ಭಾರತೀಯ ಸಿನಿಮಾದಲ್ಲಿ ಶಾರುಖ್ ಖಾನ್ ಅತಿ ದೊಡ್ಡ ಹೆಸರು. ಆದರೆ, ಅವರ ಯಶಸ್ಸು ಕೇವಲ ಬೆಳ್ಳಿ ತೆರೆಗೆ ಮಾತ್ರ ಸೀಮಿತವಾಗಿಲ್ಲ. ಮೂರು ದಶಕಗಳಿಗೂ ಹೆಚ್ಚು ಕಾಲದಿಂದ, ಈ ನಟ ತಮ್ಮ ಜನಪ್ರಿಯತೆಯನ್ನು ಬೃಹತ್ ಬ್ಯುಸಿನೆಸ್ ಆಗಿ ಬದಲಾಯಿಸಿದ್ದಾರೆ. ಮನರಂಜನೆ, ಕ್ರೀಡೆ ಮತ್ತು ಗ್ರಾಹಕ ಬ್ರ್ಯಾಂಡ್‌ಗಳಲ್ಲಿ ಅವರು ದೊಡ್ಡ ಮಟ್ಟದ ಹೂಡಿಕೆ ಮಾಡಿದ್ದಾರೆ.
ಕಿಂಗ್ ಖಾನ್ ತಮ್ಮ 61ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಯಶಸ್ವಿ ಸಿನಿಮಾ ಕೆರಿಯರ್ ಹೇಗೆ ಬೃಹತ್ ಬ್ಯುಸಿನೆಸ್ ಸಾಮ್ರಾಜ್ಯವಾಗಿ ಬೆಳೆಯಬಹುದು ಎಂಬುದಕ್ಕೆ ಇವರೇ ಸಾಕ್ಷಿ. 2026ರ ಹುರುನ್ ಇಂಡಿಯಾ ರಿಚ್ ಲಿಸ್ಟ್ ಪ್ರಕಾರ, ಶಾರುಖ್ ಅವರ ಅಂದಾಜು ಆಸ್ತಿ ಮೌಲ್ಯ ಸುಮಾರು 10,000 ಕೋಟಿ ರೂ. ಆಗಿದೆ. ಈ ಮೂಲಕ ಅವರು ಭಾರತದ ಅತ್ಯಂತ ಶ್ರೀಮಂತ ನಟ ಎನಿಸಿಕೊಂಡಿದ್ದಾರೆ. ಶಾರುಖ್ ಖಾನ್ ಅವರ ಬ್ಯುಸಿನೆಸ್, ಹೂಡಿಕೆಗಳು ಮತ್ತು ಅವರ ಈ ಬೃಹತ್ ಸಂಪತ್ತಿನ ಮೂಲಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಸಾಮ್ರಾಜ್ಯದ ಬೆನ್ನೆಲುಬು
2002ರಲ್ಲಿ ಪತ್ನಿ ಗೌರಿ ಖಾನ್ ಜೊತೆ ಸೇರಿ ಶಾರುಖ್ 'ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್' ಎಂಬ ನಿರ್ಮಾಣ ಸಂಸ್ಥೆ ಹುಟ್ಟುಹಾಕಿದರು. ಇದು ಅವರ ಅತಿ ದೊಡ್ಡ ಬ್ಯುಸಿನೆಸ್ ಹೆಜ್ಜೆ.
ಈ ಸಂಸ್ಥೆ ಮೈ ಹೂ ನಾ, ಓಂ ಶಾಂತಿ ಓಂ, ಚೆನ್ನೈ ಎಕ್ಸ್‌ಪ್ರೆಸ್, ಹ್ಯಾಪಿ ನ್ಯೂ ಇಯರ್, ರಯೀಸ್ ಮತ್ತು ಜವಾನ್‌ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿದೆ. ವರ್ಷಗಳು ಕಳೆದಂತೆ, ಇದು ಕೇವಲ ಸಿನಿಮಾ ನಿರ್ಮಾಣ ಮಾತ್ರವಲ್ಲದೆ ವಿತರಣೆ, ಡಿಜಿಟಲ್ ಮನರಂಜನೆ ಮತ್ತು ವಿಎಫ್‌ಎಕ್ಸ್ (VFX) ಕ್ಷೇತ್ರಗಳಿಗೂ ಕಾಲಿಟ್ಟಿದೆ.
ಇದರ ವಿಎಫ್‌ಎಕ್ಸ್ ವಿಭಾಗವಾದ 'ರೆಡ್ ಚಿಲ್ಲೀಸ್ ವಿಎಫ್‌ಎಕ್ಸ್', ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದೆ. ಅತ್ಯಾಧುನಿಕ ಗ್ರಾಫಿಕ್ಸ್ ಬೇಕಿರುವ ಬೃಹತ್ ಸಿನಿಮಾಗಳಿಗೆ ಇದು ಕೆಲಸ ಮಾಡುತ್ತದೆ.
ಈ ನಿರ್ಮಾಣ ಸಂಸ್ಥೆ ಶಾರುಖ್ ಅವರಿಗೆ ಸಿನಿಮಾಗಳ ಮೇಲೆ ಹೆಚ್ಚಿನ ಸೃಜನಶೀಲ ಮತ್ತು ಆರ್ಥಿಕ ನಿಯಂತ್ರಣ ನೀಡಿದೆ. ಕೇವಲ ನಟನಾ ಸಂಭಾವನೆ ಮೇಲೆ ಅವಲಂಬಿತರಾಗುವ ಬದಲು, ಅವರು ಸಿನಿಮಾ ನಿರ್ಮಾಣ ಮತ್ತು ಲಾಭ ಹಂಚಿಕೆ ಒಪ್ಪಂದಗಳ ಮೂಲಕ ಸಿನಿಮಾದ ಯಶಸ್ಸಿನಲ್ಲಿ ಪಾಲು ಪಡೆಯುತ್ತಾರೆ. ಉದ್ಯಮಿ ಮತ್ತು ಇಂಟೀರಿಯರ್ ಡಿಸೈನರ್ ಆಗಿರುವ ಗೌರಿ ಖಾನ್ ಕೂಡ ಈ ಬ್ಯುಸಿನೆಸ್‌ನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.