ಕಿತ್ತಳೆ ಸಿಪ್ಪೆ ಬಿಸಾಕ್ಬೇಡಿ… ಚಹಾ ಮಾಡಿ ಕುಡಿದ್ರೆ ಹಲವು ರೋಗಕ್ಕೆ ಮದ್ದು

First Published | Nov 24, 2022, 5:40 PM IST

ನೀವು ಚಹಾ ಪ್ರಿಯರಾಗಿದ್ದರೆ, ಚಹಾ ವಿಶ್ವದಲ್ಲೇ ನೀರಿನ ನಂತರ ಜನರು ಇಷ್ಟ ಪಟ್ಟು ಸೇವಿಸುವಂತಹ ಎರಡನೇ ಅತ್ಯಂತ ಪ್ರೀತಿಯ ಪಾನೀಯ. ಬೆಳಗ್ಗೆ ಒಂದು ಕಪ್ ಬಿಸಿ ಚಹಾ ನಿಮಗೆ ಹೊಸ ತಾಜಾತನ ತರುತ್ತೆ ಮತ್ತು ಮನಸ್ಸನ್ನು ಸಕ್ರಿಯಗೊಳಿಸುತ್ತದೆ. ಅಷ್ಟೇ ಅಲ್ಲ ಚಹಾ ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ, ಇದರಿಂದಾಗಿಯೇ ಚಹಾಕ್ಕೆ ಹೆಚ್ಚಿನ ಬೇಡಿಕೆ ಇದೆ. ಭಾರತದಲ್ಲಿ ಹೆಚ್ಚಿನ ಜನರು ಹಾಲಿನ ಚಹಾ ಕುಡಿಯುತ್ತಾರೆ, ಆದರೆ ವಿಶ್ವದಲ್ಲಿ ಬೇರೆ ಬೇರೆ ರೀತಿಯ ಚಹಾಗಳು ದೊರೆಯುತ್ತವೆ ಅನ್ನೋದು ಗೊತ್ತಾ ನಿಮಗೆ?

ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಚಹಾ ಕುಡಿಯಲು ಬಯಸಿದರೆ, ನೀವು ನಿಮ್ಮ ಸಾಮಾನ್ಯ ಚಹಾವನ್ನು ಒಂದು ಕಪ್ ತಾಜಾ ಕಿತ್ತಳೆ ಸಿಪ್ಪೆ ಚಹಾದೊಂದಿಗೆ ಬದಲಾಯಿಸಬಹುದು. ಹೌದು ಕಿತ್ತಳೆ ಆರೋಗ್ಯಕ್ಕೆ ಬಲು ಪ್ರಯೋಜನಕಾರಿ ಹಣ್ಣಾಗಿದೆ. ವಿಟಮಿನ್ ಸಿಯಿಂದ ಸಮೃದ್ಧವಾಗಿದೆ. ಹಣ್ಣು ಮಾತ್ರವಲ್ಲ, ಇದರ ಸಿಪ್ಪೆಗಳು ಸಹ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಕಿತ್ತಳೆ ಸಿಪ್ಪೆಯ ಚಹಾ (orange peel tea) ಕುಡಿಯುವುದು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸುಲಭವಾದ ಮಾರ್ಗಗಳಲ್ಲಿ ಒಂದಾಗಿದೆ. ಇದು ಕ್ಯಾನ್ಸರ್ ಸೇರಿ ಇತರ ಅನೇಕ ಪ್ರಮುಖ ರೋಗಗಳನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿ.

ಒಂದು ಕಪ್ ಚಹಾದಲ್ಲಿ ಎಷ್ಟು ಪ್ರಯೋಜನಗಳಿವೆ ತಿಳಿಯಿರಿ

ಆಹಾರ ತಜ್ಞರ ಪ್ರಕಾರ, ಚಹಾದ ತೀಕ್ಷ್ಣ ರುಚಿಯು ಲಾಲಾರಸ ಮತ್ತು ಹೊಟ್ಟೆಯ ಆಮ್ಲದಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು. ಪ್ರತಿದಿನ ಬೆಳಗ್ಗೆ ಈ ಚಹಾ ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಆಹಾರದಿಂದ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ.

Tap to resize

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಿತ್ತಳೆ ಸಿಪ್ಪೆ ಚಹಾ ಕುಡಿಯುವುದರಿಂದ ಅನೇಕ ಜೀರ್ಣಕಾರಿ ಸಮಸ್ಯೆಗಳನ್ನು (digestion problem) ತೆಗೆದುಹಾಕಲು ಸಹಾಯ ಮಾಡುತ್ತದೆ. ತಜ್ಞರ ಪ್ರಕಾರ, ಇದರಲ್ಲಿರುವ ಪೆಕ್ಟಿನ್ ಎಂಬ ವಸ್ತುವು ವಿಸರ್ಜನೆಗೆ ಸಹಾಯ ಮಾಡುತ್ತದೆ. ನೀವು ಮಲಬದ್ಧತೆ ಸಮಸ್ಯೆ ಹೊಂದಿದ್ದರೆ, ಕಿತ್ತಳೆ ಸಿಪ್ಪೆಯಿಂದ ಮಾಡಿದ ಚಹಾ ಕುಡಿಯೋದ್ರಿಂದ ಸಮಸ್ಯೆ ನಿವಾರಣೆಯಾಗುತ್ತೆ.

ಕಿತ್ತಳೆ ಸಿಪ್ಪೆಯಲ್ಲಿ ಏನೆಲ್ಲಾ ಪೋಷಕಾಂಶಗಳಿವೆ :

ಸಿಟ್ರಿಕ್ ಹಣ್ಣುಗಳ ಸಿಪ್ಪೆಗಳು ಫ್ಲೇವನಾಯ್ಡ್ ಗಳಿಂದಾಗಿ ಕಹಿಯಾಗಿರುತ್ತವೆ, ಇದು ಹಣ್ಣುಗಳನ್ನು ಕೀಟಗಳಿಂದ ರಕ್ಷಿಸುತ್ತದೆ. ಇದು ಹಣ್ಣಿನ ಇತರ ಯಾವುದೇ ಭಾಗಕ್ಕಿಂತ ಹೆಚ್ಚಿನ ಮಟ್ಟದ ಫ್ಲೇವನಾಯ್ಡ್ ಗಳನ್ನು ಹೊಂದಿರುತ್ತದೆ. ಅಲ್ಲದೇ ಇದರಲ್ಲಿ ಫೈಬರ್, ವಿಟಮಿನ್ ಸಿ ಮತ್ತು ಪಾಲಿಫಿನಾಲ್ಸ್ ಸಂಯುಕ್ತಗಳನ್ನು ಹೊಂದಿರುತ್ತದೆ. ಪ್ರೊವಿಟಮಿನ್ ಎ, ಫೋಲೇಟ್, ರೈಬೋಫ್ಲೇವಿನ್, ಥಯಾಮಿನ್, ವಿಟಮಿನ್ ಬಿ 6 ಮತ್ತು ಕ್ಯಾಲ್ಸಿಯಂನಂತಹ ಇತರ ಆರೋಗ್ಯ ಸ್ನೇಹಿ ಪೋಷಕಾಂಶಗಳೂ ಸಹ ಇದರಲ್ಲಿವೆ.

ಕಿತ್ತಳೆ ಸಿಪ್ಪೆ ಚಹಾ ಕುಡಿಯುವುದರ ಪ್ರಯೋಜನಗಳೇನು ನೋಡೋಣ?

ಕ್ಯಾನ್ಸರ್ ನಿಂದ ರಕ್ಷಿಸುತ್ತೆ (protects from cancer)
ಲಿಮೋನಿನ್ ಎಂಬ ಸಂಯುಕ್ತದಿಂದಾಗಿ ಸಿಟ್ರಿಕ್ ಹಣ್ಣಿನ ಸಿಪ್ಪೆಯು ಸುಮಾರು 97 ಪ್ರತಿಶತದಷ್ಟು ಸಾರಭೂತ ತೈಲ ಹೊಂದಿರುತ್ತದೆ. ನೈಸರ್ಗಿಕವಾಗಿ ಕಂಡುಬರುವ ಈ ರಾಸಾಯನಿಕವು ಉರಿಯೂತ ನಿವಾರಕ ಮತ್ತು ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಇದನ್ನು ನಿಮ್ಮ ಆಹಾರದಲ್ಲಿ ಸೇರಿಸುವ ಮೂಲಕ, ಉರಿಯೂತ ಮತ್ತು ಚರ್ಮದ ಕ್ಯಾನ್ಸರ್ ನಿಂದ ಉಂಟಾಗುವ ವಿವಿಧ ರೋಗಗಳನ್ನು ನೀವು ತಪ್ಪಿಸಬಹುದು.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತೆ

ಈ ಚಹಾ ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು (digestion system) ಉತ್ತೇಜಿಸಲು ಮತ್ತು ಆಹಾರದಿಂದ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ ಅಂಶವು ಜೀರ್ಣಾಂಗ ವ್ಯವಸ್ಥೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 

ದೀರ್ಘಕಾಲದ ಕಾಯಿಲೆಗಳಿಂದ ರಕ್ಷಣೆ

ಈ ಚಹಾ ಟೈಪ್ 2 ಮಧುಮೇಹ (type 2 diabetes), ಬೊಜ್ಜು ಮತ್ತು ಅಲ್ಝೈಮರ್ ಗಳಂತಹ ಅನೇಕ ದೀರ್ಘಕಾಲೀನ ಕಾಯಿಲೆಗಳನ್ನು ತಡೆಗಟ್ಟಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ. ಕಿತ್ತಳೆ ಸಿಪ್ಪೆಗಳಲ್ಲಿ ಪಾಲಿಫಿನಾಲ್ ಗಳ ಪ್ರಮಾಣ ಸಾಕಷ್ಟು ಹೆಚ್ಚಾಗಿದೆ ಎಂದು ಒಂದು ಸಂಶೋಧನೆ ತೋರಿಸಿದೆ. ಆದ್ದರಿಂದ, ಅದರ ಪ್ರಯೋಜನಗಳು ಸಹ ಸಾಕಷ್ಟು ಹೆಚ್ಚಾಗಿವೆ.

ಕಿತ್ತಳೆ ಸಿಪ್ಪೆಯನ್ನು ಸಾಮಾನ್ಯವಾಗಿ ಕುಕೀಗಳು ಮತ್ತು ಕೇಕ್ ಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದನ್ನು ಸೇವಿಸುವುದು ಸಂಪೂರ್ಣವಾಗಿ ಸುರಕ್ಷಿತ. ಚಹಾ ತಯಾರಿಸುವಾಗ ಕಿತ್ತಳೆ ಸಿಪ್ಪೆಯನ್ನು ಹೆಚ್ಚು ಬಳಸಬೇಡಿ, ಇದು ಕಹಿಗೆ ಕಾರಣವಾಗಬಹುದು. ಸ್ವಲ್ಪ ಪ್ರಮಾಣದಲ್ಲಿ ಬಳಸೋದರಿಂದ ಚಹಾ ರುಚಿ ಹೆಚ್ಚುತ್ತದೆ. 

ಕಿತ್ತಳೆ ಸಿಪ್ಪೆ ಚಹಾ ಮಾಡೋದು ಹೇಗೆ?

ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಗ್ಯಾಸ್ ಮೇಲೆ ಇರಿಸಿ. 
ಈಗ ಕಿತ್ತಳೆ ಸಿಪ್ಪೆ ಸ್ವಲ್ಪ ಮತ್ತು 1/2 ಇಂಚಿನ ದಾಲ್ಚಿನ್ನಿ ಕಡ್ಡಿ, 2-3 ಲವಂಗ, 1-2 ಹಸಿರು ಏಲಕ್ಕಿ ಮತ್ತು 1/2 ಟೀಸ್ಪೂನ್ ಬೆಲ್ಲ ಸೇರಿಸಿ. 
ಇದನ್ನು 2-3 ನಿಮಿಷಗಳ ಕಾಲ ಕುದಿಯಲು ಬಿಡಿ, ನಂತರ ಗ್ಯಾಸ್ ಆಫ್ ಮಾಡಿ. 
ಚಹಾವನ್ನು ಒಂದು ಬೌಲ್ ಗೆ ಸೋಸಿ. ನಿಮ್ಮ ಕಿತ್ತಳೆ ಸಿಪ್ಪೆ ಚಹಾ ಸಿದ್ಧವಾಗಿದೆ.

Latest Videos

click me!