ಫಿಲ್ಟರ್ ಮಾಡಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದು ಹಸಿವಾಗೋದನ್ನು ನಿಯಂತ್ರಿಸೋದರಿಂದ, ಸುಲಭವಾಗಿ ತೂಕ ಇಳಿಕೆ ಮಾಡಲು ಸಹ ಸಹಕಾರಿಯಾಗಿದೆ. 

click me!