ವರ್ಷದ ಆರಂಭದಲ್ಲಿ ನಡೆದ ಮಿಸ್ ಟೀನ್ ಇಂಡಿಯಾ ಗ್ಲೋಬ್ ಬ್ಯೂಟಿ ಕಾಂಟೆಸ್ಟ್ ನಲ್ಲಿ ಸ್ಪರ್ಧಿಸಿ ರನ್ನರ್ ಅಪ್ ಪ್ರಶಸ್ತಿ ಪಡೆದು, ಥಾಯ್ಲೆಂಡ್ ನಲ್ಲಿ ನಡೆದ ಫೈನಲ್ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದ ಮಂಗಳೂರು ಮೂಲದ ಬೆಡಗಿ ಯಶಸ್ವಿನಿ ದೇವಾಡಿಗ (Yashawini Devadiga) ಮಿಸ್ ಟೀನ್ ಗ್ಲೋಬ್ ಇಂಟರ್ ನ್ಯಾಷನಲ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಮಂಗಳೂರಿನವರಾದ ಯಶಸ್ವಿನಿ ದೇವಾಡಿಗ, ದೇವದಾಸ್ ಕುಳಾಯಿ ಮತ್ತು ಮೀನಾಕ್ಷಿ ಕುಳಾಯಿ ಅವರ ಪುತ್ರಿ. ಸದ್ಯ ಈಕೆ ಸುರತ್ಕಲ್ ನ ಗೋವಿಂದ ದಾಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾರೆ.
ಬಾಲ್ಯದಿಂದಲೇ ಫ್ಯಾಷನ್, ಮಾಡೆಲಿಂಗ್ ಜಗತ್ತಿನ ಕಡೆಗೆ ಆಕರ್ಷಿತರಾಗಿದ್ದ ಯಶಸ್ವಿನಿಗೆ ನವೀನ್ ಬಿಲ್ಲವ ತರಭೇತಿ ನೀಡುತ್ತಾರೆ. ನೃತ್ಯ, ಏಕಪಾತ್ರಾಭಿನಯ ಮೊದಲಾದ ಕಲಾ ಕ್ಷೇತ್ರಗಳಲ್ಲಿ ಸಹ ಯಶಸ್ವಿನಿ ಗುರುತಿಸಿಕೊಂಡಿದ್ದಾರೆ.
ಈ ವರ್ಷ ಮೇ ತಿಂಗಳಲ್ಲಿ ಹೈದರಾಬಾದಿನಲ್ಲಿ ನಡೆದ ಮಿಸ್ ಟೀನ್ ಇಂಡಿಯಾ ಗ್ಲೋಬ್ (Miss Teen India Globe) ಬ್ಯೂಟಿ ಕಾಂಟೆಸ್ಟ್ ನಲ್ಲಿ ಯಶಸ್ವಿನಿ ಭಾಗವಹಿಸಿದ್ದರು. ಇಲ್ಲಿ ನಡೆದ 6 ಸುತ್ತಿನ ಸ್ಪರ್ಧೆಯಲ್ಲಿ ಪರಿಚಯ, ಪ್ರತಿಭಾ ಪ್ರದರ್ಶನ, ಸಂದರ್ಶನ, ನ್ಯಾಷನಲ್ ಕಾಸ್ಟ್ಯೂಮ್ ರೌಂಡ್, ಗೌನ್ ಮತ್ತು ಪ್ರಶ್ನೋತ್ತರ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.
ಭಾರತದಲ್ಲಿ ನಡೆದ ಸ್ಪರ್ಧೆಯಲ್ಲಿ 50 ಸ್ಪರ್ಧಿಗಳಲ್ಲಿ 49 ಸ್ಪರ್ಧಿಗಳನ್ನು ಹಿಂದಿಕ್ಕಿ, ಮೊದಲ ರನ್ನರ್ ಅಪ ಪ್ರಶಸ್ತಿ ಪಡೆದಿದ್ದರು. ಜೊತೆಗೆ ಫೇಸ್ ಆಫ್ ಕರ್ನಾಟಕ (Face of Karnataka) ಪ್ರಶಸ್ತಿ ಕೂಡ ಮುಡಿಗೇರಿಸಿಕೊಂಡಿದ್ದರು. ಅಲ್ಲಿಂದ ನೇರವಾಗಿ ಇವರು ಅಂತಾರಾಷ್ಟ್ರೀಯ ಮಟ್ಟದ ಬ್ಯೂಟಿ ಕಾಂಟೆಸ್ಟ್ ನಲ್ಲಿ ಸ್ಪರ್ಧಿಸಲು ಆಯ್ಕೆಯಾಗಿದ್ದರು.
ಇನ್ನು ಥಾಯ್ಲಂಡ್ ನಲ್ಲಿ ಇತ್ತೀಚೆಗೆ ನಡೆದ ಮಿ. ಆಂಡ್ ಮಿಸ್ ಟೀನ್ ಸೂಪರ್ ಗ್ಲೋಬ್ ಇಂಟರ್ ನ್ಯಾಷನಲ್ (Ms teen super globe International) ಸ್ಪರ್ಧೆಯಲ್ಲಿ ಯಶಸ್ವಿನಿ ಭಾಗವಹಿಸಿದ್ದು, ಮಲೇಷ್ಯಾ, ಇಂಡೋನೇಷ್ಯಾ, ಕಝಕಿಸ್ತಾನ್ ವಿಯೇಟ್ನಾಮ್ ನ ಆರು ಜನ ಸ್ಪರ್ಧಿಗಳ ಜೊತೆ ಸ್ಪರ್ಧಿಸಿದರು.
ಮಿಸ್ ಟೀನ್ ಸೂಪರ್ ಗ್ಲೋಬ್ ಇಂಟರ್ ನ್ಯಾಷನಲ್ ಎರಡನೇ ಸೀಸನ್ ನಲ್ಲಿ ಮಿಸ್ ಟೀನ್ ಕಿರೀಟವನ್ನು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿನಿ ದೇವಾಡಿಗ ಯಶಸ್ವಿಯಾಗಿದ್ದಾರೆ. ಇಂಡೋನೇಷ್ಯಾದ ಫೆಬ್ರಿ ಮಸೀತಿಯಾ ಮೊದಲ ರನ್ನರ್ ಅಪ್ ಮತ್ತು ಮಲೇಷ್ಯಾದ ವಿನಿಷಾ ವಿಜಯನ್ ದ್ವಿತೀಯ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ.