ದಕ್ಷಿಣ ಭಾರತದ ಪಾಕಶೈಲಿಗೆ ಗಣನೀಯ ಬೇಡಿಕೆ, ಅಡುಗೆಯವರ ಕೊರತೆ, ಯಂತ್ರದ ಮೊರೆ ಹೋದ ಬೆಂಗಳೂರು ಹೊಟೇಲ್‌ಗಳು

Published : Jun 22, 2025, 05:16 PM IST

ದಕ್ಷಿಣ ಭಾರತೀಯ ಪಾಕಪದ್ಧತಿಯ ಬೇಡಿಕೆ ಹೆಚ್ಚುತ್ತಿರುವ ಹೊತ್ತಿನಲ್ಲಿ ಅಡುಗೆಯವರ ಕೊರತೆ ಎದುರಾಗಿದೆ. ಹೋಟೆಲ್ ಉದ್ಯಮ ಯಾಂತ್ರೀಕರಣದತ್ತ ಮುಖಮಾಡುತ್ತಿದ್ದು, ವಡೆ, ಪೊಂಗಲ್ ತಯಾರಿಕೆಯ ಯಂತ್ರಗಳು ಈಗಾಗಲೇ ಬಳಕೆಯಲ್ಲಿವೆ. ಆದರೆ, ಮೈಸೂರು ಪಾಕ್‌ನಂತಹ ಸೂಕ್ಷ್ಮ ಖಾದ್ಯಗಳಿಗೆ ಮಾನವ ಸ್ಪರ್ಶ ಇನ್ನೂ ಅನಿವಾರ್ಯ.

PREV
16

ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತೀಯ ಪಾಕಶೈಲಿಗೆ ಬೇಡಿಕೆ ಗಣನೀಯವಾಗಿ ಹೆಚ್ಚುತ್ತಿದೆ. ಇದೇ ವೇಳೆ, ಹಲವಾರು ಹೋಟೆಲ್‌ಗಳು ಅಡುಗೆಯವರ ತೀವ್ರ ಕೊರತೆಯನ್ನು ಎದುರಿಸುತ್ತಿವೆ. ಈ ಹಿನ್ನಲೆಯಲ್ಲಿ, ತಂತ್ರಜ್ಞಾನ ಮತ್ತು ಯಾಂತ್ರೀಕೃತ ಉಪಕರಣವನ್ನು ಅಡುಗೆ ಮನೆಯ ಕೆಲಸಗಳಲ್ಲಿ ಬಳಸಲು ಹೋಟೆಲ್ ಉದ್ಯಮವು ಹೊಸ ಮಾರ್ಗಗಳತ್ತ ಮುಖ ಮಾಡುತ್ತಿದೆ. ಯಾಂತ್ರೀಕರಣ ಹೊಸದಾಗಿ ಪರಿಚಿತವಲ್ಲದಿದ್ದರೂ, ಈಗ ಅದು ಇನ್ನಷ್ಟು ಪ್ರಬಲವಾಗಿ ರೂಪುಗೊಳ್ಳುತ್ತಿದೆ. ಅಂದರೆ ಸಾಂಪ್ರದಾಯಿಕವಾಗಿ ಮಾನವನ ಕೈಗಳಿಂದ ನಿರ್ವಹಿಸಲಾಗುವ ಕಾರ್ಯಗಳು ಈಗ ಯಂತ್ರಗಳ ಮೂಲಕ ಸಾದ್ಯವಾಗುತ್ತಿವೆ.

26

"ದಕ್ಷಿಣ ಭಾರತೀಯ ಅಡುಗೆಯವರನ್ನು ಪತ್ತೆ ಹಚ್ಚುವುದು ಅತ್ಯಂತ ಕಷ್ಟಕರವಾಗಿದೆ" ಎಂದು ಬೆಂಗಳೂರು ಹೋಟೆಲ್‌ಗಳ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್ ಹೇಳಿದ್ದಾರೆ. "ವಡಾ, ಪೊಂಗಲ್ ತಯಾರಿಕೆಗಾಗಿ ಈಗಾಗಲೇ ಯಂತ್ರಗಳು ಇವೆ. ಆದರೆ ಪದಾರ್ಥಗಳನ್ನು ಅಳೆಯುವುದು ಮತ್ತು ಅವುಗಳನ್ನು ಯಂತ್ರಗಳಿಗೆ ಪೂರೈಸುವುದು ಇನ್ನೂ ಕೈ ಕೆಲಸವಾಗಿದೆ. ಇದರಿಂದ ಪೂರ್ಣ ಯಾಂತ್ರೀಕರಣ ಇನ್ನೂ ಸಾಧ್ಯವಾಗಿಲ್ಲ" ಎಂಬುದಾಗಿ ಅವರು ಅಭಿಪ್ರಾಯಪಟ್ಟರು. ಅವರು ಖಾಸಗಿ ಸುದ್ದಿ ವೆಬ್‌ತಾಣದ ಜೊತೆ ಮಾತನಾಡಿದ್ದು, ಮೀಡಿಯಾ ಡೇ ಮಾರ್ಕೆಟಿಂಗ್ ಟ್ರೇಡ್ ಎಕ್ಸ್‌ಪೋ ಉದ್ಘಾಟನೆಯ ಸಂದರ್ಭದಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ.

36

ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ ಕೂಡ ರಾವ್ ಅವರ ಅಭಿಪ್ರಾಯಕ್ಕೆ ಮನ್ನಣೆ ನೀಡಿ, ಯಂತ್ರಗಳ ಸಹಾಯದಿಂದ ಅಡುಗೆಯ ಭಾರೀ ಉತ್ಪಾದನೆ ಸಾಧ್ಯವಿದೆ. ವಡಾ ಮತ್ತು ಪೊಂಗಲ್ ಯಂತ್ರಗಳು ಈಗಾಗಲೇ ಕೆಲವು ಹೋಟೆಲ್‌ಗಳಲ್ಲಿ ಬಳಸಲಾಗುತ್ತಿವೆ. ಆದರೆ ಮೈಸೂರು ಪಾಕ್ ತಯಾರಿಕೆಯಲ್ಲಿ ತುಪ್ಪ ಅಥವಾ ಸಕ್ಕರೆ ಸುರಿಯುವಂತಹ ನಿಖರತೆಗಾಗಿ ಮಾನವನ ಸ್ಪರ್ಶ ಬೇಕಾಗುತ್ತದೆ. ಅಲ್ಲಿ ಯಂತ್ರಗಳಿಗೆ ಮಿತಿ ಇದೆ ಎಂದು ಹೇಳಿದರು.

46

ಕೊನಾರ್ಕ್ ಹೋಟೆಲ್ ಮಾಲೀಕರಾದ ಕೆ. ರಾಮಮೂರ್ತಿ, ತಮ್ಮ 40 ವರ್ಷಗಳ ಅನುಭವವನ್ನು ಹಂಚಿಕೊಳ್ಳುತ್ತಾ, ದಕ್ಷಿಣ ಭಾರತೀಯ ಆಹಾರದ ಯಾಂತ್ರೀಕರಣದಲ್ಲಿ ಹಲವಾರು ಸವಾಲುಗಳಿರುವುದಾಗಿ ಹೇಳಿದ್ದಾರೆ. ಈ ಆಹಾರ ಪೀಳಿಗೆಗಳಿಂದ ಪೀಳಿಗೆಗಳಿಗೆ ವರ್ಗಾವಣೆ ಆಗುವುದರಿಂದ ಅದನ್ನು ಕೇವಲ ತರಬೇತಿಯ ಮೂಲಕ ಕಲಿಸಬಲ್ಲ ಪರಿಸ್ಥಿತಿ ಇಲ್ಲ. ಪಾನೀಯಗಳ ತಯಾರಿಕೆಯಲ್ಲಿ ಯಾಂತ್ರೀಕರಣ ಸಾಧ್ಯವಾದರೂ, ಆಹಾರದ ವಿಷಯದಲ್ಲಿ ಇದು ಕಷ್ಟಸಾಧ್ಯ ಎಂದು ಅವರು ವಿವರಿಸಿದರು. ಮೂರ್ತಿ ಅವರ ತ್ರೀ-ಸ್ಟಾರ್ ಹೋಟೆಲ್‌ನಲ್ಲಿ ಹಲವಾರು ತಂತ್ರಜ್ಞಾನಗಳು ಅಳವಡಿಸಲ್ಪಟ್ಟಿವೆ. ಉದಾಹರಣೆಗೆ, ಕಾಂಬಿ ಓವನ್ ಮೂಲಕ ಅನ್ನ, ಬಿಸಿಬೇಳೆ ಬಾತ್, ಪೊಂಗಲ್ ಮುಂತಾದ ಅಕ್ಕಿ ಪದಾರ್ಥಗಳನ್ನು ಸುಲಭವಾಗಿ ತಯಾರಿಸಬಹುದು. ಉದ್ದಿನ ವಡೆಗಳಿಗಾಗಿ ಡೋನಟ್ ಯಂತ್ರದಂತೆಯೇ ಕೆಲಸ ಮಾಡುವ ಯಂತ್ರವಿದೆ. ನಾವು ದಕ್ಷಿಣ ಭಾರತೀಯ ಫಿಲ್ಟರ್ ಕಾಫಿ ಯಂತ್ರ, ಇಡ್ಲಿ ತಯಾರಿಕಾ ವ್ಯವಸ್ಥೆಗಳನ್ನೂ ಅಳವಡಿಸುತ್ತಿದ್ದೇವೆ” ಎಂದು ಅವರು ಹೇಳಿದರು. ಆದರೆ, ಮಸಾಲಾದೋಸೆ ಅಥವಾ ಸಾಂಬಾರ್ ತಯಾರಿಕೆಯಲ್ಲಿ ಇನ್ನೂ ಯಂತ್ರಗಳಿಗೆ ಮಿತಿ ಇದೆ.

56

ಐಐಎಚ್‌ಎಂ ಬೆಂಗಳೂರು ನಿರ್ದೇಶಕಿ ಸಂಚಾರಿ ಚೌಧರಿ, ಯಾಂತ್ರೀಕರಣ ಹಾಗೂ ಏಐ (AI) ತಂತ್ರಜ್ಞಾನದ ಉಪಯೋಗದ ಕುರಿತು ಮಾತನಾಡುತ್ತಾ, “ಆತಿಥ್ಯ ಕ್ಷೇತ್ರದಲ್ಲಿ ಮಾನವ ಸ್ಪರ್ಶ ಅತ್ಯಗತ್ಯವೇ ಸರಿ. ಆದರೂ ಮೆನು ಯೋಜನೆ, ಇನ್ವೆಂಟರಿ ನಿರ್ವಹಣೆ, ಮತ್ತು ಅಡುಗೆ ಪದಾರ್ಥಗಳ ಅಳತೆಗಳಲ್ಲಿ AI ಸಹಕಾರ ನೀಡುತ್ತಿದೆ. ಕೆಲವೊಂದು ರೆಸ್ಟೋರೆಂಟ್‌ಗಳು ಗ್ರಾಹಕರ ಆಹಾರದ ಆದ್ಯತೆ, ಆಸನ ಪಠ್ಯಗಳನ್ನು ಕೂಡ ಸ್ವಯಂಚಾಲಿತವಾಗಿ ಸಂಗ್ರಹಿಸುತ್ತಿವೆ” ಎಂದರು.

66

"ಬೆಂಗಳೂರು ಎಂಬುದು ಯಾಂತ್ರೀಕರಣವನ್ನು ಒಪ್ಪಿಕೊಂಡ ನಗರ" ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು. "ಹೋಟೆಲ್‌ಗಳಲ್ಲಿ ಕೀ ಕಾರ್ಡ್‌ಗಳನ್ನು ಮೊಬೈಲ್ ಚೆಕ್‌ಇನ್ ಮೂಲಕ ಬದಲಿಸಲಾಗುತ್ತಿದೆ. ತಂತ್ರಜ್ಞಾನವು ಆತಿಥ್ಯ ಕ್ಷೇತ್ರದ ರೂಪವನ್ನೇ ಬದಲಾಯಿಸುತ್ತಿದೆ. ಆದರೆ, ಇಂದಿಗೂ ಈ ಕ್ಷೇತ್ರದಲ್ಲಿ ಮಾನವೀಯ ಸ್ಪರ್ಶ ಅತ್ಯವಶ್ಯಕವಾಗಿದೆ" ಎಂದೂ ಅವರು ತೀರ್ಮಾನಿಸಿದರು. ತಂತ್ರಜ್ಞಾನ ಅಳವಡಿಸುವ ಪ್ರಯತ್ನಗಳು ಬೃಹತ್ ಅಡುಗೆಮನೆಗಳಿಗೆ ಸಹಕಾರಿಯಾಗಬಹುದಾದರೂ, ಭಾರತೀಯ ಪಾಕಪದ್ಧತಿಯ ವೈಶಿಷ್ಟ್ಯತೆ ಮತ್ತು ಮಾನವೀಯತೆಯನ್ನು ಸಂಪೂರ್ಣವಾಗಿ ಬದಲಾಯಿಸುವಂತಿಲ್ಲ. ಅಡುಗೆಯು ಕೇವಲ ರುಚಿಗೆ ಮಾತ್ರವಲ್ಲ, ಅದು ಪರಂಪರೆಗೂ ಸಂಬಂಧಿಸಿದೆ.

Read more Photos on
click me!

Recommended Stories