ಮಿಸ್‌ ವರ್ಲ್ಡ್‌, ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಕುಡ್ಲದ ಹುಡುಗಿಯರದ್ದೇ ಮಿಂಚು

First Published Sep 3, 2022, 2:38 PM IST

ಭಾರತದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಿಸ್‌ ವರ್ಲ್ಡ್‌ ಮತ್ತು ಮಿಸ್ ಯೂನಿವರ್ಸ್ ಸ್ಪರ್ಧೆ ಎರಡೂ ಸ್ಪರ್ಧೆಯಲ್ಲಿ ಭಾರತವನ್ನು ಮಂಗಳೂರಿನ ಬೆಡಗಿಯರು ಪ್ರತಿನಿಧಿಸುತ್ತಿದ್ದಾರೆ. ಸಿನಿ ಶೆಟ್ಟಿ ಮಿಸ್‌ ವರ್ಲ್ಡ್‌ ಕಾಂಟೆಸ್ಟ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದು, ದಿವಿತಾ ರೈ ಮಿಸ್ ಯೂನಿವರ್ಸ್‌ ಕಾಂಟೆಸ್ಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇವರಿಬ್ಬರೂ ಸಹ ಮಂಗಳೂರಿನ ಸುಂದರಿಯರು.

ಕರ್ನಾಟಕವನ್ನು ಪ್ರತಿನಿಧಿಸಿ ಮಿಸ್ ಇಂಡಿಯಾ ಆಗಿ ಹೊರಹೊಮ್ಮಿರುವ ಸಿನಿ ಶೆಟ್ಟಿ, ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಡುಂಬು ಮೂಲದವರು. ಈಗಲೂ ನಿರಂತರವಾಗಿ ತವರೂರಿನ ಜೊತೆ ನಿಕಟ ಸಂಪರ್ಕ ಹೊಂದಿದವರು. ಸಿನಿ ಶೆಟ್ಟಿ ಮಿಸ್ ಇಂಡಿಯಾ ಆಗಿ ಆಯ್ಕೆಯಾಗುತ್ತಿದ್ದಂತೆ, ಕಾಪುವಿನ ಮಡಂಬುವಿನಲ್ಲಿರುವ ಕುಟುಂಬಸ್ಥರು ಅತ್ಯಂತ ಖುಷಿಪಟ್ಟಿದ್ದಾರೆ. 
 

ಸಿನಿ ಶೆಟ್ಟಿ ಅವರ ತಂದೆ ಸದಾನಂದ ಶೆಟ್ಟಿ ಕಾಪು ಇನ್ನಂಜೆಯ ಮಡುಂಬು ಮೂಲದವರು. ಇದೇ ಊರಿನಲ್ಲಿ ಕೃಷಿ ಮಾಡುತ್ತಾ, ವಿದ್ಯಾಭ್ಯಾಸ ನಡೆಸಿದ್ದರು. 80ರ ದಶಕದಲ್ಲಿ ಶಿಕ್ಷಣ ಪೂರೈಸಿ ದೂರದ ಮುಂಬೈಗೆ ಹೋದವರು. ಅವತ್ತಿನಿಂದಲೂ ಕಷ್ಟ ಸುಖ ಪ್ರತಿಯೊಂದು ಸಂದರ್ಭದಲ್ಲಿ ತನ್ನೂರಿಗೆ ಬರುತ್ತಿದವರು. ಈಗಲೂ ಅಷ್ಟೇ, ವರ್ಷಕ್ಕೆ ಮೂರ್ನಾಲ್ಕು ಸಲ ಕುಟುಂಬ ಸಮೇತ ಮಾವನ ಮನೆಗೆ ಬರುತ್ತಾರೆ.

ಸಿನಿ ಶೆಟ್ಟಿ ಮಿಸ್ ಇಂಡಿಯಾ ಆಗಿ ಘೋಷಣೆಯಾಗುತ್ತಿದ್ದಂತೆ, ಸ್ವತಹ ಸದಾನಂದ ಶೆಟ್ಟರು ಊರಿಗೆ ಕರೆ ಮಾಡಿ ಈ ಸಂತೋಷದ ವಿಷಯ ಹಂಚಿಕೊಂಡಿದ್ದಾರೆ. ಚೆನ್ನಾಗಿ ತುಳು ಮಾತನಾಡುವ ಸಿನಿ ಶೆಟ್ಟಿ, ಊರಿಗೆ ಬಂದಾಗೆಲ್ಲ ಇಲ್ಲಿನ ಕೃಷಿ ಗದ್ದೆ ದೈವ ದನಗಳ ಜೊತೆಬೆರೆತು ಸಂತೋಷ ಪಡುತ್ತಿದ್ದುದನ್ನು ನೆನಪಿಸಿಕೊಳ್ಳುತ್ತಾರೆ. ಮುಂಬೈನ ಆಧುನಿಕ ಜೀವನ ಪದ್ಧತಿಗೆ ಹೊಂದಿಕೊಂಡಿದ್ದರೂ ಇವತ್ತಿಗೂ ಸಿನಿ ಶೆಟ್ಟಿಗೆ, ತುಳುನಾಡಿನ ಕೋಳಿ ಮೀನಿನ ಊಟವೇ ಬಾರಿ ಇಷ್ಟ ಎಂದು ಬಂದುಗಳು ಹೇಳಿದ್ದಾರೆ.

ಭರತನಾಟ್ಯದಲ್ಲೂ ಸಿನಿ ಶೆಟ್ಟಿ ಪ್ರವೀಣೆಯಾಗಿದ್ದಾರೆ. ಕೇವಲ ಮಿಸ್ ಇಂಡಿಯಾ ಅಲ್ಲ ಮಿಸ್ ವರ್ಲ್ಡ್ ಆಗಿ ಸಿನಿ ಆಯ್ಕೆಯಾಗಲಿ ಎಂದು ಹಾರೈಸಿದ್ದಾರೆ.ಬಾಲಿವುಡ್ ನಲ್ಲೂ ಸಿನಿ ಶೆಟ್ಟಿ ಮಿಂಚಬೇಕು ಅನ್ನೋದು ಆಕೆಯ ಕುಟುಂಬದ ಆಸೆ. ಆಕೆಯ ನೃತ್ಯ ಪ್ರತಿಭೆ ಹಾಗೂ ಮಾಡೆಲಿಂಗ್ ಟ್ಯಾಲೆಂಟ್ ಅನ್ನು ಗಮನಿಸಿರುವ ಕುಟುಂಬ, ಭವಿಷ್ಯದಲ್ಲಿ ಸಿನಿ ಶೆಟ್ಟಿ ಬಾಲಿವುಡ್ ತಾರೆಯಾಗುತ್ತಾರೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ದಿವಿತಾ ರೈ ಮಿಸ್ ದಿವಾ ಯುನಿವರ್ಸ್ 2022ರ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. 2021ರ ಮಿಸ್‌ ಯುನಿವರ್ಸ್ ಹರ್ನಾಜ್‌ ಸಂಧು ಅವರು ಮುಂಬೈನಲ್ಲಿ ನಡೆದ ಗಣ್ಯರು ಸಿನಿಮಾ ತಾರೆಯರಿಂದ ತುಂಬಿದ್ದ ವೈಭವೋಪೇತ ಸಮಾರಂಭದಲ್ಲಿ 23 ವರ್ಷದ ದಿವಿತಾ ರೈ ಅವರಿಗೆ ಮಿಸ್ ದಿವಾ ಯುನಿವರ್ಸ್ 2022ರ ಕಿರೀಟವನ್ನು ಅಳವಡಿಸಿದರು. 

ತೆಲಂಗಾಣದ ಸುಂದರಿ ಪ್ರಜ್ಞಾ ಅಯ್ಯಗಾರಿ ಅವರು ಮಿಸ್ ದಿವಾ ಸೂಪರ್‌ನ್ಯಾಷನಲ್ 2022 ಆಗಿ ಆಯ್ಕೆಯಾಗಿದ್ದಾರೆ. ಮಿಸ್ ಯುನಿವರ್ಸ್‌ನ ಅಧಿಕೃತ ಇನ್ಸ್‌ಟಾಗ್ರಾಮ್‌ ಪೇಜ್‌ನಲ್ಲಿ ಹರ್ನಾಜ್ ಸಂಧು ಅವರು ದಿವಿತಾ ರೈ ಅವರಿಗೆ ಕಿರೀಟ ತೊಡಿಸುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಕಿರೀಟವನ್ನು ತೆಗೆದು ದೀವಿತಾ ರೈ ಅವರಿಗೆ ಅಳವಡಿಸುವ ಮುನ್ನ ಹರ್ನಾಝ್ ಸಂಧು ಆ ಕಿರೀಟಕ್ಕೆ ಮುತ್ತಿಕ್ಕುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ನಂತರ ಇಬ್ಬರು ಸುಂದರಿಯರು ಜೊತೆಯಾಗಿ ರಾಂಪ್‌ನಲ್ಲಿ ಹೆಜ್ಜೆ ಇಡುವ ಮೂಲಕ ವೇದಿಕೆಗೆ ಕಿಚ್ಚು ಹಚ್ಚಿದರು. 

ಕರ್ನಾಟಕದಲ್ಲಿ ಜನಿಸಿದ ದಿವಿತಾ ರೈ ಅವರ ತಂದೆ ಸರ್ಕಾರಿ ನೌಕರಿಯಲ್ಲಿ ಇದ್ದುದರಿಂದ ದೇಶದ ವಿವಿಧ ನಗರಗಳಲ್ಲಿ ಅವರು ವಿದ್ಯಾಭ್ಯಾಸ ಮಾಡಿದ್ದಾರೆ. 23 ವರ್ಷದ ಈಕೆ ಆರ್ಕಿಟೆಕ್ಟ್‌ ಓದಿದ್ದು, ಮಾಡೆಲ್‌ ವೃತ್ತಿಯಲ್ಲಿ ಮುನ್ನಡೆದಿದ್ದಾರೆ, ಇದರೊಂದಿಗೆ ಅವರು ಬ್ಯಾಡ್ಮಿಂಟನ್‌, ಬಾಸ್ಕೆಟ್‌ಬಾಲ್‌, ಪೈಂಟಿಂಗ್‌ ನಲ್ಲಿ ಆಸಕ್ತಿ ಇದ್ದು, ಸಂಗೀತ ಕೇಳುವುದು ಪುಸ್ತಕ ಓದುವುದು ಇವರ ಹವ್ಯಾಸವಾಗಿದೆ. ಇದರೊಂದಿಗೆ ಅವರು 71ನೇ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. 
 

divita

ಮಿಸ್ ದಿವಾ ಯುನಿವರ್ಸ್‌ 2022ರ ಗೆದ್ದ ಬಳಿಕ ದಿವಿತಾ ತಮ್ಮ ಖುಷಿಯನ್ನು ಹಂಚಿಕೊಂಡಿದ್ದು, ಮಿಸ್‌ ಯುನಿವರ್ಸ್‌ನ ಅಧಿಕೃತ ಪೇಜ್‌ನಲ್ಲಿ ಆಕೆಯ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಇದೊಂದು ತರ ಕ್ರೇಜಿ ಎನಿಸುತ್ತಿದೆ. ನಾನು ಕೊನೆಗೂ ಕಿರೀಟವನ್ನು ಪಡೆದೆ. ಇದನ್ನು ನಂಬಲಾಗುತ್ತಿಲ್ಲ. ನನಗೆ ಮಾತನಾಡಲು ಪದಗಳೇ ಸಿಗುತ್ತಿಲ್ಲ ಎಂದು ಅವರು ಹೇಳಿಕೊಂಡಿದ್ದರು. 

click me!