ಹಬ್ಬದ ದಿನಗಳಲ್ಲಿ ಸಿಹಿ ತಿಂದು ಬೇಸರವಾಗಿದ್ದರೆ, ಹೊಸ ರುಚಿಯ, ಚೈತನ್ಯ ನೀಡುವ ಖಡಕ್ ಖಾರವಾದ ಸಾಸಿವೆ ರಸಂ ಮಾಡಿಕೊಳ್ಳಿ. ಇದು ಕೇವಲ 5 ರಿಂದ 6 ನಿಮಿಷದಲ್ಲಿ ಸುಲಭವಾಗಿ ತಯಾರಾಗುತ್ತದೆ ಮತ್ತು ಬಿಸಿ ಅನ್ನದೊಂದಿಗೆ ಅದ್ಭುತ ರುಚಿ ನೀಡುತ್ತದೆ.
ದೀಪಾವಳಿ ಅತಿದೊಡ್ಡ ಹಬ್ಬವಾಗಿದ್ದು, ಮನೆಗಳಲ್ಲಿ ಸಿಹಿ ಅಡುಗೆ ಮಾಡಲಾಗುತ್ತದೆ. ಹಾಗೆಯೇ ಸಿಹಿಯನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ. ಎರಡ್ಮೂರು ದಿನಗಳಿಂದ ಸಿಹಿ ತಿಂದು ಬೇಸರವಾಗಿದ್ರೆ, 5 ರಿಂದ 6 ನಿಮಿಷದಲ್ಲಿ ಸಿದ್ಧವಾಗುವ ಖಡಕ್ ಖಾರ ಖಾರವಾದ ಸಾಸಿವೆ ರಸಂ (Mustard Spicy Rasam) ಮಾಡ್ಕೊಳ್ಳಿ. ಈ ರಸಂ ನಾಲಿಗೆ ಹೊಸ ರುಚಿ ಜೊತೆಗೆ ಚೈತನ್ಯ ನೀಡುತ್ತದೆ.
25
ಸಾಸಿವೆ ರಸಂ ಮಾಡಲು ಬೇಕಾಗುವ ಸಾಮಾಗ್ರಿಗಳು
1 ಟೀ ಸ್ಪೂನ್ ಸಾಸಿವೆ, 1/2 ಟೀ ಸ್ಪೂನ್ ಜೀರಿಗೆ, 6 ರಿಂದ 8 ಬೆಳ್ಳುಳ್ಳಿ ಎಸಳು, ಹಸಿಮೆಣಸಿನಕಾಯಿ: 2, 5 ರಿಂದ 6 ಕರಬೇವಿನ ಎಲೆ, 7 ರಿಂದ 8 ಕಾಳುಮೆಣಸು, ಒಂದು ಟೀ ಸ್ಪೂನ್ ಎಣ್ಣೆ, ಅಡಿಕೆ ಗಾತ್ರದಷ್ಟು ಹುಣಸೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕೋತಂಬರಿ ಸೊಪ್ಪು
35
ಸಾಸಿವೆ ರಸಂ ಮಾಡುವ ವಿಧಾನ
ಮೊದಲಿಗೆ ಸಾಸಿವೆ ಮತ್ತು ಕಾಳುಮೆಣಸು (ಕರಿಕಾಳು) ಕಾವಲಿ ಮೇಲೆ ಹಾಕಿಕೊಂಡು ಬಿಸಿ ಮಾಡಿಕೊಳ್ಳಿ. ನಂತರ ಬೆಳ್ಳುಳ್ಳಿಯ ಸಿಪ್ಪೆ ಬಿಡಿಸಿಕೊಳ್ಳಿ. ಈಗ ಸಾಸಿವೆ, ಕಾಳುಮೆಣಸು ಮತ್ತು ಬೆಳ್ಳುಳ್ಳಿಯನ್ನು ತರಿತರಿಯಾಗಿ ಜಜ್ಜಿಕೊಳ್ಳಿ. ಮತ್ತೊಂದೆಡೆ ಕೋತಂಬರಿ ಸೊಪ್ಪು ಸಣ್ಣದಾಗಿ ಕತ್ತರಿಸಿಕೊಳ್ಳಿ. ಹಾಗೆಯೇ ಹುಣಸೆಹಣ್ಣನ್ನು ನೀರಿನಲ್ಲಿ ನೆನೆಸಿಟ್ಟುಕೊಳ್ಳಿ.
ಈಗ ಒಲೆ ಆನ್ ಮಾಡ್ಕೊಂಡು ಪಾತ್ರೆಯನ್ನಿಟ್ಟುಕೊಂಡು ಅಡುಗೆಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಜೀರಿಗೆ ಹಾಕಿಕೊಳ್ಳಿ. ನಂತರ ತರಿತರಿಯಾಗಿ ಜಜ್ಜಿಕೊಂಡಿರುವ ಸಾಸಿವೆ, ಕಾಳುಮೆಣಸು ಮತ್ತು ಬೆಳ್ಳುಳ್ಳಿ ಮಿಶ್ರಣ ಸೇರಿಸಿಕೊಳ್ಳಬೇಕು. ಇದರ ಜೊತೆಯಲ್ಲಿ ಉದ್ದವಾಗಿ ಕತ್ತರಿಸಿಕೊಂಡಿರುವ ಹಸಿಮೆಣಸಿನಕಾಯಿ, ಕರೀಬೇವು ಸೇರಿಸಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
55
ರುಚಿಯಾದ ಖಡಕ್ ಖಾರವುಳ್ಳ ಸಾಸಿವೆ ರಸಂ
ಒಗ್ಗರಣೆಯ ಪರಿಮಳ ಬರುತ್ತಿದ್ದಂತೆ ಹುಣಸೆಹಣ್ಣಿನ ರಸ ಸೇರಿಸಿ. ಆನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಒಂದು ಗ್ಲಾಸ್ನಷ್ಟು ನೀರು ಸೇರಿಸಿ ಹೈಫ್ಲೇಮ್ನಲ್ಲಿ ಮೂರರಿಂದ ನಾಲ್ಕು ನಿಮಿಷ ಕುದಿಸಿಕೊಂಡು ಒಲೆ ಆಫ್ ಮಾಡಿ. ಕೊನೆಯದಾಗಿ ಸಣ್ಣದಾಗಿ ಕತ್ತರಿಸಿರುವ ಕೋತಂಬರಿ ಸೊಪ್ಪು ಸೇರಿಸಿದ್ರೆ ರುಚಿಯಾದ ಖಡಕ್ ಖಾರವುಳ್ಳ ಸಾಸಿವೆ ರಸಂ ರೆಡಿಯಾಗುತ್ತದೆ. ಬಿಸಿಬಿಸಿ ಅನ್ನಕ್ಕೆ ರಸಂ ಹಾಕೊಂಡು ಊಟ ಮಾಡಿದ್ರೆ ಸ್ವರ್ಗಕ್ಕೆ ಮೂರೇ ಗೇಣು.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.