
ಆಷಾಢ ಅಥವಾ ಆಟಿ ತಿಂಗಳು ಎಂದರೆ ಕೊಡಗು ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ವಿಶೇಷವಾದ ಋತುಮಾನದ ತಿನಿಸುಗಳ ತಿಂಗಳು ಎಂದೇ ಹೇಳಬಹುದು, ಹೊರಗೆ ಧೋ ಎಂದು ಮಳೆ ಸುರಿಯುತ್ತಿದ್ದರೆ ಮನೆಯೊಳಗೆ ಕುಳಿತು ಆ ಚಳಿಯ ಮಧ್ಯೆ ಒಲೆಯ ಮುಂದೆ ದೇಹವನ್ನು ಬಿಸಿಗೊಳಿಸಿಕೊಳ್ಳುತ್ತಾ ಬಿಸಿ ಬಿಸಿಯಾದ ತಿನಿಸುಗಳು ಸಿದ್ಧಗೊಳ್ಳುತ್ತವೆ.
ಪತ್ರೊಡೆ, ಕಣಿಲೆ(ಕಳಲೆ),ಕೇಸುವಿನ ವಿಶೇಷ ಖಾದ್ಯಗಳು, ನೈಸರ್ಗಿಕ ಅಣಬೆ, ಚಗಟೆ ಸೊಪ್ಪಿ ಖಾದ್ಯ ಇವೆಲ್ಲವೂ ಈ ಆಷಾಢ ತಿಂಗಳಲ್ಲಿ ತಿನ್ನುವಂತಹ ವಿಶೇಷ ಖಾದ್ಯಗಳಾಗಿವೆ. ಮಳೆ ಜೋರಾಗಿ ಸುರಿಯುವುದರಿಂದ ಹೊಲದಲ್ಲಿ ಬಿತ್ತನೆ ಕಾರ್ಯದ ಸಮಯ.
ಆದರೆ ಕೊಡಗು ಭಾಗದಲ್ಲಿ ಇದೇ ಸಮಯದಲ್ಲಿ ಒಂದು ವಿಶೇಷ ಪಾಯಸವನ್ನು ಮಾಡಲಾಗುತ್ತದೆ. ಸ್ಥಳೀಯವಾಗಿ ಆಟಿ ಸೊಪ್ಪು ಎಂದು ಕರೆಯಲ್ಪಡುವ ಸೊಪ್ಪಿನಿಂದ ಈ ವಿಶೇಷ ಸಿಹಿ ಪಾಯಸವನ್ನು ತಯಾರಿಸಲಾಗುತ್ತದೆ. ಈ ಆಟಿ ಸೊಪ್ಪಿಗೆ ವೈಜ್ಞಾನಿಕವಾಗಿ Justicia vinadensis ಎಂದು ಕರೆಯಲಾಗುತ್ತದೆ.
ಆಷಾಢದ 18 ಅಥವಾ ಆಟಿ 18ರ ದಿನದಂದು ಈ ಪಾಯಸವನ್ನು ಮಾಡಲಾಗುತ್ತದೆ. ಆ ದಿನದಂದು ಈ ಸೊಪ್ಪಿನಲ್ಲಿ ವಿಶೇಷವಾದ 18 ಬಗೆಯ ಔಷಧಿಗಳು ಇರುತ್ತವೆ ಎಂಬ ನಂಬಿಕೆ ಅಲ್ಲಿನ ಪೂರ್ವರಲ್ಲಿ ಇತ್ತು. ಹಾಗೂ ಈ ಸಂಪ್ರದಾಯವನ್ನು ಕೊಡಗಿನ ಜನ ಮುಂದುವರೆಸಿಕೊಂಡು ಬಂದಿದ್ದು, ಪ್ರತಿ ವರ್ಷದ ಆಟಿ 18ರ ದಿನದಂದು ಈ ಪಾಯಸವನ್ನು ಕೊಡಗಿನ ಪ್ರತಿ ಮನೆಯಲ್ಲೂ ಮಾಡುತ್ತಾರೆ.
ಹಾಗಿದ್ದರೆ ನಾವೀಗ ಈ ಆಟಿ ಪಾಯಸವನ್ನು ಮಾಡುವ ವಿಧಾನ ಹೇಗೆ ಎಂಬುದನ್ನು ತಿಳಿದುಕೊಳ್ಳೋಣ, ಸಾಮಾನ್ಯವಾಗಿ ಕೊಡಗಿನ ಭಾಗದಲ್ಲಿ ಈ ಪಾಯಸಕ್ಕೆ ಬೇಕಾಗುವ ಆಟಿ ಸೊಪ್ಪು ಎಲ್ಲಾ ಕಡೆ ಮನೆ ಮುಂದೆಬೇಲಿಗಳಲ್ಲಿ ಸಿಗುತ್ತದೆ. ಆದರೆ ಇತರ ಭಾಗದಲ್ಲಿಯೂ ಇದ್ದರೂ ಇರಬಹುದು ಆದರೆ ಅವರಿಗೆ ಇದರ ಬಳಕೆಯ ಬಗ್ಗೆ ತಿಳಿದಿರುವ ಸಾಧ್ಯತೆ ಕಡಿಮೆ.
ಬೇಕಾಗುವ ಸಾಮಗ್ರಿಗಳು
ಬೆಳ್ತಿಗೆ ಅಕ್ಕಿ (white rice) 2 ಗ್ಲಾಸ್
ಬೆಲ್ಲ - 3 ಕಪ್
ತುರಿದ ತೆಂಗಿನಕಾಯಿ ಒಂದು ಗಡಿ( ಒಂದು ಚಿಪ್ಪಿ)
ಏಲಕ್ಕಿ ಪೌಡರ್
5 ಹುಡಿ ಮಾಡಿದ ಕಾಳು ಮೆಣಸು
ಗೋಡಂಬಿ ಹಾಗೂ ದ್ರಾಕ್ಷಿ
ತುಪ್ಪ, ಹಾಗೂ ಜೇನುತುಪ್ಪ,
ಮೊದಲಿಗೆ ಒಂದು ದೊಡ್ಡ ಬಟ್ಟಲಿನಷ್ಟು ಆಟಿ ಸೊಪ್ಪನ್ನು ತಂದು ಚೆನ್ನಾಗಿ ತೊಳೆದು ಸ್ವಚ್ಛ ಮಾಡಿ ಬಿಡಿಸಿಟ್ಟುಕೊಳ್ಳಿ, ಸೊಪ್ಪು ಹಾಗೂ ದಂಟು ಎರಡನ್ನು ಆಟಿ ಪಾಯಸ ಮಾಡುವುದಕ್ಕೆ ಬಳಸಬಹುದಾಗಿದೆ. ಚೆನ್ನಾಗಿ ತೊಳೆದ ಸೊಪ್ಪನ್ನು ಒಂದು ಪಾತ್ರೆಗೆ ಹಾಕಿ ಸೊಪ್ಪು ಮುಳುಗುವಷ್ಟು ನೀರು ಹಾಕಿ ಮುಚ್ಚಿಟ್ಟು ಒಲೆ ಮೇಲೆ(ಸ್ಟೌ) ಇಟ್ಟು ಅರ್ಧ ಗಂಟೆ ಬೇಯಿಸಿ.
ಅರ್ಧಗಂಟೆಯಲ್ಲಿ ಸೊಪ್ಪು ಚೆನ್ನಾಗಿ ಬೆಂದಿರುತ್ತೆ, ಅದರಲ್ಲಿರುವ ರಸವೆಲ್ಲಾ ಬಿಟ್ಟು ನೀರು ಪೂರ್ತಿ ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ. ಈಗ ಈ ಸೊಪ್ಪು ಬೇಯಿಸಿದ ನೀರನ್ನು ಒಂದು ಪಾತ್ರೆಗೆ ಸೋಸಿಟ್ಟುಕೊಳ್ಳಿ. ಕೆಲವರು ಬರೀ ಈ ನೀರಿಗೆ ಜೇನು ಹಾಕಿಯೂ ಕುಡಿಯುತ್ತಾರೆ. ಅದು ಕೂಡ ಆರೋಗ್ಯಕ್ಕೆ ಒಳ್ಳೆಯದು.
ಈಗ ಮತ್ತೊಂದು ಪಾತ್ರೆಯಲ್ಲಿ ಎರಡು ಗ್ಲಾಸ್‌ನಷ್ಟು ಅಕ್ಕಿಯನ್ನು ಹಾಕಿ ಅದನ್ನು 2ರಿಂದ 3 ಸಲ ಚೆನ್ನಾಗಿ ತೊಳೆದು ನೀರನ್ನು ಚೆಲ್ಲಿ, ನಂತರ ಬೇಯಿಸಿದ ಆಟಿ ಸೊಪ್ಪಿನಿಂದ ತೆಗೆದ ನೀರನ್ನು ಅಕ್ಕಿಗೆ ಹಾಕಿ, ಎರಡು ಗ್ಲಾಸ್ ಅಕ್ಕಿ ಹಾಕಿದ್ರೆ ಆರು ಗ್ಲಾಸ್ ನೀರು ಹಾಕ್ಬೇಕು, ಯಾಕಂದ್ರೆ ಅಕ್ಕಿ ತುಂಬಾ ಚೆನ್ನಾಗಿ ಬೆಂದು ಮೆತ್ತಗೆ ಆಗ್ಬೇಕು(ಕುಕ್ಕರ್‌ನಲ್ಲಿ ಮಾಡೋದಿದ್ರೆ). ನಂತರ ಇದಕ್ಕೆ ಒಂದು ಚಿಟಿಕೆ ಉಪ್ಪು, ನೀವು ಪೌಡರ್ ಮಾಡಿಟ್ಟ ಕಾಳು ಮೆಣಸಿನ ಹುಡಿ ಹಾಕಿ ಮೂರು ವಿಸಲ್ ಬರೋವರೆಗೆ ಗ್ಯಾಸ್ ಮೇಲೆನೇ ಬೇಯಲು ಬಿಡಿ.
ಈಗ ಮತ್ತೊಂದು ಪಾತ್ರೆಯಲ್ಲಿ ಮುಕ್ಕಾಲು (3/4 )ಕೆಜಿ ಬೆಲ್ಲ, ಹಾಕಿ ಒಂದು ಅರ್ಧ ಗ್ಲಾಸ್ ನೀರು ಹಾಕಿ ಆ ಬೆಲ್ಲವನ್ನು ಕರಗಿಸಿ ಇಡಿ, ಈಗ ಕುಕ್ಕರ್‌ನಲ್ಲಿ ಆಟಿ ಸೊಪ್ಪಿನ ರಸದೊಂದಿಗೆ ಬೇಯಿಸಿದ ಅನ್ನಕ್ಕೆ ಈ ಕರಗಿಸಿದ ಬೆಲ್ಲದ ಪಾಕವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ( ಕೆಲವರು ಬೆಲ್ಲವನ್ನು ಅದರ ಜೊತೆಗೆ ಹಾಕಿ ಬೇಯಿಸ್ತಾರೆ ಹಾಗೂ ಮಾಡ್ಬಹುದು)
ಈಗ ಗ್ಯಾಸನ್ನ ಸಣ್ಣ ಉರಿಯಲ್ಲಿ ಇಟ್ಟುಕೊಂಡು ಕುದಿಸಿ ಸೌಟು ಹಾಕಿ ಆಗಾಗ ತಿರುಗಿಸಿ, ಈಗ ಇದಕ್ಕೆ ಏಲಕ್ಕಿ ಪುಡಿ ಹಾಕಿ, ಹಾಗೂ ಅದು ಕುದಿ ಬರ್ತಿದ್ದ ಹಾಗೆ ತುರಿದಿಟ್ಟ ತೆಂಗಿನ ಕಾಯಿಯನ್ನು ಹಾಕಿ ಈಗ ಚೆನ್ನಾಗಿ ಮಿಕ್ಸ್ ಮಾಡಿ ಈಗ ಪಾಯಸ ರೆಡಿ ಈಗ ಇದಕ್ಕೆ ಜೇನು ಹಾಕಿ ಬಿಸಿ ಇರುವಾಗಲೇ ತಿನ್ನಿ.
ಕೆಲವರು ತೆಂಗಿನ ಕಾಯಿಯ ತುರಿಯನ್ನು ಗ್ರೈಂಡ್ ಮಾಡಿ ಹಾಲನ್ನು ಸೋಸಿ ಬರೀ ಹಾಲನ್ನು ಮಾತ್ರ ಹಾಕ್ತಾರೆ ಕೆಲವರು ತೆಂಗಿನ ಕಾಯಿ ಹಾಕದೇನು ಮಾಡ್ತಾರೆ ಹಾಗೂ ಮಾಡ್ಬಹುದು. ಬೇಕಿದ್ರೆ ಗೋಡಂಬಿ ದ್ರಾಕ್ಷಿ ಮನೇಲಿ ಇದ್ರೆ ಈಗ ಒಂದು ಪ್ಯಾನ್‌ನಲ್ಲಿ ಮೂರು ಚಮಚ ತುಪ್ಪ ಹಾಕಿ ಅದರಲ್ಲಿ ಗೋಡಂಬಿ ದ್ರಾಕ್ಷಿಯನ್ನು ಹಾಕಿ ಕೆಲ ನಿಮಿಷ ಹುರಿದು ಈ ಪಾಯಸಕ್ಕೆ ಸೇರಿಸ್ಬಹುದು.