ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಮೊಸರು ಅವಲಕ್ಕಿ ಒಂದು ಉತ್ತಮ ತಿಂಡಿಯಾಗಿದೆ. ಈ ಲೇಖನದಲ್ಲಿ ರುಚಿಕರವಾದ ಮೊಸರು ಅವಲಕ್ಕಿ ತಯಾರಿಸುವ ವಿಧಾನವನ್ನು ವಿವರಿಸಲಾಗಿದೆ. ಇದು ತಿಂಡಿಯ ರುಚಿಯನ್ನು ಹೆಚ್ಚಿಸುವುದಲ್ಲದೆ, ಅಸಿಡಿಟಿಯನ್ನು ತಡೆಯುತ್ತದೆ.
ಬೇಸಿಗೆ ಆರಂಭವಾಗಿದ್ದು, ಬೆಳಗ್ಗೆ 10 ಗಂಟೆಯ ನಂತ್ರ ಬಿಸಿಲು ಹೆಚ್ಚಾಗುತ್ತದೆ. ಬೆಳಗ್ಗೆ ಸೇವಿಸುವ ತಿಂಡಿ ನಿಮ್ಮನ್ನು ಇಡೀ ದಿನ ಫ್ರೆಶ್ ಆಗಿಡುತ್ತದೆ. ಹಾಗಾಗಿ ದೇಹಕ್ಕೆ ತಂಪು ನೀಡುವ ಆಹಾರವನ್ನು ಸೇವಿಸಲು ಮೊದಲ ಆದ್ಯತೆ ನೀಡಬೇಕಾಗುತ್ತದೆ.
ಸಾಮಾನ್ಯವಾಗಿ ಎಲ್ಲರೂ ಮೊಸರು ಅವಲಕ್ಕಿ ತಯಾರಿಸುತ್ತಾರೆ. ಆದ್ರೆ ಒಂದು ಪದಾರ್ಥವನ್ನು ಸೇರಿಸೋದರಿಂದ ಈ ತಿಂಡಿಯ ರುಚಿ ಡಬಲ್ ಆಗುತ್ತದೆ. ಆ ಪದಾರ್ಥ ಯಾವುದು ಮತ್ತು ರುಚಿಯಾದ ಮೊಸರು ಅವಲಕ್ಕಿ ಹೇಗೆ ತಯಾರಿಸಬೇಕು ಎಂಬುದನ್ನು ನೋಡೋಣ ಬನ್ನಿ.
25
ಮೊಸರು ಅವಲಕ್ಕಿ ತಯಾರಿಸಲು ಬೇಕಾಗುವ ಸಾಮಾಗ್ರಿಗಳು
ಅವಲಕ್ಕಿ: 200 ಗ್ರಾಂ, ಮೊಸರು: 100 ಗ್ರಾಂ, ಬೆಳ್ಳುಳ್ಳಿ: 4 ರಿಂದ 5 ಎಸಳು, ಈರುಳ್ಳಿ: 1 (ಚಿಕ್ಕ ಗಾತ್ರದ್ದು), ಜೀರಿಗೆ-ಸಾಸವೆ: 1 ಟೀ ಸ್ಪೂನ್, ಕಡಲೆಬೀಜ: 2 ಟೀ ಸ್ಪೂನ್, ಉದ್ದಿನಬೇಳೆ: 1 ಟೀ ಸ್ಪೂನ್, ಕಡಲೆಬೇಳೆ: 1/2 ಟೀ ಸ್ಪೂನ್, ಕರೀಬೇವು: 6 ರಿಂದ 8 ಎಲೆ, ಎಣ್ಣೆ: 2 ಟೀ ಸ್ಪೂನ್, ದಾಳಿಂಬೆ ಕಾಳುಗಳು: 4 ಟೀ ಸ್ಪೂನ್, ಕೋತಂಬರಿ ಸೊಪ್ಪು ಮತ್ತು ಉಪ್ಪು: ರುಚಿಗೆ ತಕ್ಕಷ್ಟು
35
ಮೊಸರು ಅವಲಕ್ಕಿ ಮಾಡುವ ವಿಧಾನ
ಮೊದಲಿಗೆ ಈರುಳ್ಳಿ ಮತ್ತು ಕೋತಂಬರಿ ಸೊಪ್ಪನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಎತ್ತಿಟ್ಟುಕೊಳ್ಳಿ. ಇದೀಗ ಅವಲಕ್ಕಿಯನ್ನು ಎರಡರಿಂದ ಮೂರು ಬಾರಿ ತೊಳೆದುಕೊಂಡು ಚೆನ್ನಾಗಿ ನೀರು ಹಿಂಡಿ ಅಗಲವಾದ ಬೌಲ್‌ಗೆ ಹಾಕಿಕೊಳ್ಳಿ.
ಈಗ ಒಲೆ ಆನ್ ಮಾಡ್ಕೊಂಡು ಒಗ್ಗರಣೆಗೆ ಪಾತ್ರೆ ಇರಿಸಿಕೊಳ್ಳಿ. ಈಗ ಎರಡು ಟೀ ಸ್ಪೂನ್ ನಷ್ಟು ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಸಾಸವೆ-ಜೀರಿಗೆ ಹಾಕಿಕೊಳ್ಳಿ. ಎರಡು ಪದಾರ್ಥ ಚಟಪಟ ಅಂತ ಸಿಡಿಯುತ್ತಿದ್ದಂತೆ ಕಡಲೆಬೀಜ, ಉದ್ದಿನಬೇಳೆ, ಕಡಲೆಬೇಳೆ ಹಾಕಿಕೊಳ್ಳಿ. ನಂತರ ಕರೀಬೇವು ಸೇರಿಸಿಕೊಳ್ಳಬೇಕು.
ತದನಂತರ ಒಗ್ಗರಣೆಯನ್ನು ತೊಳೆದಿಟ್ಟುಕೊಂಡಿರುವ ಅವಲಕ್ಕಿಗೆ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಇದಕ್ಕೆ ಬೀಟ್ ಮಾಡಿಕೊಂಡಿರುವ ಮೊಸರು, ದಾಳಿಂಬೆ ಕಾಳುಗಳು, ಕೋತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸ್ ಮಾಡಿಕೊಂಡ್ರೆ ರುಚಿಯಾದ ಮೊಸರು ಅವಲಕ್ಕಿ ಸವಿಯಲು ಸಿದ್ಧವಾಗುತ್ತದೆ.
ಮೊಸರನ್ನ ಅಥವಾ ಮೊಸರು ಅವಲಕ್ಕಿ ತಯಾರಿಸುವಾಗ ಖಾರಕ್ಕಾಗಿ ಹಸಿಮೆಣಸಿನಕಾಯಿ ಬಳಕೆ ಮಾಡುತ್ತದೆ. ಕೆಲವರಿಗೆ ಹಸಿ ಖಾರ ಅಸಿಡಿಟಿಯನ್ನುಂಟು ಮಾಡುತ್ತದೆ. ಹಾಗಾಗಿ ಹಸಿಮೆಣಸಿನಕಾಯಿ ಬದಲಾಗಿ ಕಾಳುಮೆಣಸಿನ ಪುಡಿ ಬಳಸಿ. ಇದರಿಂದ ನಿಮ್ಮ ಅಡುಗೆಯ ರುಚಿ ಡಬಲ್ ಆಗುತ್ತದೆ. ಬೇಕಿದ್ರೆ ಡ್ರೈಫ್ರೂಟ್ಸ್ ಸಹ ಸೇರಿಸಿಕೊಳ್ಳಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.