ಇಂದಿನ ಕಾಲದಲ್ಲಿ, ಅನೇಕರು ಆಗಾಗ್ಗೆ ತಲೆ, ಕಾಲು, ಬೆನ್ನು, ಭುಜ ಮತ್ತು ಕುತ್ತಿಗೆ ನೋವಿನಿಂದ ಬಳಲುತ್ತಲೇ ಇರುತ್ತಾರೆ. ಈ ನೋವಿಗೆ ಕಾರಣ ಹಾಗೂ ಪರಿಹಾರವೂ ಸಿಕ್ಕಿರಬಹುದು. ಆದರೂ, ಕುತ್ತಿಗೆ ನೋವು ಮತ್ತು ನೈಸರ್ಗಿಕ ಪರಿಹಾರವನ್ನು ಇಲ್ಲಿ ಮತ್ತಷ್ಟು ನೀಡಲಾಗಿದೆ.
ಕುತ್ತಿಗೆ ನೋವೆಂದರೆ ಭುಜ ಮತ್ತು ಕುತ್ತಿಗೆ ಮಧ್ಯೆ ಮತ್ತು ಮೇಲಿನ ಬೆನ್ನಲ್ಲಿ ಸಂಭವಿಸುವ ನೋವು. ಕತ್ತು ನೋವು ನಮ್ಮ ಇಡೀ ದೈನಂದಿನ ಕಾರ್ಯಗಳ ಮೇಲೂ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಕತ್ತು ನೋವಿನಿಂದ ಅತ್ತಿತ್ತ ತಲೆ ತಿರುಗಿಸುವುದೂ ಕಷ್ಟ.
ಕತ್ತು ಬರುವುದೇಕೆ?
ಕಂಪ್ಯೂಟರ್ ಮಂದು ಸುದೀರ್ಘವಾಗಿ ಕೂತು ಕೆಲಸ ಮಾಡುವವರಿಗೆ ಕುತ್ತಿಗೆ ಸೇರಿ ವಿವಿಧ ರೀತಿಯ ನೋವುಗಳು ಕಾಡೋದು ಕಾಮನ್. ಅಲ್ಲದೇ ದೀರ್ಘಕಾಲ ಕುಳಿತುಕೊಳ್ಳುವಾಗ ಅಸಮರ್ಪಕ ಭಂಗಿಯೂ ಈ ಸಮಸ್ಯೆಗೆ ಕಾರಣವಾಗಬಹುದು. ನಿದ್ರೆಸುವಾಗ ಸರಿ ಇಲ್ಲದ ಭಂಗಿ, ಹೆಚ್ಚಿದ ಒತ್ತಡ, ಓದುವಾಗ ಅಥವಾ ಬರೆಯುವಾಗ ದೀರ್ಘಕಾಲ ಬಾಗುವುದು, ತಲೆ, ಕುತ್ತಿಗೆ ಅಥವಾ ಭುಜಗಳಲ್ಲಿನ ಗಾಯವೂ ಕತ್ತು ನೋವಿಗೆ ಕಾರಣವಾಗುತ್ತದೆ. ಕುತ್ತಿಗೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬಿಗಿತ, ಕುತ್ತಿಗೆಯಾದ್ಯಂತ ತೀಕ್ಷ್ಣ ಸೂಜಿ-ಚುಚ್ಚುವಂತಹ ನೋವು ಕಾಣಿಸಿಕೊಳ್ಳುತ್ತದೆ. ಈ ನೋವಿನಿಂದ ತಲೆನೋವು, ವಸ್ತುಗಳನ್ನು ಎತ್ತುವಲ್ಲಿ ತೊಂದರೆಯೂ ಕುತ್ತಿಗೆ ನೋವಿನ ಲಕ್ಷಣಗಳು.
ಕತ್ತು ನೋವು ನಿವಾರಣೆಗೆ ಮನೆಮದ್ದು
ಕುತ್ತಿಗೆ ನೋವನ್ನು ನಿವಾರಿಸಲು ಹಲವಾರು ಮಾರ್ಗಗಳಿದ್ದರೂ, ಕೆಲವು ತೈಲ ಸುಲಭ ಪರಿಹಾರ ನೀಡುತ್ತದೆ. ಇವು ಕುತ್ತಿಗೆ ನೋವನ್ನು ನಿವಾರಿಸುವುದಲ್ಲದೆ ಸ್ನಾಯುಗಳನ್ನು ಸಡಿಲಗೊಳಿಸಿ, ರಕ್ತ ಸಂಚಾರವನ್ನು ಸುಲಭಗೊಳಿಸುತ್ತದೆ.
ಯಾವ ಎಣ್ಣೆ ಬೆಸ್ಟ್?
1. ತೆಂಗಿನ ಎಣ್ಣೆ:
ತೆಂಗಿನ ಎಣ್ಣೆಯನ್ನು ಹಲವು ವರ್ಷಗಳಿಂದ ಸಾಂಪ್ರದಾಯಿಕ ಔಷಧದ ರೂಪದಲ್ಲಿ ಬಳಸಲಾಗುತ್ತದೆ. ಇದು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುವ ಗುಣಲಕ್ಷಣಗಳನ್ನು ಹೊಂದಿದೆ. ತೆಂಗಿನ ಎಣ್ಣೆಯಿಂದ ಕುತ್ತಿಗೆಗೆ ಮಸಾಜ್ ಮಾಡುವುದರಿಂದ ಸ್ನಾಯುಗಳು ಸಡಿಲಗೊಳ್ಳುತ್ತವೆ ಮತ್ತು ಅಸ್ವಸ್ಥತೆ ಕಡಿಮೆಯಾಗುತ್ತದೆ.
2. ಸಾಸಿವೆ ಎಣ್ಣೆ:
ಬೆಚ್ಚಗಿನ ಗುಣಲಕ್ಷಣ ಇರೋ ಸಾಸಿವೆ ಎಣ್ಣೆಯನ್ನು ಕುತ್ತಿಗೆಗೆ ಹಚ್ಚಿದರೆ ಸ್ನಾಯು ಸೆಳೆತ ನಿವಾರಣೆಯಾಗುತ್ತದೆ. ರಕ್ತ ಪರಿಚಲನೆ ಹೆಚ್ಚಿಸುತ್ತದೆ. ಆದಾಗ್ಯೂ, ಸೂಕ್ಷ್ಮ ಚರ್ಮ ಹೊಂದಿರುವ ವ್ಯಕ್ತಿಗಳು ಈ ಎಣ್ಣೆ ಬಳಸಬಾರದು.
3. ಆಲಿವ್ ಎಣ್ಣೆ:
ಆಲಿವ್ ಎಣ್ಣೆ ಉರಿಯೂತ ಮತ್ತು ನೋವು ಕಡಿಮೆ ಮಾಡುವಲ್ಲಿ ಪರಿಣಾಮಕಾರಿ. ಇದು ಚರ್ಮವನ್ನು ಮೃದುಗೊಳಿಸಿ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ, ಕುತ್ತಿಗೆಗೆ ಮಸಾಜ್ ಮಾಡಿದರೆ ತ್ವರಿತ ಪರಿಹಾರ ಸಿಗುತ್ತದೆ.
4. ಎಳ್ಳೆಣ್ಣೆ:
ಎಳ್ಳೆಣ್ಣೆಯಿಂದ ಕುತ್ತಿಗೆಗೆ ಮಸಾಜ್ ಮಾಡುವುದರಿಂದ ರಕ್ತ ಸಂಚಾರ ಸುಗಮಗೊಳ್ಳುತ್ತದೆ. ಸ್ನಾಯು ಸೆಳೆತ ಕಡಿಮೆಯಾಗಿ, ಕುತ್ತಿಗೆ ನೋವಿನಿಂದ ತ್ವರಿತ ಪರಿಹಾರ ಸಿಗುವಂತೆ ಮಾಡುತ್ತದೆ. ದೇಹದ ಉಷ್ಣಾಂಶ ಮತ್ತು ಶುಷ್ಕತೆಗೆ ಸಂಬಂಧಿಸಿದ ನೋವಿಗಂತೂ ಹೇಳಿ ಮಾಡಿಸಿದಂತಿದೆ.
5. ಲ್ಯಾವೆಂಡರ್ ಆಯಿಲ್:
ನೋವು ನಿವಾರಕ ಗುಣಲಕ್ಷಣಗಳಿಗೆ ಹೆಸರುವಾಸಿಯಾದ ಲ್ಯಾವೆಂಡರ್ ಎಣ್ಣೆ ಒತ್ತಡ ಕಡಿಮೆ ಮಾಡಿ, ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಕುತ್ತಿಗೆಗೆ ಮಸಾಜ್ ಮಾಡುವ ಮೊದಲು ತೆಂಗಿನಕಾಯಿ ಅಥವಾ ಆಲಿವ್ ಎಣ್ಣೆಯೊಂದಿಗೆ ಲ್ಯಾವೆಂಡರ್ ಎಣ್ಣೆಯನ್ನು ಸೇರಿಸುವುದರಿಂದ ಬೇಗ ನೋವು ಕಡಿಮೆಯಾಗುತ್ತದೆ.
ಹೇಗೆ ಬಳಸುವುದು?:
ಕುತ್ತಿಗೆ ನೋವು ನಿವಾರಿಸಿ ಮೇಲೆ ತಿಳಿಸಲಾದ ಯಾವುದಾದರೂ ಒಂದು ಎಣ್ಣೆಯನ್ನು ಬಿಸಿ ಮಾಡಿ ಮತ್ತು ಅದು ಇನ್ನೂ ಬೆಚ್ಚಗಿರುವಾಗ ವೃತ್ತಾಕಾರವಾಗಿ ಕುತ್ತಿಗೆಗೆ ಮಸಾಜ್ ಮಾಡಿ. ಇದರ ನಂತರ, ಕುತ್ತಿಗೆ ಪ್ರದೇಶಕ್ಕೆ ಬೆಚ್ಚಗಿನ ಬಟ್ಟೆಯನ್ನುಇಡಿ ಮತ್ತು ಸ್ವಲ್ಪ ಸಮಯದವರೆಗೆ ಬಿಡಿ. ಈ ತಂತ್ರವು ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ನೋವನ್ನು ಕಡಿಮೆ ಮಾಡುತ್ತದೆ.