ಕುಕ್ಕರ್‌ನಲ್ಲಿ ಮೃದುವಾಗಿ ರಾಗಿ ಮುದ್ದೆ ಮಾಡುವ ಸಿಂಪಲ್ ವಿಧಾನ: ತಿಂದವ್ರು ಹೇಳ್ತಾರೆ ವಾವ್, ವಾವ್!

Published : Jul 19, 2025, 08:15 PM IST

Ragi Mudde Making: ರಾಗಿ ಮುದ್ದೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಕರ್ನಾಟಕದ ದಕ್ಷಿಣ ಭಾಗದ ಜನರ ಪ್ರಮುಖ ಆಹಾರ. ಈ ಲೇಖನದಲ್ಲಿ ಕುಕ್ಕರ್‌ನಲ್ಲಿ ಸುಲಭವಾಗಿ ರಾಗಿ ಮುದ್ದೆ ಮಾಡುವ ವಿಧಾನ ಮತ್ತು ಅದರ ಆರೋಗ್ಯಕರ ಲಾಭಗಳನ್ನು ವಿವರಿಸಲಾಗಿದೆ.

PREV
16
ಆರೋಗ್ಯಕ್ಕೆ ಉತ್ತಮ ಈ ರಾಗಿ

ಕರ್ನಾಟಕದ ದಕ್ಷಿಣ ಭಾಗದ ಜನರು ರಾಗಿಯನ್ನು ಅತ್ಯಧಿಕವಾಗಿ ಬಳಸುತ್ತಾರೆ. ದಿನಕ್ಕೆ ಎರಡು ಹೊತ್ತು ರಾಗಿ ಮುದ್ರೆ ಇದ್ರೆ ಹಳೆ ಮೈಸೂರು ಭಾಗದ ಜನರಿಗೆ ಮತ್ಯಾವ ಹೋಳಿಗೆ ತುಪ್ಪದ ಊಟವೇ ಬೇಡ. ಬೆಳಗ್ಗೆ ಎರಡು ರಾಗಿ ಮುದ್ದೆ ತಿಂದ್ರೆ ಇಡೀ ದಿನ ಹಸಿವು ಎಂಬ ಮಾತೇ ಬರಲ್ಲ. ಇತ್ತೀಚೆಗೆ ರಾಗಿ ಅಂಬಲಿ, ರಾಗಿ ದೋಸೆ, ರಾಗಿ ರೊಟ್ಟಿಯನ್ನು ಮಾಡುತ್ತಾರೆ. ಆದರೆ ರಾಗಿ ಮುದ್ದೆ ನೀಡುವ ಆನಂದ ಮತ್ಯಾವ ಆಹಾರ ನೀಡಲಾರದು. ಮದುಮೇಹಿ ರೋಗಿಗಳಿಗೂ ರಾಗಿ ಸೇವನೆಗೆ ಸಲಹೆ ನೀಡುತ್ತಾರೆ.

26
ಕುಕ್ಕರ್‌ನಲ್ಲಿ ರಾಗಿ ಮುದ್ದೆ

ರಾಗಿ ಮುದ್ದೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ. ಇಂದಿನ ಯುವ ಜನತೆಗೆ ರಾಗಿ ಮುದ್ದೆ ಮಾಡೋದು ಕಷ್ಟಕರ ಕೆಲಸ. ರಾಗಿ ಹಿಟ್ಟು ಬೇಯಿಸುವಾಗ ಕೋಲುಗಳಿಂದ ಶಕ್ತಿ ಹಾಕಿ ತಿರುವಿಸಬೇಕಾಗುತ್ತದೆ. ರಾಗಿ ಮುದ್ದೆ ಮಾಡಲು ಶಕ್ತಿ ಜೊತೆಗೆ ಯುಕ್ತಿಯೂ ಬೇಕಾಗುತ್ತದೆ. ಇಂದು ನಾವು ನಿಮಗೆ ಕುಕ್ಕರ್‌ನಲ್ಲಿ ಹೇಗೆ ಸುಲಭವಾಗಿ ರಾಗಿ ಮುದ್ದೆ ಮಾಡೋದು ಹೇಗೆ ಅಂತ ಹೇಳುತ್ತಿದ್ದೇವೆ. ಮೊದಲ ಬಾರಿಗೆ ರಾಗಿ ಮುದ್ದೆ ಮಾಡಲು ಪ್ರಯತ್ನಿಸುತ್ತಿರೋರು ಈ ವಿಧಾನ ಅನುಸರಿಸಬಹುದು. ಹೆಚ್ಚು ಶ್ರಮವಿಲ್ಲದೇ ಮೃದುವಾದ ರಾಗಿ ಮುದ್ದೆ ಮಾಡುವ ವಿಧಾನದ ವಿಡಿಯೋ ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

36
ಕುಕ್ಕರ್‌ನಲ್ಲಿ ರಾಗಿ ಮುದ್ದೆ ಮಾಡುವ ವಿಧಾನ

ಮೊದಲಿಗೆ ಒಂದು ಬೌಲ್‌ನಲ್ಲಿ ರಾಗಿ ಹಿಟ್ಟು ಹಾಕಿಕೊಳ್ಳಿ. ಇದಕ್ಕೆ ಸುಡುತ್ತಿರೊ ನೀರು ಸೇರಿಸಿಕೊಂಡು ಹಿಟ್ಟು ಗಂಟು ಆಗದಂತೆ ಚೆನ್ನಾಗಿ ಕಲಿಸಿಕೊಳ್ಳಿ. ಹಿಟ್ಟಿನಲ್ಲಿ ಒಂದೇ ಒಂದು ಗಂಟು ಇದ್ರೂ ಮುದ್ದೆ ಸಾಫ್ಟ್ ಆಗಲ್ಲ. ಹಾಗಾಗಿ ಬಿಸಿನೀರಿನಲ್ಲಿ ರಾಗಿ ಹಿಟ್ಟು ಸೇರಿಸಿದ ಬಳಿಕ ಚಮಚದಿಂದ ಚೆನ್ನಾಗಿ ಕಲಿಸಿಕೊಳ್ಳಬೇಕು. ಈ ಹಿಟ್ಟಿಗೆ ಬೇಕಿದ್ರೆ ಒಂದು ಹನಿ ಅಡುಗೆಎಣ್ಣೆಯನ್ನು ಸೇರಿಸಿಕೊಳ್ಳಬಹುದು.

46
ಕಡಿಮೆ ಉರಿಯಲ್ಲಿ 2 ಕೂಗು ಕೂಗಿಸಿಕೊಳ್ಳಿ

ಈಗ ದೊಡ್ಡದಾದ ಕುಕ್ಕರ್ ತೆಗೆದುಕೊಂಡು ಒಲೆ ಮೇಲೆ ಇರಿಸಿಕೊಳ್ಳಿ. ಇದಕ್ಕೆ ಒಂದು ಗ್ಲಾಸ್‌ನಷ್ಟು ನೀರು ಹಾಕಿಕೊಳ್ಳಿ. ನಂತರ ಕುಕ್ಕರ್‌ನೊಳಗೆ ಸ್ಟ್ಯಾಂಡ್ ಇರಿಸಿಕೊಳ್ಳಿ. (ನಿಮ್ಮ ಬಳಿ ಸ್ಟ್ಯಾಂಡ್ ಇರದಿದ್ರೆ ಚಿಕ್ಕದಾದ ಕಪ್‌ ಉಲ್ಟಾ ಆಗಿ ಇಟ್ಟುಕೊಳ್ಳಿ). ಈ ಸ್ಟ್ಯಾಂಡ್ ಮೇಲೆ ರಾಗಿ ಹಿಟ್ಟು ಕಲಿಸಿಕೊಂಡಿರುವ ಪಾತ್ರೆಯನ್ನಿಡಿ. ಈ ಪಾತ್ರೆಯನ್ನು ಪ್ಲೇಟ್‌ನಿಂದ ಮುಚ್ಚಬೇಕು. ಕೊನೆಗೆ ಕುಕ್ಕರ್ ಮುಚ್ಚಳ ಮುಚ್ಚಿ ಕಡಿಮೆ ಉರಿಯಲ್ಲಿ 2 ವಿಷಲ್ ಕೂಗಿಸಿಕೊಂಡು ಒಲೆ ಆಫ್ ಮಾಡಿಕೊಳ್ಳಿ.

56
ಚಿಕ್ಕ ಉಂಡೆಗಳನ್ನಾಗಿ ಕಟ್ಟಿಕೊಂಡ್ರೆ ರಾಗಿ ಮುದ್ದೆ ರೆಡಿ

ಕುಕ್ಕರ್ ಪ್ರೆಷರ್ ಕಡಿಮೆಯಾಗೋವರೆಗೂ ವೇಟ್ ಮಾಡಿ. ಪ್ರೆಷರ್ ಕಡಿಮೆಯಾಗುತ್ತಿದ್ದಂತೆ ಕುಕ್ಕರ್ ಓಪನ್ ಮಾಡಿ. ರಾಗಿ ಹಿಟ್ಟಿನ ಪಾತ್ರೆಯನ್ನು ಮೇಲೆತ್ತಿಕೊಂಡು ಮುಚ್ಚಳ ತೆಗೆದು ತಣ್ಣೀರು ಚುಮುಕಿಸಿ. ಈಗ ಹಿಟ್ಟು ತೆಗೆದುಕೊಂಡು ಚಿಕ್ಕ ಉಂಡೆಗಳನ್ನಾಗಿ ಮುದ್ದೆ ಕಟ್ಟಿಕೊಂಡರೆ ಮೃದುವಾದ ರಾಗಿ ಮುದ್ದೆ ಸವಿಯಲು ಸಿದ್ದವಾಗುತ್ತದೆ. ಇದೇ ಹಿಟ್ಟನ್ನು ಇಡ್ಲಿ ಪಾತ್ರೆಯಲ್ಲಿ ಬೇಯಿಸಿಕೊಂಡರೆ ರಾಗಿ ಇಡ್ಲಿ ಆಗುತ್ತದೆ. ಮಕ್ಕಳು ರಾಗಿಮುದ್ದೆ ತಿನ್ನಲ್ಲ ಅಂತ ಹಠ ಮಾಡುತ್ತಿದ್ರೆ ರಾಗಿ ಇಡ್ಲಿಯನ್ನು ಸಹ ಇದೇ ವಿಧಾನದಲ್ಲಿ ತಯಾರಿಸಬಹುದು.

66
ರಾಗಿ ಆರೋಗ್ಯಕರ ಲಾಭಗಳು

ರಾಗಿ ಕ್ಯಾಲ್ಸಿಯಂ, ಕಬ್ಬಿಣ, ಫೈಬರ್ ಮತ್ತು ಇತರ ಅಗತ್ಯ ಪೋಷಕಾಂಶಗಳ ಉತ್ತಮ ಮೂಲವಾಗಿದ್ದು, ಮೂಳೆಗಳನ್ನು ಬಲಪಡಿಸುವ ಸಾಮಾರ್ಥ್ಯವನ್ನು ಹೊಂದಿದೆ. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರೋರಿಗೆ ರಾಗಿ ಒಳ್ಳೆಯ ಆಹಾರವಾಗಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಫೈಬರ್ ಅಂಶ ಹೊಂದಿರುವ ಕಾರಣ ಹೆಚ್ಚು ಸಮಯ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ಹೃದಯ ಆರೋಗ್ಯಕ್ಕೆ ಬೇಕಾಗಿರುವ ಮೆಗ್ನೀಸಿಯಮ್ ಮತ್ತು ಫೈಬರ್ ಅಂಶವನ್ನು ರಾಗಿ ಹೊಂದಿದೆ. ಇದರ ಜೊತೆಗೆ ರಾಗಿಯು ಗ್ಲುಟನ್-ಮುಕ್ತವಾಗಿದೆ. ನಿಯಮಿತ ರಾಗಿ ಸೇವನೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

Read more Photos on
click me!

Recommended Stories