ವಿದ್ಯಾರ್ಥಿ ಭವನದಲ್ಲಿ ಮಸಾಲೆ ದೋಸೆ, ಫಿಲ್ಟರ್‌ ಕಾಫಿ ಸವಿದ ಸ್ಟಾರ್‌ಬಕ್ಸ್ ಸಹ ಸಂಸ್ಥಾಪಕ

First Published | Nov 4, 2022, 3:50 PM IST

ನಮ್‌ ಜನಾನೇ ಹಾಗೇ..ಅಲ್ಲೆಲ್ಲೋ ಬಹಳ ದೂರದಲ್ಲಿರೋದು ಬಹಳ ಚೆಂದ ಅನಿಸುತ್ತೆ. ಇಲ್ಲೇ ಕಾಲಬುಡದಲ್ಲೇ ಸೊಬಗು ಕಾಲ್ ಮುರ್ಕೊಂಡು ಬಿದ್ದಿದ್ರೂ ಕಾಣೋದೆ ಇಲ್ಲ. ಹಾಗೆ ಆಗಿದೆ ಬೆಂಗಳೂರಿಗರ ಸ್ಥಿತಿ. ಇವತ್ತಿನ ಯುವಜನತೆಯಂತೂ ಮ್ಯಾಕ್ ಡೊನಾಲ್ಡ್‌, ಕೆಎಫ್‌ಸಿ, ಸ್ಟಾರ್‌ಬಕ್ಸ್ ಮೊದಲಾದ ವಿದೇಶಿ ಆಹಾರ ಮಳಿಗೆಗಳ ಫುಡ್ ತಿನ್ನಲು ಮುಗಿ ಬೀಳ್ತಾರೆ. ಹೀಗಿರುವಾಗ ಸ್ಟಾರ್‌ಬಕ್ಸ್ ಸಹ-ಸಂಸ್ಥಾಪಕರು ಬೆಂಗಳೂರಿನ ವಿದ್ಯಾರ್ಥಿ ಭವನದದಲ್ಲಿ ಮಸಾಲೆ ದೋಸೆ, ಫಿಲ್ಟರ್ ಕಾಫಿ ಸವಿದು ವಾವ್ಹ್ ಅಂದಿದ್ದಾರೆ.

ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನಕ್ಕೆ ಅನಿರೀಕ್ಷಿತ ಅತಿಥಿಯೊಬ್ಬರು ಆಗಮಿಸಿದ್ದರು. ಇಲ್ಲಿನ ಫೇಮಸ್ ಮಸಾಲೆ ದೋಸೆ ಹಾಗೂ ಫಿಲ್ಟರ್ ಕಾಫಿ ಸವಿದು ವಾರೆ ವ್ಹಾ ಅಂದರು. ಇಲ್ಲಿಗೆ ಭೇಟಿ ನೀಡಿದ್ದು ಮತ್ಯಾರೂ ಅಲ್ಲ ಸ್ಟಾರ್‌ಬಕ್ಸ್‌ನ ಸಹ-ಸಂಸ್ಥಾಪಕರಾದ ಜೆವ್ ಸೀಗಲ್.

ನಗರದಲ್ಲಿ ನಡೆಯುತ್ತಿರುವ ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ 2022ರಲ್ಲಿ ಪಾಲ್ಗೊಳ್ಳಲು ಜೆವ್ ಸೀಗಲ್ ಬೆಂಗಳೂರಿಗೆ ಬಂದಿದ್ದರು. ಅವರು 1971ರಲ್ಲಿ ಸ್ಟಾರ್‌ಬಕ್ಸ್, ಕಾಫಿಹೌಸ್‌ಗಳ ಸಂಸ್ಥೆಯನ್ನು ಸಹ-ಸ್ಥಾಪಿಸಿದರು. 1980ರಲ್ಲಿ ಕಂಪನಿಯಿಂದ ನಿರ್ಗಮಿಸುವವರೆಗೆ ಉಪಾಧ್ಯಕ್ಷ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಅವರು ಈಗ ಸ್ಟಾರ್ಟ್-ಅಪ್ ಸಲಹೆಗಾರ ಮತ್ತು ವ್ಯಾಪಾರ ಸಲಹೆಗಾರರಾಗಿ ಕೆಲಸ ಮಾಡುತ್ತಾರೆ.

Latest Videos


ವಿದ್ಯಾರ್ಥಿ ಭವನ ಸೋಷಿಯಲ್ ಮೀಡಿಯಾದಲ್ಲಿ ಝೇವ್‌ ಸೀಗಲ್ ಹೊಟೇಲ್‌ಗೆ ಗ್ರಾಹಕರಾಗಿ ವಿಸಿಟ್ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದೆ. ಜೆವ್ ಸೀಗಲ್ ವಿದ್ಯಾರ್ಥಿ ಭವನದಲ್ಲಿ  ಮಸಾಲೆ ದೋಸೆ ಮತ್ತು ಫಿಲ್ಟರ್ ಕಾಫಿ ಸವಿದ ಫೋಟೋಗಳನ್ನು ಶೇರ್ ಮಾಡಿಕೊಂಡಿದೆ.

ಸೀಗಲ್ ತಮ್ಮ ಅತಿಥಿ ಪುಸ್ತಕದಲ್ಲಿ ರೆಸ್ಟೋರೆಂಟ್‌ಗಾಗಿ ಸುಂದರವಾದ ಟಿಪ್ಪಣಿಯನ್ನು ಸಹ ಬರೆದಿದ್ದಾರೆ. 'ನನ್ನ ಸ್ನೇಹಿತರೇ, ನಿಮ್ಮ ಪ್ರಸಿದ್ಧ ಆಹಾರ, ಕಾಫಿ ಮತ್ತು ಆತ್ಮೀಯ ಸ್ವಾಗತವನ್ನು ಆನಂದಿಸಿ ಖುಷಿಯಾಗಿದೆ. ನಾನು ಈ ಅದ್ಭುತ ಅನುಭವವನ್ನು ನನ್ನೊಂದಿಗೆ ಸಿಯಾಟಲ್‌ಗೆ ಕೊಂಡೊಯ್ಯುತ್ತೇನೆ' ಎಂದು ಪೋಸ್ಟ್ ಮಾಡಿದ್ದಾರೆ.

ಜೆವ್ ಸೀಗಲ್ ಒಬ್ಬ ಅಮೇರಿಕನ್ ಉದ್ಯಮಿಯಾಗಿದ್ದು, ಅವರು 1971 ರಲ್ಲಿ ಸ್ಟಾರ್‌ಬಕ್ಸ್ ಅನ್ನು ಸಹ-ಸ್ಥಾಪಿಸಿದರು. ನಂತರ ಅವರು ಸ್ಟಾರ್‌ಬಕ್ಸ್‌ನ ಉಪಾಧ್ಯಕ್ಷ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಅವರು ತಮ್ಮ ಸಂಗ್ರಹವಾದ ಅನುಭವದ ಆಧಾರದ ಮೇಲೆ ತಮ್ಮ ಉದ್ಯಮಶೀಲತೆಯ ಒಳನೋಟಗಳನ್ನು ಹಂಚಿಕೊಳ್ಳಲು ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ 2022 ರಲ್ಲಿ ಪಾಲ್ಗೊಳ್ಳುವವರಾಗಿ ಈಗ ಬೆಂಗಳೂರಿನಲ್ಲಿದ್ದಾರೆ.

1943-44ರಲ್ಲಿ ಹತ್ತಿರದ ಶಾಲೆಯ ವಿದ್ಯಾರ್ಥಿಗಳಿಗೆ ಕ್ಯಾಂಟೀನ್ ಆಗಿ ಪ್ರಾರಂಭವಾದ ವಿದ್ಯಾರ್ಥಿ ಭವನವು ಅಂದಿನಿಂದ ಬೆಂಗಳೂರಿನ ಪ್ರೀತಿಯ ಹೆಗ್ಗುರುತಾಗಿದೆ. ಇಲ್ಲಿನ ಮಸಾಲೆ ದೋಸೆ ದೇಶಾದ್ಯಂತ ಹೆಸರುವಾಸಿಯಾಗಿದೆ. ಈ ಸ್ಪೆಷಲ್ ದೋಸೆ ಗರಿಗರಿಯಾಗಿರುತ್ತದೆ. ಹೊರಭಾಗದಲ್ಲಿ ದಪ್ಪವಾಗಿದ್ದು ಒಳಗಡೆ ಆಲೂಗಡ್ಡೆಯ ಬಾಜಿಯನ್ನು ಒಳಗೊಂಡಿರುತ್ತದೆ. ಜೊತೆಗೆ ಸವಿಯಲು ಚಟ್ನಿಯನ್ನು ಸಹ ನೀಡಲಾಗುತ್ತದೆ.

79 ವರ್ಷಗಳ ಇತಿಹಾಸದಲ್ಲಿ ವಿದ್ಯಾರ್ಥಿ ಭವನವು ಗರಿಗರಿಯಾದ ದೋಸೆ, ಪೂರಿ ಸಾಗು, ಸ್ಟ್ರಾಂಗ್ ಫಿಲ್ಟರ್ ಕಾಫಿ ಸೇರಿದಂತೆ ದಕ್ಷಿಣ ಭಾರತದ ಕೆಲವೇ ತಿನಿಸುಗಳನ್ನೇ ಅಚ್ಚುಕಟ್ಟಾಗಿ ನೀಡುತ್ತಾ ಬಂದಿದೆ. ಯಾವಾಗ ನೋಡಿದರೂ ಕಿಕ್ಕಿರಿದ ಜನಸಂದಣಿ ಇದ್ದೇ ಇರುತ್ತದೆ.

ವಿದ್ಯಾರ್ಥಿ ಭವನ ಎಂದರೆ ಸಾಕು ಮಸಾಲೆ ದೋಸೆ ಎಂಬ ಪದ ಜೋಡುಪದದಂತೆ ಜೊತೆಗೇ ನಾಲಿಗೆ ಮೇಲೆ ಬಂದು ಬಿಡುತ್ತದೆ. ಇಲ್ಲಿನ ಮಸಾಲೆದೋಸೆ ಅಷ್ಟು ಫೇಮಸ್. ಅದರ ಜೊತೆಗೆ ತಟ್ಟೆಗಳನ್ನು ಒಂದರ ಮೇಲೊಂದು ಹಿಡಿದು ಬರುವ ರೀತಿಯೂ ಅಷ್ಟೇ ಪ್ರಸಿದ್ಧಿಯಾಗಿದೆ. ಇಲ್ಲಿನ ಮಸಾಲೆ ದೋಸೆ ಸವಿಯಲ ಜನರು ಗಂಟೆಗಟ್ಟಲೆ ಸರದಿಯಲ್ಲಿ ಕಾಯುತ್ತಾರೆ.

ಗಾಂಧಿ ಬಜಾರ್‌ನಲ್ಲಿರುವ ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡುವ ಜನರ ಸಂಖ್ಯೆಯೇ ಬೆಂಗಳೂರಿನ ಪಾಕಶಾಲೆ ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ಅದರ ವಿಶೇಷತೆಗೆ ಸಾಕ್ಷಿಯಾಗಿದೆ. ವಾರದ ದಿನಗಳಲ್ಲಿ ರೆಸ್ಟೋರೆಂಟ್‌‌ನಲ್ಲಿ ಪ್ರತಿದಿನ ಸರಾಸರಿ 1,200 ಮಸಾಲೆ ದೋಸೆಗಳು ಖರ್ಚಾಗುತ್ತದೆ. ಮತ್ತು ವಾರಾಂತ್ಯದಲ್ಲಿ, ಈ ಸಂಖ್ಯೆ 2,000 ದಾಟುತ್ತದೆ.

click me!