ಮಕ್ಕಳಿಗೆ ಜ್ವರ, ಶೀತ, ಕೆಮ್ಮು, ಕಫ ನಿವಾರಣೆಗೆ ದೊಡ್ಡಪತ್ರೆ ಎಲೆ ಬಳಸುವ ವಿಧಾನಗಳು

First Published | Aug 9, 2024, 7:25 PM IST

ಮಕ್ಕಳಿಗೆ ಕೆಮ್ಮು, ಕಫ ಆಗಿದ್ದಲ್ಲಿ ಕೂಡಲೇ ನಿಮ್ಮ ಮನೆ ಮುಂದಿ ಕುಂಡದಲ್ಲಿರುವ ಅಥವಾ ಮನೆಯ ಹಿತ್ತಲಿನಲ್ಲಿರುವ ಈ ದೊಡ್ಡಪತ್ರೆ ಎಲ್ಲೆಯನ್ನು ರಾಮಬಾಣವಾಗಿ ಬಳಕೆ ಮಾಡಬಹುದು. ಮನೆಯ ಮದ್ದಿನ ರೀತಿಯಲ್ಲಿ ದೊಡ್ಡಪತ್ರೆ ಎಲೆಯನ್ನು ಮಕ್ಕಳಿಗೆ ನೀಡುವ ಮೂಲಕ ಕೆಮ್ಮು ಕಫವನ್ನು ಸುಲಭವಾಗಿ ಗುಣಪಡಿಸಬಹುದು.

ಮಳೆಗಾಲದ ಅವಧಿಯಲ್ಲಿ ದಿಢೀರನೇ ವಾತಾವರಣದಲ್ಲಿ ತೀರಾ ಏರುಪೇರಾಗುತ್ತದೆ. ಈ ಸಂದರ್ಭದಲ್ಲಿ ಮನೆಯಲ್ಲಿರುವ ಚಿಕ್ಕ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಕೆಮ್ಮು, ಕಫ, ಶೀತ, ಜ್ವರ ಸೇರಿ ಇತ್ಯಾದಿ ಅನಾರೋಗ್ಯ ಸಮಸ್ಯೆಗಳು ಕೂಡ ಉಲ್ಬಣಗೊಳ್ಳುತ್ತವೆ. ಈ ವೇಳೆ ಮನೆಯ ಮಂದಿಯೆಲ್ಲಾ ತೀವ್ರ ಆತಂಕಕ್ಕೆ ಒಳಗಾಗುತ್ತಾರೆ. ಗ್ರಾಮೀಣ ಭಾಗದ ಅನೇಕ ಜನರು ಸ್ಥಳೀಯವಾಗಿ ಮನೆ ಸುತ್ತಮುತ್ತಲೂ ಸಿಗುವ ಔಷಧೀಯ ಗಿಡಮೂಲಿಕೆಗಳನ್ನು ಬಳಸಿ ರೋಗ ಗುಣಪಡಸುತ್ತಾರೆ. ಅದರಲ್ಲಿ ದೊಡ್ಡ ಪತ್ರೆ ಎಲೆಯೂ ಕೂಡ ಒಂದು ಉತ್ತಮ ಗಿಡಮೂಲಿಕೆಯಾಗಿ ಬಳಕೆ ಮಾಡಲಾಗುತ್ತದೆ.

ಸಾಮಾನ್ಯವಾಗಿ ದೊಡ್ಡ ಪತ್ರೆಯನ್ನು ರಾಜ್ಯಾದ್ಯಂತ ಪ್ರಾದೇಶಿಕ ಭಿನ್ನತೆಗೆ ಅನುಗುಣವಾಗಿ ದೊಡ್ಡಪತ್ರೆ ಎಲೆ,  ಸಾಂಬ್ರಾಣಿ ಎಲೆ, ಸಂಬಾರ ಬಳ್ಳಿ, ಚೆಂಪರವಳ್ಳಿ, ಅಜವಾನದ ಎಲೆ, ಕರ್ಪೂರವಳ್ಳಿ, ಚಟ್ನಿ ಸೊಪ್ಪು ಹೀಗೆ ಹಲವು ಸೆರುಗಳಿಂದ ಕರೆಯಲಾಗುತ್ತದೆ. ಈ ದೊಡ್ಡ ಪತ್ರೆ ಎಲೆಯು ಎಲ್ಲ ವಾತಾವರಣದಲ್ಲಿಯೂ ಬೆಳೆಯುತ್ತದೆ. ಸಣ್ಣ ಹೂ ಕುಂಡಗಳಿಂದ ಹಿಡಿದು ದೊಡ್ಡ ದೊಡ್ಡ ಬಯಲು ಜಾಗ, ಬೇಲಿಗಳು, ಪೊದೆಗಳಲ್ಲಿಯೂ ಬೆಳೆಯುತ್ತದೆ. ಇದರ ಎಲೆ ದಪ್ಪವಾಗಿದ್ದು, ಹೆಚ್ಚಿನ ನೀರಿನ ಅಂಶದಿಂದ ಕೂಡಿರುತ್ತದೆ.

Tap to resize

ಮಕ್ಕಳ ಜ್ವರ: ಮಕ್ಕಳಿಗೆ ಜ್ವರ ಬಂದಿದ್ದರೆ ಕೂಡಲೇ ಆಸ್ಪತ್ರೆಗೆ ಹೋಗಲು ಅವಕಾಶ ಇಲ್ಲದಿದ್ದಲ್ಲಿ ದೊಡ್ಡ ಪತ್ರೆ ಎಲೆಯನ್ನು ಸ್ವಲ್ಪ ಬೆಳಕಿಯ ಝಳದಲ್ಲಿ ಬಾಡಿಸಿ ಜ್ವರ ಇರುವ ಮಕ್ಕಳ ತಲೆ ಮೇಲೆ ಇಟ್ಟರೆ ತಾತ್ಕಾಲಿಕ ಮಟ್ಟಕ್ಕೆ ಜ್ವರ ಕಡಿಮೆ ಆಗುತ್ತದೆ.

ಕಣ್ಣಿನ ಉರಿಗೆ ದಿವ್ಯೌಷಧ: ಇನ್ನು ದೊಡ್ಡಪತ್ರೆ ಎಲೆಯನ್ನು ತಂದು ಅವುಗಳನ್ನು ಹಿಂಡಿ (ಎರಡೂ ಅಂಗೈಗಳಿಂದ ತಿಕ್ಕಿ ಹಿಂಡುವುದು ಅಥವಾ ಸಣ್ಣ ಒಳಕಲ್ಲಿನಲ್ಲಿ ಜಜ್ಜಿ ರಸ ತೆಗೆಯುವುದು) ರಸ ತೆಗೆಯಬೇಕು. ನಂತರ ಆ ದೊಡ್ಡಪತ್ರೆ ಎಲೆಯ ರಸದಷ್ಟೇ ಪ್ರಮಾಣದ ಎಳ್ಳೆಣ್ಣೆಯನ್ನು ನಿತ್ಯ ತಲೆಗೆ ಹಚ್ಚುವುದರಿಂದ ಕಣ್ಣಿನ ಉರಿ ಕಡಿಮೆ ಆಗುತ್ತದೆ.

ಬೇಧಿಗೂ ಒಳಿತು : ಮಕ್ಕಳಿಗೆ ಬೇಧಿ ಆಗುತ್ತಿದ್ದರೆ ಮಕ್ಕಳಿಗೆ ದೊಡ್ಡಪತ್ರೆ ಎಲೆಗಳನ್ನು ಜಜ್ಜಿ ರಸವನ್ನು ತೆಗೆದು ಜೇನಿನನ್ನು ಮಿಶ್ರಣ ಮಾಡಿ ಕುಡಿಸಿದರೆ ಬೇಧಿ ಹಾಗೂ ಕಫ ಕಡಿಮೆ ಆಗುತ್ತದೆ. ಜೊತೆಗೆ, ಶೀತದಿಂದ ಉಂಟಾದ ಮಲಬದ್ಧತೆಯೂ ಕಡಿಮೆಯಾಗುತ್ತದೆ.

ಕೆಮ್ಮು, ಕಫ, ಶೀತ ಓಡಿಸುವಲ್ಲಿ ದೊಡ್ಡ ಪಾತ್ರ: ಇನ್ನು ಮಕ್ಕಳಿಗೆ ಆಗಿಂದಾಗ್ಗೆ ಕಾಣಿಸಿಕೊಳ್ಳುವ ಶೀತ, ಕೆಮ್ಮು ಹಾಗೂ ಕಫ ಗುಣಪಡಿಸಲು ದೊಡ್ಡಪತ್ರೆ ಎಲೆಗಳನ್ನು ಹೀಗೆ ಬಳಸಬೇಕು. ನಾಲ್ಕೈದು ದೊಡ್ಡಪತ್ರೆ ಎಲೆಗಳನ್ನು ಕೆಂಡದಲ್ಲಿ ಬಾಡಿಸಿ, ಅದರ ರಸವನ್ನು ಹಿಂಡಿ ಕಹಿ ಅಂಶ ತಗ್ಗುವಂತೆ ಜೇನು ಮಿಶ್ರಣ ಮಾಡಿ ಮಕ್ಕಳಿಗೆ ಕುಡಿಸಿದರೆ ಶೀತ, ಕೆಮ್ಮು, ಕಫ ಶೀಘ್ರವೇ ಗುಣಮುಖ ಆಗುತ್ತವೆ.

ಚರ್ಮವ್ಯಾಧಿಗೂ ಕಲಿಸಲಿದೆ ಬುದ್ಧಿ: ಹೌದು, ದೊಡ್ಡಪತ್ರೆ ಎಲೆ ಕೆಲವು ಚರ್ಮ ರೋಗ ನಿವಾರಣೆ ಔಷಧಿಯಾಗಿಯೂ ಬಳಕೆ ಆಗುತ್ತದೆ. ಸ್ವಚ್ಛತೆಯ ಕೊರತೆಯಿಂದ ಮಕ್ಕಳು ಅಥವಾ ಮನೆಯ ಮಂದಿಯಲ್ಲಿ ಚರ್ಮದ ಮೇಲೆ ಕಾಣಿಸಿಕೊಳ್ಳುವ ತುರಿಕೆ, ಕಜ್ಜಿ ಹಾಗೂ ಬೇಸಿಗೆಯಲ್ಲಿ ಮಕ್ಕಳಿಗೆ ಕಾಣಿಸಿಕೊಳ್ಳುವ ಬೆವರುಸಾಲೆ (ಸೆಖೆಗುಳ್ಳೆ) ಕಾಣಿಸಿಕೊಂಡ ಸ್ಥಳಕ್ಕೆ ಈ ದೊಡ್ಡಪತ್ರೆ ಎಲೆಯ ರಸ ಹಚ್ಚಿಕೊಳ್ಳಬೇಕು. ಜೊತೆಗೆ, ಸಾಂಬ್ರಾಣಿ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ನಾರಿನಾಂಶ ಹಾಗೂ ಕಬ್ಬಿಣಾಂಶಗಳೂ ದೇಹಕ್ಕೆ ಲಭ್ಯವಾಗಲಿವೆ.

ರೋಗ ಉಲ್ಬಣಿಸಿದರೆ ಆಸ್ಪತ್ರೆಗೆ ಹೋಗಿ: ಮಕ್ಕಳಲ್ಲಿ ಕಾಣಿಸಿಕೊಳ್ಳುವ ವಿವಿಧ ಆರೋಗ್ಯ ಸಮಸ್ಯೆಗಳಿಗೆ ದೊಡ್ಡಪತ್ರ ಎಲೆಯನ್ನು ಮನೆ ಔಷಧಿಯಾಗಿ ಬಳಕೆ ಮಾಡಿದರೂ, ರೋಗ ಹೆಚ್ಚಾಗಿ ಉಲ್ಬಣಗೊಂಡಲ್ಲಿ ಕೂಡಲೇ ಆಸ್ಪತ್ರೆಗೆ ಹೋಗಿ ವೈದ್ಯರನ್ನು ಸಂಪರ್ಕಿಸಬೇಕು. ಇದು ಮನೆ ಮದ್ದು ಪುಸ್ತಕದಲ್ಲಿರುವ ಮಾಹಿತಿಯನ್ನು ಇಲ್ಲಿ ಪ್ರಕಟಿಸಲಾಗಿದೆ. 

Latest Videos

click me!