ಇಳ್ಕಲ್‌ನಲ್ಲಿನೇಕಾರರು ನೇಯ್ಗೆ ಹಾಕುವ ಕಾರಣ ಇದು ಕೈಮಗ್ಗ ಸೀರೆ. ಈ ಸೀರೆಯನ್ನು ಖಾಟನ್, ಸಿಲ್ಕ್, ಆರ್ಟ್ ಸಿಲ್ಕ್ ನಿಂದಲೂ ತಯಾರಿಸುತ್ತಾರೆ. ಇಳ್ಕಲ್ ಸೀರೆ ಭಾರತ ಸರ್ಕಾರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ವತಿಯಿಂದ ಜಿಯೋಗ್ರಫಿಕಲ್ ಇಂಡಿಕೇಷನ್ ಸಂಖ್ಯೆ 76 ನ್ನು ಹೊಂದಿದೆ. ಇದನ್ನು ಜಿ ಐ ಟ್ಯಾಗ್ ಎನ್ನುತ್ತಾರೆ.
ಈ ಟ್ಯಾಗ್ ಅನ್ನು ಸರ್ಕಾರ ಆಹಾರ ಕೃಷಿ ಉತ್ಪನ್ನ, ಕಸೂತಿ, ಕರಕುಶಲತೆ ಕೈಮಗ್ಗ ಉತ್ಪನ್ನಗಳಿಗೆ ಕೊಡುವ ಸಂಖ್ಯೆ. ಬೇರೆ ಬೇರೆ ರಾಜ್ಯಗಳಿಗೆ ಅಲ್ಲಿಯ ಉತ್ಪನ್ನಗಳ ಪ್ರಸಿದ್ಧಿಯ ಮೇರೆಗೆ ಕೊಡುವ ಸಂಖ್ಯೆ ಇದಾಗಿದೆ
ಇಳ್ಕಲ್ ಸೀರೆ ತಯಾರಿಕೆಯು 8ನೇ ಶತಮಾನದಿಂದಲೇ ಇತ್ತು. ಇದನ್ನು ಇಳ್ಕಲ್‌ನ ಸುತ್ತಮುತ್ತ ಪ್ರದೇಶದ ಮುಖ್ಯಸ್ಥರಿಂದ ಮತ್ತು ಬಳ್ಳಾರಿ ಸುತ್ತಮುತ್ತಲಿನ ಜನಗಳಿಂದ ಇದು ಪ್ರಸಿದ್ಧಿ ಪಡೆದಿದೆ. ಅಲ್ಲೇ ಸಿಗುವ ಕಚ್ಚಾ ವಸ್ತುಗಳ ಬಳಕೆಯಿಂದ ತಯಾರಿಸುತ್ತಾರೆ. ಈ ಸೀರೆ ತಯಾರಿಕೆಯಲ್ಲಿ 20000 ಜನರು ತೊಡಗಿಸಿಕೊಂಡಿದ್ದಾರೆ. ಈ ಸೀರೆಗಳನ್ನು ನೇಕಾರರು ಮನೆಗಳಲ್ಲಿ ತಯಾರಿಸುತ್ತಾರೆ. ಹೆಂಗಸರೂ ಕೈ ಜೋಡಿಸುತ್ತಾರೆ.
ಈ ಸೀರೆ ತಯಾರಿಸುವುದು ಕೆಲವರ ಕುಲ ಕಸುಬು. ಇದರಿಂದಲೇ ಅವರ ಜೀವನ ನಿರ್ವಹಣೆ ಆಗುವುದು. ಒಂದು ಸೀರೆ ತಯಾರಾಗಬೇಕೆಂದರೆ 7 ದಿನಗಳು ಬೇಕು. ಈ ಸೀರೆಯ ವಿಶೇಷತೆ ಏನಂದರೆ ಈ ಸೀರೆಯ ಸೆರಗನ್ನು ಹೆಂಗಸರು ತಲೆಗೆ ಹೊದ್ದು ಕೊಳ್ಳೋ ಸಂಪ್ರದಾಯ. ಇನ್ನು ಕೆಲವರು ಈ ಸೀರೆಯನ್ನು ಹಿಂದೆ ಕಚ್ಚಾ ಹಾಕಿ ಉಡುತ್ತಾರೆ. ಹಾಗಾಗಿ ಈ ಸೀರೆಗಳ ಉದ್ದ ಬೇರೆ ಸೀರೆಗಳಿಗೆ ಹೋಲಿಸಿದರೆ ಬಹಳ ಹೆಚ್ಚಿರುತ್ತದೆ. ಇದನ್ನು 6 ಮೊಳ , 8 ಮೊಳ , 9 ಮೊಳ ಉದ್ದ ವಿರುತ್ತದೆ.
ಈ ಸೀರೆಗಳ ಎಲ್ಲ ಸೆರಗುಗಳಲ್ಲಿ ಮೂರೂ ದಪ್ಪ ಗೆರೆಗಳು ಕೆಂಪು ಬಣ್ಣದಲ್ಲಿದ್ದು ಮಧ್ಯ ಎರಡು ಬಿಳಿ ಬಣ್ಣದ ಗೆರೆ ಗಳಿರುತ್ತವೆ. ಇದು ಸಾಂಪ್ರದಾಯಿಕ ಉಡುಗೆ ಆಗಿದ್ದು ಇದರ ಅಂಚುಗಳ ಜರಿ ಡಿಸೈನ್ ಗಳು ಸಿಲ್ಕ್ ಅಥವಾ ಆರ್ಟ್ ಸಿಲ್ಕ್ ನಿಂದ ಮಾಡಲಾಗಿರುತ್ತದೆ. ಇದರ ಅಂಚು ಗಳ ಡಿಸೈನ್ ಗಳು ಚುಕ್ಕಿ , ಗೋಮಿ, ಜರಿ , ಗಡಿದಡಿ , ಗಾಯತ್ರಿ ಎಂಬ ಹೊಸ ಅಂಚು ಈ ಸೀರೆ ಗಳಲ್ಲಿ ಕಾಣಬಹುದು. ಇದರ ಅಂಚು ಅಗಲ 2.5 ' ಇಂಚಿನಿಂದ ಹಿಡಿದು 4 ' ಇಂಚುಗಳ ವರೆಗೆ ಅಗಲವಿದ್ದು, ಕೆಂಪು ಅಥವಾ ಕಡು ಕೆಂಪು ಬಣ್ಣದಿಂದ ಕೂಡಿದೆ.
ಈ ಸೀರೆ ಗಳನ್ನು ಮೂರು ವಿಧಗಳಲ್ಲಿ ತಯಾರಿಸುತ್ತಾರೆ. ಸೀರೆಯ ಮೈ ಸಿಲ್ಕ್ ನಿಂದ ಅದರ ಅಂಚು ಸಿಲ್ಕ್ ನಿಂದ , ಇಲ್ಲ ಸೀರೆ ಮೈ ಕಾಟನ್ ಅಂಚು ಸಿಲ್ಕ್, ಇನ್ನೊಂದು ಇಡೀ ಸೀರೆ ಖಾಟನ್ ನಿಂದಲೂ ಮಾಡುತ್ತಾರೆ. ಈಗ ಸೀರೆಗಳಿಗೆ ಎಂಬ್ರಾಯಿಡರಿ ಮಾಡುತ್ತಾರೆ. ಇದನ್ನು ಕಸೂತಿ ಎನ್ನುತ್ತಾರೆ.
ಈಗಿನ ಸೀರೆಗಳಲ್ಲಿ ಟೆಂಪಲ್ ಶೈಲಿಯ ಡಿಸೈನ್ಕಾಣಬಹುದು. ಈ ಸೀರೆಗಳ ಮೈಗಳು ಗೆರೆಗಳಿಂದ, ಆಯತಾಕಾರದ, ಚೌಕಾಕಾರದ ಡಿಸೈನ್‌ಗಳಿಂದ ಕೂಡಿದೆ. ಹಾಗಾಗಿ ಈ ಸೀರೆಗಳನ್ನು ಮಧ್ಯ ವಯಸ್ಕ ಮಹಿಳೆಯರಿಂದ ಹಿಡಿದು ಅಜ್ಜಿಯಂದಿರು ಕೂಡ ಉಡಬಹುದಾದ ಸೀರೆ ಇದಾಗಿದೆ. ಆಧುನಿಕ ಸೀರೆಗೆ ಹೋಲಿಸಿದರೆ ಇಲ್ಕಲ್ ಸೀರೆ ತನ್ನದೇ ಆದ ಘನಸ್ಥಿಕೆ ಇನ್ನು ಇಟ್ಟುಕೊಂಡಿದೆ.
ಈ ಸೀರೆಗಳು ಅನೇಕ ಕನ್ನಡ ಚಲನಚಿತ್ರಗಳಲ್ಲಿ ಕಾಣಬಹುದು. ಅವುಗಳು ನಾಗಮಂಡಲ, ದ್ವೀಪ, ನಾಯಿ ನೆರಳು, ಹೀಗೆ ಅನೇಕ ಚಲನಚಿತ್ರಗಳು ಈ ಸೀರೆಗಳ ಮೆರುಗನ್ನು ಇನ್ನೂ ಹೆಚ್ಚಿಸಿದೆ. ಇದನ್ನು ಹಬ್ಬಗಳಿಗೆ ಮದುವೆಗೆ ಅಥವಾ ದಿನನಿತ್ಯ ದಲ್ಲೂ ಉಡಬಹುದು.