ಆಶಿಕಿ 2 ಖ್ಯಾತಿಯ ಈ ಗಾಯಕಿ ಗಳಿಸಿದ್ದೆಲ್ಲ ಮಕ್ಕಳ ಉಳಿಸಲು ಬಳಸೋ ಅಪರೂಪದ 'ಹೃದಯ'ವಂತೆ

First Published | Jun 20, 2024, 5:41 PM IST

ಗಾನದಲ್ಲಿ ಕೋಗಿಲೆ, ನೋಡಲೂ ಸುಂದರಿ, ಈಕೆಯ ಹೃದಯ ಮತ್ತಷ್ಟು ಸುಂದರ.. ಹಾಗಾಗೇ ಬಡ ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗೆ ನಿರಂತರ ನೆರವು ನೀಡಿಕೊಂಡು ಬರುತ್ತಿದ್ದಾರೆ ಈ ಗಾಯಕಿ. 

ಈಕೆ ಖ್ಯಾತ ಗಾಯಕಿ, ಹೆಸರು ಪಾಲಕ್ ಮುಚ್ಚಲ್. ಆಶಿಕಿ 2, ಸನಮ್ ತೇರಿ ಕಸಮ್, ನೈಯೋ ಲಗ್ಡಾ ಮತ್ತು ಕೌನ್ ತುಜೆಯಂತಹ ಜನಪ್ರಿಯ ಬಾಲಿವುಡ್ ಹಾಡುಗಳ ಹಿಂದಿನ ಕಂಠ.

ನೋಡಲು ಗೊಂಬೆಯಂತಿರುವ ಈ ಗಾಯಕಿಯ ಹೃದಯವೂ ಅಷ್ಟೇ ಸುಂದರ, ಸುಕೋಮಲ. ಈಕೆ ಹಾಡಲು ಆರಂಭಿಸಿದಾಗಿನಿಂದಲೂ ಸಂಗೀತದಿಂದ ಗಳಿಸಿದ ಹಣವನ್ನೆಲ್ಲ ಒಂದು ಉದ್ದೇಶಕ್ಕಾಗಿ ಬಳಸುತ್ತಿದ್ದಾರೆ. 

Latest Videos


 ಪುಟ್ಟ ಹೃದಯಗಳನ್ನು ಉಳಿಸುವ ಉದ್ದೇಶದಿಂದ, ಬಡ ಮಕ್ಕಳಿಗೆ ಹೃದಯ ಕಾಯಿಲೆಗಳಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗಳನ್ನು ಮಾಡಲು ಅವರು ಹಣವನ್ನು ಸಂಗ್ರಹಿಸುತ್ತಿದ್ದಾರೆ.

'ನನ್ನ ಉದ್ದೇಶಕ್ಕಾಗಿ ನಾನು ಬಹಳಷ್ಟು ಪ್ರೀತಿ ಮತ್ತು ಆಶೀರ್ವಾದವನ್ನು ಸ್ವೀಕರಿಸುತ್ತಿದ್ದೇನೆ' ಎಂದು ಪಾಲಕ್ ಮುಚ್ಚಲ್ ಹೇಳುತ್ತಾರೆ.

ಅವರು ಕೇವಲ ಉದ್ದೇಶಕ್ಕಾಗಿ ಹಣವನ್ನು ದೇಣಿಗೆ ನೀಡುವುದಕ್ಕಿಂತ ಸಂಪೂರ್ಣವಾಗಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದುವರೆಗೂ ಬರೋಬ್ಬರಿ 3000 ಬಡ ಮಕ್ಕಳ ಹೃದಯವನ್ನು, ಜೀವವನ್ನು ಉಳಿಸಿದ್ದಾರೆ. 

ಆಕೆ ಈ ಕಾರ್ಯವಿಧಾನದಲ್ಲಿ ಎಷ್ಟು ನಿಕಟವಾಗಿ ತೊಡಗಿಸಿಕೊಂಡಿದ್ದಾರೆ ಎಂದರೆ, ಅವರು ಸಂಬಂಧ ಹೊಂದಿರುವ ಕೆಲ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಆಪರೇಷನ್ ಥಿಯೇಟರ್‌ಗೆ ಪ್ರವೇಶಿಸಲು ಮತ್ತು ಮಗುವಿನೊಂದಿಗೆ ಇರಲು ಅನುಮತಿ ನೀಡಲಾಗುತ್ತದೆ. ಅಷ್ಟೇ ಅಲ್ಲ, ಅವರಿಗಾಗಿಯೇ ಸಮವಸ್ತ್ರವನ್ನೂ ಕಾಯ್ದಿರಿಸಲಾಗಿರುತ್ತದೆ. 

'ಸೇವಿಂಗ್ ಲಿಟಲ್ ಹಾರ್ಟ್ಸ್' ಎಂಬ ಫೌಂಡೇಶನ್ ಮೂಲಕ ಪಾಲಕ್, ಹೃದಯದ ಸಮಸ್ಯೆ ಇರುವ ಬಡ ಮಕ್ಕಳ ಪೋಷಕರನ್ನು ಭೇಟಿ ಮಾಡಿ ಅವರಿಗೆ ಬೆಂಬಲ ನೀಡುತ್ತಾರೆ. 

ಪಾಲಕ್ 3000 ಶಸ್ತ್ರಚಿಕಿತ್ಸೆಗಳಿಗೆ ಧನಸಹಾಯ ಮಾಡಿದ್ದಾರೆ ಮತ್ತು ಬದುಕಿರುವವರೆಗೂ ಈ ಕೆಲಸಕ್ಕಾಗಿಯೇ ದುಡಿಮೆಯ ಹಣ ಬಳಸಲು ಭಗವಂತ ಅನುಗ್ರಹಿಸಲಿ ಎಂದು ಬೇಡುತ್ತಾರೆ. 

ಪ್ರತಿದಿನ ಏಳುವಾಗ ನನ್ನ ಸಹಾಯಕ್ಕಾಗಿ ಕಾದಿರುವ ಮಕ್ಕಳಿದ್ದಾರೆ ಎಂದು ನನಗೆ ತಿಳಿದಿದೆ. ಹಾಡುವವರೆಗೂ ನಾನು ಒಂದು ಕಾರಣಕ್ಕಾಗಿ ಹಾಡಲು ಸಾಧ್ಯವಾಗುತ್ತದೆ ಎಂದು ನಂಬುತ್ತೇನೆ ಎಂದು ಪಾಲಕ್ ಹೇಳುತ್ತಾರೆ. 

1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ, ಪಾಲಕ್ ಏಳು ವರ್ಷದವಳಿದ್ದಾಗ, ಮೃತ ಭಾರತೀಯ ಸೈನಿಕರ ಕುಟುಂಬಗಳಿಗೆ ನಿಧಿಯನ್ನು ಸಂಗ್ರಹಿಸಲು ಆಕೆ ತಮ್ಮ ತವರು ನಗರವಾದ ಇಂದೋರ್‌ನಲ್ಲಿರುವ ಅಂಗಡಿಗಳಲ್ಲಿ ಹಾಡುತ್ತಾ ಒಂದು ವಾರ ಕಳೆದರು. 

ಆಕೆಯ ಪ್ರಯತ್ನಗಳು ಭಾರತೀಯ ಮಾಧ್ಯಮಗಳಲ್ಲಿ ಗಣನೀಯ ಪ್ರಸಾರವನ್ನು ಪಡೆದುಕೊಂಡವು ಮತ್ತು ಅವರು ₹25,000 (US$810) ಸಂಗ್ರಹಿಸಿದರು. ಅದೇ ವರ್ಷದ ನಂತರ, 1999 ರ ಒಡಿಶಾ ಚಂಡಮಾರುತದ ಸಂತ್ರಸ್ತರಿಗೆ ನಿಧಿ ಸಂಗ್ರಹಿಸಲು ಅವರು ಹಾಡಿದರು.

ಇಂಥ 'ಹೃದಯ'ವಂತೆಯ ಕಾರ್ಯಕ್ಕೆ ನಮ್ಮದೊಂದು ಹೃದಯದ ಮೆಚ್ಚುಗೆ ನೀಡೋಣ. ಮಕ್ಕಳ ಹೃದಯ ಉಳಿಸೋ ಈಕೆ ಎಲ್ಲರ ಮನಸ್ಸಲ್ಲಿ ಉತ್ತಮ ಕಾರ್ಯದ ದೀಪ ಹೊತ್ತಿಸಲಿ..

click me!