ವೀಕೆಂಡ್‌ಗೆ ಮಾಡ್ಕೊಳ್ಳಿ ಸೈಡ್ ಡಿಶ್ ಸ್ಪೈಸಿ ಆಂಡ್ ಟೇಸ್ಟಿ ಲೆಮನ್ ಗ್ರೀನ್ ಚಿಕನ್ ಡ್ರೈ ಫ್ರೈ

First Published | Nov 16, 2024, 12:09 PM IST

ವೀಕೆಂಡ್‌ನಲ್ಲಿ ರುಚಿಕರವಾದ ನಾನ್‌ವೆಜ್ ತಿನ್ನಬೇಕೆಂಬ ಆಸೆ ಇದ್ದರೂ ಸಮಯದ ಕೊರತೆ ಇದೆಯೇ? ಚಿಂತಿಸಬೇಡಿ! ಕೆಲವೇ ಸಾಮಾಗ್ರಿಗಳೊಂದಿಗೆ ಕಡಿಮೆ ಸಮಯದಲ್ಲಿ ಲೆಮನ್ ಗ್ರೀನ್ ಚಿಕನ್ ಡ್ರೈ ಫ್ರೈ ಮಾಡುವ ವಿಧಾನ ಇಲ್ಲಿದೆ. ಬಿಸಿ ಬಿಸಿ ಅನ್ನ ಅಥವಾ ಚಪಾತಿಯೊಂದಿಗೆ ಸವಿಯಲು ರುಚಿಕರವಾದ ಈ ಖಾದ್ಯ ತಯಾರಿಸಿ.

ವೀಕೆಂಡ್ ಬಂದ್ರೆ ಕೆಲವರಿಗೆ ಬಾಡೂಟ ಇರಲೇಬೇಕು. ಅದರಲ್ಲಿಯೂ ಸಂಡೇ ಚಿಕನ್ ಅಥವಾ ಮಟನ್ ಅಡುಗೆ ಇಲ್ಲಾಂದ್ರೆ ಏನೋ ಕಳೆದುಕೊಂಡಂತೆ ಫೀಲ್ ಆಗುತ್ತಿರುತ್ತದೆ. ಆದ್ರೆ ಬಹುತೇಕರ ಬಳಿ ನಾನ್-ವೆಜ್ ಅಡುಗೆ ತಯಾರಿಸಲು ಸಮಯವಿಲ್ಲದ ಕಾರಣ ಅನ್ನ-ಸಾಂಬಾರ್ ತಿಂದು ಮುಗಿಸ್ತಾರೆ.

ಇಂದು ನಾವು ನಿಮಗೆ ಕಡಿಮೆ ಸಮಯದಲ್ಲಿ, ಕೆಲವೇ ಕೆಲವು ಸಾಮಾಗ್ರಿ ಬಳಸಿ ಹೇಗೆ ಮಾಂಸಾಹಾರ ತಯಾರಿಸಬೇಕು ಎಂದು ಹೇಳುತ್ತಿದ್ದೇವೆ. ಇವತ್ತು ರುಚಿಯಾದ ಲೆಮನ್ ಗ್ರೀನ್ ಚಿಕನ್ ಹೇಗೆ ತಯಾರಿಸಬೇಕು ಎಂದು ಹೇಳುತ್ತಿದ್ದೇವೆ. ಬಿಸಿ ಬಿಸಿಯಾದ ರೈಸ್ ಮತ್ತು ಚಪಾತಿ/ರೊಟ್ಟಿಗೆ ಇದು ಒಳ್ಳೆಯ ಕಾಂಬಿನೇಷನ್ ಆಗುತ್ತದೆ.

Tap to resize

ಲೆಮನ್ ಗ್ರೀನ್ ಚಿಕನ್ ಡ್ರೈ ಫ್ರೈಗೆ ಬೇಕಾಗುವ ಸಾಮಾಗ್ರಿಗಳು

ಚಿಕನ್: 200 ಗ್ರಾಂ, ಹಸಿಮೆಣಸಿನಕಾಯಿ: 5 ರಿಂದ 6, ನಿಂಬೆಹಣ್ಣಿನ ರಸ: ನಾಲ್ಕು ಟೀ ಸ್ಪೂನ್, ಜೀರಿಗೆ: 1 ಟೀ ಸ್ಪೂನ್, ಚಿಕನ್ ಮಸಾಲೆ: 1 ಟೀ ಸ್ಪೂನ್, ಪೆಪ್ಪರ್ ಪೌಡರ್: ಅರ್ಧ ಟೀ ಸ್ಪೂನ್, ಎಣ್ಣೆ: 4 ಟೀ ಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ: 1/2 ಟೀ ಸ್ಪೂನ್, ಕೋತಂಬರಿ ಸೊಪ್ಪು, ಕರೀಬೇವು: 8 ರಿಂದ 10 ದಳ, ಬೆಳ್ಳುಳ್ಳಿ: 6 ರಿಂದ 8 ಎಸಳು

ಲೆಮನ್ ಗ್ರೀನ್ ಚಿಕನ್ ಡ್ರೈ ಫ್ರೈ ಮಾಡುವ ವಿಧಾನ

ಮೊದಲಿಗೆ ಚಿಕನ್ ಬಿಸಿನೀರಿನಲ್ಲಿ ತೊಳೆದುಕೊಂಡು ನಿಮಗೆ ಬೇಕಾದ ಗಾತ್ರದಲ್ಲಿ ಕತ್ತರಿಸಿಕೊಳ್ಳಿ. ಆನಂತರ ಹಸಿಮೆಣಸಿನಕಾಯಿ ಮಧ್ಯ ಭಾಗದಿಂದ ಕತ್ತರಿಸಿ ಒಂದರಲ್ಲಿ ನಾಲ್ಕೈದು ತುಂಡು ಮಾಡಿಕೊಳ್ಳಬೇಕು. ನಂತರ ಕೋತಂಬರಿ ಸೊಪ್ಪು ಬಿಡಿಸಿಕೊಂಡ ತೊಳೆದುಕೊಂಡು ಸಣ್ಣದಾಗಿ ಕತ್ತರಿಸಿಕೊಂಡು ಎತ್ತಿಟ್ಟುಕೊಳ್ಳಿ. ಹಾಗೆಯೇ ಬೆಳ್ಳುಳ್ಳಿಯನ್ನು ತರಿತರಿಯಾಗಿ ಜಜ್ಜಿಕೊಳ್ಳಬೇಕು.

ಈಗ ಒಲೆ ಆನ್ ಮಾಡ್ಕೊಂಡು ಪಾತ್ರೆ ಇರಿಸಿಕೊಳ್ಳಿ. ಪಾತ್ರೆ ಬಿಸಿ ಆಗುತ್ತಿದ್ದಂತೆ ಎಣ್ಣೆ ಹಾಕಿಕೊಳ್ಳಿ. ಈಗ ಇದಕ್ಕೆ ಜೀರಿಗೆ ಹಾಕಿದ ನಂತರ ಹಸಿಮೆಣಸಿನಕಾಯಿಯನ್ನು ಎಣ್ಣೆಯಲ್ಲಿ ಫ್ರೈ ಮಾಡಿಕೊಳ್ಳಬೇಕು. ನಂತರ ಜಜ್ಜಿಕೊಂಡಿರುವ ಬೆಳ್ಳುಳ್ಳಿ ಮತ್ತು ಕರೀಬೇವು ಸೇರಿಸಿ. ತದನಂತರ ಚಿಕನ್ ಸೇರಿಸಿ ಎಣ್ಣೆಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.

chicken

ತದನಂತರ ಇದಕ್ಕೆ ಚಿಕನ್ ಮಸಾಲೆ, ಪೆಪ್ಪರ್ ಪೌಡರ್, ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು. ಕೊನೆಯದಾಗಿ ನಿಂಬೆಹಣ್ಣಿನ ರಸ ಸೇರಿಸಿ ಏಳರಿಂದ ಹತ್ತು ನಿಮಿಷಗಳ ಕಾಲ ಮುಚ್ಚಳ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿಕೊಳ್ಳಿ. 10 ನಿಮಿಷದ ನಂತರ  ಮುಚ್ಚಳ ತೆಗೆದು ಕೋತಂಬರಿ ಸೊಪ್ಪು ಸೇರಿಸಿದ್ರೆ ರುಚಿಯಾದ ಲೆಮನ್ ಗ್ರೀನ್ ಚಿಕನ್ ಡ್ರೈ ಫ್ರೈ ಸವಿಯಲು ಸಿದ್ಧವಾಗುತ್ತದೆ. 

Latest Videos

click me!