ಅತಿಥಿಗಳು ಬಂದಾಗ ಏನಾದ್ರೂ ಸ್ಪೆಷಲ್ ಮಾಡಬೇಕು ಅಂತ ಯೋಚಿಸುತ್ತಿದ್ರೆ ಈ ರುಚಿಯಾದ ಮೆಂತ್ಯಸೊಪ್ಪಿನ ಪಲ್ಯ ಮಾಡಿ. ಈ ರೀತಿಯ ಪಲ್ಯ/ಕರ್ರಿಯನ್ನು ವಿಶೇಷವಾಗಿ ಡಾಬಾಗಳಲ್ಲಿ ಮಾಡುತ್ತಾರೆ.
ಇದು ಬಿಸಿಯಾದ ಅನ್ನ ಅಥವಾ ಚಪಾತಿ/ರೊಟ್ಟಿಗೂ ಒಳ್ಳೆಯ ಕಾಂಬಿನೇಷನ್ ಆಗುತ್ತದೆ. ಖಡಕ್ ರೊಟ್ಟಿಗೂ ಬೆಸ್ಟ್ ಪೇರ್ ಎಂದೇ ಪರಿಗಣಿಸಲಾಗುತ್ತದೆ. ಮೆಂತ್ಯೆ ಸೊಪ್ಪು ಮತ್ತು ಬೆಳ್ಳುಳ್ಳಿ ಇದರ ಪ್ರಮಖ ಪದಾರ್ಥಗಳು.
ಬೆಳ್ಳುಳ್ಳಿ-ಮೆಂತ್ಯೆ ಸೊಪ್ಪಿನ ಮಾಡಲು ಬೇಕಾಗುವ ಸಾಮಾಗ್ರಿಗಳು
ಮೆಂತ್ಯೆ ಸೊಪ್ಪು: ಎರಡು ಕಟ್ಟು/ಕಪ್, ಬೆಳ್ಳುಳ್ಳಿ: 25 ಎಸಳು, ಮಧ್ಯಮ ಗಾತ್ರದ 2 ಈರುಳ್ಳಿ, ಟೊಮೆಟೋ: 2, ಕಡಲೆಬೀಜ: 2 ಟೀ ಸ್ಪೂನ್, ಹುರಗಡಲೆ: 2 ಟೀ ಸ್ಪೂನ್, ಬಿಳಿ ಎಳ್ಳು: 1 ಟೀ ಸ್ಪೂನ್, ಅಚ್ಚ ಖಾರದ ಪುಡಿ: 1 ಟೀ ಸ್ಪೂನ್, ಅರಿಶಿನ: 1/2 ಟೀ ಸ್ಪೂನ್, ಬ್ಯಾಡಗಿ ಮೆಣಸಿನಕಾಯಿ: 2, ಧನಿಯಾ ಪುಡಿ: 1 ಟೀ ಸ್ಪೂನ್, ಗರಂ ಮಸಾಲೆ: 1 ಟೀ ಸ್ಪೂನ್, ಜೀರಿಗೆ: 1 ಟೀ ಸ್ಪೂನ್, ಅಡುಗೆ ಎಣ್ಣೆ: 6 ಟೀ ಸ್ಪೂನ್, ಉಪ್ಪು: ರುಚಿಗೆ ತಕ್ಕಷ್ಟು
ಬೆಳ್ಳುಳ್ಳಿ-ಮೆಂತ್ಯೆ ಸೊಪ್ಪಿನ ಮಾಡುವ ವಿಧಾನ
ಮೊದಲಿಗೆ ಸೊಪ್ಪು ಬಿಡಿಸಿಕೊಂಡು ಎತ್ತಿಟ್ಟುಕೊಳ್ಳಿ. ನಂತರ ಒಲೆ ಆನ್ ಮಾಡ್ಕೊಂಡು ಬಾಣಲೆ ಇರಿಸಿಕೊಂಡು 2 ಟೀ ಸ್ಪೂನ್ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾಗುತ್ತಿದ್ದಂತೆ 10 ಬೆಳ್ಳುಳ್ಳಿ ಎಸಳು ಹಾಕಿ, ಗೋಲ್ಡನ್ ಕಲರ್ ಬರೋವರೆಗೂ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಮೆಂತ್ಯೆ ಸೊಪ್ಪು ಸೇರಿಸಿ ಸಾಫ್ಟ್ ಆಗುವರೆಗೂ ಬೇಯಿಸಿಕೊಂಡ್ರೆ ಅದರಲ್ಲಿರುವ ಕಹಿ ಅಂಶ ಕಡಿಮೆಯಾಗುತ್ತದೆ. ಈ ಸಮಯದಲ್ಲಿ ಚಿಟಿಕೆಯಷ್ಟು ಉಪ್ಪು ಸೇರಿಸಿ, ಸೊಪ್ಪು ಸಾಫ್ಟ್ ಆಗುತ್ತಿದ್ದಂತೆ ಒಲೆ ಆಫ್ ಮಾಡಿಕೊಳ್ಳಬೇಕು.
ಈಗ ಟೊಮೆಟೋ ಮತ್ತು ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿಕೊಂಡು ಎತ್ತಿಟ್ಟುಕೊಳ್ಳಿ. ಮಿಕ್ಸಿ ಜಾರಿಗೆ ಹುರಿದು ಸಿಪ್ಪೆ ತೆಗೆದಿರುವ ಕಡಲೆಬೀಜ, ಹುರಿಗಡಲೆ ಮತ್ತು ಬಿಳಿ ಎಳ್ಳು ಹಾಕಿ ಅರ್ಧ ಕಪ್ ನೀರು ಸೇರಿಸಿ ಸಣ್ಣದಾಗಿ ರುಬ್ಬಿಕೊಳ್ಳಬೇಕು. ಹಾಗೆಯೇ 15 ಬೆಳ್ಳುಳ್ಳಿ ಎಸಳುಗಳನ್ನು ತರತರಿಯಾಗಿ ಜಜ್ಜಿಕೊಂಡು ಎತ್ತಿಟ್ಟುಕೊಳ್ಳಿ.
ಈಗ ಒಲೆ ಆನ್ ಮಾಡ್ಕೊಂಡು ಅಗಲವಾದ ಬಾಣಲೆ ಇರಿಸಿಕೊಂಡು ನಾಲ್ಕು ಟೀ ಸ್ಪೂನ್ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾಗ್ತಿದ್ದಂತೆ ಜೀರಿಗೆ ಹಾಕಿಕೊಳ್ಳಿ. ಜೀರಿಗೆ ಸಿಡಿಯಲು ಆರಂಭಿಸುತ್ತಿದ್ದಂತೆ ಜಜ್ಜಿಕೊಂಡಿರುವ ಬೆಳ್ಳುಳ್ಳಿ ಎಸಳು ಮತ್ತು ಬ್ಯಾಡಗಿ ಮೆಣಸಿನಕಾಯಿ ಸೇರಿಸಿ ಎರಡು ನಿಮಿಷ ಫ್ರೈ ಮಾಡಿಕೊಳ್ಳಿ.
Dhaba Style Lasooni Methi
ಆ ಬಳಿಕ ಕತ್ತರಿಸಿಟ್ಟುಕೊಂಡಿರುವ ಈರುಳ್ಳಿ ಸೇರಿಸಿ ಹಸಿ ವಾಸನೆ ಹೋಗುವರೆಗೂ ಫ್ರೈ ಮಾಡಿಕೊಳ್ಳಬೇಕು. ತದನಂತರ ಕಡಲೆಬೀಜ-ಹುರಿಗಡಲೆ-ಎಳ್ಳಿನ ಪೇಸ್ಟ್ ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈ ಸಮಯದಲ್ಲಿ ಕಾಲು ಕಪ್‌ನಷ್ಟು ನೀರು ಸೇರಿಸಿಕೊಳ್ಳಬೇಕು.
ಈಗ ಟೊಮೆಟೋ ಸೇರಿಸಿ ಬೇಯಿಸಿಕೊಳ್ಳಬೇಕು. ನಂತರ ಅರಿಶಿನ, ಧನಿಯಾ, ಗರಂ ಮಸಾಲೆ, ಅಚ್ಚ ಖಾರದ ಪುಡಿ ಸೇರಿಸಿ ಪಾತ್ರೆ ಸುತ್ತಲೂ ಎಣ್ಣೆ ಬಿಡುವರೆಗೂ ಕಡಿಮೆ ಉರಿಯಲ್ಲಿ ನಾಲ್ಕರಿಂದ ಐದು ನಿಮಿಷ ಬೇಯಿಸಿಕೊಳ್ಳಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು. ಕೊನೆಗೆ ಫ್ರೈ ಮಾಡಿಕೊಂಡಿರುವ ಮೆಂತ್ಯೆ ಸೊಪ್ಪು-ಬೆಳ್ಳುಳ್ಳಿ ಮಿಶ್ರಣ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಅರ್ಧ ಕಪ್‌ನಷ್ಟು ಬಿಸಿ ನೀರು ಸೇರಿಸಿ ನಾಲ್ಕರಿಂದ ಐದು ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿಕೊಂಡ್ರೆ ರುಚಿಯಾದ ಬೆಳ್ಳುಳ್ಳಿ ಮಿಶ್ರಣದ ಮೆಂತ್ಯೆ ಸೊಪ್ಪಿನ ಪಲ್ಯ ಸವಿಯಲು ಸಿದ್ಧ.